"ಮಗಳು ಮೇಘನಾಗೆ ಹೆಚ್ಚು ವಯಸ್ಸಾಗಿಲ್ಲ, ಎರಡನೇ ಮದುವೆಯಾದ್ರೆ..." ಸುಂದರ್ ರಾಜ್ ಹೀಗಂದಿದ್ದೇಕೆ?
ನಟಿ ಮೇಘನಾ ರಾಜ್ ಎರಡನೇ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮದುವೆಯಾದ ಎರಡೇ ವರ್ಷಕ್ಕೆ ಪತಿ ಚಿರು ಸರ್ಜಾ ಅವರನ್ನು ಮೇಘನಾ ಕಳೆದುಕೊಂಡಿದ್ದರು. ಈಗ ಬೆಳೆದು ನಿಂತಿರುವ ಮಗ ರಾಯನ್‌ನನ್ನು ಪೋಷಿಸುತ್ತಾ ಅವರು ಬ್ಯುಸಿಯಾಗಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಮೇಘನಾ ಎರಡನೇ ಮದುವೆ ಆಗ್ತಾರೆ ಎಂಬ ವದಂತಿಯಂತೂ ನಿಂತಿಲ್ಲ. ಇದು ಸುಳ್ಳು ಎಂದು ಖುದ್ದು ಅವರೇ ಸ್ಪಷ್ಟಪಡಿಸಿದ್ದಾರೆ. ಆದರೆ ಮೇಘನಾ ಅವರ ತಂದೆ, ಹಿರಿಯ ನಟ ಸುಂದರ್ ರಾಜ್ ಅವರು 'ಮಗಳಿಗೆ ಹೆಚ್ಚು ವಯಸ್ಸಾಗಿಲ್ಲ' ಎನ್ನುವ ಮೂಲಕ ಎರಡನೇ ಮದುವೆ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ.
'ಚಿರು ನಿಧನ ಆದ ನಂತರ ಅಂತಹ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ನಾವು ಅದರ ಬಗ್ಗೆ ಹೆಚ್ಚಿಗೆ ಮಾತನಾಡೋಕೆ ಹೋಗಲ್ಲ. ಅದರಿಂದ ಮೇಘನಾ ಮನಸ್ಸಿಗೂ ಘಾಸಿಯಾಗುತ್ತೆ. ಬೇಡದ ವಿಚಾರ ಯಾಕೆ ಮಾತನಾಡ್ತಾರೆ? ಅದೆಲ್ಲ ಮುಗಿದು ಹೋದ ವಿಷಯ. ಈಗ ಆ ವ್ಯಕ್ತಿ ಇಲ್ಲ ಅಂದಾಗ ಅದರ ಬಗ್ಗೆ ಮಾತನಾಡಲೇಬಾರದು' ಗ್ಯಾರಂಟಿ ನ್ಯೂಸ್ ಸಂದರ್ಶನದಲ್ಲಿ ಸುಂದರ್ ರಾಜ್ ಹೇಳಿದ್ದಾರೆ.

'ಮೇಘನಾ ವಯಸ್ಸಿನವರಿಗೆ ಮದುವೆಯೇ ಆಗಿಲ್ಲ'
'ಮನುಷ್ಯ ಬದುಕಿರುವಾಗ ಎಷ್ಟು ಗೌರವ ಕೊಡ್ತೀವೋ? ಅವನು ಹೋದ ಮೇಲೆ ಅಷ್ಟೇ ಸೈಲೆಂಟಾಗಿರುವುದು ಒಳ್ಳೆಯದು. ಮತ್ತೆ ಮತ್ತೆ ಆ ವಿಚಾರಗಳನ್ನ ಕೆದಕಬಾರದು. ಈ ನೋವಿನಿಂದ ಹೊರಗಿದ್ದಾಗ ಅದರ ಬಗ್ಗೆ ಮಾತನಾಡಬಾರದು ಎಂದಿದ್ದಾರೆ. ನಾನು ಯಾವತ್ತೂ ಮೈನಸ್ ಇದ್ದಾಗ ಪ್ಲಸ್ ಮಾಡಿಕೊಳ್ಳಿ ಅಂತಲೇ ಹೇಳೋದು. ಮೇಘನಾಗೆ ತುಂಬಾ ವಯಸ್ಸಾಗಿಲ್ಲ, ಮದುವೆಯಾಗಿ ಎರಡೇ ವರ್ಷಕ್ಕೆ ಚಿರು ತೀರಿಕೊಂಡಿದ್ದು' ಎಂದಿದ್ದಾರೆ.
'ರಾಯನ್‌ನ ಮಗ ಅಂತ ನೋಡ್ತಾನಾ?'
'ಮೇಘನಾ ವಯಸ್ಸಿನ ಹಲವರಿಗೆ ಇನ್ನೂ ಮದುವೆಯೇ ಆಗಿಲ್ಲ. ಆದರೆ ಮದುವೆ ಅನ್ನೋ ಪವಿತ್ರವಾದ ಬಂಧನವನ್ನು ಅವಳು ಒಂಟಿಯಾಗಿದ್ದಾಗ ಮಾಡಿಕೊಂಡಿದ್ರೆ ಚೆನ್ನಾಗಿರುತ್ತಿತ್ತು. ಆದರೆ ಈಗ ಮೇಘನಾಗೆ ಮಗು ಇದೆ. ಮಗು ಇದ್ದಾಗ ನಾನು ನೋಡುವ ಭಾವನೆಯೇ ಬೇರೆ. ನನಗೆ ಅವನು ಮೊಮ್ಮಗ. ಆದರೆ ಮೇಘನಾ ಎರಡನೇ ಮದುವೆ ಆದರೆ, ಆ ವ್ಯಕ್ತಿ ರಾಯನ್‌ನ ಮಗ ಅಂತ ನೋಡ್ತಾನಾ?' ಎಂದು ಸುಂದರ್ ರಾಜ್ ಕೇಳಿದ್ದಾರೆ.
'ಅವನ ದೃಷ್ಟಿ ಏನೇ ಇದ್ದರೂ, ಮತ್ತೊಂದು ಮಗು ಬೇಕು ಅಂತಲೇ ಇರುತ್ತೆ. ಅದು ಅಹಜ ಕೂಡ. ಆಗ ಹೆಣ್ಣು ಮಗು ಹುಟ್ಟಿದ್ರೆ ಸರಿದೂಗಿಸಬಹುದು. ಒಂದು ವೇಳೆ ಆ ಮಗು ಕೂಡ ಗಂಡಾಗಿ ಹುಟ್ಟಿದರೆ ಸಮಸ್ಯೆ. ಹೀಗಾಗಿ ನಾವು ಇದರ ಬಗ್ಗೆ ಮಾತನಾಡುವ ಬದಲು, ಮಗಳು ಮೇಘನಾನೇ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ತಾಳೆ. ಅದು ಅವಳಿಗೆ ಬಿಟ್ಟಿದ್ದು' ಎಂದು ಸುಂದರ್ ರಾಜ್ ಹೇಳಿದ್ದಾರೆ.
ಎರಡನೇ ಮದುವೆ ವದಂತಿ ಬಗ್ಗೆ ಮೌನ ಮುರಿದಿದ್ದ ಮೇಘನಾ ರಾಜ್, ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳಲ್ಲ. ನನ್ನ ಮನಸ್ಸಿನಲ್ಲಿ ಇರೋದು ಚಿರು ಮಾತ್ರ ಎಂದು ಹೇಳಿದ್ದರು. ಕೆಲವರು ನಟ ವಿಜಯ್ ರಾಘವೇಂದ್ರ ಹಾಗೂ ಮೇಘನಾ ಮದುವೆಯಾಗ್ತಾರೆ ಎಂಬ ಸುದ್ದಿ ಹಬ್ಬಿಸಿದ್ದರು. ವಿಜಯ್ ಕೂಡ ಇದು ಸುಳ್ಳು ಎಂದಿದ್ದರು.












Click it and Unblock the Notifications