Ashwini Puneeth Rajkumar: ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ರಾಜ್ಯಸಭಾ ಟಿಕೆಟ್ ನೀಡಲಿದ್ದ ಬಿಜೆಪಿ!
ಬೆಂಗಳೂರು, ಫೆಬ್ರವರಿ.23: ರಾಜ್ಯದಲ್ಲಿ ಲೋಕಸಭೆ ಮತ್ತು ರಾಜ್ಯಸಭಾ ಚುನಾವಣಾ ಕಾವು ಸಕತ್ ಜೋರಾಗಿಯೇ ಇದೆ. ಕಾಂಗ್ರೆಸ್ ಅನ್ನು ಎದುರಿಸಲು ಬಿಜೆಪಿ-ಮ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಇನ್ನೇನು ಫೈನಲ್ ಹಂತಕ್ಕೆ ಬಂದಿದೆ. ಇದರ ಜೊತೆ ಜೊತೆಗೆ ರಾಜ್ಯ ಸಭಾ ಚುನಾವಣೆಯ ಬಗ್ಗೆಯೂ ಹೊಸ ಅಪ್‌ಡೇಟ್‌ಗಳು ಬರುತ್ತಿವೆ.
ಬಿಜೆಪಿ ರಾಜ್ಯಸಭಾ ಅಭ್ಯರ್ಥಿ ಆಯ್ಕೆ ಸಂಬಂಧ ಕನ್ನಡದ ರಾಜಕೀಯ ಮತ್ತು ಸಿನಿಮಾ ರಂಗವೇ ಆಶ್ಚರ್ಯ ಪಡುವಂತಹ ವರದಿಯೊಂದು ಬಂದಿದೆ. ಕನ್ನಡದ "ಏಷ್ಯಾನೆಟ್ ಸುವರ್ಣನ್ಯೂಸ್" ಹೊಸ ವರದಿಯೊಂದು ಮಾಡಿದ್ದು, ಇದರ ಪ್ರಕಾರ ಭಾರತೀಯ ಜನತಾ ಪಕ್ಷವೂ ದೊಡ್ಮನೆ ಸೊಸೆಯನ್ನು ಕಣಕ್ಕೆ ಇಳಿಸಲು ಸಿದ್ಧವಾಗಿತ್ತು ಎಂಬುದನ್ನು ಬಹಿರಂಗ ಪಡಿಸಿದೆ.

ದೊಡ್ಮನೆ ಸೊಸೆಗೆ ಟಿಕೆಟ್ ನೀಡಲಿದ್ದ ಬಿಜೆಪಿ!
ಡಾ. ರಾಜ್‌ಕುಮಾರ್ ಅವರ ಸೊಸೆ, ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿತ್ತು ಎನ್ನುವ ವಿಚಾರವನ್ನು ಸುವರ್ಣಾ ನ್ಯೂಸ್ ಬಹಿರಂಗಪಡಿಸಿದೆ. ರಾಜ್ಯ ಬಿಜೆಪಿಯಿಂದ ನಿರ್ಮಾಪಕಿ ಅಶ್ವಿನಿ ಅವರಿಗೆ ರಾಜ್ಯಸಭೆ ಟಿಕೆಟ್ ನೀಡುವ ಪ್ರಸ್ತಾಪ ಇಡಲಾಗಿತ್ತು. ಈ ಪ್ರಸ್ತಾಪಕ್ಕೆ ಬಿಜೆಪಿ ಹೈಕಮಾಂಡ್ ಕೂಡ ಒಪ್ಪಿಗೆ ಸೂಚಿಸಿತ್ತು ಎನ್ನಲಾಗಿದೆ.
ರಾಜ್ಯ ಸಭಾ ಚುನಾವಣಾಗೆ ಈ ಬಾರಿ ರಾಜ್ಯದಿಂದ ಒಬಿಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಯನ್ನು ಶಿಫಾರಸ್ಸು ಮಾಡುವಂತೆ ಹೈಕಮಾಂಡ್ ಬಿಜೆಪಿ ನಾಯಕರಿಗೆ ಸೂಚಿಸಿತ್ತು. ಈ ವೇಳೆ ರಾಜ್ಯ ಬಿಜೆಪಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಸೂಚಿಸಿದೆ ಎನ್ನಲಾಗಿದೆ. ಬಳಿಕ ರಾಜ್ಯ ಬಿಜೆಪಿ ನಾಯಕರು ಅಶ್ವಿನಿ ಅವರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಕೇಸರಿ ಪಕ್ಷದ ಪ್ರಸ್ತಾಪವನ್ನು ಅವರು ನಿರಾಕರಿಸಿದ್ದಾರೆ.
ರಾಜಕಾರಣದಿಂದ ದೂರವೇ ಉಳಿದಿದ್ದೇವೆ!
ರಾಜಕೀಯದಿಂದ ನಮ್ಮ ಕುಟುಂಬ ಮೊದಲಿನಿಂದಲೂ ದೂರ ಉಳಿದುಕೊಂಡು ಬಂದಿದೆ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ರಾಜ್ಯ ಬಿಜೆಪಿಗೆ ತಿಳಿಸಿದ್ದಾರೆ. ಇವರ ಬಳಿಕ ಈ ಟಿಕೆಟ್ ಪಾಟೇಗಾರ ಸಮುದಾಯದ ನಾರಾಯಣ ಬಾಂಢಗೆಗೆ ದೊರಕಿದೆ. ಇಲ್ಲಿ ಗಮನಿಸಬೇಕಾದದ್ದು, ಈ ಹಿಂದೆ ವರನಟ ರಾಜ್‌ಕುಮಾರ್, ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಕೂಡ ರಾಜಕೀಯ ಪಕ್ಷಗಳ ಟಿಕೆಟ್ ಆಫರ್‌ಗಳನ್ನು ನಿರಾಕರಿಸಿದ್ದರು ಎಂಬುದು.

ಕಾಂಗ್ರೆಸ್ ಆಫರ್ ನಿರಾಕರಿಸಿದ್ದ ಶಿವರಾಜ್ ಕುಮಾರ್
ಎರಡು ತಿಂಗಳುಗಳ ಹಿಂದೆ ಅರಮನೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಹಿರಂಗವಾಗಿಯೇ ನಟ ಶಿವರಾಜ್ ಕುಮಾರ್ ಅವರಿಗೆ ಲೋಕಸಭೆ ಚುನಾವಣೆಗೆ ತಯಾರಾಗಿ ಎಂದು ಆಫರ್ ನೀಡಿದ್ದರು.
"ಲೋಕಸಭೆ ಚುನಾವಣೆಗೆ ತಯಾರಾಗಿ ಎಂದರೆ ಐದಾರು ಸಿನಿಮಾ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಹೀಗಾಗಿ ಸಿನಿಮಾ ಯಾವಾಗ ಬೇಕಾದರೂ ಮಾಡಬಹುದು. ಆದರೆ ಪಾರ್ಲಿಮೆಂಟ್‌ಗೆ ಹೋಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂದು ಹೇಳಿದ್ದೇನೆ" ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು.
ಆದರೆ, ನಟ ಶಿವಣ್ಣ ಕೂಡ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. 'ನಮಗೆ ತಂದೆಯಿಂದ ಬಂದಿರುವ ಬಳುವಳಿ ಬಣ್ಣ ಹಚ್ಚಿ ನಟನೆ ಮಾಡುವುದು. ಬಣ್ಣ ಹಚ್ಚುವುದು, ಆಕ್ಟಿಂಗ್ ಮಾಡುವುದು ಅಷ್ಟೇ ನಮ್ಮ ಕೆಲಸ. ನಾನು ನಾನು ಎಂದಿಗೂ ರಾಜಕಾರಣಕ್ಕೆ ಬರುವುದಿಲ್ಲ. ನನಗೆ ರಾಜಕೀಯ ಬೇಡ. ಆದರೆ, ರಾಜ್ಯ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳು ನಮ್ಮನೆ ಸೊಸೆ. ಗೀತಾಳಿಗೆ ಇಂಟರೆಸ್ಟ್ ಇದ್ರೆ ಅವರು ಮಾಡಲಿ. ಅವರಿಗೆ ಬೆಂಬಲ ನೀಡುವುದು ನನ್ನ ಕೆಲಸ. ಗೀತಾ ಅವರು ಚುನಾವಣೆಗೆ ನಿಲ್ಲುತ್ತಾರೆಂದರೆ ನಾನು ಅವರ ಹಿಂದೆಯಿದ್ದು, ಬೆಂಬಲ ನೀಡುತ್ತೇನೆ' ಎಂದು ಶಿವಣ್ಣ ಹೇಳಿದ್ದರು. ಈಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ.












Click it and Unblock the Notifications