ವಿಮರ್ಶೆ, ರೇಟಿಂಗ್‌ಗೆ ಕಡಿವಾಣ: ಸ್ಯಾಂಡಲ್‌ವುಡ್‌ಗೆ ಹೊಸ ದಾರಿ ತೋರಿದ ದರ್ಶನ್ ಅಭಿನಯದ ದಿ ಡೆವಿಲ್ ಸಿನಿಮಾ -ಚೇತನ್ ನಾಡಿಗೇರ್ ಬರಹ
ನಟ ದರ್ಶನ್ ತೂಗುದೀಪ ಅಭಿನಯದ 'ದಿ ಡೆವಿಲ್' ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್‌ನಲ್ಲೂ ಡೆವಿಲ್ ಅಬ್ಬರಿಸುತ್ತಿದೆ. ಆದರೆ ಡೆವಿಲ್ ಚಿತ್ರತಂಡವು ನೆಗೆಟಿವ್ ವಿಮರ್ಶೆ ಹಾಗೂ ರೇಟಿಂಗ್‌ಗೆ ಬ್ರೇಕ್ ಹಾಕಲು ಕೋರ್ಟ್ ಮೆಟ್ಟಿಲೇರುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ನಾಂದಿ ಹಾಡಿದೆ. ಕೋರ್ಟ್ನಿಂದ ಈ ಬಗ್ಗೆ ಆದೇಶ ತಂದಿದ್ದ ಚಿತ್ರತಂಡವು ಟಿಕೆಟ್ ಬುಕಿಂಗ್ ಆ್ಯಪ್ ಬುಕ್ ಮೈ ಶೋನಲ್ಲಿ ರೇಟಿಂಗ್ ನೀಡುವುದನ್ನು ನಿರ್ಬಂಧಿಸಿತ್ತು. ಅದರಂತೆ ರೇಟಿಂಗ್ ಹಾಗೂ ವಿಮರ್ಶೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ಮೂಲಕ ಸಿನಿಮಾಗೆ ವಿಮರ್ಶೆ, ರೇಟಿಂಗ್ ಮಾನದಂಡವಲ್ಲ ಎಂದು "ದಿ ಡೆವಿಲ್" ತೋರಿಸಿಕೊಟ್ಟಿದೆ ಎಂದು ಸಿನಿಮಾ ಪತ್ರಕರ್ತರಾದ ಚೇತನ್ ನಾಡಿಗೇರ್ ಹೇಳಿದ್ದಾರೆ. ಅವರ "ದಿ ಡೆವಿಲ್ ಚಿತ್ರದಿಂದ ಕಲಿಯಬೇಕಾದ ಪಾಠಗಳು" ಶೀರ್ಷಿಕೆಯ ವಿಶೇಷ ಬರಹ ಇಲ್ಲಿದೆ..
'ದಿ ಡೆವಿಲ್' ಚಿತ್ರದಿಂದ ಕಲಿಯಬೇಕಾದ ಪಾಠಗಳು...ಬಹಳಷ್ಟು ಜನ ಇದೆಲ್ಲವನ್ನೂ ನಿಲ್ಲಿಸಬೇಕು ಎಂದು ಕೆಲವು ವರ್ಷಗಳಿಂದ ಪ್ರಯತ್ನ ಮಾಡುತ್ತಲೇ ಇದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. 'ದಿ ಡೆವಿಲ್' ಚಿತ್ರತಂಡದವರು ಅದನ್ನು ಸಾಧ್ಯ ಮಾಡಿ ತೋರಿಸಿದ್ದಾರೆ. ಬುಕ್ ಮೈ ಶೋನಲ್ಲಿ ರೇಟಿಂಗ್ ಮತ್ತು ವಿಮರ್ಶೆಗಳನ್ನು ನಿಷ್ಕ್ರಿಯಗೊಳಿಸಲು ನ್ಯಾಯಾಲಯದಿಂದ ಆದೇಶ ತಂದಿದ್ದಾರೆ. ಈ ಮೂಲಕ ಚಿತ್ರದ ಕುರಿತಾದ ನೆಗೆಟಿವ್ ಕಾಮೆಂಟ್ ಮತ್ತು ಅಪಪ್ರಚಾರಗಳಿಗೆ ತಡೆ ಹಾಕಿದ್ದಾರೆ.

ಇತ್ತೀಚೆಗೆ, ಈ ವಿಷಯ ಚಿತ್ರ ತಯಾರಕರಿಗೆ ದೊಡ್ಡ ತಲೆನೋವು ಆಗಿತ್ತು. ಮುಂಚೆಲ್ಲಾ ಚಿತ್ರ ವಿಮರ್ಶೆಗಳು ಎಲ್ಲಾ ಪತ್ರಿಕೆಗಳಲ್ಲಿ ಭಾನುವಾರದಂದು ಪ್ರಕಟವಾಗುತ್ತಿತ್ತು. ಕೆಲವು ವರ್ಷಗಳ ಹಿಂದೆ, ಶನಿವಾರಗಳಂದು ಪ್ರಕಟವಾಗತೊಡಗಿತು. ವೆಬ್ ಪತ್ರಿಕೋದ್ಯಮ ಪ್ರಖರವಾಗುತ್ತಿದ್ದಂತೆಯೇ, ಚಿತ್ರ ಬಿಡುಗಡೆಯ ದಿನವೇ ವಿಮರ್ಶೆಗಳು ಪ್ರಕಟಗೊಂಡವು. ಈ ವಿಮರ್ಶೆಗಳನ್ನು ಮಾಡುವುದಕ್ಕೆಂದೇ ವಿಮರ್ಶಕರಿರುತ್ತಿದ್ದರು. ಅವರು ಚಿತ್ರ ನೋಡಿ, ಅಳೆದು ತೂಗಿ ಚಿತ್ರದ ಪ್ಲಸ್, ಮೈನಸ್‍ಗಳನ್ನು ಬರೆಯುತ್ತಿದ್ದರು.
ಯಾವಾಗ ಸೋಷಿಯಲ್ ಮೀಡಿಯಾ ಪ್ರಭಾವ ಹೆಚ್ಚಾಯಿತೋ, ಸಾಮಾಜಿಕ ಜಾಲತಾಣಗಳು ಹೆಚ್ಚಾದವೋ, ಆಗ ಯಾರು ಬೇಕಾದರೂ ತಮಗನಿಸಿದ್ದನ್ನು ನೇರವಾಗಿ ಬರೆಯುವ ಮತ್ತು ಹಂಚಿಕೊಳ್ಳುವ ವ್ಯವಸ್ಥೆ ಶುರುವಾಯಿತು. ಒಂದು ಚಿತ್ರ ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಬರೆಯುವುದು ಬೇರೆ ಮಾತು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ವಾತಂತ್ರ್ಯ, ಅಭಿರುಚಿ ಮತ್ತು ಅಭಿಪ್ರಾಯಗಳಿರುತ್ತವೆ. ಅದನ್ನು ಹಂಚಿಕೊಳ್ಳುವುದು ತಪ್ಪಲ್ಲ. ಆದರೆ, ತಮ್ಮ ಮೆಚ್ಚಿನ ನಟನ ಎದುರಾಳಿ ಎಂದೋ, ಆ ಚಿತ್ರವನ್ನು ಉದ್ದೇಶಪೂರ್ವಕವಾಗಿ ಸೋಲಿಸಬೇಕು ಎಂದೋ ಅಥವಾ ಇನ್ಯಾವುದೋ ಬೇರೆಬೇರೆ ಕಾರಣಗಳಿಗೆ ಚಿತ್ರದ ಕುರಿತು ಅಪಪ್ರಚಾರ ಮಾಡುವ ಹುನ್ನಾರ ಕ್ರಮೇಣ ಶುರುವಾಯಿತು. ಒಂದು ಚಿತ್ರದ ಮೊದಲ ಪ್ರದರ್ಶನ ಮುಗಿಯುವ ಮೊದಲೇ, ಅದು ಚೆನ್ನಾಗಿಲ್ಲ ಎಂದು ಬಿಂಬಿಸುವ ಪ್ರಯತ್ನಗಳು ನಡೆದವು. ಬರೀ ಚಿತ್ರಗಳನ್ನು ಸೋಲಿಸುವುದಷ್ಟೇ ಅಲ್ಲ, ಕೆಟ್ಟ ಚಿತ್ರಗಳು ಅದ್ಭುತವಾಗಿವೆ ಎಂದು ಸಹ ಬಿಂಬಿಸಿದ ಹಲವು ಉದಾಹರಣೆಗಳಿವೆ. ಒಂದು ಚಿತ್ರ ಚೆನ್ನಾಗಿಲ್ಲದಿದ್ದರೂ, ಅಭಿಮಾನಕ್ಕೋ ಅಥವಾ ಇನ್ಯಾವುದೋ ಕಾರಣಕ್ಕೋ ಹೊಗಳಿ ಅಟ್ಟಕ್ಕೇರಿಸಿ ಅಥವಾ ನಿಂದಿಸಿ, ಓದುಗರ ದಿಕ್ಕು ತಪ್ಪಿಸುವ ಪ್ರಯತ್ನಗಳು ಸಹಜವಾಗಿಯೇ ನಡೆಯುತ್ತಿದ್ದವು.
ಇದರಿಂದ ಚಿತ್ರಕ್ಕೆ ಯಾವುದೇ ಅಪಾಯವಿಲ್ಲ ಎಂದುಕೊಳ್ಳುವಂತಿಲ್ಲ. ಒಂದು ವೇದಿಕೆಯ ರೇಟಿಂಗ್ ಅಥವಾ ವಿಮರ್ಶೆಗಳನ್ನು ನೋಡಿಕೊಂಡು ಚಿತ್ರ ನೋಡುವುದಕ್ಕೆ ಹೋಗುವವರ ಸಂಖ್ಯೆ ಕಡಿಮೆಯೇ. ಪ್ರಮಾಣ ಕಡಿಮೆಯಾದರೂ ಚಿತ್ರದ ಮೇಲೆ ಈ ವಿಮರ್ಶೆಗಳು ಒಂದು ಹಂತದ ಪ್ರಭಾವವಂತೂ ಖಂಡಿತಾ ಬೀರುತ್ತಿತ್ತು. ಏಕೆಂದರೆ, ಬಹಳಷ್ಟು ಜನರಿಗೆ ಗೊತ್ತಿರದ ಒಂದು ದಂಧೆ ಇದರ ಹಿಂದೆ ಕೆಲಸ ಮಾಡುತ್ತಿತ್ತು. User Rating ಹೆಚ್ಚಿಸುವ ನಿಟ್ಟಿನಲ್ಲಿ ನಿರ್ಮಾಪಕರಿಂದ ಹಣ ಕೀಳಲಾಗುತ್ತಿತ್ತು. ಒಂದು ಪಕ್ಷ ದುಡ್ಡ ಕೊಡದಿದ್ದರೆ, ರೇಟಿಂಗ್ ಕಡಿಮೆ ತೋರಿಸಲಾಗುತ್ತಿತ್ತು. ರೇಟಿಂಗ್ ಕಡಿಮೆಯಾದಾಗ, ಚಿತ್ರಮಂದಿರಗಳಿಗೆ ಹೋಗುವ ಪ್ರೇಕ್ಷಕರ ಮೇಲೆ ಪರಿಣಾಮ ಬೀರುತ್ತಿತ್ತು.
ಇದರಿಂದ ಸಾಕಷ್ಟು ಏಟು ಬಿದ್ದಿದ್ದು ಕೋಟ್ಯಂತರ ಖರ್ಚು ಮಾಡಿ ಸಿನಿಮಾ ಮಾಡಿದ ನಿರ್ಮಾಪಕರಿಗೆ. ತಮ್ಮ ಚಿತ್ರವನ್ನು ಯಾರೋ ಎಲ್ಲಿಂದಲೋ ನಿಯಂತ್ರಿಸುವ, ಮೊದಲ ದಿನವೇ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರದಂತೆ ತಡೆಯುವ ಪ್ರಯತ್ನಗಳು ನೋಡಿ ನಿರ್ಮಾಪಕರು ಕಕ್ಕಾಬಿಕ್ಕಿಯಾದರು. ತೆಲುಗು ನಿರ್ಮಾಪಕ ನಾಗವಂಶಿ ಒಂದು ಹೆಜ್ಜೆ ಮುಂದೆ ಹೋಗಿ, 'ನನ್ನ ಚಿತ್ರಗಳ ವಿಮರ್ಶೆಗಳನ್ನೇ ಮಾಡಬೇಡಿ ...' ಎಂದು ಹೇಳಿದ್ದರು. ಕೆಲವರಂತೂ ಯಾರ್ಯಾರೋ ಚಿತ್ರದ ವಿಮರ್ಶೆಗಳನ್ನು ಮಾಡುವುದನ್ನು ತಡೆಯುವುದಕ್ಕೆ ನ್ಯಾಯಾಲಯದ ಮೊರೆಹೊಕ್ಕರು. ಕೆಲವು ವರ್ಷಗಳಿಂದ ಈ ಹೋರಾಟ ನಡೆದಿದ್ದರೂ, ನ್ಯಾಯಾಲಯಗಳು ಇದು ವಿಮರ್ಶೆ ಮಾಡುವವರ ವೈಯಕ್ತಿಕ ಅಭಿಪ್ರಾಯ ಮತ್ತು ವಾಕ್‍ಸ್ವಾತಂತ್ರ್ಯವನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದವು.
ತೀರಾ ಇತ್ತೀಚಿನ ಉದಾಹರಣೆಯೆಂದರೆ, ಈ ವರ್ಷದ ಜೂನ್ ತಿಂಗಳಲ್ಲಿ ತಮಿಳು ನಾಡು ಸಕ್ರಿಯ ನಿರ್ಮಾಪಕರ ಸಂಘವು (Tamil Film Active Producers Association TFAPA), ಚಿತ್ರ ಬಿಡುಗಡೆಯಾದ ಮೊದಲ ಮೂರು ದಿನಗಳ ಕಾಲ ಆನ್‍ಲೈನ್ (ಯೂಟ್ಯೂಬ್, ಟ್ವಿಟರ್, ಫೇಸ್‍ಬುಕ್) ಚಿತ್ರ ವಿಮರ್ಶೆಗಳನ್ನು ನಿರ್ಬಂಧಿಸಬೇಕು ಎಂದು ಮದರಾಸು ಹೈ ಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರು, ಈ ರೀತಿ ನಿಷೇಧ ಹೇರುವುದರಿಂದ ಭಾರತೀಯ ಸಂವಿಧಾನ ಆರ್ಟಿಕಲ್ 19(1)(ಎ) ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿದಂತೆ ಆಗುವುದು ಮತ್ತು ಆನ್‍ಲೈನ್‍ನಲ್ಲಿ ಜನ ತಮ್ಮ ಅಭಿಪ್ರಾಯ ಮತ್ತು ವಿಮರ್ಶೆಗಳನ್ನು ಹಾಕುವುದನ್ನು ತಡೆಯುವುದು ಅಸಂವಿಧಾನಿಕ ಮತ್ತು ಅಸಾಧ್ಯ ಎಂದು ಹೇಳಿದ್ದರು.
ಇದಕ್ಕೂ ಮೊದಲು ಕೇರಳ ಹೈ ಕೋರ್ಟ್ ಸಹ ಇಂಥದ್ದೇ ಒಂದು ತೀರ್ಪು ನೀಡಿದೆ. ಒಂದು ಚಿತ್ರ ಬಿಡುಗಡೆಯಾಗಿ ಏಳು ದಿನಗಳ ಕಾಲ ವಿಮರ್ಶೆ ಮಾಡದಂತೆ ಸೋಷಿಯಲ್ ಮೀಡಿಯಾ ವಿಮರ್ಶಕರಿಗೆ (ಸಿನಿಮಾ ಇನ್‍ಫ್ಲೂಯೆನ್ಸರ್ ಮತ್ತು ವ್ಲಾಗರ್‍ಗಳು) ನಿರ್ಬಂಧ ಹೇರಬೇಕು ಎಂಬ ಅರ್ಜಿ ಬಂದಾಗ, ಈ ವಿಷಯವಾಗಿ ಖಚಿತವಾದ ನಿಷೇಧವನ್ನು ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ವಿಮರ್ಶಕರಿಗೆ ಕೆಲವು ಮಾರ್ಗಸೂಚಿಗಳನ್ನು ರೂಪಿಸುವಂತೆ ಸೂಚಿಸಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯ ಒಂದು ಕಡೆಯಾದರೆ, ಅದರ ಹೆಸರಿನಲ್ಲಿ ನೆಗೆಟಿವ್ ವಿಮರ್ಶೆಗಳ ಹೆಸಿರನಲ್ಲಿ ಚಿತ್ರರಂಗವನ್ನು ಬೆದರಿಸುವ ಮತ್ತು ಇಂಥಾ ಅಭಿಯಾನಗಳನ್ನು ತಡೆಯುವ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ ಅಗತ್ಯತೆ ಇದೆ ಎಂದು ಹೇಳಿತ್ತು.

ಒಂದು ಕಡೆ, ಆನ್‍ಲೈನ್ ವಿಮರ್ಶೆಗಳನ್ನು ತಡೆಯುವುದು ವಾಕ್‍ಸ್ವಾತಂತ್ರ್ಯವನ್ನು ಹತ್ತಿಕ್ಕಿದಂತಾಗುತ್ತದೆ ಎಂದು ನ್ಯಾಯಾಲಯವೇ ಹೇಳಿತ್ತು. ಹೀಗಿರುವಾಗಲೇ, 'ದಿ ಡೆವಿಲ್' ಚಿತ್ರತಂಡವು ಬುಕ್ ಮೈ ಶೋನಲ್ಲಿ ರೇಟಿಂಗ್ ಮತ್ತು ವಿಮರ್ಶೆಗಳನ್ನು ನಿಷ್ಕ್ರಿಯಗೊಳಿಸಲು ನ್ಯಾಯಾಲಯದಿಂದ ಆದೇಶ ತಂದಿತ್ತು. ಈ ವಿಷಯ ಕೇಳಿ ಹಲವು ನಿರ್ಮಾಪಕರು ನಿಟ್ಟುಸಿರುಬಿಟ್ಟಿದ್ದರು. ಪರಿಹಾರವೇ ಇಲ್ಲವೆಂದುಕೊಂಡಿದ್ದ ಒಂದು ಸಮಸ್ಯೆಗೆ 'ದಿ ಡೆವಿಲ್' ಚಿತ್ರತಂಡದ ನಡೆಯು ಒಂದು ಆಶಾಕಿರಣವಾಗಿತ್ತು. ನಾಳೆ ತಮ್ಮ ಚಿತ್ರಗಳಿಗೂ ಇದನ್ನೇ ಅಸ್ತ್ರವನ್ನಾಗಿಸಬಹುದು ಎಂದು ಹಲವರು ಖುಷಿಯಾಗಿದ್ದಾರೆ. 'ದಿ ಡೆವಿಲ್' ಚಿತ್ರಕ್ಕೆ ನ್ಯಾಯಾಲಯ ನೀಡಿದ ತೀರ್ಪನ್ನೇ ಇಟ್ಟುಕೊಂಡು, ನಿರ್ಮಾಪಕರ ಹಿತಾಸಕ್ತಿಯನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ಯೋಚಿಸುತ್ತಿದ್ದಾರೆ.
ಆ ನಿಟ್ಟಿನಲ್ಲಿ 'ದಿ ಡೆವಿಲ್' ಹಿಂದೆಂದೂ ಸಿಗದಂತಹ ಒಂದು classic example ಎಂದರೆ ತಪ್ಪಿಲ್ಲ. ಒಂದು ಕಡೆ, ತಮ್ಮ ಅಭಿಪ್ರಾಯವನ್ನು ಹೇರಿ ಒಂದು ಚಿತ್ರವನ್ನು ಸೋಲಿಸುವ ಅಥವಾ ಗೆಲ್ಲಿಸುವುದನ್ನು ತಪ್ಪು ಎಂದು ತೋರಿಸಿಕೊಟ್ಟರೆ, ಇನ್ನೊಂದು ಕಡೆ ಅದೊಂದೇ ಚಿತ್ರದ ಸೋಲು ಅಥವಾ ಗೆಲುವಿಗೆ ಕಾರಣ ಅಥವಾ ಮಾನದಂಡವಲ್ಲ ಎಂಬ ವಿಷಯದಲ್ಲಿ ಉದಾಹರಣೆಯಾಗಿದೆ. 'ದಿ ಡೆವಿಲ್' ಚಿತ್ರಕ್ಕೆ ಯಾವುದೋ ಒಂದು ಡಿಜಿಟಲ್ ವೇದಿಕೆಯಿಂದ ವಿಮರ್ಶೆ ಅಥವಾ ರೇಟಿಂಗ್ ಸಿಗದಿರಬಹುದು. ಇದರಿಂದ ಚಿತ್ರದ ಅಪಪ್ರಚಾರ ನಡೆಯುವುದಿಲ್ಲ, ಚಿತ್ರ ಗೆಲ್ಲುತ್ತದೆ ಎಂಬುದೆಲ್ಲಾ ಸುಳ್ಳು ಎಂದು ಸಾಬೀತಾಗಿದೆ.
'ದಿ ಡೆವಿಲ್' ಚಿತ್ರಕ್ಕೆ ಬುಕ್ ಮೈ ಶೋದ ರೇಟಿಂಗ್ ಮತ್ತು ವಿಮರ್ಶೆಗಳ ಮೇಲೆ ನಿರ್ಬಂಧ ತಂದರೂ, ಅದರಿಂದ ಚಿತ್ರಕ್ಕೆ ಯಾವುದೇ ಸಹಾಯವಾಗಿಲ್ಲ. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿರುವುದಷ್ಟೇ ಅಲ್ಲ, ದರ್ಶನ್ ಅವರ ಬಹಳಷ್ಟು ಅಭಿಮಾನಿಗಳಿಗೇ ಚಿತ್ರ ಸಮಾಧಾನ ತಂದಿಲ್ಲ. ಬಹಳ ನಿರೀಕ್ಷೆ ಹೊತ್ತು ಬಿಡುಗಡೆಯಾದ ಚಿತ್ರ ಎರಡನೇ ದಿನವೇ ಕುಂಟುತ್ತಾ ಸಾಗಿತ್ತು. ಅದಕ್ಕೆ ಪೂರಕವಾಗಿ, ಚಿತ್ರದ ಮೊದಲ ದಿನದ ಗಳಿಕೆ ಸುಮಾರು 13.80 ಕೋಟಿ ಎಂದು ಚಿತ್ರತಂಡ ಘೋಷಿಸಿತ್ತು. ಮರುದಿನ ಅದು ಮೂರು ಕೋಟಿಗೆ ಕುಸಿದಿತ್ತು. ಮುಂದಿನ ಮೂರು ದಿನಗಳಲ್ಲಿ ಗಳಿಕೆ ಕ್ರಮೇಣ ಬಿದ್ದಿದ್ದು, ಬಾಕ್ಸ್ ಆಫೀಸ್ ಟ್ರಾಕರ್ ಸಚ್ನಿಕ್ ಡಾಟ್‍ಕಾಂ ಪ್ರಕಾರ, ಚಿತ್ರವು ನಾಲ್ಕು ದಿನಗಳಲ್ಲಿ 21 ಕೋಟಿ ಗಳಿಕೆ ಮಾಡಿದೆ. ಒಬ್ಬ ಸ್ಟಾರ್ ನಟ ಅಭಿನಯದ ಬಹುನಿರೀಕ್ಷೆಯ ಚಿತ್ರವೊಂದನ್ನು ಜನ ಹೇಗೆ ಸ್ವೀಕರಿಸಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೇ. ತಮಗೆ ಒಂದು ಚಿತ್ರ ಇಷ್ಟವಾಗಲಿಲ್ಲವೆಂದರೆ, ಅದಕ್ಕೆ ತಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಹಾಗೆ ನೋಡಿದರೆ, ಒಂದು ಚಿತ್ರದ ವಿಮರ್ಶೆ ಮತ್ತು ರೇಟಿಂಗ್‍ಗೂ ಆ ಚಿತ್ರದ ಯಶಸ್ಸು ಅಥವಾ ಸೋಲಿಗೂ ಸಂಬಂಧವಿಲ್ಲ ಎಂದು ಹಲವು ಚಿತ್ರಗಳು ನಿರೂಪಿಸಿವೆ. ಒಳ್ಳೆಯ ರೇಟಿಂಗ್ ಮತ್ತು ವಿಮರ್ಶೆಗಳು ಸಿಕ್ಕ ಚಿತ್ರಗಳೆಲ್ಲಾ ಚೆನ್ನಾಗಿರುತ್ತದೆ, ರೇಟಿಂಗ್ ಸಿಗದ ಚಿತ್ರಗಳು ಕಳಪೆ ಎಂದು ಹೇಳುವುದು ತಪ್ಪು. ವಿಮರ್ಶೆ ಎನ್ನುವುದು ಅವರವರ ಗ್ರಹಿಕೆ ಮತ್ತು ಅಭಿರುಚಿಗೆ ಬಿಟ್ಟಿದ್ದು. ಕೆಲವರಿಗೆ ಇಷ್ಟವಾಗಿದ್ದು, ಕೆಲವರಿಗೆ ಆಗದಿರಬಹುದು. ಆದರೆ, ಅದೇ ಸಾರ್ವತ್ರಿಕ ಸತ್ಯ ಎನ್ನುವುದು ಸುಳ್ಳು. 'ಕಾಂತಾರ - ಚಾಪ್ಟರ್ 1' ಚಿತ್ರ ಬಿಡುಗಡೆಯಾದಾಗಲೂ, ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ತಮಗನಿಸಿದ್ದು ಬರೆದರು. ಚಿತ್ರ ಇಷ್ಟವಾಗದಿರುವುದಕ್ಕೆ ಹಲವು ಕಾರಣಗಳನ್ನು ಕೊಟ್ಟರು. ಆದರೆ, ಪ್ರೇಕ್ಷಕರು ತಲೆ ಮೇಲೆ ಹೊತ್ತು ಮೆರೆಸಿದರು. ಚಿತ್ರ 800 ಕೋಟಿ ರೂ. ಗಳಿಕೆ ಮಾಡುವುದರ ಜೊತೆಗೆ ಹಲವು ದಿನಗಳ ಕಾಲ ಹೌಸ್‍ಫುಲ್ ಪ್ರದರ್ಶನ ಕಂಡಿತು.
ಅದೇ ರೀತಿ 'ಸು ಫ್ರಮ್ ಸೋ' ಅತೀ ಸಾಧಾರಣವಾದ ಚಿತ್ರ, ಬೇರೆಯವರು ಹೇಳಿದಷ್ಟು ತಮಗೆ ನಗು ಬರಲಿಲ್ಲ ಎಂದು ಹಲವರೆಂದರು. ಚಿತ್ರ ನೂರು ಕೋಟಿ ರೂ. ದುಡಿಯಿತು. ಇದು ಯಶಸ್ವಿಯಾದ ಚಿತ್ರಗಳ ಮಾತಾದರೆ, ಎಷ್ಟೋ ಚೆನ್ನಾಗಿರುವ ಚಿತ್ರಗಳಿಗೆ ಪ್ರೇಕ್ಷಕರೇ ಬರುವುದಿಲ್ಲ. ಹಾಗಂತ ಆ ಚಿತ್ರಗಳು ಚೆನ್ನಾಗಿಲ್ಲ ಎಂದರ್ಥವಲ್ಲ. ಒಟ್ಟಾರೆ, 'ದಿ ಡೆವಿಲ್' ಚಿತ್ರರಂಗಕ್ಕೆ ಹಲವು ಪಾಠಗಳನ್ನು ಕಲಿಸಿದೆ. ವಿಮರ್ಶೆ, ರೇಟಿಂಗ್ ಇದ್ಯಾವುದೂ ಮಾನದಂಡವಲ್ಲ ಎಂದು ತೋರಿಸಿಕೊಟ್ಟಿದೆ. ಚಿತ್ರದ ಸೋಲು-ಗೆಲುವು, ಚಿತ್ರ ಮೂಡಿಬಂದ ರೀತಿ, ಗುಣಮಟ್ಟ ಮತ್ತು ಎಲ್ಲದಕ್ಕಿಂತ ಅಂತಿಮವಾಗಿ ಪ್ರೇಕ್ಷಕರ ತೀರ್ಪು ಎಂದು ತೋರಿಸಿಕೊಟ್ಟಿದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications