Trisha Krishnan: ನನಗೆ ಮದುವೆಯಾಗಿದೆ, ನಾಲ್ಕು ಮಕ್ಕಳಿದ್ದಾರೆ: ನಟಿ ತ್ರಿಶಾ ಕೃಷ್ಣನ್ ಪೋಸ್ಟ್ ವೈರಲ್
ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರ ವೈಯಕ್ತಿಕ ಜೀವನದ ಬಗ್ಗೆ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹತ್ತಾರು ವದಂತಿಗಳು ಹರಿದಾಡುತ್ತಿದ್ದವು. ಇತ್ತೀಚೆಗೆ ನಟ ದಳಪತಿ ವಿಜಯ್ ಅವರೊಂದಿಗೆ ಆಪ್ತವಾಗಿ ಕಾಣಿಸಿಕೊಳ್ಳುತ್ತಿರುವ ತ್ರಿಶಾ ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆ, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬಿತ್ಯಾದಿ ಗಾಳಿಸುದ್ದಿಗಳಿಗೆ ಸ್ವತಃ ನಟಿಯೇ ಉತ್ತರ ನೀಡುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ತ್ರಿಶಾ ಮಾಡಿರುವ ಪೋಸ್ಟ್ ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಕಳೆದ ಎರಡು ದಿನಗಳಿಂದ ತ್ರಿಶಾ ಅವರ ಮದುವೆಯ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಿದ್ದವು. ವಿಶೇಷವಾಗಿ ಅವರು ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬಂದ ಬೆನ್ನಲ್ಲೇ, ಅವರು ಚಿತ್ರರಂಗದಿಂದ ದೂರವಾಗುತ್ತಿದ್ದಾರೆ ಎಂಬ ಊಹಾಪೋಹಗಳು ಶುರುವಾಗಿದ್ದವು. ಇದಕ್ಕೆ ಪೂರಕವೆಂಬಂತೆ ಅವರು ಹಂಚಿಕೊಳ್ಳುತ್ತಿದ್ದ ಕೆಲವು ಪೋಸ್ಟ್‌ಗಳು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ್ದವು. ಆದರೆ ಈಗಿನ ಪೋಸ್ಟ್ ಮೂಲಕ ಅವರು ತಾವು ಸಿನಿಮಾದಲ್ಲಿ ಸಕ್ರಿಯವಾಗಿದ್ದು, ಮದುವೆಯ ಸುದ್ದಿ ಕೇವಲ ಕಟ್ಟುಕಥೆ ಎಂದು ಸ್ಪಷ್ಟಪಡಿಸಿದ್ದಾರೆ.

ಶ್ರೀಮಂತ ಉದ್ಯಮಿಯನ್ನ ಮದುವೆಯಾಗಿದ್ದೇನೆ
ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿರುವ ತ್ರಿಶಾ, "ಕೇಳಿಬರುತ್ತಿರುವ ಸುದ್ದಿಗಳ ಪ್ರಕಾರ, ನಾನು ಈಗಾಗಲೇ ಸಿನಿಮಾಗಳನ್ನು ಬಿಟ್ಟಿದ್ದೇನೆ, ಒಬ್ಬ ಶ್ರೀಮಂತ ಉದ್ಯಮಿಯನ್ನು ವಿವಾಹವಾಗಿದ್ದೇನೆ ಮತ್ತು ನಿನ್ನೆಗಷ್ಟೇ ಎರಡು ವರ್ಷ ತುಂಬಿದ ನಾಲ್ಕು ಮಕ್ಕಳನ್ನು ಸಾಕುತ್ತಿದ್ದೇನೆ. ಇದಲ್ಲದೆ ಇನ್ಯಾವುದಾದರೂ ವಿಷಯವನ್ನು ನಾನು ಸೇರಿಸಬೇಕೇ ಅಥವಾ ಇಂದಿನ ಕಾಲ್ಪನಿಕ ಸುದ್ದಿಗಳ ಕೋಟಾ ಮುಗಿಯಿತೇ?" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಬಗ್ಗೆ ಹರಡುತ್ತಿರುವ ಸುದ್ದಿಗಳು ಎಷ್ಟು ಹಾಸ್ಯಾಸ್ಪದ ಮತ್ತು ಕಲ್ಪಿತ ಎಂಬದನ್ನು ಅವರು ಬಹಿರಂಗಪಡಿಸಿದ್ದಾರೆ.
ತ್ರಿಶಾ ಅವರ ಈ ದಿಟ್ಟ ನಡೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ವದಂತಿಗಳಿಗೆ ನೇರವಾಗಿ ಸ್ಪಷ್ಟನೆ ನೀಡುವ ಬದಲು, ಇಂತಹ ಹಾಸ್ಯದ ಮೂಲಕ ಉತ್ತರ ನೀಡುವುದು 'ಅಲ್ಟಿಮೇಟ್ ರೆಸ್ಪಾನ್ಸ್' ಎಂದು ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ. ಸದ್ಯ ತ್ರಿಶಾ ಕೈಯಲ್ಲಿ ಹಲವಾರು ದೊಡ್ಡ ಪ್ರಾಜೆಕ್ಟ್‌ಗಳಿದ್ದು, ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಹಂತದಲ್ಲಿದ್ದಾರೆ. ಈ ಮಧ್ಯೆ ಹರಡುವ ಇಂತಹ ಸುಳ್ಳು ಸುದ್ದಿಗಳಿಗೆ ತಲೆಕೆಡಿಸಿಕೊಳ್ಳದೆ, ತಮ್ಮದೇ ಶೈಲಿಯಲ್ಲಿ ಟ್ರೋಲ್ ಮಾಡುವ ಮೂಲಕ ನಟಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ನಟ ದಳಪತಿ ವಿಜಯ್ ಅವರೊಂದಿಗೆ ತ್ರಿಶಾ ಅವರ ಹೆಸರು ಕೇಳಿಬರುತ್ತಿರುವ ಬೆನ್ನಲ್ಲೇ, ಅವರು ಹಂಚಿಕೊಂಡಿರುವ 'ಶಾಂತಿ' ಮತ್ತು 'ನಿಶ್ಶಬ್ದ'ದ ಕುರಿತಾದ ಮಾತುಗಳು ಹಲವು ಚರ್ಚೆಗಳಿಗೆ ನಾಂದಿ ಹಾಡಿವೆ. ವದಂತಿಗಳಿಗೆ ನೇರವಾಗಿ ಪ್ರತಿಕ್ರಿಯಿಸದಿದ್ದರೂ, ತಾವು ಈಗ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸ್ಥಿತಿಯಲ್ಲಿದ್ದೇನೆ ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ.
ಇತ್ತೀಚೆಗೆ ತ್ರಿಶಾ ಹಂಚಿಕೊಂಡಿರುವ ವಿಡಿಯೋದಲ್ಲಿ, ನಾನು ಈಗ ಜೀವನದ ಅಂತಹ ಒಂದು ಘಟ್ಟದಲ್ಲಿದ್ದೇನೆಂದರೆ, ಇಲ್ಲಿ ನಾನು ಯಾರ ಜೊತೆಯೂ ವಾದ ಮಾಡುವುದಿಲ್ಲ. ಒಂದು ವೇಳೆ ಯಾರಾದರೂ ಬಂದು 'ಆನೆ ಹಾರುತ್ತದೆ' ಎಂದು ಹೇಳಿದರೆ, ನಾನು ಖಂಡಿತವಾಗಿಯೂ 'ನೀವು ಹೇಳುವುದು ಸರಿ' ಎಂದೇ ಹೇಳುತ್ತೇನೆ. ಆದರೆ ನಾನು ಅವರ ಮಾತನ್ನು ಒಪ್ಪುತ್ತೇನೆ ಎಂದಲ್ಲ, ಬದಲಾಗಿ ಅವರನ್ನು ತಿದ್ದುವ ಅಥವಾ ಅವರಿಗೆ ವಿವರಿಸುವ ಆಸಕ್ತಿ ನನಗಿಲ್ಲ ಎಂದರ್ಥ ಎಂದು ತಿರುಗೇಟು ನೀಡಿದ್ದರು.

ಪ್ರೀತಿ ಇಲ್ಲದೆ ಏನಿಲ್ಲ
ಸರಿಯಾಗಿರುವುದಕ್ಕಿಂತಲೂ ಮಾನಸಿಕ ಶಾಂತಿ ಪಡೆಯುವುದು ಹೆಚ್ಚು ಮೌಲ್ಯವಾದುದು ಎಂದು ನಾನು ಕಲಿತಿದ್ದೇನೆ. ವಿವರಣೆ ನೀಡುವುದಕ್ಕಿಂತ ಮೌನವಾಗಿರುವುದು ಉತ್ತಮ ದಾರಿ. ಪ್ರತಿಯೊಬ್ಬರಿಗೂ ನನ್ನ ಶಕ್ತಿಯನ್ನು ವ್ಯಯಿಸುವ ಅವಶ್ಯಕತೆಯಿಲ್ಲ. ಕೆಲವು ವಾದಗಳು ಕೇವಲ ನಮ್ಮ ಶಕ್ತಿಯನ್ನು ಕುಂದಿಸಲು ಬರುವ ಆಹ್ವಾನಗಳಾಗಿರುತ್ತವೆ. ಅಂತಹ ಆಹ್ವಾನಗಳನ್ನು ನಾನು ನಿರಾಕರಿಸುತ್ತೇನೆ, ಕಿರುನಗೆ ಬೀರುತ್ತೇನೆ ಮತ್ತು ನನ್ನ ಶಾಂತಿಯನ್ನು ಕಾಪಾಡಿಕೊಳ್ಳುತ್ತೇನೆ ಎಂಬ ಸಾಲುಗಳನ್ನು ಹಂಚಿಕೊಂಡಿದ್ದರು. ಪ್ರೀತಿಯ ಬಗ್ಗೆಯೂ ಒಂದು ಕೋಟ್ ಹಂಚಿಕೊಂಡಿದ್ದ ಅವರು, "ಪ್ರೀತಿಯೇ ಎಲ್ಲವೂ ಅಲ್ಲ, ಆದರೆ ಪ್ರೀತಿ ಇಲ್ಲದೆ ಉಳಿದಿದ್ದಕ್ಕೆಲ್ಲಾ ಅರ್ಥವೇ ಇರುವುದಿಲ್ಲ" ಎಂದು ಬರೆದುಕೊಂಡಿದ್ದರು.












Click it and Unblock the Notifications