ಶೃಂಗೇರಿ ಶ್ರೀಗಳ ಜೊತೆ ನಟಿ ಪಲ್ಲವಿ ಮತ್ತಿಘಟ್ಟ ಒಂದು ಗಂಟೆ ಚರ್ಚೆ ಮಾಡಿಲ್ಲ: ಮಠ ಸ್ಪಷ್ಟನೆ
ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಇತ್ತೀಚೆಗೆ ಕನ್ನಡ ಕಿರುತೆರೆ ನಟಿ ಪಲ್ಲವಿ ಮತ್ತಿಘಟ್ಟ ಅವರು ಭೇಟಿ ನೀಡಿದ್ದರು. ಇದೇ ವೇಳೆ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿ ಅವರ ದರ್ಶನವನ್ನು ಸಹ ಪಡೆದಿದ್ದರು. ಆದರೆ ನಟಿ ಪಲ್ಲವಿ ಅವರು ಶೃಂಗೇರಿ ಶ್ರೀಗಳ ಜೊತೆ ಒಂದು ಗಂಟೆಗಳ ಕಾಲ ಸುಧೀರ್ಘವಾಗಿ ಮಾತುಕತೆ ನಡೆಸಿದ್ದಾಗಿ ಮಾಧ್ಯಮದಲ್ಲಿ ವರದಿಯಾಗಿ, ವಿವಾದಕ್ಕೆ ತಿರುಗಿತ್ತು. ಈ ಬಗ್ಗೆ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶ್ರೀ ಶಾರದ ಪೀಠಂ ಸ್ಪಷ್ಟನೆ ನೀಡಿದ್ದು, ಶೃಂಗೇರಿ ಶ್ರೀಗಳ ಜೊತೆ ನಟಿ ಪಲ್ಲವಿ ಮತ್ತಿಘಟ್ಟ ಒಂದು ಗಂಟೆ ಚರ್ಚೆ ಮಾಡಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪಲ್ಲವಿ ಮತ್ತಿಘಟ್ಟ ಅವರು ಶೃಂಗೇರಿ ಶ್ರೀಗಳ ಜೊತೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ವಿಶೇಷ ಎಂದು ಲೋಕ ಧ್ವನಿ ಎಂಬ ಪತ್ರಿಕೆ ಸುದ್ದಿ ಪ್ರಕಟಿಸಿತ್ತು. ಆದರೆ ಶೃಂಗೇರಿ ಶ್ರೀಗಳ ಜೊತೆ ಕಿರುತೆರೆ ನಟಿ ಸುದೀರ್ಘ ಚರ್ಚೆ ನಡೆಸಿರುವುದು ಸುಳ್ಳು ಎಂದು ಶೃಂಗೇರಿ ಮಠ ಸ್ಪಷ್ಟನೆ ನೀಡಿದೆ.

ಸ್ಪಷ್ಟನೆ ಏನು?
'ಪ್ರತಿನಿತ್ಯ ಶೃಂಗೇರಿ ಕ್ಷೇತ್ರಕ್ಕೆ ಸಾವಿರಾರು ಭಕ್ತಾದಿಗಳು ಬಂದು ಶ್ರೀಶಾರದಾಮ್ಮನವರ ಹಾಗೂ ಶ್ರೀಶ್ರೀ ಜಗದ್ಗುರು ಮಹಾಸ್ವಾಮಿಗಳವರ ದರ್ಶನ ಪಡೆದು, ಧನ್ಯತಾ ಭಾವದಿಂದ ಹಿಂತಿರುಗುತ್ತಿದ್ದಾರೆ. ಪ್ರಸ್ತುತ ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರೇ ಭಕ್ತಾದಿಗಳಿಗೆ ದರ್ಶನವನ್ನು ನೀಡುತ್ತಿದ್ದು, ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಲೋಕಕಲ್ಯಾಣಕ್ಕಾಗಿ ಪ್ರತಿದಿನ ರಾತ್ರಿಯ ಶ್ರೀ ಚಂದ್ರಮೌಳೀಶ್ವರ ಪೂಜೆಯನ್ನು ತಾವೇ ನೆರವೇರಿಸಿ, ನಂತರ ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದಾರೆ' ಎಂದು ಹೇಳಿದೆ.
'ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ವಿಜಯಯಾತ್ರೆಯನ್ನು ಕೈಗೊಂಡ ಸಂದರ್ಭದಲ್ಲಿ ಮಾತ್ರವೇ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಭಕ್ತಾದಿಗಳಿಗೆ ಮಧ್ಯಾಹ್ನ ಅಲ್ಪ ಸಮಯದಲ್ಲಿ ಮತ್ತು ರಾತ್ರಿಯ ಪೂಜೆಯ ನಂತರ ದರ್ಶನ ನೀಡಿ ಅನುಗ್ರಹಿಸುತ್ತಿದ್ದಾರೆ'.
'ದಿನಾಂಕ 20-12-2025ನೇ ಶನಿವಾರದಂದು ಲೋಕ ಧ್ವನಿ ಎಂಬ ಇ-ಪತ್ರಿಕೆಯಲ್ಲಿ ಪಲ್ಲವಿ ಮತ್ರಿ ಘಟ್ಟ ಎಂಬ ಕಿರುತೆರೆ ಖ್ಯಾತ ನಟಿ ಶೃಂಗೇರಿಗೆ ಬಂದು ಶ್ರೀ ಶಾರದಮ್ಮನವರ ಹಾಗೂ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ದರ್ಶನವನ್ನು ಪಡೆದಿರುತ್ತಾರೆ, ಹಾಗೆಯೇ ಅವರು ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಬಳಿಯಲ್ಲಿ ಸುಮಾರು 1 ಘಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ವಿಶೇಷ ಎಂಬುದಾಗಿ ಪ್ರಕಟಿಸಿರುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಇತ್ತೀಚಿನ ಕೆಲವು ವರ್ಷಗಳಿಂದ ಭಕ್ತ ಜನರಿಗೆ ಕೇವಲ ದರ್ಶನವನ್ನು ನೀಡಿ ಅನುಗ್ರಹಿಸುತ್ತಿದ್ದಾರೆಯೇ ಹೊರತು, ಯಾರ ಬಳಿಯಲ್ಲೂ ದೀರ್ಘವಾಗಿ ಮಾತುಕತೆ ನಡೆಸಿರುವುದಿಲ್ಲ' ಎಂದು ಸ್ಪಷ್ಟೀಕರಣ ನೀಡಿದೆ.
ಕಾನೂನು ಎಚ್ಚರಿಕೆ
'ಪಲ್ಲವಿ ಮತ್ತಿಘಟ್ಟರವರು ಎಲ್ಲ ಭಕ್ತಾದಿಗಳಂತೆ ಶ್ರೀ ಶಾರದಮ್ಮನವರ ಹಾಗೂ ಶ್ರೀಶ್ರೀ ಜಗದ್ಗುರು ಮಹಾಸ್ವಾಮಿಗಳವರ ದರ್ಶನ ಪಡೆದಿರಬಹುದೇ ವಿನಃ ಮೇಲ್ಕಂಡ ಇ-ಪತ್ರಿಕೆಯಲ್ಲಿ ಪ್ರಕಟಿಸಿದಂತೆ ಒಂದು ಘಂಟೆಗೂ ಹೆಚ್ಚು ಮಾತುಕತೆ ನಡೆಸಿದ್ದಾರೆ ಎನ್ನಲಾದ ವಿಷಯವು ಅಪ್ಪಟ ಸುಳ್ಳಾಗಿರುತ್ತದೆ ಎಂಬುದಾಗಿ ಈ ಮೂಲಕ ಸ್ಪಷ್ಟನೆಯನ್ನು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಶ್ರೀಮಠದ ಹಾಗೂ ಜಗದ್ಗುರುಗಳ ಕುರಿತಂತೆ ಇಂತಹ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದಲ್ಲಿ ಕಾನೂನಿನ ಮೊರೆ ಹೋಗುವುದು ನಮಗೆ ಅನಿವಾರ್ಯವಾಗಿರುತ್ತದೆ' ಎಂದು ಎಚ್ಚರಿಕೆ ನೀಡಿದೆ.












Click it and Unblock the Notifications