Toxic ಸಪೋರ್ಟ್ ಮಾಡಿದ ಸ್ಟಾರ್ಸ್‌ಗೆ ರಿಷಿಕಾ ಸಿಂಗ್ ಪ್ರಶ್ನೆ: ಯಶ್ ತಾಯಿ ಪುಷ್ಪಾ ಹೇಳಿಕೆಗೆ ವ್ಯಂಗ್ಯ! ವಿಡಿಯೋ
'ಈ ಮಹಾತಾಯಿ ಹೇಳುವುದು ವೇದಾಂತ, ಮಾಡುವುದು ರಾದ್ದಾಂತ. ದೊಡ್ಡದಾಗಿ ಸ್ಟಾರ್ಸ್‌ಗಳ ಬೆಂಬಲ, ಸಿನಿಮಾ (ಟಾಕ್ಸಿಕ್) ತೆರೆ ಕಾಣೋ ಮುನ್ನ ಇವರೆಲ್ಲ ಎಲ್ಲಿ ಹೋಗಿದ್ರೋ ಕೇಳಿ ಒಂದ್ಸಲ' ಎಂದು ನಟಿ ರಿಷಿಕಾ ಸಿಂಗ್ ಮತ್ತೆ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದಾರೆ. ಟಾಕ್ಸಿಕ್ ಟ್ರೈಲರ್ ರಿಲೀಸ್ ಆದಾಗಿನಿಂದ ನಿರಂತರವಾಗಿ ಆ ಬಗ್ಗೆ ಟೀಕೆ ಮಾಡುತ್ತಲೇ ಬಂದಿದ್ದಾರೆ. ಇದೀಗ ಅವರು ನಟ ಯಶ್ ತಾಯಿ, ನಿರ್ಮಾಪಕಿ ಪಷ್ಪಾ ಅವರು ಮತ್ತು ಟಾಕ್ಸಿಕ್ ಬೆಂಬಲಿಸಿದ ಸ್ಟಾರ್ ನಟರ ವಿರುದ್ಧ ಮತ್ತೆ ಮಾತಾಡಿದ್ದಾರೆ ಎನ್ನಲಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ.
ರಾಜ್ಯಾದ್ಯಂತ ನಟ ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾ ಕುರಿತು ಮಿಶ್ರ ಚರ್ಚೆಗಳು ಮುಂದುವರಿದಿವೆ. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ರಿಷಬ್ ಶೆಟ್ಟಿ ಅವರು, ನಟಿ ರಕ್ಷಿತಾ ಪ್ರೇಮ್, ನಿರ್ದೇಶಕ ಸಿಂಪಲ್ ಸುನಿ ಅವರು ಮುಕ್ತ ಮನಸ್ಸಿನಿಂದ ಯಶ್ ಶ್ರಮ, ಟಾಕ್ಸಿಕ್ ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ. ಇದರ ಬೆನ್ನಲ್ಲೆ ನೆನ್ನೆ ಭಾನುವಾರ ಯಶ್ ಅವರ ತಾಯಿ, ನಿರ್ಮಾಪಕಿ ಪುಷ್ಪಾ ಅವರು ಮಗನ ಸಿನಿಮಾ ಜರ್ನಿ, ಟಾಕ್ಸಿಕ್ ಕುರಿತ ಟ್ರೋಲ್, ನೆಗೆಟಿವ್ ಪ್ರಚಾರ ಕುರಿತು ಖಡಕ್ ಪ್ರತಿಕ್ರಿಯೆ ನೀಡಿದ್ದರು.

ಡ್ರೈವರ್ ಕುಟುಂಬ ಎಂದುಕೊಳ್ಳಬೇಡಿ, ನಾವು ಯಾವುದಕ್ಕೂ ಹೆದರಲ್ಲ. ಯಶ್ ಹೆದರುವುದಾಗಿದ್ದರೆ ಇಲ್ಲಿಯವರೆಗೆ ಬರುತ್ತಲೇ ಇರಲಿಲ್ಲ. ಒಬ್ಬ ಆರ್ಡಿನರಿ ಡ್ರೈವರ್ ಮಗನಿಗೆ ನೀವ್ಯಾಕೆ ಹೆದರಿಕೊಳ್ಳಬೇಕು. ಯಶ್ ಕರ್ನಾಟಕದವನೇ. ಇಲ್ಲಿಯೇ ಹುಟ್ಟಿ ಬೆಳೆದವನು. ಈ ಹಿಂದೆಯು ಯಶ್ ಸಾಲು ಸಾಲು ಹಿಟ್ ಸಿನಿಮಾ ನೀಡಿದ್ದಾನೆ' ಎಂದು ಟ್ರೋಲಿಗರಿಗೆ ಹಾಗೂ ನೆಗೆಟಿವ್ ಪ್ರಚಾರ ಮಾಡಿದವರಿಗೆ ತಿರುಗೇಟು ನೀಡಿದರು.
ಇದೇ ವೇಳೆ ರಿಷಿಕಾ ಸಿಂಗ್ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಲು ಮುಂದಾಗಲಿಲ್ಲ. ತಾಯಿಯಾಗಿ, ನಿರ್ಮಾಪಕಿಯಾಗಿ ಮಾತನಾಡುತ್ತಿದ್ದೇನೆ. ಮನೆಯಲ್ಲಿ ಸಿನಿಮಾ ವಿಚಾರವಾಗಿ ನಾವು ಮಾತನಾಡುವುದಿಲ್ಲ. ನಮ್ಮ ಯಶ್ ಸಿನಿಮಾ ಅಂತ ಫ್ಯಾನ್ಸ್ ಹೇಳುತ್ತಿದ್ದಾರೆ. ಅಷ್ಟು ಸಾಕಲ್ಲವಾ. ಕೆಲಸದ ಮೂಲಕವೇ ಎಲ್ಲ ಟೀಕೆಗಳಿಗೆ ನಟ ಯಶ್ ಉತ್ತರ ನೀಡುತ್ತಾನೆ. ಕುಟುಂಬಕ್ಕೆ ಅವನ ಮೇಲೆ ನಂಬಿಕೆ ಇದೆ. ಅವನ ಕೆಲಸಗಳಿಗೆ ನಮ್ಮ ಬೆಂಬಲ ಇದೆ ಎಂದು ಅನೇಕ ವಿಷಯ ಮಾತನಾಡಿದ್ದರು.
ನಟಿ ರಿಷಿಕಾ ಸಿಂಗ್ ಹೇಳಿದ್ದೇನು?
ಟಾಕ್ಸಿಕ್ ಟ್ರೈಲರ್ ಬಿಡುಗಡೆ ಬಳಿಕ ಯಶ್ ಅವರನ್ನು ವೈಯಕ್ತಿಕವಾಗಿ ನಿಂದಿಸಿದ ನಟಿ ರಿಷಿಕಾ ಸಿಂಗ್ ಆಗಸ್ಟ್ 26ರಂದು ಸಿನಿಮಾ ಬಿಡುಗಡೆ ಬಳಿಕವೂ ತಮ್ಮ ಟೀಕೆ, ಲೇವಡಿ ಮುಂದುವರಿಸಿದ್ದರು. ಇದೀಗ ಮತ್ತೊಂದು ವಿಡಿಯೋದಲ್ಲಿ ಯಶ್ ತಾಯಿ ಪುಷ್ಪಾ ಅವರು, ಟಾಕ್ಸಿಕ್ ಸಪೋರ್ಟ್ ಮಾಡಿದವರನ್ನು ತಮ್ಮದೇ ಆದ ರೀತಿಯಲ್ಲಿ ಟೀಕಿಸಿದ್ದಾರೆ.
ವಿಡಿಯೋದಲ್ಲಿ ನಟಿ ರಿಷಿಕಾ ಸಿಂಗ್ 'ಸೆಕ್ಸು ವೈಲೆನ್ಸು, ಸೆಕ್ಸು ವೈಲೆನ್ಸು ಅದರಲ್ಲೇನು ತಪ್ಪಿಲ್ಲ. ತಾಯಿ ಬಂದು ಮೀಡಿಯಾ ಮುಂದೆ ಕಿರಿ ಕಿರಿ. ಕಲೆನಾ ಜಾತಿ ಮತದಲ್ಲಿ ಅಳೆಯುತ್ತಿದ್ದಾರೆ ರೀ. ಈ ಮಹಾತಾಯಿ ಹೇಳುವುದು ವೇದಾಂತ, ಮಾಡುವುದು ರಾದ್ಧಾಂತ ಕಣ್ರೀ. ಕನ್ನಡಕ್ಕೆ ನಮ್ಮ ಕುಟುಂಬದ ಸೇವೆ ನಿರಂತರ. ಬೇರೆ ಭಾಷೆಯಲ್ಲಿ ಸ್ಟಾರ್ ಆಗೋ ಅತೀಯಾಸೆ, ಅದು ಆನಾಚಾರ. ಸ್ವಲ್ಪ ತಿಳ್ಳಕೊಳ್ಳಿಮಾ ಸಿನಿಮಾ ಆಚಾರ-ವಿಚಾರ. ದೊಡ್ಡದಾಗಿ ಸ್ಟಾರ್ಸ್‌ಗಳ ಬೆಂಬಲ. ಸಿನಿಮಾ ತೆರೆ ಕಾಣೋ ಮುನ್ನ ಇವರೆಲ್ಲ ಎಲ್ಲಿ ಹೋಗಿದ್ರೋ ಕೇಳಿ ಒಂದ್ಸಲ!. ಸೋಲಿನ ಬೆಂಕಿಗೆ ಸಪೋರ್ಟ್ ಅನ್ನೋ ತುಪ್ಪ ಸುರಿಯುವ ನಾಟಕ, ನೀವುಗಳೇನಲ್ಲ ಬಿಡಿ ಸಾಚಾ, ಅಯ್ಯೋ ಇದನ್ನೆಲ್ಲ ತುಂಬ ನೋಡಿದಿವಿ ಬಿಡು ಮಚ್ಚಾ..'
ಟಾಕ್ಸಿಕ್ ಬೆಂಬಲಿಸಿದ ಕಲಾವಿದರ ಬಗ್ಗೆ ಟೀಕೆ!
ಈ ಮೂಲಕ ರಿಷಿಕಾ ಅವರು, ಟಾಕ್ಸಿಕ್ ರಿಲೀಸ್ ಮುನ್ನ ನೀವೆಲ್ಲಿದ್ರಿ. ಸಿನಿಮಾ ಸೋತ ಬಳಿಕ ಉರಿಯೋ ಬೆಂಕಿಗೆ ತುಪ್ಪ ಹಾಕೋಕೆ ಬಂದ್ರಾ ಎಂಬರ್ಥದಲ್ಲಿ ಪ್ರಶ್ನಿಸಿದ್ದಾರೆ. ಜೊತೆಗೆ 'ನೀವುಗಳೇನಲ್ಲ ಬಿಡಿ ಸಾಚಾ'ಎಂದು ಟಾಕ್ಸಿಕ್ ಬೆಂಬಲಿಸಿದ ಕಲಾವಿದರ ಕುರಿತು ಮಾತನಾಡಿದ್ದರು. ಇದಕ್ಕೆ ಆಯಾ ಕಲಾವಿದರ ಫ್ಯಾನ್ಸ್ ರಿಷಿಕಾ ಹೇಳಿಕೆ ಖಂಡಿಸಿದ್ದಾರೆ.
ಕೆಲವರು ಇವರಿಗೆ ಏನಾಗಿದೆ. ನಿರಂತರವಾಗಿ ಈ ರೀತಿ ಮಾಡುತ್ತಿದ್ದೀರಲ್ಲ. ಮಾನಸಿಕವಾಗಿ ಸರಿ ಇದ್ದೀರಾ ಎಂದು ಕೇಳಿದ್ದಾರೆ. ಇವರ ವಿಡಿಯೋ ಹಂಚಿಕೊಂಡು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಯಶ್ ಫ್ಯಾನ್ಸ್ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದೆಲ್ಲ ತಿರುಗೇಟು ನೀಡಿದ್ದಾರೆ.


Click it and Unblock the Notifications
