Darshan Thoogudeepa: 'ನವಗ್ರಹ' ಮರುಬಿಡುಗಡೆ; ದರ್ಶನ್ ಅಭಿಮಾನಿಗಳಿಗೆ ಚಿತ್ರಮಂದಿರ ಮಾಲೀಕರ ಮನವಿ
ನಟ ದರ್ಶನ್ ತೂಗುದೀಪ ಸದ್ಯ ಆಸ್ಪತ್ರೆಯಲ್ಲಿ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ಖುಷಿಯಲ್ಲಿರುವ ಅಭಿಮಾನಿಗಳು ನಾಳೆ (ನವೆಂಬರ್ 8) ಹಬ್ಬ ಮಾಡಲು ಸಜ್ಜಾಗಿದ್ದಾರೆ. ಹೌದು, 16 ವರ್ಷಗಳ ಬಳಿಕ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ ನವಗ್ರಹ ಮರುಬಿಡುಗಡೆಗೆ ಸಜ್ಜಾಗಿದೆ. ದಾಖಲೆ ಸಂಖ್ಯೆಯ ಚಿತ್ರಮಂದಿರಗಳಲ್ಲಿ ನವಗ್ರಹ ಬಿಡುಗಡೆಯಾಗುತ್ತಿದ್ದು, ಭರ್ಜರಿ ಕಲೆಕ್ಷನ್ ಮಾಡುವ ಮುನ್ಸೂಚನೆ ಸಿಕ್ಕಿದೆ. ಈ ಬೆನ್ನಲ್ಲೇ ಚಿತ್ರಮಂದಿರ ಮಾಲೀಕರು ದರ್ಶನ್ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ.
ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ನವಗ್ರಹ ಸಿನಿಮಾದ ಮೊದಲ ಶೋ ಬೆಳಗ್ಗೆ 7.30ಕ್ಕೆ ಆರಂಭವಾಗಲಿದೆ. ಅಡ್ವಾನ್ಸ್ ಬುಕಿಂಗ್ ಆರಂಭಿಸಿದ ಕೆಲವು ಗಂಟೆಗಳಲ್ಲೇ ಈ ಶೋನ ಎಲ್ಲಾ ಟಿಕೆಟ್ ಮಾರಾಟವಾಗಿದೆ. ದರ್ಶನ್‌ರ ಹೊಸ ಸಿನಿಮಾ ಬಿಡುಗಡೆಗೆ ಇದ್ದ ಸಂಭ್ರಮವೇ ನವಗ್ರಹ ಬಿಡುಗಡೆಗೂ ಇರಲಿದೆ. ಪ್ರಸನ್ನ ಥಿಯೇಟರ್ ನಲ್ಲಿ ಫ್ಲೆಕ್ಸ್ ಹಾಕಿ, ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆ ಮಾಡಲು ಅಭಿಮಾನಿಗಳು ಸಜ್ಜಾಗಿದ್ದು, ಥಿಯೇಟರ್ ಮಾಲೀಕರು ಅಭಿಮಾನಿಗಳಿಗೆ ಸಂಯದದಿಂದ ವರ್ತಿಸುವಂತೆ ಮನವಿ ಮಾಡಿದ್ದಾರೆ.

ಅಭಿಮಾನಿಗಳಿಗೆ ಮನವಿ ಏನು?
ಕನ್ನಡ ಚಲನಚಿತ್ರ ಪ್ರೇಕ್ಷಕ ಮಹನೀಯರೇ ಮತ್ತು ನಮ್ಮ ನಿಮ್ಮೆಲ್ಲರ ಮೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳೇ, ನಿಮ್ಮಲ್ಲಿ ನಾವು ಕೈ ಮುಗಿದು ಮನವಿ ಮಾಡುವುದು ಏನೆಂದರೆ, ನವಗ್ರಹ ಸಿನಿಮಾ ನೋಡಲು ಬಂದಾಗ ಯಾರೂ ಕೂಡ ಯಾರ ವಿರುದ್ಧವೂ ಘೋಷಣೆ ಕೂಗಬಾರದು, ಧಿಕ್ಕಾರ ಕೂಗುವುದನ್ನು ಮಾಡಬಾರದು. ಯಾವುದೇ ರೀತಿಯ ಗಲಾಟೆ ಮಾಡಬಾರದು. ಒಂದು ವೇಳೆ ಹೇಳಿದ್ದನ್ನು ಪಾಲಿಸದೇ ಇದ್ದರೆ ಇದರಿಂದ ತೊಂದರೆಯಾಗುವುದು ನಿರ್ಮಾಪಕರಿಗೆ, ಪ್ರಸನ್ನ ಚಿತ್ರಮಂದಿರಕ್ಕೆ ಮತ್ತು ದರ್ಶನ್ ಅವರಿಗೆ ಎನ್ನುವುದು ನೆನಪಿನಲ್ಲಿರಲಿ. ಆದ್ದರಿಂದ ಅಭಿಮಾನಿಗಳು ಜವಾಬ್ದಾರಿಯಿಂದ ವರ್ತಿಸಬೇಕು ಮತ್ತು ಸಿನಿಮಾ ನೋಡಿ ಆನಂದಿಸಬೇಕು. ಕರಿಯ ಸಿನಿಮಾ ಮರುಬಿಡುಗಡೆ ಸಂದರ್ಭದಲ್ಲಿ ಆದ ಘಟನೆ ಮತ್ತೆ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
A request from Bengaluru's #Prasanna theatre owner to @dasadarshan fans - for #Navagraha Re-release pic.twitter.com/o6QrUZhApJ
— Karnataka Talkies (@KA_Talkies) November 5, 2024
ಕರಿಯ ರಿ ರಿಲೀಸ್ ವೇಳೆ ಗಲಾಟೆ
ದರ್ಶನ್ ಜೈಲು ಸೇರಿದ್ದ ಸಂದರ್ಭದಲ್ಲಿ ಅವರ ಹಲವು ಸಿನಿಮಾಗಳು ಮರು ಬಿಡುಗಡೆಯಾದವು, ದರ್ಶನ್‌ರ ಸಿನಿ ಬದುಕಿನ ದೊಡ್ಡ ಹಿಟ್ ಸಿನಿಮಾದಲ್ಲಿ ಒಂದಾದ ಕರಿಯ ಕೂಡ ಮರು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತು. ಕರಿಯ ಮರುಬಿಡುಗಡೆ ಸಂದರ್ಭದಲ್ಲಿ ಪ್ರಸನ್ನ ಚಿತ್ರಮಂದಿರಲ್ಲಿ ದರ್ಶನ್ ಅಭಿಮಾನಿಗಳು ಮಾಧ್ಯಮಗಳ ವಿರುದ್ಧ ಘೋಷಣೆ ಕೂಗಿದ್ದರು, ಪೊಲೀಸರು ಅಭಿಮಾನಿಗಳುನ್ನು ನಿಯಂತ್ರಿಸಲು ಲಾಠಿ ಚಾರ್ಜ್ ಕೂಡ ಮಾಡಿದ್ದರು.
ಈಗ ಅದೇ ಚಿತ್ರಮಂದಿರಲ್ಲಿ ನವಗ್ರಹ ಮರುಬಿಡುಗಡೆಯಾಗಿತ್ತಿದೆ. ದರ್ಶನ್ ಮಧ್ಯಂತರ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ ಈ ಸಂದರ್ಭದಲ್ಲಿ ಅಭಿಮಾನಿಗಳು ದಾಂಧಲೆ ಮಾಡಿದರೆ, ದರ್ಶನ್ ಅವರಿಗೂ ತೊಂದರೆಯಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಅಭಿಮಾನಿ ಸಂಘಗಳೂ ಕೂಡ ಯಾರ ವಿರುದ್ಧ ಮಾತನಾಡಬಾರದು ಮತ್ತು ಸಿನಿಮಾ ನೋಡಿ ಆನಂದಿಸಬೇಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿವೆ.












Click it and Unblock the Notifications