CCL 2025: ಮುಂಬೈ ಹೀರೋಸ್ ವಿರುದ್ಧ ಬೃಹತ್ ಗೆಲುವು ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್
ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಗೆಲುವಿನ ಓಟ ಮುಂದುವರೆದಿದೆ. ಶನಿವಾರ ನಡೆದ ಪಂದ್ಯದಲ್ಲಿ ಚೆನ್ನೈ ರ್‍ಹಿನೋಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಕರ್ನಾಟಕ ಬುಲ್ಡೋಜರ್ಸ್ ಶನಿವಾರ ನಡೆದ ಮುಂಬೈ ಹೀರೋಸ್ ವಿರುದ್ಧದ ಪಂದ್ಯದಲ್ಲಿ 85 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಹೀರೋಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ ಮೊದಲ 10 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಬರೋಬ್ಬರಿ 171 ರನ್ ಕಲೆಹಾಕಿತು.

ಡಾರ್ಲಿಂಗ್ ಕೃಷ್ಣ 33 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಮಿಂಚಿದರು. 36 ಎಸೆತಗಳಲ್ಲಿ 11 ಬೌಂಡರಿ 9 ಭರ್ಜರಿ ಸಿಕ್ಸರ್ ಸಹಿತ 111 ರನ್ ಗಳಿಸಿದರು. ರಾಜೀವ್ 24 ಎಸೆತಗಳಲ್ಲಿ 37 ರನ್ ಗಳಿಸಿದರು. ಬಳಿಕ ಬ್ಯಾಟಿಂಗ್ ಮಾಡಿದ ಮುಂಬೈ ಹೀರೋಸ್ ಮೊದಲ ಇನ್ನಿಂಗ್ಸ್‌ನ 10 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 100 ರನ್ ಗಳಿಸಿತು. ಈ ಮೂಲಕ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 71 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿತು. ಕರಣ್ ಆರ್ಯನ್ 3 ವಿಕೆಟ್ ಪಡೆದರೆ, ಕಾರ್ತಿಕ್ ಜಯರಾಮ್ 2 ವಿಕೆಟ್ ಪಡೆದುಕೊಂಡರು. ಸುನಿಲ್ ರಾವ್ ಮತ್ತು ಮಂಜುನಾಥ್ ಗೌಡ ತಲಾ 1 ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್‌ನಲ್ಲೂ ಭರ್ಜರಿ ಬ್ಯಾಟಿಂಗ್
71 ರನ್ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ಸ್ 10 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 127 ರನ್ ಗಳಿಸುವ ಮೂಲಕ 198 ರನ್ ಕಲೆಹಾಕಿತು. ಮಂಜುನಾಥ್ ಗೌಡ 26 ಎಸೆತಗಳಲ್ಲಿ 55 ರನ್ ಗಳಿಸಿ ಮಿಂಚಿದರೆ, ಡಾರ್ಲಿಂಗ್ ಕೃಷ್ಣ 8 ಎಸೆತಗಳಲ್ಲಿ 19 ರನ್ ಗಳಿಸಿದರು. ಕಾರ್ತಿಕ್ ಜಯರಾಮ್ 17 ರನ್ ಗಳಿಸಿದರು.
199 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಮುಂಬೈ ಹೀರೋಸ್ 10 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 113 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು. 85 ರನ್‌ಗಳ ಭರ್ಜರಿ ಗೆಲುವಿನ ಮೂಲಕ ಕರ್ನಾಟಕ ಬುಲ್ಡೋಜರ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ.












Click it and Unblock the Notifications