ಇದು 225 ಮಿಲಿಯನ್ ವರ್ಷ ಹಳೆಯ 'ಕಲ್ಲಿನ ಮರ'!ಇದರ ಸಣ್ಣ ತುಂಡು ಕೂಡಾ ಚಿನ್ನಕ್ಕಿಂತ ದುಬಾರಿ
ಇವು ಕೇವಲ ಹಳೆಯ ಮರಗಳಲ್ಲ, ಕಲ್ಲಿನ ಮರಗಳು. ಸುಮಾರು 225 ಮಿಲಿಯನ್ ವರ್ಷಗಳಷ್ಟು ಹಳೆಯ ಮರಗಳು ಇವು. ವಿಶೇಷ ರಾಸಾಯನಿಕ ಬದಲಾವಣೆಯಿಂದಾಗಿ ಈ ಮರಗಳು ಹೀಗಾಗಿದೆ. ಭೌತಿಕ ಚಿನ್ನಕ್ಕಿಂತ ಹೆಚ್ಚಾಗಿ ಅದರ ಅಪ್ರತಿಮ ವೈಜ್ಞಾನಿಕ ಮತ್ತು ಭೂವೈಜ್ಞಾನಿಕ ಮೌಲ್ಯದಿಂದಾಗಿ ಇದು ಚಿನ್ನಕ್ಕಿಂತ ಹೆಚ್ಚು ಬೆಲೆಬಾಳುವಂತದ್ದಾಗಿದೆ. ಈ ಕಲ್ಲಿನ ಮರಗಳು ಉತ್ತರ ಅರಿಜೋನಾದ ಪೆಟ್ರಿಫೈಡ್ ಫಾರೆಸ್ಟ್ ನ್ಯಾಷನಲ್ ಪಾರ್ಕ್‌ನಲ್ಲಿ ಕಂಡುಬರುತ್ತವೆ. ಈ ಮರಗಳು ಟ್ರಯಾಸಿಕ್ ಯುಗಕ್ಕೆ ಸೇರಿದವುಗಳಾಗಿವೆ.
ಲಕ್ಷಾಂತರ ವರ್ಷಗಳ ಹಿಂದೆ ಜ್ವಾಲಾಮುಖಿಯ ಬೂದಿ ಮತ್ತು ಸಿಲಿಕಾ ಮಿಶ್ರಿತ ಅಂತರ್ಜಲವು ಮರದ ಜೈವಿಕ ಕಣಗಳನ್ನು ಹರಳುಗಳಾಗಿ ಪರಿವರ್ತಿಸಿದೆ. ಇವು ಸೂರ್ಯನ ಬೆಳಕಿನಲ್ಲಿ ರತ್ನಗಳಂತೆ ಹೊಳೆಯುತ್ತವೆ. ರಾಸಾಯನಿಕವಾಗಿ ಜಡ ಖನಿಜವಾಗಿರುವ ಈ ಮರ ಚಿನ್ನಕ್ಕಿಂತ ಭಿನ್ನವಾಗಿದೆ. ಈ ಶಿಲಾರೂಪದ ಮರವು ನಿಜವಾದ ಜೈವಿಕ ಸಮಯದ ಕ್ಯಾಪ್ಸುಲ್‌ನಂತೆ ಕಾರ್ಯನಿರ್ವಹಿಸುತ್ತದೆ.

ಈ ಕಲ್ಲು ಮರಗಳು ಹುಟ್ಟಿಕೊಂಡಿದ್ದು ಹೇಗೆ?:
ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಟಿಸಿದ ಅಧ್ಯಯನದ ಪ್ರಕಾರ, ಮರವು ಕಲ್ಲಾಗಿ ಬದಲಾಗುವ ವಿಧಾನವು ಬಹಳ ಸಂಕೀರ್ಣವಾದ ಪ್ರಕ್ರಿಯೆಯಾಗಿದೆ.ಇದನ್ನು ಹೆಚ್ಚಾಗಿ ಪರ್ಮಿನರಲೈಸೇಶನ್ ಎಂದು ಕರೆಯಲಾಗುತ್ತದೆ.ಸುಮಾರು 225 ಮಿಲಿಯನ್ ವರ್ಷಗಳ ಹಿಂದೆ ಕುಸಿದು ಬಿದ್ದ ಭಾರಿ ಗಾತ್ರದ ಕೋನಿಫರ್ ಮರಗಳು ಜ್ವಾಲಾಮುಖಿ ಬೂದಿ ಮತ್ತು ಕೆಸರಿನ ಪದರಗಳ ಅಡಿಯಲ್ಲಿ ಹೂತುಹೋದವು. ಭೂಮಿಯ ಆಳದಲ್ಲಿ ಈ ಮರಗಳು ಹೂತುಹೋಗಿದ್ದ ಕಾರಣ ಅಲ್ಲಿ ಮರಗಳು ಕೊಳೆಯಲು ಅಗತ್ಯವಿರುವ ಆಮ್ಲಜನಕ ಸಿಗಲಿಲ್ಲ. ಪರಿಣಾಮವಾಗಿ ಆ ಮರಗಳು ಅಲ್ಲಿಯೇ ಸಂರಕ್ಷಿಸಲ್ಪಟ್ಟವು. ಕಾಲ ಕಳೆದಂತೆ ಸಿಲಿಕಾದಿಂದ ಸಮೃದ್ಧವಾಗಿದ್ದ ನೀರು ಮರದ ಜೀವಕೋಶಗಳೊಳಗೆ ನಿಧಾನವಾಗಿ ಹರಿಯಿತು. ಮೂಲ ಸಾವಯವ ವಸ್ತು ಕ್ರಮೇಣ ವಿಭಜನೆಯಾದಾಗ, ಸ್ಫಟಿಕ ಶಿಲೆ, ಮ್ಯಾಂಗನೀಸ್ ಮತ್ತು ಕಬ್ಬಿಣದ ಆಕ್ಸೈಡ್‌ನಂತಹ ಖನಿಜಗಳು ಅದರ ಸ್ಥಾನವನ್ನು ಪಡೆದುಕೊಂಡವು.ಇದು ಇಂದು ನಾವು ನೋಡುವ ಆ ರೋಮಾಂಚಕ, ಬಣ್ಣಗಳಿಂದ ಕೂಡಿದ ಕಲ್ಲಿನ ಮರಗಳಾಗಿ ಪರಿವರ್ತನೆಯಾಗಿದೆ.
ಭೂಮಿಯ ಮೇಲಿನ ಹವಾಮಾನದ ಅಧ್ಯಯನ:
ಈ ಮರದ ಕಲ್ಲುಗಳು ಆ ಕಾಲಘಟ್ಟದಲ್ಲಿ ಭೂಮಿಯ ಹವಾಮಾನ ಹೇಗಿತ್ತು ಎಂಬುದರ ಬಗೆಗಿನ ಸ್ಪಷ್ಟ ಚಿತ್ರಣವನ್ನು ನಮಗೆ ನೀಡುತ್ತದೆ. ಆ ಕಾಲದ ಡೈನೋಸಾರ್‌ಗಳು ಮತ್ತು ಪುರಾತನ ಜೀವಿಗಳು ಹೇಗೆ ಬಾಳಿದವು ಎಂಬುದನ್ನು ಸಂಶೋಧಿಸಲು ವಿಜ್ಞಾನಿಗಳಿಗೆ ಇದು ಪ್ರಮುಖ ಆಧಾರವಾಗಿದೆ. ಡೈನೋಸಾರ್‌ಗಳು ನಿಜವಾಗಿಯೂ ಗ್ರಹವನ್ನು ಆಕ್ರಮಿಸಿಕೊಳ್ಳುವ ಮೊದಲೇ ಪರಿಸರ ವ್ಯವಸ್ಥೆಗಳು ಬೃಹತ್ ಪರಿಸರ ಬದಲಾವಣೆಗಳಿಗೆ ಹೇಗೆ ಹೊಂದಿಕೊಳ್ಳುವಲ್ಲಿ ಯಶಸ್ವಿಯಾದವು ಎಂಬುದರ ಬಗೆಗಿನ ಪ್ರಮುಖ ಮಾಹಿತಿಯನ್ನು ಇವು ನೀಡುತ್ತವೆ. ಸ್ಫಟಿಕದ ರೂಪದಲ್ಲಿ ಪ್ರಾಚೀನ ವಿನ್ಯಾಸಗಳನ್ನು ಸಂರಕ್ಷಿಸುವ ಈ ಅವಶೇಷಗಳು, ಆಗಿನ ಸಮಯದ ಬಗೆಗಿನ ಅಧ್ಯಯನಕ್ಕೆ ಸೇತುವೆ ಒದಗಿಸುತ್ತದೆ.
ಭೂಮಿಯ ಇತಿಹಾಸವನ್ನು ತೆರೆದಿಡುವ ಪುಸ್ತಕ:
ಪೆಟ್ರಿಫೈಡ್ ಫಾರೆಸ್ಟ್ ಕೇವಲ ಪ್ರಕೃತಿಯ ವಿಸ್ಮಯವಲ್ಲ. ಅದು ಭೂಮಿಯ ಇತಿಹಾಸವನ್ನು ತೆರೆದಿಡುವ ಅದ್ಭುತ ಕಾಲಗಣನೆ. ಈ ಪಳೆಯುಳಿಕೆಗಳು ಸಂಶೋಧಕರಿಗೆ ಬಹಳಷ್ಟು ರೀತಿಯಲ್ಲಿ ಸಹಾಯಕವಾಗಿವೆ. ಈ ಮರದ ದಿಮ್ಮಿಗಳಲ್ಲಿ ಸಣ್ಣ ಜ್ವಾಲಾಮುಖಿ ಹರಳುಗಳು ಅಡಗಿವೆ. ಯುರೇನಿಯಂ-ಲೆಡ್ ಡೇಟಿಂಗ್‌ಗಾಗಿ ಇವು ಜಿರ್ಕಾನ್ ಹರಳುಗಳಂತೆ ಕೆಲಸ ಮಾಡುತ್ತವೆ. ಇದು ವಿಜ್ಞಾನಿಗಳಿಗೆ ಟ್ರಯಾಸಿಕ್ ಯುಗದ ನಿಖರವಾದ ಟೈಮ್‌ಲೈನ್ ಅನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ.ಅಲ್ಲದೆ ಆರಂಭಿಕ ಜೀವನವು ಹೇಗೆ ವಿಕಸನಗೊಳ್ಳಲು ಪ್ರಾರಂಭಿಸಿತು ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ.
ಪ್ರತಿಯೊಂದು ದಿಮ್ಮಿಯು ಒಂದು ರೀತಿಯಲ್ಲಿ, ಹಳೆಯ ಕಂಪ್ಯೂಟರ್‌ನ ಹಾರ್ಡ್ ಡ್ರೈವ್‌ನಂತೆ, ಪೂರ್ವ ಇತಿಹಾಸದ ದತ್ತಾಂಶವನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಇದು ಇನ್ನೂರು ಮಿಲಿಯನ್ ವರ್ಷಗಳ ಹಿಂದಿನ ಗಾಳಿಯ ಬಗ್ಗೆ ಮತ್ತು ಪ್ರಪಂಚವು ಎಷ್ಟು ತೇವವಾಗಿತ್ತು ಎಂಬುದರ ಬಗ್ಗೆ ಸುಳಿವುಗಳನ್ನು ನೀಡುತ್ತದೆ.
ಜೀವನದ ಇತಿಹಾಸವನ್ನು ಪತ್ತೆಹಚ್ಚಲು 'ಕಲ್ಲಿನ ಮರ'ದ ಬಳಕೆ:
ಅರಿಜೋನಾ ಅರಣ್ಯವು ಅದ್ಭುತ ಪ್ರಮಾಣದ ಶಿಲಾರೂಪದ ಮರವನ್ನು ಹೊಂದಿದೆ. ಇದು ಭೂಮಿಯ ಮೇಲಿನ ಬೇರೆಲ್ಲಿಯೂ ಇಲ್ಲ. ಆದರೂ, ಅದರ ನಿಜವಾದ ವೈಜ್ಞಾನಿಕ ಮೌಲ್ಯವು ಆ ಪ್ರಾಚೀನ ಮರಗಳನ್ನು ಮೀರಿದೆ. ಈ ಸ್ಥಳವು ಟ್ರಯಾಸಿಕ್ ಅವಧಿಯ ಬೃಹತ್ ಜೀವಿಗಳಿಗೆ ವಿಶಾಲವಾದ ಸಮಾಧಿ ಸ್ಥಳವಾಗಿಯೂ ಕಾರ್ಯನಿರ್ವಹಿಸುತ್ತದೆ. ಆ ಸಮಯದಲ್ಲಿ ಫೈಟೊಸಾರ್‌ಗಳು, ಮೊಸಳೆ-ತರಹದ ಸರೀಸೃಪಗಳು ಮತ್ತು ಆರಂಭಿಕ ಡೈನೋಸಾರ್‌ಗಳು ಭೂಮಿಯ ಮೇಲೆ ಸಂಚರಿಸುತ್ತಿದ್ದವು. ವಿಜ್ಞಾನಿಗಳು ಪಳೆಯುಳಿಕೆಯಾಗಿ ಸಿಕ್ಕಿರುವ ಮರ ಮತ್ತು ಈ ಪ್ರಾಣಿಗಳ ಅವಶೇಷಗಳನ್ನು ಒಟ್ಟಿಗೆ ಅಧ್ಯಯನ ಮಾಡಿದಾಗ, ಲಕ್ಷಾಂತರ ವರ್ಷಗಳ ಹಿಂದೆ ಸಂಪೂರ್ಣ ಪರಿಸರ ವ್ಯವಸ್ಥೆಯು ಹೇಗೆ ಇತ್ತು ಎಂಬುದನ್ನು ಕಂಡುಕೊಳ್ಳುವುದಕ್ಕೆ ಸಹಾಯವಾಗಿದೆ. ಇದು ಸಸ್ಯಗಳು ಮತ್ತು ಪ್ರಾಣಿಗಳು ಪರಸ್ಪರ ಹೇಗೆ ಬೆಳೆದವು ಮತ್ತು ಬದಲಾದವು ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ದಾರಿಯಾಗುತ್ತದೆ.
ಸ್ಥಳಾಂತರಗೊಂಡ ಪಳೆಯುಳಿಕೆಗಳು ತಮ್ಮ ಮೌಲ್ಯವನ್ನು ಏಕೆ ಕಳೆದುಕೊಳ್ಳುತ್ತವೆ?
ಸ್ಥಳೀಯ ನಿಯಮಗಳ ಪ್ರಕಾರ ರಾಷ್ಟ್ರೀಯ ಉದ್ಯಾನವನಗಳಿಂದ ನೈಸರ್ಗಿಕ ವಸ್ತುಗಳನ್ನು ಕದ್ದು ತೆಗೆದುಕೊಂಡು ಹೋಗುವುದು ಕಾನೂನುಬಾಹಿರ. ಇಲ್ಲಿಂದ ಒಂದು ಸಣ್ಣ ಮರದ ತುಂಡು ಅಥವಾ ಕಲ್ಲು ಮಿಸ್ ಆದರೂ ಭೂವೈಜ್ಞಾನಿಕ ಪದರದ ಮಾಹಿತಿ ಅಳಿದಂತೆ. ನಿಖರವಾದ ಕಾಲಾವಧಿ ಮತ್ತು ಪರಿಸರ ಅಧ್ಯಯನ ಮಾಡಲು ಸಂಶೋಧಕರಿಗೆ ಸಾಧ್ಯವಾಗುವುದಿಲ್ಲ. ದಿನಕ್ಕೆ ನೂರಾರು ಪ್ರವಾಸಿಗರು ಸಣ್ಣ ಸಣ್ಣ ತುಂಡುಗಳನ್ನು ತೆಗೆದುಕೊಂಡು ಸಾಗಿದರೂ ಇಡೀ ಉದ್ಯಾನವನದ ಸಂಪತ್ತು ಖಾಲಿಯಾಗಿ ಬಿಡಬಹುದು. ಇನ್ನು ಇಲ್ಲಿಂದ ಈ ಮರದ ಅಥವಾ ಕಲ್ಲಿನ ತುಂಡುಗಳನ್ನು ಕದ್ದು ಸಾಗಿಸಿದವರು ಮತ್ತೆ ಅದನ್ನು ಅಂಚೆ ಮೂಲಕ ಮರಳಿ ಕಳುಹಿಸುತ್ತಾರೆ. ಈ ಕಲ್ಲಿನ ತುಂಡುಗಳು ದುರಾದೃಷ್ಟವನ್ನು ತರುತ್ತವೆ ಎಂಬ ಭೀತಿಯಿಂದ ಅನೇಕರು ಅವುಗಳನ್ನು ಮತ್ತೆ ಹಿಂದಿರುಗಿಸುತ್ತಾರೆ. ಆದರೆ, ಈ ಮರಳಿ ತಂದ ವಸ್ತುಗಳು ವಿಜ್ಞಾನಿಗಳಿಗೆ ಯಾವುದೇ ಮೌಲ್ಯವನ್ನು ನೀಡುವುದಿಲ್ಲ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications