vishal: ನಟ ವಿಶಾಲ್ ಕರ್ನಾಟಕಕ್ಕೆ ಬಂದು ದೇವರಲ್ಲಿ ಬೇಡಿಕೊಂಡಿದ್ದೇನು?
ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ತಮಿಳು ನಟ ವಿಶಾಲ್ ಅವರು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಇತ್ತೀಚೆಗೆ ಅವರು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದರು. ಸದ್ಯ ಅವರ ಆರೋಗ್ಯ ಚೇತರಿಸಿಕೊಂಡಿದ್ದರೂ ವಿಶಾಲ್ ದೇವಸ್ಥಾನಗಳಿಗೆ ಭೇಟಿ ನೀಡಿ ಆರೋಗ್ಯದ ಕಾಳಜಿ ವಹಿಸಿದ್ದಾರೆ. ತುಳುನಾಡಿನ ದೇವಸ್ಥಾನಗಳಿಗೆ ಭೇಟಿ ನೀಡುತ್ತಾ ವಿಶಾಲ್ ಟೆಂಪಲ್ ರನ್ ಮಾಡುತ್ತಿದ್ದಾರೆ.
ವಿಶಾಲ್ ಅವರು ಕರ್ನಾಟಕದ ಮಂಗಳೂರಿಗೆ ಭೇಟಿ ನೀಡಿದ್ದಾರೆ. ತುಳುನಾಡಿನ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಗಳೂರಿನ ಮುಲ್ಕಿ ತಾಲ್ಲೂಕಿನ ಹರಿಪಾದದಲ್ಲಿನ ಜಾರಂದಾಯ ದೇವಾಲಯಕ್ಕೆ ಭೇಟಿ ನೀಡಿದ ವಿಶಾಲ್, ತನ್ನ ಆರೋಗ್ಯ ಸಮಸ್ಯೆ ಪರಿಹರಿಸುವಂತೆ ದೈವಕ್ಕೆ ವಿಶೇಷ ಮಲ್ಲಿಗೆ ಹೂವು ಅರ್ಪಿಸಿ ಬೇಡಿಕೊಂಡಿದ್ದಾರೆ. ನನ್ನ ಆರೋಗ್ಯ ಸರಿ ಹೋದರೆ ಮುಂದಿನ ಸಲ ನೇಮೋತ್ಸವದ ವೇಳೆ ಕ್ಷೇತ್ರದಲ್ಲಿ ತುಲಾಭಾರ ಸೇವೆ ಮಾಡುತ್ತೇನೆ ಎಂದು ಹರಕೆಯೂ ಕಟ್ಟಿಕೊಂಡಿದ್ದಾರೆ.

ಈ ವೇಳೆ ಕೈಸನ್ನೆ ಮೂಲಕ ಜಾರಂದಾಯ ದೈವವು ವಿಶಾಲ್ ಅವರಿಗೆ ಅಭಯ ನೀಡಿದೆ. ನಿನ್ನ ಆರೋಗ್ಯ ಸರಿಯಾಗಲಿದೆ, ನೀನು ತುಂಬಾ ಸಮಸ್ಯೆಯಲ್ಲಿದ್ದೀಯ, ಕಣ್ಣೀರು ಹಾಕಬೇಡ, ನಾನಿದ್ದೇನೆ ಎಂದು ಹೇಳಿದೆ. ಬಳಿಕ ಮೂರು ಗಂಟೆಗಳ ಕಾಲ ವಿಶಾಲ್ ದೈವ ಕೋಲದಲ್ಲಿ ಭಾಗಿಯಾಗಿ ಅಲ್ಲಿ ಪ್ರಸಾದ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದಲ್ಲಿ ದೈವ ಹಾಗೂ ತುಳುನಾಡಲ್ಲಿ ನಡೆಯುವ ನೇಮೋತ್ಸವದ ಬಗ್ಗೆ ನೋಡಿದ್ದೆ. ಈಗ ಮೊದಲ ಬಾರಿಗೆ ತುಳುನಾಡ ನೇಮೋತ್ಸವವನ್ನು ಕಣ್ಣಾರೆ ನೋಡಿದೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ. ನಿನ್ನೆ ನಾನು ಕೊಲ್ಲೂರು ಮುಕಾಂಬಿಕೆಯ ದರ್ಶನ ಕೂಡ ಪಡೆದೆ ಎಂದು ನಟ ವಿಶಾಲ್ ಇಲ್ಲಿನ ದೇವಸ್ಥಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ನಟ ವಿಶಾಲ್ ಅವರಿಗೂ ಕರ್ನಾಟಕಕ್ಕೂ ನಂಟಿದೆ. ವಿಶಾಲ್ ಅವರ ತಂದೆ ಮೊದಲಿಗೆ ಬೆಂಗಳೂರಿನಲ್ಲೇ ಇದ್ದವರು. ಬಳಿಕ ಅವರು ತಮಿಳುನಾಡಿಗೆ ಹೋಗಿ ನೆಲೆಸಿದ್ದಾರೆ. ವಿಶಾಲ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವುದು ಮಾತ್ರವಲ್ಲದೆ ಕನ್ನಡದ ಹಲವು ನಟರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರೊಂದಿಗೆ ವಿಶಾಲ್ ಆಪ್ತವಾಗಿದ್ದರು. ಅಪ್ಪು ನಿಧನವಾದಾಗ ವಿಶಾಲ್ ಕಣ್ಣೀರು ಹಾಕಿ ನೋವು ಹಂಚಿಕೊಂಡಿದ್ದರು. ಬಳಿಕ ಅಪ್ಪು ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.
ವಿಶಾಲ್ ಆರೋಗ್ಯ ಏನಾಗಿದೆ?: ಮದಗಜರಾಜ ಸಿನಿಮಾದ ಕಾರ್ಯಕ್ರಮದಲ್ಲಿ ನಟ ವಿಶಾಲ್ ಅವರ ಕೈನಡುಗುತ್ತಿತ್ತು. ಮಾತನಾಡಲು ತಡಬಡಾಯಿಸುತ್ತಿದ್ದರು. ಚೆನ್ನಾಗಿಯೇ ಇದ್ದ ವಿಶಾಲ್‌ಗೆ ಹೀಗೇಕೆ ಆಯ್ತು ಎಂದು ಎಲ್ಲರೂ ಶಾಕ್ ಆಗಿದ್ದರು. ಕೊನೆಗೆ ವಿಶಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ವೈರಲ್ ಫೀವರ್ ಇದ್ದಿದ್ದರಿಂದ ವಿಶಾಲ್ ಅವರ ಆರೋಗ್ಯ ಹದಗೆಟ್ಟಿತ್ತು. ಇದೇ ಸಮಯದಲ್ಲಿ ವಿಶಾಲ್ ಅವರ ಬಗ್ಗೆ ಹಲವು ವದಂತಿಗಳು ಹಬ್ಬಿತ್ತು. ಬಹಳ ದಿನಗಳ ವಿಶ್ರಾಂತಿ ಬಳಿಕ ವಿಶಾಲ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು.












Click it and Unblock the Notifications