viji.darshan ಇನ್‌ಸ್ಟಾ ಖಾತೆ ಮತ್ತೆ ಸಕ್ರಿಯ
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಬಂಧನವಾದ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ದರ್ಶನ್ ಅವರನ್ನು ಅನ್‌ಫಾಲೋ ಮಾಡುವ ಮೂಲಕ ಖಾತೆಯನ್ನೇ ನಿಷ್ಕ್ರಿಯಗೊಳಿಸಿದ್ದರು. ಆದರೆ ಇದೀಗ ಮತ್ತೆ ಸಕ್ರಿಯಗೊಳಿಸುವ ಮೂಲಕ ಕುತೂಹಲ ಸೃಷ್ಟಿಸಿದ್ದಾರೆ.
ಇದೀಗ ನಟ ದರ್ಶನ್ ಪವಿತ್ರಾ ಗೌಡ ಸೇರಿ 13 ಮಂದಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇನ್ನು ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರುತ್ತಿದ್ದಂತೆ ಅವರ ಆಪ್ತರು, ಕುಟುಂಬದವರು ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ದರ್ಶನ್ ಸಹೋದರ, ತಾಯಿಯೂ ಕೂಡ ಠಾಣೆಯತ್ತ ಬಂದಿಲ್ಲ. ಇನ್ನು ಪತ್ನಿ ವಿಜಯಲಕ್ಷ್ಮಿ ದರ್ಶನ್ ಬಂಧನ ಆದ ದಿನವೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನೇ ಡಿಲೀಟ್ ಮಾಡಿದ್ದರು. ಆದರೆ ಇದೀಗ ಮತ್ತೆ ಸಕ್ರಿಯಗೊಳಿಸಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಹಳೆ ಖಾತೆಯನ್ನೇ ಮತ್ತೆ ಸಕ್ರಿಯಗೊಳಿಸಿದ್ದಾರೆ. ಆದರೆ ತಾವು ಮಾಡಿದ್ದ ಎಲ್ಲ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದಾರೆ. ಫಾಲೋ ಮಾಡುತ್ತಿದ್ದವರನ್ನು ಸಹ ಅನ್‌ಫಾಲೋ ಮಾಡಿದ್ದಾರೆ. ಮತ್ತೆ ಸಕ್ರಿಯಗೊಳಿಸದ ಮೇಲೆ ಹಳೆಯ ಹೆಸರನ್ನೇ ಮುಂದುವರೆಸಿದ್ದು, ಖಾತೆ ಹೆಸರು 'viji.darshan' ಎಂದೇ ಇದ್ದು, ಬಯೋನಲ್ಲಿ Vijayalakshmi darshan ಅಂತಾ ಇದೆ.
ವಿಜಯಲಕ್ಷ್ಮಿ ಅವರು, ಈಗಾಗಲೇ ದರ್ಶನ್ ಅವರ ಜಾಮೀನಿನಾಗಿ ಅವರ ಪರ ನ್ಯಾಯಾಲಯದಲ್ಲಿ ವಾದ ಮಾಡಲು ವಕೀಲರಾದ ರಂಗನಾಥ ರೆಡ್ಡಿ ಮತ್ತು ಅನಿಲ್ ಬಾಬು ಅವರನ್ನು ನೇಮಿಸಿದ್ದು, ಈ ವಕೀಲರು ವಾದ ಮಾಡುತ್ತಿರುವುದು ಕೂಡ ವಿಜಯಲಕ್ಷ್ಮಿ ಮತ್ತು ಅವರ ತಂದೆ-ತಾಯಿಯ ಮೂಲಕವೇ ಆಗಿದೆ.
ವಿಜಯಲಕ್ಷ್ಮಿ ಅವರಿಂದ ನೇಮಿಸಲ್ಪಟ್ಟಿರುವ ವಕೀಲ ಅನಿಲ್ ಬಾಬು ಈಗಾಗಲೇ ಸುದ್ದಿಗಾರರೊಂದಿಗೆ ಮಾತನಾಡಿದ್ದು, "ಪೊಲೀಸ್ ಆಯುಕ್ತರು ಹಾಗೂ ಕೆಲವು ಮಾಧ್ಯಮಗಳು, ಪವಿತ್ರಾ ಗೌಡ ಅವರನ್ನು ದರ್ಶನ್ ಪತ್ನಿ ಎಂದು ಹೇಳುತ್ತಿರುವುದು ವಿಜಯಲಕ್ಷ್ಮಿ ಅವರಿಗೆ ತೀವ್ರ ಬೇಸರ ತಂದಿದೆ. ವಿಜಯಲಕ್ಷ್ಮಿ ಅವರೊಬ್ಬರೇ ದರ್ಶನ್ ಏಕೈಕ ಕಾನೂನುದಬದ್ಧ ಪತ್ನಿ, ಪವಿತ್ರಾ ಗೌಡ ಅಲ್ಲ, ಮಾಧ್ಯಮಗಳು ಪವಿತ್ರಾ ಅವರನ್ನು ದರ್ಶನ್ ಪತ್ನಿ ಎಂದು ಹೇಳಬಾರದು," ಎಂದು ಹೇಳಿದ್ದರು.
ಇನ್ನು ವಕೀಲ ಅನಿಲ್ ಬಾಬು ಅವರು, "ವಿಜಯಲಕ್ಷ್ಮಿ ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ಇದೀಗ ಅವರಿಗೆ ಸಮಯದ ಅಗತ್ಯ ಇದೆ. ಆದಷ್ಟು ಬೇಗ ಅವರು ಎಲ್ಲರ ಮುಂದೆ ಬರಲಿದ್ದಾರೆ ಎಂದಿದ್ದರು. ಆ ಮೂಲಕ ವಿಜಯಲಕ್ಷ್ಮಿ ಅವರು ಮಾಧ್ಯಮಗಳ ಮುಂದೆ ಬರುತ್ತಾರೆಯೇ ಅಥವಾ ಸಾಮಾಜಿಕ ಜಾಲತಾಣದ ಮೂಲಕ ಪ್ರಕರಣದ ಬಗ್ಗೆ ಮಾಹಿತಿ ನೀಡುತ್ತಾರೆಯೇ ಎಂಬ ಕುತೂಹಲ ಮೂಡಿತ್ತು. ಅದರಂತೆಯೇ ಇದೀಗ ಇನ್‌ಸ್ಟಾಗ್ರಾಂ ಖಾತೆಯನ್ನು ಮತ್ತೆ ಸಕ್ರಿಯಗೊಳಿಸುವ ಮೂಲಕ ವಿಜಯಲಕ್ಷ್ಮಿ ಅವರು ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯೇ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರು ಪ್ರೀತಿಸಿ 2003ರಲ್ಲಿ ವಿವಾಹ ಆಗಿದ್ದು, ಇವರಿಗೆ ಒಬ್ಬ ಪುತ್ರನಿದ್ದಾನೆ. ಈಗಾಗಲೇ ಈ ಹಿಂದೆ 2011ರಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ವಿಜಯಲಕ್ಷ್ಮಿಯ ಮುಖ, ಕೈಗೆ ತೀವ್ರ ಪೆಟ್ಟು ಬಿದ್ದಿದ್ದು, ವಿಜಯಲಕ್ಷ್ಮಿ ಅವರೇ ದೂರು ಹಿಂಪಡೆದು ನ್ಯಾಯಾಲಯದ ಹೊರಗೆ ಸಂಧಾನ ಮಾಡಿಕೊಂಡು ಸಂಸಾರ ಮುಂದುವರೆಸಿದ್ದರು.












Click it and Unblock the Notifications