ನ್ಯಾಯಾಲಯ ನಿಜಕ್ಕೂ ಏನು ಹೇಳಿದೆ? '45' ಚಿತ್ರತಂಡಕ್ಕೆ ಸಿನಿಮಾ ಪ್ರಿಯರ ಪ್ರಶ್ನೆ
ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸ ಬೆಳವಣಿಗೆ ಶುರುವಾಗಿದೆ. ಸಾಮಾನ್ಯವಾಗಿ ಒಂದು ಹೊಸ ಸಿನಿಮಾ ವೀಕ್ಷಿಸುವ ಮುನ್ನ ಜನ ಅದರ ರೇಟಿಂಗ್, ವಿಮರ್ಶೆಗಳ ಕಡೆಗೆ ಕಣ್ಣಾಡಿಸುತ್ತಾರೆ. ಅದನ್ನು ಆಧರಿಸಿ ಸಿನಿಮಾ ನೋಡಬೇಕೋ? ಬೇಡವೋ? ಎಂಬ ನಿರ್ಧಾರಕ್ಕೆ ಬರುತ್ತಾರೆ. ಆದರೆ ಕನ್ನಡದಲ್ಲಿ ಇತ್ತೀಚೆಗೆ ತೆರೆಕಂಡ ಡೆವಿಲ್ ಹಾಗೂ ಮಾರ್ಕ್ ಸಿನಿಮಾಗಳು ಈ ರೇಟಿಂಗ್‌ಗೆ ಬ್ರೇಕ್ ಹಾಕಲು ಹೊಸ ಹೆಜ್ಜೆಯನ್ನಿಟ್ಟಿವೆ. ನೆಗೆಟಿವ್ ವಿಮರ್ಶೆ ಸಿಗುವ ಭಯದಲ್ಲಿ ಕೋರ್ಟ್ನಿಂದ ಆದೇಶವನ್ನೂ ತಂದಿವೆ. 45 ಸಿನಿಮಾ ತಂಡ ಕೂಡ ಇದೇ ಹಾದಿಯಲ್ಲಿ ಸಾಗಿದೆ. ಆದರೆ ನ್ಯಾಯಾಲಯ ನಿಜಕ್ಕೂ ಏನು ಹೇಳಿದೆ? ಎಂಬ ಪ್ರಶ್ನೆಯನ್ನು ಸಿನಿಮಾ ಪ್ರಿಯರು 45 ಚಿತ್ರತಂಡದ ಮುಂದಿಟ್ಟಿದ್ದಾರೆ.
45 ಸಿನಿಮಾ ತಂಡವು ನ್ಯಾಯಾಲಯದಿಂದ ಮಧ್ಯಂತರ ಆದೇಶ ತಂದಿರುವ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿತ್ತು. "45" ಚಿತ್ರತಂಡವು ಬೆಂಗಳೂರು ನಗರದ ಘನ ನ್ಯಾಯಾಲಯದ 9ನೇ ಅಪರ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಮಧ್ಯಂತರ ಆದೇಶವನ್ನು ಪಡೆದಿರುತ್ತಾರೆ. ಸದರಿ ನ್ಯಾಯಾಲಯದ ಮಧ್ಯಂತರ ಆದೇಶದಂತೆ, ಈ ಚಿತ್ರದ ಕುರಿತು ಯಾವುದೇ ವ್ಯಕ್ತಿ, ಸಂಸ್ಥೆ, ವಾಹಿನಿ, ಸಾಮಾಜಿಕ ಜಾಲತಾಣದ ಖಾತೆದಾರರು ಅಥವಾ ಸಂಬಂಧಿತ ಪ್ಲಾಟ್‌ಫಾರ್ಮ್‌ಗಳು, ಅವಹೇಳನಕಾರಿ, ಮಾನಹಾನಿಕರ, ಅಪಪ್ರಚಾರಾತ್ಮಕ ವಿಮರ್ಶೆಗಳು ಅಥವಾ ನೆಗೆಟಿವ್ ರೇಟಿಂಗ್‌ಗಳು ಸೇರಿದಂತೆ ಚಿತ್ರಕ್ಕೆ ಹಾನಿಯುಂಟು ಮಾಡುವ ವಿಷಯಗಳನ್ನು ಪ್ರಕಟಿಸುವುದು, ಪ್ರಸಾರ ಮಾಡುವುದು ಅಥವಾ ಹರಡುವುದು ನಿರ್ಬಂಧಿಸಲಾಗಿದೆ ಎಂದು ಹೇಳಿತ್ತು.

ಜೊತೆಗೆ ಈಗಾಗಲೇ ಪ್ರಕಟಗೊಂಡಿರುವ ಇಂತಹ ಎಲ್ಲ ವಿಷಯಗಳನ್ನು ತೆಗೆದುಹಾಕಿ ನಿಷ್ಕ್ರಿಯಗೊಳಿಸುವಂತೆಯೂ ನ್ಯಾಯಾಲಯ ನಿರ್ದೇಶಿಸಿದೆ. ನ್ಯಾಯಾಲಯದ ಆದೇಶವಿದ್ದರೂ ಸಹ ಕೆಲವೊಂದು ದುರುದ್ದೇಶಪೂರಿತ ವ್ಯಕ್ತಿಗಳಿಂದ ಚಿತ್ರದ ವಿರುದ್ಧ ಅಪಪ್ರಚಾರದ ಪೋಸ್ಟ್‌ಗಳು ಪ್ರಕಟವಾಗುತ್ತಿರುವುದು ಚಿತ್ರತಂಡದ ಗಮನಕ್ಕೆ ಬಂದಿದೆ. ಇಂತಹ ಕೃತ್ಯಗಳು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದ್ದು, ನ್ಯಾಯಾಂಗ ನಿಂದನೆಗೆ ಒಳಪಡುವ ಅಪರಾಧ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು.
ಈ ಮೂಲಕ ತಿಳಿಯಪಡಿಸುವುದೇನೆಂದರೆ, ಈ ರೀತಿಯ ಅಪಪ್ರಚಾರದಿಂದ ಚಿತ್ರಕ್ಕೆ ಅಥವಾ ನಿರ್ಮಾಪಕರಿಗೆ ಉಂಟಾಗುವ ಯಾವುದೇ ರೀತಿಯ ಆರ್ಥಿಕ, ವಾಣಿಜ್ಯ ಹಾಗೂ ಗೌರವ ಹಾನಿಗೆ ಸಂಬಂಧಪಟ್ಟ ವ್ಯಕ್ತಿಗಳು ವೈಯಕ್ತಿಕವಾಗಿ ಸಂಪೂರ್ಣ ಹೊಣೆಗಾರರಾಗಿದ್ದು, ಅವರ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲು ಅವಕಾಶವಿದೆ. ಅಗತ್ಯವಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧನ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲು ತಜ್ಞರ ಅಭಿಪ್ರಾಯ ಪಡೆಯಲಾಗಿದೆ ಎಂದು ಎಚ್ಚರಿಕೆಯೂ ನೀಡಿತ್ತು.
ಕೋರ್ಟ್ ಆದೇಶದ ಪ್ರತಿಯೂ ಹಂಚಿಕೊಳ್ಳಿ
ಆದರೆ ಕೋರ್ಟ್ ನಿಜಕ್ಕೂ ಏನು ಹೇಳಿದೆ? ಎನ್ನುವ ಗೊಂದಲ ಸಿನಿಮಾ ಪ್ರಿಯರಲ್ಲಿ ಮೂಡಿದೆ. "ಈ ರೀತಿಯ ಜಾಹೀರಾತು ಹಾಕುವವರು ಕೋರ್ಟ್ ಆದೇಶದ ಪ್ರತಿ ಯಾಕೆ ಹಾಕುವುದಿಲ್ಲ?" ಎಂಬ ಪ್ರಶ್ನೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಮುಂದಿಟ್ಟಿದ್ದಾರೆ. ಈ ಬಗ್ಗೆ ವಿಜ್ಞಾನ ಬರಹಗಾರರಾದ ಬೇಳೂರು ಸುದರ್ಶನ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, 45 ನೋಡಿದ್ದೆ, ವಿಮರ್ಶೆ ಮಾಡೋದಕ್ಕೆ ಹೊರಟಿದ್ದೆ. ವೈಯಕ್ತಿಕ ವಿಮರ್ಶೆಗಿಂತ ಕೋರ್ಟಿನ ಆದೇಶವೇ ಅಧಿಕೃತ ಅಲ್ವಾ? ಅದಕ್ಕೇ ಈ ಆದೇಶದ ಬಗ್ಗೆ ಕಂಡ ಪೋಸ್ಟರನ್ನೇ ಹಾಕಿದ್ದೇನೆ, ವಿಮರ್ಶೆ ಬರೆಯಲ್ಲ, ಬರೆಯಲ್ಲ ಬರೆಯಲ್ಲ" ಎಂದಿದ್ದಾರೆ.
ಇದಕ್ಕೆ, "ನೋಡಬೇಕಾದ ಸಿನಿಮಾ ಎಂಬ ವಿಮರ್ಶೆ ನಾಲ್ಕಾರು ಕಡೆಯಿಂದ ಬಂದರೆ ನೋಡ್ತೀನಿ. ಕುತೂಹಲಕಾರಿ ಎನ್ನುವ ಯಾವ ಅಭಿಪ್ರಾಯವೂ ವ್ಯಕ್ತವಾಗದಿರುವಾಗ, ಆ ಚಿತ್ರವನ್ನು ಯಾಕಾದರೂ ನೋಡಬೇಕು? ನಾನಾ ಭಾಷೆಗಳ ಅದ್ಭುತ ಸಿನೆಮಾಗಳನ್ನೇ ನೋಡುವುದಕ್ಕೇ ಈಗ ಪುರುಸೊತ್ತಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications