'ಟೈಗರ್ ಪ್ರಭಾಕರ್ ಮಾನಸಿಕವಾಗಿ ನರಳಿ ಪ್ರಾಣ ಬಿಟ್ಟಿದ್ದು ನಿಜನಾ?': ಇಲ್ಲಿದೆ ಇಂಟ್ರಸ್ಟಿಂಗ್ ಲೇಖನ
ಇತ್ತೀಚಿಗೆ ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಆರ್.ಎನ್. ನಾಗೇಂದ್ರರಾಯರ ಸೊಸೆ, ಹಿರಿಯ ನಟ ಸುದರ್ಶನ್ ಅವರ ಪತ್ನಿ ಶೈಲಶ್ರೀ ಸುದರ್ಶನ್ ಅವರು ಆಶ್ರಮ ಸೇರಿದ್ದಾರೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದ, ಕನ್ನಡದ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಇದೀಗ ಮತ್ತೊಂದು ಇಂಟ್ರಸ್ಟಿಂಗ್ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಗಣೇಶ್ ಕಾಸರಗೋಡು ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗವನ್ನು ಬಹಳ ಸಮೀಪದಿಂದ ಕಂಡವರಾದ ಕಾರಣ ಕನ್ನಡ ಚಿತ್ರರಂಗದ ನಟ, ನಟಿಯರ ಬಗ್ಗೆ ಯಾರಿಗೂ ಗೊತ್ತಿರದ ಕೆಲವು ವಿಚಾರಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಒಂದು ವಿಷಯದ ಬಗ್ಗೆ ಸುದೀರ್ಘ ಅಧ್ಯಯನ ಮಾಡಿ ಆ ಕುರಿತು ಮಾಹಿತಿ ಹಂಚಿಕೊಳ್ಳುವ ಗಣೇಶ್ ಕಾಸರಗೋಡು ಅವರ ಬರಹಗಳು ಎಂತವರನ್ನಾದರೂ ಆಕರ್ಷಿಸುತ್ತದೆ.

ಇದೀಗ ಒಂದು ಹಳೆಯ ನೆನಪು ಎನ್ನುವ ಶೀರ್ಷಿಕೆ ಕೊಟ್ಟು ತಾವು ಈ ಹಿಂದೆ ಮಾಡಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್ ಅವರ ಸಂದರ್ಶನದ ನೆನಪುಗಳನ್ನು ಹಂಚಿಕೊಂಡಿಕೊಂಡಿದ್ದು, ಈ ವಿಶೇಷ ಬರಹದಲ್ಲಿ ಟೈಗರ್ ಪ್ರಭಾಕರ್ ಮಾನಸಿಕವಾಗಿ ನರಳಿ ಪ್ರಾಣ ಬಿಟ್ಟಿದ್ದು ನಿಜವಾ? ಎನ್ನುವ ಪ್ರಶ್ನೆಗೆ ಉತ್ತರವನ್ನು ವಿವರಿಸಿದ್ದಾರೆ.
ಗಣೇಶ್ ಕಾಸರಗೋಡು ಅವರ ಬರಹದಲ್ಲಿ ಇರುವುದೇನು?
'ಟೈಗರ್ ಪ್ರಭಾಕರ್ : ನಿಮಗೆ ಗೊತ್ತಿಲ್ಲದಿರುವುದೇನಲ್ಲ, ಆದರೆ ಕೆಲವೊಂದು ವಿಚಾರಗಳ ಬಗ್ಗೆ ಅಧಿಕೃತ ಮಾಹಿತಿ ಬೇಕು ಎಂಬ ಕಾರಣಕ್ಕೆ ಟೈಗರ್ ಪ್ರಭಾಕರ್ ಅವರ ಪ್ರೀತಿಯ ಪುತ್ರ ವಿನೋದ್ ಪ್ರಭಾಕರ್ ಕೈಲಿ ಮಾತಾಡಿಸಿದ್ದೇನೆ. ನನಗಿಂತಲೂ ಹೆಚ್ಚಾಗಿ ಅಪ್ಪನ ಕೊನೆಯ ದಿನಗಳ ಸಫರಿಂಗ್ಸನ್ನು ಖುದ್ದು ಕಂಡವರು ವಿನೋದ್. ಒಮ್ಮೆ ಗೆಳೆಯ ಕರಿಸುಬ್ಬು ಅವರ 'ಬಾಲಾಜಿ ಡಿಜಿಟಲ್ ಸ್ಟುಡಿಯೋ'ದಲ್ಲಿ ಸಿಕ್ಕ ವಿನೋದ್ ಯಾವ ಮುಚ್ಚುಮರೆಯೂ ಇಲ್ಲದೇ ತಮ್ಮ ತಂದೆಯ ಕೊನೆಯ ದಿನಗಳ ನೋವಿನ ಬದುಕನ್ನು ನನ್ನ ಮುಂದೆ ತೆರೆದಿಟ್ಟದ್ದು ಹೀಗೆ.
'ನಿಜ ಹೇಳಬೇಕಂದ್ರೆ ಅಪ್ಪ ನನ್ನ ಪಾಲಿಗೆ ಅಪ್ಪನಾಗಿರಲಿಲ್ಲ. ಗೆಳೆಯರಾಗಿದ್ದರು, ಬಂಧುವಾಗಿದ್ದರು. ಅವರ ಸ್ವಭಾವ ಏನೂಂತ ನನಗೆ ಚೆನ್ನಾಗಿ ಗೊತ್ತಿತ್ತು. ಗೆಳೆಯರನ್ನು ಮಾತ್ರವಲ್ಲ ಶತ್ರುಗಳನ್ನು ಕೂಡಾ ಹೃದಯದಲ್ಲಿಟ್ಟು ಪೂಜಿಸುತ್ತಿದ್ದರು. ಅವರ ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಚರ್ಚಿಸುತ್ತಿದ್ದರು. ನಾವು ಜೊತೆಯಾಗಿ ಕುಳಿತು ಗೆಳೆಯರಂತೆ ಸುಖ ದುಃಖ ಹಂಚಿಕೊಳ್ಳುತ್ತಿದ್ದೆವು'.

'ಇಂಥಹ ಅಪ್ಪನ ಕೊನೆಗಾಲದಲ್ಲಿ ಅವರ ಕಾಲು ಕೊಳೆತು ಹೋಗಿತ್ತು, ಹುಳುವಾಗಿತ್ತು, ಆ ಹುಳುವಿಗಾಗಿ ಅಪ್ಪ ದನದ ಮಾಂಸವನ್ನು ಕಟ್ಟಿಕೊಳ್ಳುತ್ತಿದ್ದರು ಎನ್ನುವ ಗಾಸಿಪ್ ಹರಡಿಕೊಂಡದ್ದು ಮಾತ್ರ ದೊಡ್ಡ ದುರಂತ. ಖಂಡಿತವಾಗಿಯೂ ಹಾಗೇನೂ ಆಗಿರಲಿಲ್ಲ. ಕಾಲಿಗೆ ಗಾಯವಾಗಿತ್ತು ನಿಜ, ಆದ್ರೆ ಅದಕ್ಕೆ ತಕ್ಕುದಾದ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು. ಕೊನೆಕೊನೆಗೆ ಹೆಚ್ಚೆಚ್ಚು ಡ್ರಿಂಕ್ಸ್ ತೆಗೆದುಕೊಳ್ಳುತ್ತಿದ್ದರು ಎನ್ನುವುದು ನಿಜ. ಸತತ ಸೋಲು, ವೈಯಕ್ತಿಕ ಬದುಕಿನ ದುರಂತಗಳು ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿತ್ತು. ಹೀಗಾಗಿ ಅವರು ಕುಡಿತಕ್ಕೆ ದಾಸರಾಗಿ ಬಿಟ್ರು'.
'ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ, ಆದರೆ ಅವರಿಗೆ ಹೆಣ್ಣು ಮಕ್ಕಳ ಬಗ್ಗೆ ತುಂಬಾ ಗೌರವವಿತ್ತು. ಆದರೂ ಅವರೊಬ್ಬ ಮಹಾ ರಸಿಕ, ಮಹಾ ಹೆಣ್ಣುಬಾಕ ಎನ್ನುವಂತೆ ಮಾಧ್ಯಮಗಳು ಬಿಂಬಿಸಿದ್ದವು. ಹೀಗಾಗಿ ಹೊರ ಪ್ರಪಂಚಕ್ಕೆ ಅವರೊಬ್ಬ ಪುರುಷಕಾಮಿಯಾಗಿ ಕಂಡದ್ದು ನಿಜ. ಆದರೆ ವಾಸ್ತವ ಸಂಗತಿಯೇ ಬೇರಿತ್ತು. ಡಾಲಿ ಎಂಬ ನಟಿ ದಿನಾ ಬಂದು ಮನೆಯಲ್ಲಿ ಸೆಟ್ಲ್ ಆಗೋಳು. ಆವಾಗೆಲ್ಲಾ ಅಪ್ಪ ನನ್ನನ್ನು ಕರೆದು ಆಕೆಯನ್ನು ಹೊರಗೆ ಕಳಿಸುವಂತೆ ಹೇಳೋರು. ಇದು ವಾಸ್ತವ. ಆದ್ರೆ ಮಾಧ್ಯಮಗಳು ಬಾಯಿಗೆ ಬಂದಂತೆ ಬರೆದವು. ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಅಪ್ಪ ಯಾವುದಕ್ಕೂ ರಿಯಾಕ್ಟ್ ಮಾಡದೇ ತಮ್ಮ ಪಾಡಿಗೆ ತಾವಿರುತಿದ್ದರು'
'ಇನ್ನು ಆ ನಟಿಯ ವಿಚಾರ. ನಿಜ ಹೇಳಬೇಕಂದ್ರೆ ಅಪ್ಪ ಆಕೆಯನ್ನು ಮನಸಾರೆ ಪ್ರೀತಿಸುತ್ತಿದ್ರು. ಅದೊಂದು ಟೈಮ್, ಹಾಗಾಗಿ ಹೋಯಿತು. ಆದರೆ ಕೊನೆಗಾಲದಲ್ಲಿ ಆಕೆ ಅವರನ್ನು ಬಿಟ್ಟು ಹೊರಟು ಹೋದಾಗ ಅಪ್ಪ ವ್ಯಥೆ ಪಟ್ಟಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅಪ್ಪನ ಪಾಲಿಗೆ ಆಕೆ ಅದೃಷ್ಟದ ದೇವತೆಯಾಗಿದ್ದಳು. ಮುಟ್ಟಿದ್ದೆಲ್ಲಾ ಚಿನ್ನ. ಆದರೆ ಅಪ್ಪನ ಬದುಕಿನಿಂದ ಆಕೆ ಹೊರಟು ಹೋದ ಮೇಲೆ ಸೋಲಿನ ಸುಳಿಯಲ್ಲಿ ಸಿಕ್ಕಿಹಾಕಿಕೊಂಡರು. ಅಪ್ಪ ನಟಿಸಿದ ಚಿತ್ರಗಳೆಲ್ಲಾ ಮಕಾಡೆ ಮಲಗಿದವು. ನಿರ್ಮಿಸಿ, ನಿರ್ದೇಶಿಸಿದ ಚಿತ್ರಗಳೂ ನೆಲಕಚ್ಚಿದವು. ಸದಾ ಗೆಲುವನ್ನೇ ಕಂಡಿದ್ದ ಅಪ್ಪ ಈ ಸೋಲುಗಳಿಂದ ಕಂಗೆಟ್ಟು ಹೋದರು. ಆಗ ಅಪ್ಪ ನೋವನ್ನು ಹಂಚಿಕೊಂಡದ್ದು ನನ್ನ ಬಳಿ. ಅಪ್ಪನನ್ನು ತೀರಾ ಹತ್ತಿರದಿಂದ ಗೆಳೆಯನಾಗಿ ನೋಡುವ ಸೌಭಾಗ್ಯ ಅವರ ಕೊನೆಗಾಲದಲ್ಲಿ ಸಿಕ್ಕಿತು'
'ಇಂತಹ ಅಪ್ಪ ಸಾಯುವ ಹೊತ್ತಿಗೆ ನಮ್ಮನ್ನೆಲ್ಲಾ ಅನಾಥರನ್ನಾಗಿ ಮಾಡಿ ಬೀದಿ ಪಾಲು ಮಾಡಲಿಲ್ಲ. ತಮ್ಮ ಯಶಸ್ಸಿನ ದಿನಗಳಲ್ಲಿ ದುಡಿದ ಹಣವನ್ನೆಲ್ಲಾ ಅವರು ಜಮೀನಿಗೆ ಹಾಕಿದ್ದರು. ಮದರಾಸಿನಲ್ಲೊಂದು ಸೈಟು, ಹೊಸಕೆರೆಹಳ್ಳಿಯಲ್ಲೊಂದು ಸೈಟು, ಒಂದಷ್ಟು ಬ್ಯಾಂಕ್ ಬ್ಯಾಲೆನ್ಸ್ ಎಲ್ಲಾ ಇತ್ತು. ನಡುವೆ ಏನೋ ತೊಂದ್ರೆ ಆಯಿತು. ಚೆನ್ನೈನಲ್ಲಿರೋ ಸೈಟನ್ನು ಮಾರಿದೆ. ನಂತರ ಬೆಂಗಳೂರಿನ ಸೈಟೊಂದನ್ನು ಮಾರಿದೆ. ಹೀಗೆ ಸೈಟ್ ಮಾರಿ ಬಂದ ಹಣದಲ್ಲಿ ಬದುಕು ನಡೆಸುವಂತಾಯಿತು. ನಿಮಗೆ ಗೊತ್ತೇ, ನಾವು ಕುಟುಂಬದವರೆಲ್ಲಾ ಜೊತೆಯಾಗಿ ಬದುಕು ನಡೆಸಿದ್ದೇವೆ'.
'ಅಮ್ಮ 2006ರಲ್ಲಿ ತೀರಿಕೊಂಡ್ರು. ಹೊಸಕೆರೆಹಳ್ಳಿಯ ಮನೆಯಲ್ಲಿ ನಾನು, ನನ್ನ ಹೆಂಡ್ತಿ ಜೊತೆ ಹಾಯಾಗಿದ್ದೇನೆ. ಉಳಿದಂತೆ ನಮ್ಮ ಜೊತೆ ದೊಡ್ಡಕ್ಕ ಭಾರತಿ, ಸಣ್ಣಕ್ಕ ಗೀತಾ ಇದ್ದಾರೆ. ಇಬ್ಬರೂ ಉದ್ಯೋಗದಲ್ಲಿದ್ದಾರೆ. ಚಿಕ್ಕ ಭಾವ ಕೆನಡಾದಲ್ಲಿದ್ದಾರೆ. ದೊಡ್ಡಕ್ಕನಿಗಿನ್ನೂ ಮದುವೆಯಾಗಿಲ್ಲ. ಅಪ್ಪನ ಬದುಕಿನ ಕಹಿಯನ್ನು ಕಣ್ಣಾರೆ ಕಂಡಿರುವ ಆಕೆ ಮದುವೆಯೇ ಬೇಡವೆಂದು ಹಠ ಹಿಡಿದು ಕುಳಿತು ಬಿಟ್ಟಿದ್ದಾಳೆ. 2014ರಲ್ಲಿ ನನ್ನ ಮದುವೆಯಾಯಿತು.
ನನ್ನ ಕೈ ಹಿಡಿದಾಕೆಯ ಹೆಸರು ಇಷಾ. ತುಂಬಾ ಹೊಂದಿಕೊಂಡಿದ್ದಾಳೆ. ನಾನು ಡಿಪ್ರೆಷನ್‌ಗೆ ಹೋದಾಗಲೆಲ್ಲಾ ಜೊತೆಗಿದ್ದು ಸಾಂತ್ವನ ಹೇಳುತ್ತಾಳೆ.
ಅಂತಹ ಹೆಂಡ್ತಿ ಪಡೆಯಲು ನಾನು ಪುಣ್ಯ ಮಾಡಿದ್ದೇನೆ. ಎಂಬಲ್ಲಿಗೆ ವಿನೋದ್ ಪ್ರಭಾಕರ್ ಮಾತು ಮುಗಿಯುತ್ತದೆ. ಇಲ್ಲಿ ಪ್ರಕಟಿಸಬಾರದ ಒಂದಷ್ಟು ಆಫ್ ದಿ ರೆಕಾರ್ಡ್ ವಿಷಯಗಳನ್ನು ಗುಟ್ಟಾಗಿಟ್ಟಿದ್ದೇನೆ. ಅಂದಹಾಗೆ ಕನ್ನಡ ಚಿತ್ರರಂಗದ 'ಟೈಗರ್' ಸದ್ದಡಗಿ ಆಗಲೇ ದಶಕಗಳೇ ಕಳೆದಿವೆ. ಆದರೂ ಪ್ರಭಾಕರ್ ಬಿಟ್ಟು ಹೋದ ನೆನಪುಗಳು ಮಾತ್ರ ನಿತ್ಯ ನಿರಂತರ' ಎಂದು ಗಣೇಶ್ ಕಾಸರಗೋಡು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.












Click it and Unblock the Notifications