Darshan Thoogudeep: ದೇವಸ್ಥಾನಗಳಿಗೆ ದರ್ಶನ್ ಫೋಟೊ ತರಬೇಡಿ ಎಂದು ವಾರ್ನಿಂಗ್ ಕೊಟ್ಟಿದ್ಯಾಕೆ?
ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ ತೂಗುದೀಪ ಅವರಿಗೆ ಒಳ್ಳೆಯದಾಗಲಿ ಎಂದು ಹೊರಗಡೆ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ವಿವಿಧ ದೇವರಿಗೆ ಹರಕೆ ಹೊರುವುದು, ಪೂಜೆ ಮಾಡಿಸುವುದು ಕೂಡ ಮಾಡುತ್ತಿದ್ದಾರೆ. ಇನ್ನೂ ಕೆಲವು ದರ್ಶನ್ ಅಭಿಮಾನಿಗಳು ದೇವಸ್ಥಾನದಲ್ಲಿ ದೇವರ ವಿಗ್ರಹದ ಮುಂದೆಯೇ ದರ್ಶನ್ ಅವರ ಭಾವಚಿತ್ರಗಳನ್ನು ಇಟ್ಟು ಪೂಜೆ ಮಾಡಿದ್ದು, ಕೆಲವು ಸಂಪ್ರದಾಯವಾದಿಗಳನ್ನು ಕೆರಳಿಸಿದೆ. ಇದು ಸಂಪ್ರದಾಯಕ್ಕೆ ವಿರುದ್ಧ ದರ್ಶನ್ ಕೊಲೆ ಆರೋಪಿ ಆತನ ಭಾವಚಿತ್ರಗಳನ್ನು ಹೀಗೆ ದೇವಸ್ಥಾನದಲ್ಲಿ ಇಡುವುದು ಸರಿಯಲ್ಲ ಎಂದು ಕೋಪಗೊಂಡಿದ್ದಾರೆ.
ಬಳ್ಳಾರಿಯ ಕುರಗೋಡುವಿನಲ್ಲಿರುವ ಬಸವೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಅಭಿಮಾನಿಗಳು ನಟ ದರ್ಶನ್ ತೂಗುದೀಪ ಅವರ ಭಾವಚಿತ್ರವನ್ನು ಇಡಿಸಿ ಪೂಜೆ ಮಾಡಿಸಿದ್ದಾರೆ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ, ಮುಜರಾಯಿ ಇಲಾಖೆ ಪೂಜೆ ಮಾಡಿದ್ದ ಅರ್ಚಕರನ್ನು ತೆಗೆದುಹಾಕಿದೆ. ಇದು ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನವಾಗಿದ್ದು, ದರ್ಶನ್ ಫೋಟೊ ಇಟ್ಟಿದ್ದು ನಿಯಮದ ಉಲ್ಲಂಘನೆಯಾಗಿದ್ದು, ಭಕ್ತರ ಮನಸ್ಸಿಗೆ ಘಾಸಿಯಾಗಿದೆ ಎಂದು ಕಾರಣ ಕೊಟ್ಟು ಕೆಲಸದಿಂದ ತೆಗೆಯಲಾಗಿದೆ.

ಇದೇ ವಿಚಾರಕ್ಕೆ ಕೆಲವು ಸಂಘಟನೆಗಳು ಈಗ ಸಿಟ್ಟಾಗಿವೆ. ಹಲವು ಭಕ್ತರು ದರ್ಶನ್ ಅಭಿಮಾನಿಗಳ ಈ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಕೆಲವರು ದರ್ಶನ್ ಕೊಲೆಗಡುಕ, ಆತನ ಮೇಲಿನ ಆರೋಪಗಳು ಹಾಗೇ ಇವೆ. ಆತ ನಿರಪರಾಧಿ ಎಂದು ಸಾಬೀತಾಗಿಲ್ಲ. ಆತನ ಫೋಟೊವನ್ನು ಈ ರೀತಿ ದೇವರ ಮುಂದೆ ಇಡುವುದು ಹುಚ್ಚಾಟ, ಇದರಿಂದ ದೇವರ ಭಕ್ತರಿಗೆ ಬೇಸರವಾಗುತ್ತದೆ ಎಂದಿದ್ದಾರೆ.
ದರ್ಶನ್ ಕೊಲೆ ಆರೋಪದ ಮೇಲೆ ಜೈಲಿನಲ್ಲಿದ್ದಾರೆ. ಅವರ ಬಗ್ಗೆ ಇಡೀ ದೇಶಕ್ಕೆ ಗೊತ್ತಾಗಿದೆ. ಅಂತಹ ವ್ಯಕ್ತಿಯ ಫೋಟೊಗಳನ್ನು ದೇವರ ವಿಗ್ರಹದ ಮುಂದೆ ಯಾಕೆ ಇಡಬೇಕು ಎಂದಿದ್ದಾರೆ. ಅಭಿಮಾನಿಗಳು ಮನೆಯಲ್ಲಿ ಬೇಕಾದರೆ ದರ್ಶನ್‌ಗೆ ಪೂಜೆ ಮಾಡಿಕೊಳ್ಳಲಿ ಆದರೆ ದೇವಸ್ಥಾನಗಳಲ್ಲಿ ಇದನ್ನೆಲ್ಲಾ ಮಾಡಬಾರದು, ದೇವಸ್ಥಾನಗಳಲ್ಲಿ ಈ ರೀತಿ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ದರ್ಶನ್ ಅಭಿಮಾನಿಗಳಿಗೆ ಕೋಪ
ಇನ್ನು ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗುತ್ತಿದ್ದಂತೆ ಕೆಲವು ದರ್ಶನ್ ಅಭಿಮಾನಿಗಳು ಕೋಪಗೊಂಡಿದ್ದಾರೆ. ನಮ್ಮ ಅಭಿಮಾನವನ್ನು ತೋರಿಸುವುದು ತಪ್ಪಾ ಎಂದು ಪ್ರಶ್ನೆ ಮಾಡಿದ್ದಾರೆ. ದರ್ಶನ್ ಆರೋಪಿ ಅಷ್ಟೆ ಅಪರಾಧಿ ಅಲ್ಲ, ಅವರ ಮೇಲಿನ ಆರೋಪ ಇನ್ನೂ ಸಾಬೀತಾಗಿಲ್ಲ ಎಂದು ವಾದಿಸುತ್ತಿದ್ದಾರೆ.












Click it and Unblock the Notifications