ಲಕ್ನೋದಲ್ಲಿ 'ಧುರಂಧರ್-2' ರಂಪಾಟ: ಅಪ್ರಾಪ್ತ ಮಗನನ್ನು ಥಿಯೇಟರ್ ಒಳಗೆ ಬಿಡದಿದ್ದಕ್ಕೆ ಸಿಬ್ಬಂದಿ ಮೇಲೆ ತಂದೆ ಹಲ್ಲೆ
ಲಕ್ನೋ: ಸಿನಿಮಾದಲ್ಲಿ ಹೀರೋಗಳು ಮಾಡುವ ಸಾಹಸಗಳನ್ನು ನೋಡಿ ಆನಂದಿಸುವುದು ಸಾಮಾನ್ಯ. ಆದರೆ ಲಕ್ನೋನ ಚಿತ್ರಮಂದಿರವೊಂದರಲ್ಲಿ ವ್ಯಕ್ತಿಯೊಬ್ಬರು ತನ್ನ ಮಗನಿಗಾಗಿ ಮಾಡಿದ ರಿಯಲ್ ಲೈಫ್ ರಂಪಾಟ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ತನ್ನ ಅಪ್ರಾಪ್ತ ಮಗನಿಗೆ ಪ್ರವೇಶ ನಿರಾಕರಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬರು ಚಿತ್ರಮಂದಿರದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಏನಿದು ಘಟನೆ?
ಲಕ್ನೋದ ಮಾಲ್ ಒಂದರಲ್ಲಿರುವ ಸಿನಿಮಾ ಥಿಯೇಟರ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ 'ಧುರಂಧರ್ 2' (Dhurandhar 2) ಚಿತ್ರದ ಪ್ರದರ್ಶನ ಇತ್ತು. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು 'A' (Adults Only) ಪ್ರಮಾಣಪತ್ರ ನೀಡಿದೆ. ಅಂದರೆ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಈ ಸಿನಿಮಾ ನೋಡಲು ಅವಕಾಶವಿರುತ್ತದೆ. ವ್ಯಕ್ತಿಯೊಬ್ಬರು ತಮ್ಮ ಅಪ್ರಾಪ್ತ ಮಗನೊಂದಿಗೆ ಸಿನಿಮಾ ನೋಡಲು ಬಂದಿದ್ದರು. ಆದರೆ ಕಾನೂನಿನ ಪ್ರಕಾರ ಅಪ್ರಾಪ್ತರನ್ನು ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಚಿತ್ರಮಂದಿರದ ಸಿಬ್ಬಂದಿ ತಡೆದಿದ್ದಾರೆ. ಇದೇ ವಿಷಯಕ್ಕೆ ಶುರುವಾದ ಕಿರಿಕ್, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಸಿಬ್ಬಂದಿ ಮಾತಿನಿಂದ ಕೆರಳಿದ ವ್ಯಕ್ತಿ, "ನನ್ನ ಮಗನಿಗೆ ಸಿನಿಮಾ ನೋಡುವಷ್ಟು ವಯಸ್ಸಾಗಿದೆ, ಒಳಗೆ ಬಿಡಲೇಬೇಕು" ಎಂದು ವಾದಕ್ಕಿಳಿದಿದ್ದಾರೆ. ಆರಂಭದಲ್ಲಿ ಮಾತಿನ ಚಕಮಕಿಯಾಗಿದ್ದ ಈ ಘಟನೆ, ನೋಡನೋಡುತ್ತಿದ್ದಂತೆಯೇ ವಿಕೋಪಕ್ಕೆ ತಿರುಗಿದೆ. ಸಿಬ್ಬಂದಿಯ ಮೇಲೆ ಆ ವ್ಯಕ್ತಿ ದೈಹಿಕವಾಗಿ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ತಕ್ಷಣವೇ ಮಾಲ್‌ನ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
'ಎ' ರೇಟೆಡ್ ಸಿನಿಮಾ ಕಾರಣಕ್ಕೆ ತಡೆ
ಸಿಬ್ಬಂದಿಯು "ಇದು 'ಎ' ರೇಟೆಡ್ ಸಿನಿಮಾ, ಮಕ್ಕಳನ್ನು ಬಿಡಲು ಬರಲ್ಲ" ಎಂದು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಆ ವ್ಯಕ್ತಿ ಕೇಳುವ ಸ್ಥಿತಿಯಲ್ಲಿರಲಿಲ್ಲ. ತನ್ನ ಮಗನ ಎದುರೇ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಗಲಾಟೆ ಮಾಡಿದ್ದಾರೆ. ಈ 'ಧುರಂಧರ್' ಸ್ಟೈಲ್ ಗಲಾಟೆಯಿಂದಾಗಿ ಚಿತ್ರಮಂದಿರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯ ವಿಡಿಯೋ ಅಥವಾ ಫೋಟೋಗಳು ವೈರಲ್ ಆಗುತ್ತಿದ್ದು, ನೆಟ್ಟಿಗರು ವ್ಯಕ್ತಿಯ ವರ್ತನೆಯನ್ನು ಖಂಡಿಸುತ್ತಿದ್ದಾರೆ.
ಕಾನೂನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಮಗನಿಗೆ ತಪ್ಪು ಮಾದರಿಯಾಗುವ ಬದಲು ನಿಯಮ ಗೌರವಿಸಬೇಕಿತ್ತು" ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸದ್ಯ ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ರಣವೀರ್ ಸಿಂಗ್ ಅವರ ಅಬ್ಬರದ ನಟನೆಗೆ ಫಿದಾ ಆಗಿರುವ ಪ್ರೇಕ್ಷಕರು 'ಧುರಂಧರ್ 2' ನೋಡಲು ಮುಗಿಬೀಳುತ್ತಿದ್ದಾರೆ. ಕಟ್ಟುನಿಟ್ಟಾದ ಸೆನ್ಸಾರ್ ನಿಯಮಗಳಿದ್ದರೂ ಸಹ, ಈ ಸಿನಿಮಾ ಪ್ರದರ್ಶನ ಕಾಣುತ್ತಿರುವ ಬಹುತೇಕ ಚಿತ್ರಮಂದಿರಗಳು ಹೌಸ್‌ಫುಲ್ ಆಗುತ್ತಿವೆ.
ಸಿನಿಮಾ ನೋಡಲು ಜನ ಸಾಗರವೇ ಹರಿದು ಬರುತ್ತಿದ್ದರೂ, ಚಿತ್ರಕ್ಕೆ ಸಿಕ್ಕಿರುವ 'A' ರೇಟಿಂಗ್‌ನಿಂದಾಗಿ ಅಪ್ರಾಪ್ತರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಇದೇ ವಿಷಯ ಈಗ ಲಕ್ನೋದ ಎಮರಾಲ್ಡ್ ಮಾಲ್‌ನಲ್ಲಿರುವ ಐನಾಕ್ಸ್ (Inox) ಚಿತ್ರಮಂದಿರದಲ್ಲಿ ದೊಡ್ಡ ಮಟ್ಟದ ಗದ್ದಲಕ್ಕೆ ಕಾರಣವಾಗಿದೆ.












Click it and Unblock the Notifications