30,00,00,000 ರೂಪಾಯಿ ನಷ್ಟ: ಕನ್ನಡಿಗರನ್ನ ಕೆಣಕಿದ್ದಕ್ಕೆ Thug Lifeಗೆ ಆದ ಗತಿಯೇನು?
ತಮಿಳು ನಟ ಕಮಲ್ ಹಾಸನ್ ಅವರು ತಮ್ಮ ಸಿನಿಮಾ ರಿಲೀಸ್ ಹೊತ್ತಲ್ಲೇ ದೊಡ್ಡ ಎಡವಟ್ಟು ಮಾಡಿಕೊಂಡಿದ್ದು ಗೊತ್ತೇ ಇದೆ. ತಮ್ಮ ಥಗ್ ಲೈಫ್ ಸಿನಿಮಾ ಪ್ರಚಾರದ ಕಾರ್ಯಕ್ರಮದಲ್ಲಿ ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಹೇಳುವ ಮೂಲಕ ವಿರೋಧಕ್ಕೆ ಗುರಿಯಾಗಿದ್ದರು. ಇದರಿಂದ ಕೆರಳಿದ ಕನ್ನಡಿಗರು ಕಮಲ್ ಹಾಸನ್ ಕ್ಷಮೆ ಕೇಳದಿದ್ದರೆ ಅವರ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಲ್ಲ ಎಂದು ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದರು. ನನ್ನ ತಪ್ಪಿಲ್ಲ ಕ್ಷಮೆ ಕೇಳಲ್ಲ ಎಂದೇ ಸಮರ್ಥನೆ ಮಾಡಿಕೊಂಡ ಕಮಲ್ ಹಾಸನ್ ಸಿನಿಮಾಗೆ ಕರ್ನಾಟಕದಲ್ಲಿ ಬ್ಯಾನ್ ಬಿಸಿ ತಟ್ಟಿತು. ಕೊನೆಗೆ ಕರ್ನಾಟಕ ಬಿಟ್ಟು ಬೇರೆ ರಾಜ್ಯಗಳಲ್ಲಿ ಮಾತ್ರ ಸಿನಿಮಾ ರಿಲೀಸ್ ಆಗಿತ್ತು. ಇನ್ನು ಕರ್ನಾಟಕದಲ್ಲಿ ಈ ಸಿನಿಮಾ ರಿಲೀಸ್ ಆಗದಿದ್ದರಿಂದ ಚಿತ್ರತಂಡಕ್ಕೆ ಆಗಿರುವ ನಷ್ಟ ಎಷ್ಟು? ವರದಿಯೊಂದು ತಿಳಿಸಿದೆ. ಕನ್ನಡಿಗರನ್ನು ಕೆಣಕಿದರೆ ಇದೇ ಗತಿ ಎಂದೂ ರಾಜ್ಯದ ಜನ ಹೇಳುತ್ತಿದ್ದಾರೆ.
ಹೌದು ಮೊದಲಿಗೆ ಮೊಂಡಾಟ ಮುಂದುವರಿಸಿದ್ದ ಕಮಲ್ ಹಾಸನ್ ನಾನು ಕ್ಷಮೆ ಕೇಳಲ್ಲ ಎಂದಿದ್ದರು. ಇದರಿಂದ ರೊಚ್ಚಿಗೆದ್ದ ಕನ್ನಡಪರ ಹೋರಾಟಗಾರರು ಕ್ಷಮೆ ಕೇಳದಿದ್ದರೆ ಥಗ್‌ಲೈಫ್ ಸಿನಿಮಾ ರಿಲೀಸ್ ಆಗಲ್ಲ, ಒಂದು ವೇಳೆ ರಿಲೀಸ್ ಆದರೆ ಆ ಥಿಯೇಟರ್‌ಗೆ ಬೆಂಕಿ ಹಚ್ಚಿ ಧ್ವಂಸ ಮಾಡ್ತೀವಿ ಎಂದು ವಾರ್ನಿಂಗ್ ನೀಡಿದ್ದರು. ಬಳಿಕ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ ಕಮಲ್ ತಮ್ಮ ಸಿನಿಮಾ ರಿಲೀಸ್ ಆಗಲು ಅವಕಾಶ ಕೊಡಬೇಕು ಹಾಗೂ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಭದ್ರತೆ ನೀಡುವಂತೆ ನಿರ್ದೇಶನ ನೀಡಿ ಎಂದು ಕೇಳಿಕೊಂಡಿದ್ದರು. ಆಗ ಹೈಕೋರ್ಟ್ ಕೂಡ ಕಮಲ್‌ಗೆ ಚಾಟಿ ಬೀಸಿ ತರಾಟೆಗೆ ತೆಗೆದುಕೊಂಡಿತ್ತು.

ಆಗ ರಿಲೀಸ್ ಡೇಟ್‌ಗೆ ಕರ್ನಾಟಕದಲ್ಲಿ ಥಗ್‌ಲೈಫ್ ಸಿನಿಮಾ ರಿಲೀಸ್ ಮಾಡದೆ ಚಿತ್ರತಂಡ ಕೂಡ ಹಿಂದೆ ಸರಿದಿತ್ತು. ಆದರೆ ಕಮಲ್ ಹಾಸನ್ ಸಿನಿಮಾಗೆ ಕರ್ನಾಟಕದಲ್ಲಿ ಬಹಳ ಕ್ರೇಜ್ ಇದ್ದಿದ್ದರಿಂದ ಇಲ್ಲಿ ಸಿನಿಮಾ ರಿಲೀಸ್ ಆಗದೇ ಇರುವುದು ಚಿತ್ರತಂಡಕ್ಕೆ ಭಾರಿ ಹೊಡೆತ ಬಿದ್ದಿತ್ತು. ಕರ್ನಾಟಕದಲ್ಲಿ ವಿವಾದ ಎದುರಾಗಿದ್ದರಿಂದ ಬೇರೆ ಭಾಷೆಗಳಲ್ಲಿ ಹಾಗೂ ರಾಜ್ಯಗಳಲ್ಲಿ ಥಗ್‌ಲೈಫ್ ಸಿನಿಮಾ ರಿಲೀಸ್ ಆದರೂ ನಿರೀಕ್ಷಿತ ಯಶಸ್ಸು ಸಿಗಲಿಲ್ಲ ಎಂದು ವರದಿಗಳು ಹೇಳಿವೆ. ಯಾವುದೇ ಸಿನಿಮಾ ಆದರೂ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಉತ್ತಮ ಪ್ರದರ್ಶನ್ ಕಾಣುವುದು ವಾಡಿಕೆ. ತಮಿಳು ಪ್ರೇಕ್ಷಕರು ಕೂಡ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಸಿನಿಮಾ ರಿಲೀಸ್ ಆಗದೆ ಚಿತ್ರತಂಡಕ್ಕೆ ಭಾರಿ ನಷ್ಟವಾಗಿದೆ ವರದಿಯೊಂದು ಹೇಳಿದೆ.
ವರದಿಗಳ ಪ್ರಕಾರ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆಯ ಮೇಲಿನ ನಿಷೇಧದಿಂದಾಗಿ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬರೋಬ್ಬರಿ 30 ಕೋಟಿ ರೂಪಾಯಿ ಕಳೆದುಕೊಂಡಿದೆ ಎಂದು ಹೇಳಿದೆ. ಈ ಸಿನಿಮಾಗೆ ಬೇರೆ ರಾಜ್ಯಗಳಲ್ಲೂ ಉತ್ತಮ ಪ್ರದರ್ಶನ ಕಾಣಲಿಲ್ಲ. ಇದರಿಂದಾಗಿ ಥಗ್‌ಲೈಫ್ ಸಿನಿಮಾ ಬಗ್ಗೆ ಅಪಸ್ವರ ಕೇಳಿಬರುತ್ತಿದೆ. ಕರ್ನಾಟಕದಲ್ಲಿ ಈ ಸಿನಿಮಾ ರಿಲೀಸ್ ಆಗದಿದ್ದು ಒಳ್ಳೇದೇ ಆಯ್ತು ಎನ್ನುತ್ತಿದ್ದಾರೆ ನೆಟ್ಟಿಗರು. ಕರ್ನಾಟಕದಲ್ಲಿ ಯಾರೂ ಅದನ್ನು ಚಿತ್ರಮಂದಿರಗಳಲ್ಲಿ ನೋಡುವುದಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕೆಲವು ನೆಟ್ಟಿಗರು, ಕನ್ನಡ ಭಾಷಾ ವಿವಾದದಿಂದಾಗಿ, ಕರ್ನಾಟಕದ ಜನರು ಚಿತ್ರಮಂದಿರಗಳಲ್ಲಿ ಥಗ್ ಲೈಫ್ ನೋಡುವುದರಿಂದ ಹಾಗೂ ಇದರಿಂದ ಹಣ ಕಳೆದುಕೊಳ್ಳುವುದರಿಂದ ಪಾರಾಗಿದ್ದಾರೆ ಎಂದು ವ್ಯಂಗ್ಯಮಾಡುತ್ತಿದ್ದಾರೆ.
ಕರ್ನಾಟಕದಲ್ಲಿ ರಿಲೀಸ್ ಮಾಡಿ ಎಂದ ಸುಪ್ರೀಂಕೋರ್ಟ್
ಕರ್ನಾಟಕ ಹೈಕೋರ್ಟ್‌ನಲ್ಲಿ ಕಮಲ್ ಹಾಸನ್‌ಗೆ ತೀವ್ರ ಮುಖಭಂಗ ಆಗಿದ್ದರಿಂದ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದು ಕೋರ್ಟ್ ಕರ್ನಾಟಕದಲ್ಲಿ ಥಗ್‌ಲೈಫ್ ಸಿನಿಮಾ ರಿಲೀಸ್‌ಗೆ ಗ್ರೀನ್ ಸಿಗ್ನಲ್ ನೀಡಿತ್ತು. ಜೊತೆಗೆ ಥಿಯೇಟರ್ ಹಚ್ಚುವ ಬೆದರಿಕೆ ಹಾಕಿದ್ದ ಕನ್ನಡಪರ ಹೋರಾಟಗಾರರನ್ನು ತರಾಟೆಗೆ ತೆಗೆದುಕೊಂಡಿತ್ತು. ಸಿಬಿಎಫ್‌ಸಿ ಪ್ರಮಾಣಪತ್ರ ಹೊಂದಿರುವ ಯಾವುದೇ ಚಲನಚಿತ್ರವನ್ನು ಬಿಡುಗಡೆ ಮಾಡಬೇಕು ಮತ್ತು ಕರ್ನಾಟಕ ಸರ್ಕಾರವು ಈ ಚಲನಚಿತ್ರವನ್ನು ರಾಜ್ಯದಲ್ಲಿ ಸುಗಮವಾಗಿ ಬಿಡುಗಡೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿತು. ಕಮಲ್ ಹಾಸನ್‌ಗೆ ಜಯ ಸಿಕ್ಕಿದರೂ, ಕರ್ನಾಟಕದಲ್ಲಿ ಈ ಸಿನಿಮಾ ರಿಲೀಸ್‌ಗೆ ಈಗ ವಿತರಕರೇ ಹಿಂದೇಟು ಹಾಕಿದ್ದಾರೆ. ಒಂದೆಡೆ ಕನ್ನಡಿಗರ ವಿರೋಧ, ಮತ್ತೊಂದೆಡೆ ಬೇರೆ ರಾಜ್ಯಗಳಲ್ಲಿ ಕಳಪೆ ಪ್ರದರ್ಶನ ಕಂಡು ಕರ್ನಾಟಕದ ವಿತರಕರು ಈ ಸಿನಿಮಾ ರಿಲೀಸ್ ಮಾಡಲ್ಲ ಎನ್ನುತ್ತಿದ್ದಾರೆ. ಒಟ್ಟಾರೆ ಕರ್ನಾಟಕದಲ್ಲಿ ರಿಲೀಸ್ ಆಗದಿದ್ದಕ್ಕೆ 30 ಕೋಟಿ ರೂಪಾಯಿಯಷ್ಟು ಥಗ್‌ಲೈಫ್ ಸಿನಿಮಾಗೆ ನಷ್ಟವಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications