ಕೊನೆಗೂ ಒಂದು ಸಿಕ್ಸರ್ ಕನಸು ನನಸು ಮಾಡಿಕೊಂಡ ವೈಭವ್ ಸೂರ್ಯವಂಶಿ.. ಗಳಿಸಿದ್ದು ಕೇವಲ 79 ರನ್, ಕಡಿಮೆಯಾಗದ ಭರವಸೆ
Vaibhav Sooryavanshi: ಐಪಿಎಲ್ 2026ರ ಸೀಸನ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಇತ್ತೀಚೆಗಷ್ಟೇ ಭಾರತ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದರು. ಸದ್ಯ ಲಂಕಾ ಪ್ರವಾಸದಲ್ಲಿರುವ ಅವರು ತೀವ್ರ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದ್ದಾರೆ. ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಒಂದೂ ಸಿಕ್ಸರ್ ಬಾರಿಸಲು ಸಾಧ್ಯವಾಗದೆ ಪರದಾಡಿದ್ದರು. ಮೂರನೇ ಪಂದ್ಯದಲ್ಲಿ ಕೊನೆಗೂ ಸಿಕ್ಸ್ ಸಿಡಿಸುವ ಮೂಲಕ ಆ ಆಸೆಯನ್ನೇನೋ ನೆರವೇರಿಸಿಕೊಂಡರು. ಆದರೆ ದೊಡ್ಡ ಇನಿಂಗ್ಸ್ ಕಟ್ಟಲು ವಿಫಲವಾಗಿ ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.
ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅವರನ್ನು ಭಾರತ 'ಎ' ತಂಡಕ್ಕೆ ಆಯ್ಕೆ ಮಾಡಿತ್ತು. ಆದರೆ ಅಂತಾರಾಷ್ಟ್ರೀಯ ಗುಣಮಟ್ಟದ ಬೌಲಿಂಗ್ ಎದುರು ಅವರ ತಾಂತ್ರಿಕ ದೌರ್ಬಲ್ಯಗಳು ಈಗ ಬಹಿರಂಗವಾಗುತ್ತಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಪಂದ್ಯಗಳಲ್ಲಿ ವೈಭವ್ ನಿರಂತರವಾಗಿ ರನ್ ಗಳಿಸಲು ಪರದಾಡುತ್ತಿದ್ದು, ಕ್ರಿಕೆಟ್ ವಲಯದಲ್ಲಿ ಇವರ ಬ್ಯಾಟಿಂಗ್ ತಂತ್ರಜ್ಞಾನದ ಬಗ್ಗೆ ಚರ್ಚೆಗಳು ಶುರುವಾಗಿವೆ.

ವಂಡರ್ ಕಿಡ್ ಎಡವುತ್ತಿರುವುದು ಎಲ್ಲಿ?
ಐಪಿಎಲ್‌ನ ಫ್ಲ್ಯಾಟ್ ಪಿಚ್‌ಗಳಲ್ಲಿ ಮುನ್ನುಗ್ಗಿ ಸಿಕ್ಸರ್‌ಗಳ ಮಳೆ ಹರಿಸಿದ್ದ ಬಿಹಾರದ ಈ ಎಡಗೈ ಬ್ಯಾಟರ್‌ಗೆ ಶ್ರೀಲಂಕಾದ ಪಿಚ್‌ಗಳಲ್ಲಿನ ಬೌನ್ಸ್ ಮತ್ತು ಸ್ವಿಂಗ್ ದೊಡ್ಡ ಸವಾಲಾಗಿ ಪರಿಣಮಿಸಿವೆ. ಎದುರಾಳಿ ತಂಡದ ವೇಗದ ಬೌಲರ್‌ಗಳು ವೈಭವ್ ಅವರ ದೌರ್ಬಲ್ಯವನ್ನು ಅರಿತು ನಿರಂತರವಾಗಿ ಶಾರ್ಟ್ ಪಿಚ್ ಮತ್ತು ಬೌನ್ಸರ್ ಎಸೆತಗಳ ಮೂಲಕ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಆಟ ಆಡಲು ವಿಫಲವಾಗುತ್ತಿರುವ ವೈಭವ್ ಕಡಿಮೆ ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರುತ್ತಿದ್ದಾರೆ.
ಬ್ಯಾಟಿಂಗ್‌ನಲ್ಲಿ ವೈಭವ್ ವೈಫಲ್ಯ
ಶ್ರೀಲಂಕಾ 'ಎ' ವಿರುದ್ಧದ ಮೊದಲ ಪಂದ್ಯದಲ್ಲಿ ಕ್ರೀಸ್‌ನಲ್ಲಿ ಹೆಚ್ಚು ಸಮಯ ನಿಲ್ಲಲು ಪರದಾಡಿದ ಅವರು 12 ಎಸೆತಗಳಲ್ಲಿ 3 ಬೌಂಡರಿ ಸೇರಿದಂತೆ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮೊಹಮ್ಮದ್ ಶಿರಾಜ್ ಅವರ ಬೌಲಿಂಗ್‌ನಲ್ಲಿ ಮಿಡ್-ಆಫ್‌ನಲ್ಲಿ ಕ್ಯಾಚ್ ನೀಡಿ ನಿರಾಶೆ ಮೂಡಿಸಿದ್ದರು. ಆದರೆ ಅಫ್ಘಾನಿಸ್ತಾನ್ 'ಎ' ವಿರುದ್ಧದ ಎರಡನೇ ಪಂದ್ಯದಲ್ಲಿ ತಮ್ಮ ಹಳೆಯ ಆಕ್ರಮಣಕಾರಿ ಶೈಲಿಗೆ ಮರಳಿದ ವೈಭವ್ ಕೇವಲ 22 ಎಸೆತಗಳಲ್ಲಿ 9 ಆಕರ್ಷಕ ಬೌಂಡರಿಗಳ ನೆರವಿನಿಂದ 44 ರನ್ ಚಚ್ಚಿದರು. ಆದರೆ ಅರ್ಧಶತಕದ ಸನಿಹದಲ್ಲಿದ್ದಾಗ ಶಾರ್ಟ್ ಪಿಚ್ ಎಸೆತವನ್ನು ಅಪ್ಪರ್ ಕಟ್ ಮಾಡಲು ಹೋಗಿ ವಿಕೆಟ್ ಕೀಪರ್‌ಗೆ ಕ್ಯಾಚ್ ಒಪ್ಪಿಸುವ ಮೂಲಕ ತಮ್ಮ ತಾಂತ್ರಿಕ ದೌರ್ಬಲ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದರು.
ಇನ್ನೂ ಸೋಮವಾರ (ಜೂನ್ 15) ನಡೆದ ಶ್ರೀಲಂಕಾ 'ಎ' ತಂಡದ ವಿರುದ್ಧದ ಮೂರನೇ ಪಂದ್ಯದಲ್ಲೂ ವೈಭವ್ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದಾರೆ. ಮೈದಾನಕ್ಕಿಳಿದು ಲಯ ಕಂಡುಕೊಳ್ಳಲು ಯತ್ನಿಸಿದ ಅವರು 14 ಎಸೆತಗಳಲ್ಲಿ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸ್ಪಿನ್ ಬೌಲರ್ ಎದುರು ದೊಡ್ಡ ಶಾಟ್‌ಗೆ ಕೈಹಾಕಿದ ವೈಭವ್, ಚೆಂಡಿನ ಟೈಮಿಂಗ್ ಮಿಸ್ ಮಾಡಿಕೊಂಡ ಪರಿಣಾಮ ಪಾಯಿಂಟ್ ವಲಯದಲ್ಲಿ ಫೀಲ್ಡರ್‌ಗೆ ಸುಲಭ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ಈ ಮೂಲಕ ಉತ್ತಮ ಆರಂಭಗಳನ್ನು ಪಡೆದರೂ ಸಹ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಸಾಧ್ಯವಾಗದೆ ಯುವ ಆಟಗಾರ ಸರಣಿಯಲ್ಲಿ ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದಾರೆ.
ಈ ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಿಂದ ಅವರು ಕ್ರಮವಾಗಿ 14, 44 ಮತ್ತು 21 ರನ್ ಗಳಿಸುವ ಮೂಲಕ ಒಟ್ಟಾರೆ ಕೇವಲ 79 ರನ್ ಮಾತ್ರ ಕಲೆಹಾಕಲು ಶಕ್ತರಾಗಿದ್ದಾರೆ. ಐಪಿಎಲ್‌ನಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದ ವೈಭವ್ ಅಂತಾರಾಷ್ಟ್ರೀಯ ಮಟ್ಟದ ಈ ಸರಣಿಯಲ್ಲಿ ರನ್ ಗಳಿಸಲು ಪರದಾಡುತ್ತಿರುವುದು ಅಭಿಮಾನಿಗಳಲ್ಲಿ ಕೊಂಚ ನಿರಾಶೆ ಮೂಡಿಸಿದೆ.
ವೈಭವ್ ಸತತ ವೈಫಲ್ಯದ ಕುರಿತು ಟೀಕೆ
ಭಾರತ 'ಎ' ತಂಡದ ಪರ ಆಡಿದ ಸರಣಿಯ ಆರಂಭಿಕ ಪಂದ್ಯಗಳಲ್ಲಿ ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗದ ವೈಭವ್ ಕೇವಲ ತರಾತುರಿಯ ಶಾಟ್‌ಗಳಿಗೆ ಕೈಹಾಕಿ ವಿಕೆಟ್ ಒಪ್ಪಿಸಿದ್ದಾರೆ. ಇದು ಅವರ ಬ್ಯಾಟಿಂಗ್‌ನಲ್ಲಿ ಇನ್ನೂ ಪಕ್ವತೆ ಬರಬೇಕಿದೆ ಎಂಬುದನ್ನು ಸಾಬೀತುಪಡಿಸಿದೆ. ವೈಭವ್ ಅವರ ಈ ಸತತ ವೈಫಲ್ಯದ ಕುರಿತು ಹಲವು ಹಿರಿಯ ಆಟಗಾರರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 15 ವರ್ಷದ ಚಿಕ್ಕ ವಯಸ್ಸಿಗೆ ಐಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ಯಶಸ್ಸು ಸಿಕ್ಕ ತಕ್ಷಣವೇ ಅವರನ್ನು ಇಂಡಿಯಾ 'ಎ' ನಂತಹ ಹಿರಿಯರ ತಂಡಕ್ಕೆ ಆಯ್ಕೆ ಮಾಡಿದ್ದು ಬಿಸಿಸಿಐ ಮಾಡಿದ ತರಾತುರಿಯ ನಿರ್ಧಾರ ಎಂದು ಕೆಲವರು ಟೀಕಿಸಿದ್ದಾರೆ.
'ವೈಭವ್ ಅವರಲ್ಲಿ ಅದ್ಭುತ ಪ್ರತಿಭೆ ಮತ್ತು ತಾಳ್ಮೆ ಇದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೌಲರ್‌ಗಳು ನಿಮ್ಮ ಸಣ್ಣ ತಪ್ಪುಗಳನ್ನು ತಕ್ಷಣವೇ ಪತ್ತೆ ಹಚ್ಚುತ್ತಾರೆ. ಸದ್ಯ ವೈಭವ್ ಶಾರ್ಟ್ ಬಾಲ್‌ಗಳನ್ನು ಎದುರಿಸುವಲ್ಲಿ ತಾಂತ್ರಿಕ ದೌರ್ಬಲ್ಯ ಹೊಂದಿದ್ದಾರೆ. ಅವರು ಮೊದಲು ದೇಶಿ ಕ್ರಿಕೆಟ್ (ರಣಜಿ ಅಥವಾ ಅಂಡರ್-19) ಆಡಿ ತಮ್ಮ ತಂತ್ರಗಳನ್ನು ಸುಧಾರಿಸಿಕೊಳ್ಳಬೇಕಿದೆ,' ಎನ್ನುವುದು ಇನ್ನೂ ಕೆಲವರ ಸಲಹೆಯಾಗಿದೆ.
ಅಭಿಮಾನಿಗಳ ನಂಬಿಕೆ ಏನು?
ಅಂಡರ್-19 ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ವೈಭವ್ ಸೂರ್ಯವಂಶಿ ಅವರಿಗೆ ಈ ಲಂಕಾ ಪ್ರವಾಸವು ಒಂದು ದೊಡ್ಡ ಕಲಿಕೆಯ ಪಾಠವಾಗಿದೆ. ಟಿ20 ಕ್ರಿಕೆಟ್‌ನ ಆಕ್ರಮಣಕಾರಿ ಶೈಲಿಯಿಂದ ಹೊರಬಂದು, ಪರಿಸ್ಥಿತಿಗೆ ತಕ್ಕಂತೆ ಇನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ಅವರು ಕಲಿಯಬೇಕಿದೆ. ಟೀಮ್ ಇಂಡಿಯಾದ ಹಿರಿಯ ತಂಡದ ಬಾಗಿಲು ತಟ್ಟಬೇಕಾದರೆ ಮುಂಬರುವ ಪಂದ್ಯಗಳಲ್ಲಿ ಅವರು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಕಮ್‌ಬ್ಯಾಕ್ ಮಾಡುವುದು ಅನಿವಾರ್ಯವಾಗಿದೆ. ಬಿಸಿಸಿಐ ಮ್ಯಾನೇಜ್‌ಮೆಂಟ್ ಮತ್ತು ಕೋಚಿಂಗ್ ಸಿಬ್ಬಂದಿ ಈ ಯುವ ಆಟಗಾರನಿಗೆ ಬೆಂಬಲ ನೀಡುತ್ತಿದ್ದು, ಮುಂದಿನ ಪಂದ್ಯಗಳಲ್ಲಿ ವೈಭವ್ ಫಾರ್ಮ್‌ಗೆ ಮರಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ವೈಭವ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿಟ್ಟ ಅಭಿಮಾನಿಗಳು
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026ರಲ್ಲಿ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಪ್ರದರ್ಶನ ಇಡೀ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸಿತ್ತು. ಇಡೀ ಟೂರ್ನಿಯಲ್ಲಿ ಆಕ್ರಮಣಕಾರಿ ಆಟವಾಡಿದ ಅವರು 237ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 776 ರನ್ ಚಚ್ಚಿದ್ದರು. ಅಷ್ಟೇ ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ಒಂದೇ ಸೀಸನ್‌ನಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಸಾರ್ವಕಾಲಿಕ ದಾಖಲೆಯನ್ನೂ ಬರೆದಿದ್ದರು. ತಮ್ಮ ಈ ಸ್ಫೋಟಕ ಪ್ರದರ್ಶನಕ್ಕಾಗಿ ಅವರು ಪ್ರತಿಷ್ಠಿತ 'ಆರೆಂಜ್ ಕ್ಯಾಪ್' ಹಾಗೂ ಟೂರ್ನಿಯ 'ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್' ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.
ಐಪಿಎಲ್‌ನಲ್ಲಿ ತೋರಿದ ಈ ಅಸಾಧಾರಣ ಸಾಹಸದ ಬೆನ್ನಲ್ಲೇ ವೈಭವ್ ಅವರನ್ನು ಭಾರತ 'ಎ' ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಅಂದಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೆಸರೇ ಭಾರಿ ಸದ್ದು ಮಾಡುತ್ತಿತ್ತು. ಸದ್ಯ ಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಅವರು ರನ್ ಗಳಿಸಲು ಪರದಾಡುತ್ತಿದ್ದರೂ, ಅವರ ಮೇಲಿರುವ ಭರವಸೆ ಕಮ್ಮಿಯಾಗಿಲ್ಲ.
ಯುಕೆ ಪ್ರವಾಸ ಕೈಗೊಳ್ಳಲಿರುವ ಭಾರತ ಹಿರಿಯರ ರಾಷ್ಟ್ರೀಯ ತಂಡಕ್ಕೆ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಿಗೆ ಭಾರತ ಮುಖ್ಯ ತಂಡದಲ್ಲಿ ಈ ಬಾಲಕನಿಗೆ ಸ್ಥಾನ ಸಿಕ್ಕಿದೆ. ಲಂಕಾ ಪ್ರವಾಸದ ತಪ್ಪುಗಳನ್ನು ತಿದ್ದಿಕೊಂಡು ಯುಕೆ ಪ್ರವಾಸದಲ್ಲಿ ವೈಭವ್ ಮತ್ತೆ ತಮ್ಮ ಹಳೆಯ ಲಯಕ್ಕೆ ಮರಳಿ ಅಬ್ಬರಿಸಲಿದ್ದಾರೆ ಎಂಬುದು ಕ್ರಿಕೆಟ್ ಪ್ರೇಮಿಗಳ ಭರವಸೆಯಾಗಿದೆ.












Click it and Unblock the Notifications