Bigg Boss Bundh: ಬಿಗ್‌ಬಾಸ್ ನಡೆಯುವ ಜಾಲಿವುಡ್ ಸ್ಟುಡಿಯೋಗೆ ಬಿತ್ತು ಬೀಗ; 10 ದಿನಕ್ಕೇ ಶೋ ಬಂದ್ ಸಾಧ್ಯತೆ
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್‌ಬಾಸ್ ಕನ್ನಡ ಸೀಸನ್-12ಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಇಂದು ಬಿಗ್‌ಬಾಸ್ ನಡೆಯುತ್ತಿರುವ ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋಗೆ ತಹಶೀಲ್ದಾರ್, ಪೊಲೀಸರ ಸಮ್ಮುಖದಲ್ಲಿ ಬೀಗ ಬಿದ್ದಿದೆ. ನಿಯಮ ಉಲ್ಲಂಘಿಸಿರುವ ಆರೋಪದ ಮೇರೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಗ್‌ಬಾಸ್ ಕಾರ್ಯಕ್ರಮದ ಆಯೋಜಕರಿಗೆ ನೋಟಿಸ್ ನೀಡಿತ್ತು. ಜಾಲಿವುಡ್ ಸ್ಟುಡಿಯೋ ಮ್ಯಾನೇಜ್‌ಮೆಂಟ್‌ಗೆ ತಹಶೀಲ್ದಾರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂದು 7.30ರವರೆಗೆ ಅವರಿಗೆ ಕಾಲಾವಕಾಶ ನೀಡಲಾಗಿದ್ದು, ಅಷ್ಟರೊಳಗೆ ಸ್ಟುಡಿಯೋದಲ್ಲಿರುವ ಎಲ್ಲರನ್ನೂ ಹೊರಗೆ ಕಳುಹಿಸುವಂತೆ ಖಡಕ್ ಆಗಿ ಸೂಚನೆ ನೀಡಲಾಗಿದೆ.
ಸದ್ಯ ಒಳಗೆ ಬಿಗ್‌ಬಾಸ್ ಕಾರ್ಯಕ್ರಮ ನಡೆಯುತ್ತಿದ್ದು, ಸ್ಪರ್ಧಿಗಳು ಕೂಡ ಅಲ್ಲೇ ಇದ್ದಾರೆ. ಈಗ ಜಾಲಿವುಡ್ ಸ್ಟುಡಿಯೋ ಬಂದ್‌ಗೆ ಸೂಚನೆ ನೀಡಿರುವುದರಿಂದ ಬಿಗ್‌ಬಾಸ್ ಕಾರ್ಯಕ್ರಮ ಕೂಡ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಕೂಡಲೇ ಬಿಗ್ ಬಾಸ್ ಮನೆಯನ್ನು ಬಂದ್ ಮಾಡುವಂತೆ ನೋಟಿಸ್‌ನಲ್ಲಿ ಖಡಕ್ ಆಗಿ ತಿಳಿಸಿದ್ದರ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಡದಿ ಬಳಿ ಬಿಗ್‌ಬಾಸ್ ಕಾರ್ಯಕ್ರಮ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್‌ನವರು ಜಲ ಕಾಯ್ದೆ, ವಾಯು ಕಾಯ್ದೆಯಡಿ ಅನುಮತಿ ಪಡೆಯದೆ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಎರಡು ನೋಟಿಸ್ ಹೋಗಿದೆ
ಬಿಗ್ ಬಾಸ್-12 ಕಾರ್ಯಕ್ರಮ ನಡೆಯುತ್ತಿರುವ ಆ ಸ್ಟುಡಿಯೋಗೆ ನೋಟಿಸ್ ನೀಡಿರುವ ವಿಚಾರ ನನಗೆ ತಿಳಿಯಿತು. ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ರಾಮನಗರದ ಪ್ರಾದೇಶಿಕ ಕಚೇರಿಯಿಂದ 2024ರಲ್ಲೇ ಈ ಸಂಬಂಧ ಎರಡು ಬಾರಿ ನೋಟಿಸ್ ನೀಡಲಾಗಿದೆ. ಆದರೂ ಅವರು ನಿಯಮ ಪಾಲಿಸದ ಕಾರಣ ಈಗ ನೋಟಿಸ್ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದಿದ್ದಾರೆ.
ಈ ಸ್ಟುಡಿಯೋದಲ್ಲಿ ಎಸ್‌ಟಿಪಿ ಕಾರ್ಯನಿರ್ವಹಣೆಯೂ ಸೇರಿ ತಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಇಲ್ಲಿ ಅನೇಕ ಜನರೇಟರ್ ಸೆಟ್‌ಗಳನ್ನು ಇಟ್ಟುಕೊಂಡಿದ್ದಾರೆ. ಅವರು ಅದಕ್ಕೂ ಅನುಮತಿ ಪಡೆದಿಲ್ಲ. ಕಾನೂನಿಗಿಂತ ಇಲ್ಲಿ ಯಾರೂ ದೊಡ್ಡವರಲ್ಲ. ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಂಡಿದೆ ಎಂದು ಸಚಿವ ಖಂಡ್ರೆ ಹೇಳಿದ್ದಾರೆ.

ಬಿಗ್‌ಬಾಸ್ ಶೋ ನಡೆಸುವವರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದು ಒಂದು ರೀತಿ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದಂತೆ. ಹೀಗಾಗಿ ನಿಯಮಾನುಸಾರವಾಗಿ ನೊಟೀಸ್ ನೀಡಿ ಅದನ್ನು ಬಂದ್ ಮಾಡುವಂತೆ ಹೇಳಿದ್ದಾರೆ. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದು, ಮುಂದೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications