ಸಿಸಿಎಲ್ ವೇಳೆ ದರ್ಶನ್-ಸುದೀಪ್ ನಡುವೆ ನಡೆದಿದ್ದೇನು? ಅಚ್ಚರಿ ವಿಚಾರ ತಿಳಿಸಿದ ನಟ ರವಿ ಚೇತನ್
ಸ್ಯಾಂಡಲ್‌ವುಡ್ ನಟರಾದ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಂದು ಕಾಲದಲ್ಲಿ ಕುಚಿಕುಗಳಾಗಿದ್ದವರು. ಎಲ್ಲರೂ ಇವರನ್ನು ಜೋಡೆತ್ತುಗಳು ಎಂದು ಕರೆಯುತ್ತಿದ್ದರು. ಎಲ್ಲರೂ ದಚ್ಚು-ಕಿಚ್ಚ ಎಂದೇ ಈ ಜೋಡಿಯನ್ನು ಗುರುತಿಸುತ್ತಿದ್ದರು. ಆದರೆ ಕೆಲ ವರ್ಷಗಳ ಹಿಂದೆ ದರ್ಶನ್ ಹಾಗು ಕಿಚ್ಚ ಸುದೀಪ್ ನಡುವೆ ಯಾವುದೋ ವಿಚಾರಕ್ಕೆ ವೈಮನಸ್ಸು ಮೂಡಿತ್ತು. ಅಂದಿನಿಂದ ಈವರೆಗೂ ಅವರು ಅಂತರ ಕಾಯ್ದುಕೊಂಡಿದ್ದಾರೆ. ಇವರಿಬ್ಬರನ್ನೂ ಹತ್ತಿರದಿಂದ ನೋಡಿದ್ದ ಹಾಗೂ ಅವರೊಂದಿಗೆ ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ಖಳನಟ ರವಿ ಚೇತನ್ ಅವರು ದಚ್ಚು-ಕಿಚ್ಚನ ಕುರಿತು ಅಚ್ಚರಿ ವಿಚಾರಗಳನ್ನ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ನಟ ರವಿ ಚೇತನ್ ಅವರು ಸುದೀಪ್ ಹಾಗೂ ದರ್ಶನ್ ಅವರ ನಡುವಿನ ಬಾಂಡಿಂಗ್ ಹೇಗಿತ್ತು? ದೂರವಾಗುವುದಕ್ಕೂ ಮುನ್ನ ಅವರು ಹೇಗಿದ್ದರು ಎಂದು ವಿವರಿಸಿದ್ದಾರೆ. 'ಸುದೀಪ್ ಅವರು ಕ್ಲಾಸ್, ದರ್ಶನ್ ಅವರು ಕ್ಲಾಸ್. ನಾನು ಇಬ್ಬರೊಂದಿಗೂ ಚೆನ್ನಾಗಿದ್ದೆ. ಅವರಿಬ್ಬರೂ ನನಗೆ ಇಷ್ಟ ಆಗ್ತಾರೆ. ಸುದೀಪ್ ಅವರು ತುಂಬಾ ಫ್ರೆಂಡ್ಲಿ, ದರ್ಶನ್ ಅವರು ಹೋಗೋ ಬಾರೋ ಎನ್ನುವಷ್ಟು ಕ್ಲೋಸ್ ಇರ್ತಾರೆ' ಎಂದಿದ್ದಾರೆ.

'ನಾನು ಇಬ್ಬರ ಜೊತೆಗೂ ಸಿನಿಮಾ ಮಾಡಿ ಅವರೊಂದಿಗೆ ಒಡನಾಟ ಇರುವುದರಿಂದ ಬಹಳ ಹತ್ತಿರದಿಂದ ನೋಡಿದ್ದೀನಿ. ಇಬ್ಬರೂ ಜೊತೆಯಲ್ಲಿದ್ದಾಗ ಸಿಸಿಎಲ್‌ನಲ್ಲೂ ಇದ್ದೆ. ಆಗ ದರ್ಶನ್ ಅವರು ಕೂಡ ಇದ್ದರು. ಸುದೀಪ್ ಅವರು ನನ್ನ ಕರೆದು ದರ್ಶನ್‌ಗೆ ಯಾವುದೇ ಅನಾನುಕೂಲ ಆಗದಂತೆ ನೋಡಿಕೋ ಎಂದು ನನಗೆ ಹೇಳುತ್ತಿದ್ದರು. ಸಿಸಿಎಲ್‌ನಲ್ಲಿ ಇರಬೇಕಾದರೆ ದರ್ಶನ್ ಜೊತೆಗೇ ಇರು ಎಂದು ಸುದೀಪ್ ನನಗೆ ಹೇಳುತ್ತಿದ್ದರು. ಆ ರೀತಿ ದರ್ಶನ್ ಅವರಿಗೆ ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿಕೊಡ್ತಿದ್ರು' ಎಂದಿದ್ದಾರೆ.
ನಾವು ನೋಡಿದ ಚಿತ್ರರಂಗ ಇದಲ್ಲ
'ನಾನು ದರ್ಶನ್ ಸುದೀಪ್ ಅವರೊಂದಿಗೆ ಹೆಚ್ಚು ಸಿನಿಮಾ ಮಾಡಿದ್ದೀನಿ. ಕಾಟೇರ ಸಿನಿಮಾ ಆದ ಮೇಲೆ ಅವಕಾಶಗಳು ಸಿಗಲಿಲ್ಲ. ಇದು ಯಾಕೆ ಎಂದು ನನಗೂ ಅರ್ಥವಾಗುತ್ತಿಲ್ಲ. ಕಾಟೇರ ಸಿನಿಮಾಗಾಗಿ ನಾವೆಲ್ಲ ವರ್ಕ್‌ಶಾಪ್‌ಗಳನ್ನ ತೆಗೆದುಕೊಂಡಿದ್ವಿ. ಐದು ವರ್ಷದ ಹಿಂದೆ ಕನ್ನಡ ಚಿತ್ರರಂಗ ನಿಜಕ್ಕೂ ಚೆನ್ನಾಗಿತ್ತು. ಅದೇನಾಯ್ತೋ ಗೊತ್ತಿಲ್ಲ, ಈ ಐದು ವರ್ಷಗಳಲ್ಲಿ ಮುಂದಿನ ಭವಿಷ್ಯಕ್ಕೆ ಕಾಣ್ತಿಲ್ಲ. ನಾವು ನೋಡಿದ್ದ ಕನ್ನಡ ಚಿತ್ರರಂಗ ಇದಲ್ಲ ಅನಿಸುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
'ಚಿತ್ರರಂಗ ಎಲ್ಲಿಗೆ ಸಾಗುತ್ತಿದೆಯೋ, ಏನು ಕಥೇನೋ ಗೊತ್ತಾಗ್ತಿಲ್ಲ, ಲಗಾಮು ಅನ್ನೋದೆ ಇಲ್ಲದಂತಾಗಿದೆ. ಆಗ ಅಣ್ಣಾವ್ರು, ವಿಷ್ಣು ಸರ್, ಅಂಬರೀಶಣ್ಣ ಇದ್ರು. ಈಗ ಯಾರೂ ಆ ಸ್ಥಾನ ತೆಗೆದುಕೊಳ್ತಿಲ್ಲ. ಈಗ ಎಲ್ಲರೂ ಬ್ಯುಸಿ ಇದ್ದಾರೆ. ಮುಂದೆ ನಿಂತು ಮಾಡಬೇಕು ಅನ್ನೋ ಮನಸ್ಥಿತಿ ಇಲ್ಲ. ಎಲ್ಲರಿಗೂ ಈಗೋ ಇದೆ. ಕನ್ನಡ ಇಂಡಸ್ಟ್ರಿ ಉಳಿಸಿ ಎಂದು ಬೇಡಿಕೊಂಡಿದ್ದೂ ಆಗಿದೆ ಎಂದು ನಟ ರವಿ ಚೇತನ್ ಬೇಸರ ವ್ಯಕ್ತಪಡಿಸಿದ್ದಾರೆ. ಹಿರಿಯ ನಟರಾಗಿ ಗುರುತಿಸಿಕೊಂಡಿರುವ ಇವರು ಇಂದು ಪಾತ್ರಗಳು ಹೆಚ್ಚಾಗಿ ಸಿಗುತ್ತಿಲ್ಲ' ಎಂದೂ ಬೇಸರದ ಮಾತುಗಳನ್ನಾಡಿದ್ದಾರೆ.












Click it and Unblock the Notifications