Umashree: ಸಾಯ್ಬೇಕು ಎಂದು ಕುಡಿತ ಕಲಿತೆ: ಜೀವನದ ಮುಳ್ಳಿನ ಹಾದಿ ಬಿಚ್ಚಿಟ್ಟ ಉಮಾಶ್ರೀ
ಅತ್ಯುತ್ತಮ ನಟಿಯಾಗಿ, ರಾಜಕಾರಣಿಯಾಗಿ ರಾಜ್ಯದಲ್ಲಿ ಮಿಂಚುತ್ತಿರುವ ಉಮಾಶ್ರೀ ಅವರ ಜೀವನದ ಹಾದಿ ನಾವು ಅಂದುಕೊಂಡಷ್ಟು ಸುಲಭವಿರಲಿಲ್ಲ. ಅದೊಂದು ಮುಳ್ಳಿನ ಹಾದಿ. ಇನ್ನೊಂದು ಮದುವೆ ಆಗು, ನಿನಗೊಂದು ಸಂಗಾತಿ ಬೇಕು ಎಂದು ಎಷ್ಟು ಜನ ಹೇಳಿದ್ರು, ಕೆಳದೆ ಒಂಟಿಯಾಗಿ ಜೀವನದ ಪಯಣದಲ್ಲಿ ಹೋರಾಡಿದ ಕಷ್ಟದ ದಿನಗಳನ್ನ ನಟಿ ಉಮಾಶ್ರೀ ಅವರು ಬಿಚ್ಚಿಟ್ಟಿದ್ದಾರೆ.
ಬಡ ಕುಟುಂಬದಲ್ಲಿ ಜನಿಸಿದ್ದ ಉಮಾಶ್ರೀ ಅವರ ಮನೆಯಲ್ಲಿ ದಿನನಿತ್ಯದ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಇತ್ತು. ಊಟಕ್ಕಾಗಿ ಕಷ್ಟಪಟ್ಟ ದಿನಗಳ ಬಗ್ಗೆ ಹೇಳಿಕೊಂಡಿರುವ ನಟಿ ಉಮಾಶ್ರೀ ಅವರು, ರಂಗಭೂಮಿಗೆ ಸೇರಿದರೆ ತಿನ್ನಲು ಊಟ ಕೊಡುತ್ತಾರೆ ಎಂಬ ಕಾರಣಕ್ಕೆ ರಂಗಭೂಮಿಗೆ ಕಾಲಿಟ್ಟೆ ಎಂದು ಹೇಳಿಕೊಂಡಿದ್ದಾರೆ. ಪ್ರೀತಿಸಿ ಮದುವೆಯಾದರೂ ದಾಂಪತ್ಯದಲ್ಲಿ ಅವರಿಗೆ ಸಿಕ್ಕಿದ್ದು ಬರಿಯ ನೋವು ನೋವು ಮಾತ್ರ. ಉಮಾಶ್ರೀ ಅವರು ಅನುಭವಿಸಿದ ಕಷ್ಟಗಳ ಕುರಿತು ಇ ನಾರಾದಾ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ವತಃ ಅವರೇ ಕಷ್ಟದ ದಿನಗಳ ಕುರಿತು ಹೇಳಿಕೊಂಡಿದ್ದಾರೆ.

ಮದುವೆಯಾದ ಮೇಲೆ ನನಗೆ ಅಂದುಕೊಂಡ ಜೀವನ ಸಿಗಲಿಲ್ಲ. ಹೀಗಾಗಿ ಮನೆ ಬಿಟ್ಟು ಮಕ್ಕಳನ್ನು ಕರೆದು ಬಂದೆ. ಅಮ್ಮನ ಮನೆಯಲ್ಲಿ ಮಕ್ಕಳನ್ನು ಬಿಟ್ಟೆ. ಬದುಕಲು ದಾರಿ ಇರಲಿಲ್ಲ. ಜೀವನ ಕಷ್ಟವಾಗಿತ್ತು. ದೇಹವನ್ನು ಮಾರಿಕೊಳ್ಳಲು ಇಷ್ಟವಿರಲಿಲ್ಲ. ಅದಾಗಲೇ ಒಮ್ಮೆ ಸಾಯುವ ಯೋಚನೆ ಮಾಡಿದ್ದೆ. ಈಗ ಮತ್ತೆ ಆತ್ಮಹತ್ಯೆಯೊಂದೇ ದಾರಿ ಎನ್ನಿಸಿತು. ಹೇಗೆ ಸಾಯುವುದು ಎಂದು ತಿಳಿಯಲಿಲ್ಲ. ತುಂಬಾ ಕುಡಿದರೆ ಸಾಯುತ್ತಾರೆ ಎಂದು ಗೊತ್ತಾಯ್ತು. ಅದಕ್ಕಾಗಿಯೇ ಕುಡಿತದ ಚಟ ಹತ್ತಿಸಿಕೊಂಡೆ ಎಂದು ನಟಿ ಉಮಾಶ್ರೀ ಅವರು ಕಣ್ಣೀರು ಹಾಕುತ್ತಾ ಹೇಳಿಕೊಂಡಿದ್ದಾರೆ.
ಜೀವನ ಸಾಕಾಗಿ ಸಾಯ್ಬೇಕು ಅಂತ ನಿರ್ಧಾರ ಮಾಡಿ, ಸಿಕ್ಕಾಪಟ್ಟೆ ಕುಡಿದೆ. ಆ ಸಮಯದಲ್ಲಿ ಯಾವುದೋ ಕಾರಣಕ್ಕೆ ನನ್ನ ಅಮ್ಮ, ನನ್ನ ಮಗಳನ್ನು ಚೆನ್ನಾಗಿ ಹೊಡೆದುಬಿಟ್ಟರು. ಆಗ ನನ್ನ ಮಗಳು ನನ್ನ ಬಳಿ ಅಳುತ್ತಾ ಬಂದು, ಅಪ್ಪನೂ ಇಲ್ಲ, ಅಮ್ಮನೂ ಸತ್ತೋಗ್ತಾಳೆ ಎಂದು ಅಜ್ಜಿ ಹೇಳಿದ್ರು. ನಾನು ಹೇಗೆ ಬದುಕೋದು ಎಂದು ಆ ಪುಟ್ಟ ಮಗಳ ಅಳುತ್ತಾ ಕೇಳಿದಳು. ನನ್ನ ಮಗಳ ಆ ಮಾತು ನನ್ನನ್ನು ಚುಚ್ಚಿ ಬಿಡ್ತು. ಹೇಗಾದರೂ ಬದುಕ ಬೇಕು ಎನ್ನುವ ನಿರ್ಧಾರ ಮಾಡಿದೆ. ಆತ್ಮಹತ್ಯೆಯ ಯೋಚನೆ ಬಿಟ್ಟೆ. ಮೂರ್ನಾಲ್ಕು ವರ್ಷ ಚೆನ್ನಾಗಿಯೇ ಕುಡಿದಿದ್ದೆ. ಮಗಳ ಮಾತಿನಿಂದ ನೊಂದು ಕುಡಿಯುವುದನ್ನು ಸಂಪೂರ್ಣ ಬಿಟ್ಟೆ ಎಂದು ಕಣ್ಣೀರು ಹಾಕುತ್ತಾ ಹಿಂದಿನ ದಿನಗಳನ್ನ ಬಿಚಿಟ್ಟಿದ್ದಾರೆ.
ಇನ್ನೂ ಮೊದಲು ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದೆ. ಕೊನೆಗೆ ಸಿನಿಮಾಗಳಲ್ಲಿ ಅವಕಾಶ ಸಿಕ್ತು. ಆದರೆ, ನಾನು ಒಂಟಿ ಹೆಣ್ಣು ಅಂತ ನನ್ನನ್ನು ಪುರುಷರು ನೋಡುವ ದೃಷ್ಟಿ ಬೇರೆಯದ್ದೇ ಇರುತ್ತಿತ್ತು. ನನ್ನಿಂದು ಅವರು ಬಯಸುತ್ತಿರುವುದು ಏನು ಎಂದು ತಿಳಿದ ತಕ್ಷಣ ಮುಗ್ಧ ಉಮಾಶ್ರೀ, ರೌದ್ರ ಉಮಾಶ್ರೀಯಾಗಿ ಬದಲಾದಳು. ಅತ್ಯಂತ ಕೆಟ್ಟ ಗಂಡಸರಿಗಿಂತಲೂ ಹತ್ತು ಪಟ್ಟು ಕೆಟ್ಟ ಮಾತು ನನ್ನ ಬಾಯಿಯಿಂದ ಬರತೊಡಗಿತು ಎಂದು ಉಮಾಶ್ರೀ ಹೇಳಿದ್ದಾರೆ.
ನನ್ನಲ್ಲಿಇನ್ನೂ ಯೌವ್ವನ ಇದ್ದ ಕಾರಣ. ಪುರುಷರ ಜೊತೆಗೆ ದೈಹಿಕ ವಾಂಛೆ ಆಗಬಾರದು ಎನ್ನುವ ಕಾರಣಕ್ಕೆ ರಾಜಕೀಯ ಪ್ರವೇಶ ಮಾಡಿದೆ. ಎಂಎಲ್‌ಸಿ, ಎಎಲ್‌ಎ, ಎಂಪಿ ಆಗಿ ಸಚಿವೆಯೂ ಆದೆ. ಇದು ನನ್ನ ಬದುಕಿನ ಹಾದಿ ಎಂದು ಭಾವುಕರಾಗಿ ನಟಿ ಉಮಾಶ್ರೀ ಅವರು ಹೇಳಿಕೊಂಡಿದ್ದಾರೆ.












Click it and Unblock the Notifications