‘ಕೆಜಿಎಫ್’ ಕನ್ನಡ ಸಿನಿಮಾನೇ ಅಲ್ಲ, ಕನ್ನಡಪರ ಹೋರಾಟಗಾರನ ಹೇಳಿಕೆ!
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಒಂದು ಹೊಸ ಗತ್ತು ಕೊಟ್ಟು ವರ್ಲ್ಡ್ ಲೆವೆಲ್ ಸಿನಿಮಾ ಆಗಿ ಮಿಂಚಿರುವ 'ಕೆಜಿಎಫ್' ಕನ್ನಡಿಗರಿಗೆ ರಿಯಲ್ ಗೋಲ್ಡ್ ಇದ್ದಂತೆ. ಈ ಸಿನಿಮಾ ಮೂಲಕ ಕನ್ನಡಗಿರು ಮತ್ತೆ ಪುಟಿದೆದ್ದು, ತಮ್ಮ ಸಿನಿಮಾ ತಾಕತ್ ತೋರಿಸಿದ್ದಾರೆ ಅಂತಾರೆ ಯಶ್‌ರ ಅಭಿಮಾನಿಗಳು. ಆದರೆ ಇಲ್ಲೊಬ್ಬರು ಕನ್ನಡಪರ ಹೋರಾಟಗಾರರು, 'ಕೆಜಿಎಫ್' ಕನ್ನಡ ಸಿನಿಮಾನೇ ಅಲ್ಲ ಅಂತಿದ್ದಾರೆ!
ಪ್ಯಾನ್ ಇಂಡಿಯಾ ಜಮಾನದಲ್ಲಿ ಕನ್ನಡ ಸಿನಿಮಾಗಳಿಗೆ ಡಿಮ್ಯಾಂಡ್ ಇದ್ದು, ಕೆಜಿಎಫ್ ಮತ್ತು ಕಾಂತಾರ ಬಳಿಕ ಕನ್ನಡ ಸಿನಿಮಾಗಳ ಖದರ್‌ಗೆ ಬಾಲಿವುಡ್ ಶೇಕ್ ಆಗಿದ್ದು. ಕನ್ನಡಗರ ಉತ್ತಮ ಚಿತ್ರಗಳನ್ನು ಪರಭಾಷೆ ಜನರು ಪ್ರೀತಿಸುತ್ತಿದ್ದಾರೆ. ಈ ಪ್ರಯತ್ನದ ಭಾಗವಾಗಿ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ಅತ್ಯುತ್ತಮ ಚಿತ್ರಗಳು ಬರುತ್ತಿವೆ. ಆದ್ರೆ ಇದೇ ಸಮಯದಲ್ಲಿ ಕನ್ನಡ ಪರ ಹೋರಾಟಗಾರರೊಬ್ಬರು ಕೆಜಿಎಫ್ ಕನ್ನಡ ಸಿನಿಮಾನೆ ಅಲ್ಲ ಅಂತಿದ್ದಾರೆ. ಹಾಗಾದರೆ ಅವರು ಹೀಗೆ ಹೇಳಿದ್ದು ಯಾಕೆ? ಮುಂದೆ ಓದಿ.

'ಕೆಜಿಎಫ್' ವಿರುದ್ಧ ವಾಟಾಳ್ ಗರಂ!
ಅಷ್ಟಕ್ಕೂ ಕನ್ನಡಪರ ಹೋರಾಟಗಾರ ಹಾಗೂ ಕನ್ನಡದ ಕಟ್ಟಾಳು ಎಂಬ ಬಿರುದು ಪಡೆದ ವಾಟಾಳ್ ನಾಗರಾಜ್ ಇದೀಗ 'ಕೆಜಿಎಫ್' ಸಿನಿಮಾ ವಿರುದ್ಧ ಗರಂ ಆಗಿದ್ದಾರೆ. ಅದ್ರಲ್ಲೂ 'ಕೆಜಿಎಫ್' ಸಿನಿಮಾ ಟೈಟಲ್ ಬಗ್ಗೆ ವಾಟಾಳ್ ಗರಂ ಆಗಿದ್ದು, ಅಪ್ಪಟ ಕನ್ನಡ ಹೆಸರನ್ನ ಇಡದೆ ಅದು ಕನ್ನಡ ಸಿನಿಮಾ ಆಗಲ್ಲ. ಕನ್ನಡ ಸಿನಿ ರಂಗದಲ್ಲಿ ಎಂತೆಂಥ ಸಿನಿಮಾ ಬಂದು ಹೋಗಿವೆ. ಸ್ವರ್ಣ ಗೌರಿ, ಎರಡು ನಕ್ಷತ್ರಗಳು.. ಹೀಗೆ ತುಂಬಾ ಒಳ್ಳೆ ಒಳ್ಳೆಯ ಸಿನಿಮಾಗಳು ಬಂದಿವೆ. ಆದ್ರೆ ಈಗಿನ ಸಿನಿಮಾಗಳ ಹೆಸರಿನಲ್ಲೇ ಕನ್ನಡತನ ಇರಲ್ಲ ಎಂದು ಕುಟುಕಿದ್ದಾರೆ.
ಕನ್ನಡತನ ಇಲ್ಲದ ಚಿತ್ರವಂತೆ!
ಹಾಗೇ ಮತ್ತೊಂದು ಕಡೆ ಜಾಗತಿಕ ಮಟ್ಟದಲ್ಲಿ 'ಕೆಜಿಎಫ್' ಬೆಳೆದು ನಿಂತಿರುವ ಬಗ್ಗೆಯೂ ವಾಟಾಳ್ ನಾಗರಾಜ್ ಅವರಿಗೆ ಖುಷಿ ಇಲ್ಲ. ಕನ್ನಡತನ ಇಲ್ಲದ ಚಿತ್ರ ಬೆಳೆದು ನಿಂತರೇನು ಎನ್ನುವ ರೀತಿ ಪ್ರಶ್ನೆ ಮಾಡಿದ್ದಾರೆ. ಹಾಗೇ ಕನ್ನಡದ ಹಳೆಯ ಚಿತ್ರಗಳಿಗೆ ಫುಲ್ ಮಾರ್ಕ್ಸ್‌ನ ಕೊಟ್ಟಿದ್ದಾರೆ. ಈ ಮೂಲಕ ಇದೀಗ ವಾಟಾಳ್ ನಾಗರಾಜ್ ಅವರ ಹೇಳಿಕೆ ವೈರಲ್ ಆಗಿದೆ & ಈ ಬಗ್ಗೆ ಬಿಸಿಬಿಸಿ ಚರ್ಚೆ ಜೋರಾಗಿದೆ.

'ಕೆಜಿಎಫ್-3' ಯಾವಾಗ ಬರುತ್ತೆ?
ಕನ್ನಡ ಸಿನಿಮಾ ಇಂಡಸ್ಟ್ರಿಗೆ 'ಕೆಜಿಎಫ್' ರಿಯಲ್ ಗೋಲ್ಡ್. ಬರೀ ದುಡ್ಡು ಮಾಡಿದ ವಿಚಾರಕ್ಕೆ ಮಾತ್ರವಲ್ಲ, ಎಲ್ಲಾ ವಿಭಾಗದಲ್ಲೂ 'ಕೆಜಿಎಫ್' ಚಿತ್ರ ಹಿಂದಿನ ದಾಖಲೆಗಳನ್ನು ಧೂಳ್ ಧೂಳ್ ಮಾಡಿತ್ತು. ಎರಡು ಭಾಗದಲ್ಲಿ ಬಿಡುಗಡೆ ಆದ ಕೆಜಿಎಫ್ ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದೆ. 'ಕೆಜಿಎಫ್-1' & 'ಕೆಜಿಎಫ್-2' ನೋಡಿದ್ದ ಫ್ಯಾನ್ಸ್ 'ಕೆಜಿಎಫ್-3' ಯಾವಾಗಪ್ಪಾ? ಅಂತಾ ಕಾಯುತ್ತಿದ್ದರು. ಇದೇ ಸಮಯದಲ್ಲಿ ವಾಟಾಳ್ ನಾಗರಾಜ್ ಅವರ ಹೇಳಿಕೆ ಹೊಸ ತಲ್ಲಣ ಸೃಷ್ಟಿ ಮಾಡಿದೆ.
ಸಾವಿರ ಕೋಟಿಯ ಕೋಟೆ 'ಕೆಜಿಎಫ್-2'!
ಕೆಜಿಎಫ್-1 & ಕೆಜಿಎಫ್-2 ಎರಡೂ ಇಂಡಸ್ಟ್ರಿ ಹಿಟ್ ಸಿನಿಮಾಗಳು. ಅದ್ರಲ್ಲೂ 'ಕೆಜಿಎಫ್-2' ಭಾರತೀಯ ಚಿತ್ರರಂಗದಲ್ಲೇ ಅತಿಹೆಚ್ಚು ಗಳಿಸಿದ ಸಿನಿಮಾಗಳಲ್ಲಿ 3ನೇ ಸ್ಥಾನ ಪಡೆದಿತ್ತು. ಹೀಗೆ 1200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿರುವ 'ಕೆಜಿಎಫ್-2' ಭಾರತದಲ್ಲೇ 1000 ಕೋಟಿ ರೂಪಾಯಿ ಬಾಚಿತ್ತು. ಹೊರ ದೇಶದಲ್ಲಿ 214 ಕೋಟಿಗೂ ಹೆಚ್ಚು ಗಳಿಸಿತ್ತು ಕನ್ನಡಿಗರ 'ಕೆಜಿಎಫ್-2'. ಕೆಜಿಎಫ್ ಚಾಪ್ಟರ್ 2 ಕ್ಲೈಮ್ಯಾಕ್ಸ್‌ನಲ್ಲಿ 'ಕೆಜಿಎಫ್ ಚಾಪ್ಟರ್-3' ಬಗ್ಗೆ ಹಿಂಟ್ ಕೊಡಲಾಗಿತ್ತು. ಇದೇ ಕಾರಣಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿದ್ದಾಗ ವಾಟಾಳ್‌ರ ಹೇಳಿಕೆ ಸಂಚಲನ ಸೃಷ್ಟಿಸಿದೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಕನ್ನಡ ಸಿನಿಮಾ ಇಂಡಸ್ಟ್ರಿ ಮತ್ತಷ್ಟು ಮೇಲೆ ಹೋಗಲಿದೆ ಅನ್ನೋದು ಕನ್ನಡಿಗರ ಆಶಯ. ಹಾಗೇ, ಈ ಆಶಯಕ್ಕೆ ತಕ್ಕಂತೆ ಇದೀಗ ಕನ್ನಡ ಇಂಡಸ್ಟ್ರಿ ಬೆಳೆಯುತ್ತಿದೆ. ಹಾಗೇ ಕನ್ನಡ ಸಿನಿಮಾಗಳಿಗೆ ಜಾಗತಿಕ ಮಟ್ಟದಲ್ಲಿ ಉತ್ತಮ ಬೆಲೆಯು ಕೂಡ ಸಿಗುತ್ತಿದೆ. ಹೀಗಿದ್ದಾಗಲೇ ಇಂತಹ ಚರ್ಚೆಗಳು ಕೂಡ ಗಮನ ಸೆಳೆಯುತ್ತಿವೆ.












Click it and Unblock the Notifications