ಯಶ್ ಮರ್ಯಾದೆ ಕಳೆಯಬೇಡಿ: ಒತ್ತುವರಿ ವಿವಾದ ಬಗ್ಗೆ ಪುಷ್ಪ ಅವರಿಗೆ ಬುದ್ಧಿವಾದ ಹೇಳಿದ ಹಾಸನದ ವ್ಯಕ್ತಿ
Yash mother land dispute: ಹಾಸನದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್‌ಕುಮಾರ್ ಅವರಿಗೆ ಸಂಬಂಧಿಸಿದ ಮನೆ ಸಮೀಪದ ನಿವೇಶನದ ಒತ್ತುವರಿ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇತ್ತೀಚೆಗೆ ಕೆಡವಲಾಗಿದ್ದ ಕಾಂಪೌಂಡ್‌ನ್ನು ಪುನರ್ ನಿರ್ಮಿಸಲು ಪುಷ್ಪ ಅರುಣ್‌ಕುಮಾರ್ ಮುಂದಾದ ಸಂದರ್ಭದಲ್ಲಿ, ಜಾಗದ ಮಾಲೀಕ ದೇವರಾಜು ಅವರೊಂದಿಗೆ ಭಾರೀ ವಾಗ್ವಾದ ನಡೆದಿದೆ.
ವಿವಾದಿತ ಜಾಗದ ಕಾಂಪೌಂಡ್ ಅನ್ನು ಇತ್ತೀಚೆಗೆ ಕೆಡವಲಾಗಿತ್ತು. ಇದೀಗ ಅದನ್ನೇ ಮತ್ತೆ ಕಟ್ಟಿಸಲು ಪುಷ್ಪ ಅರುಣ್‌ಕುಮಾರ್ ಮುಂದಾದಾಗ, ಸ್ಥಳಕ್ಕೆ ಬಂದ ಜಾಗದ ಮಾಲೀಕ ದೇವರಾಜು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.

ದಾಖಲೆ ತೋರಿಸಿ ಎಂದ ಯಶ್ ತಾಯಿ
ಪುಷ್ಪ ಅರುಣ್‌ಕುಮಾರ್ ಅವರು ದೇವರಾಜು ಅವರ ಬಳಿ ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದೇವರಾಜು, ನಾವು ಕೋರ್ಟ್ ಆದೇಶದಂತೆ ನಡೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು. ಈ ಮಾತಿಗೆ ಅಸಮಾಧಾನಗೊಂಡ ಪುಷ್ಪಾ, "ಜಡ್ಜ್‌ನ್ನೇ ಇಲ್ಲಿಗೆ ಕರೆಸಿ, ಇಲ್ಲಿಯೇ ಬಂದು ತೀರ್ಮಾನ ಮಾಡಲಿ" ಎಂದು ಕೂಗಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
"ಯಶ್ ಮನೆ ಅಂತ ಕ್ಯಾಮೆರಾ ಮುಂದೆ ಬಿಲ್ಡಪ್ ತೆಗೆದುಕೊಳ್ಳಲು ಬಂದಿದ್ದೀಯಾ?" ಎಂದು ಪುಷ್ಪ ಅರುಣ್‌ಕುಮಾರ್ ದೇವರಾಜು ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಉಂಟಾದ ಗಲಾಟೆಯ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಆದರೆ, ಪೊಲೀಸರು ಬಂದ ಬಳಿಕವೂ ಪುಷ್ಪ ಅರುಣ್‌ಕುಮಾರ್ ತಮ್ಮ ಆಕ್ರೋಶವನ್ನು ಮುಂದುವರೆಸಿದ್ದು, "ದೇವರಾಜು ಅವರನ್ನು ನೀವು ಏಕೆ ಬಂಧಿಸಿಲ್ಲ? ಜೆಸಿಬಿಯನ್ನು ಏಕೆ ಸೀಜ್ ಮಾಡಿಲ್ಲ?" ಎಂದು ಪೊಲೀಸರನ್ನೇ ಪ್ರಶ್ನಿಸಿದ್ದಾರೆ.
ಈ ವಿವಾದದ ವೇಳೆ ಸ್ಥಳದಲ್ಲಿದ್ದ ಮಾಧ್ಯಮದವರಿಗೆ ವಿಡಿಯೋ ಚಿತ್ರೀಕರಣ ಮಾಡದಂತೆ ಪುಷ್ಪ ಅರುಣ್‌ಕುಮಾರ್ ತಡೆದಿದ್ದಾರೆ. ಇದರಿಂದ ಸ್ಥಳದಲ್ಲಿ ಮತ್ತಷ್ಟು ಗೊಂದಲದ ವಾತಾವರಣ ನಿರ್ಮಾಣವಾಯಿತು.
ನಮ್ಮ ಹಾಸನಕ್ಕೆ ಕೆಟ್ಟ ಹೆಸರು ಬರುತ್ತೆ
ಈ ವೇಳೆ ಮಾಲೀಕರ ಪರ ಮಧ್ಯಪ್ರವೇಶಿಸಿದ ವ್ಯಕ್ತಿಯೊಬ್ಬರು ಯಶ್ ಅವರ ಮಾನ ಕಳೆಯಬೇಡಿ, ಹಾಸನದ ಮಾನ ಕಳೆಯಬೇಡಿ ಎಂದು ಪುಷ್ಪ ಅವರಿಗೆ ಕೇಳಿಕೊಂಡಿದರು. ನಿಮಗೊಂದು ಘನತೆ ಇದೆ, ಅದನ್ನು ಕಳೆದುಕೊಳ್ಳಬೇಡಿ, ಏನಾದ್ರೂ ಹೆಚ್ಚು ಕಡಿಮೆ ಆದ್ರೆ ನಮ್ಮ ಹಾಸನಕ್ಕೆ ಕೆಟ್ಟ ಹೆಸರು ಬರುತ್ತೆ ಎಂದು ಬುದ್ಧಿಮಾತು ಹೇಳಿದರು. ಆಗ ಪುಷ್ಪ ಅವರು ಏನ್ ರೌಡಿಸಂ ಮಾಡ್ತಿದ್ದೀರಾ? ಎಂದು ಅವಾಜ್ ಹಾಕಿದರು.
ಈ ಮನೆ ನಿವೇಶನದ ಒತ್ತುವರಿ ವಿಚಾರವು ಇದಕ್ಕೂ ಮೊದಲು ಹಲವು ಬಾರಿ ಸುದ್ದಿಯಾಗಿತ್ತು. ಈಗ ಮತ್ತೆ ಕಾಂಪೌಂಡ್ ನಿರ್ಮಾಣ ವಿಚಾರವಾಗಿ ಉಂಟಾದ ಗಲಾಟೆ, ಯಶ್ ಕುಟುಂಬದ ಜಾಗ ವಿವಾದ ಮತ್ತೆ ಸಂಚಲನ ಸೃಷ್ಟಿಸಿದೆ. ಪ್ರಸ್ತುತ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು, ಜಾಗದ ದಾಖಲೆಗಳು ಹಾಗೂ ಕೋರ್ಟ್ ಆದೇಶಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಪ್ರಕರಣದ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ.












Click it and Unblock the Notifications