ಶಿವಣ್ಣ ನಿಜಕ್ಕೂ ಮನೆ ಗೇಟ್ ಬಂದ್ ಮಾಡಿಸಿದ್ರಾ? ಅಸಲಿ ವಿಚಾರ ಬಿಚ್ಚಿಟ್ಟ ಮಡೆನೂರು ಮನು
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಸಾವಿನ ಬಗ್ಗೆ ಅವಹೇಳನಕಾರಿ ಆಡಿಯೋ ವೈರಲ್ ಆರೋಪ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಮೇಲಿದೆ. ಇತ್ತೀಚೆಗೆ ನಟಿಗೆ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಮನು ಜೈಲು ಸೇರಿದ್ದಾಗ ಈ ಆಡಿಯೋ ವೈರಲ್ ಆಗಿತ್ತು. ಆದರೆ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಮನು ಆ ಆಡಿಯೋ ನನ್ನದಲ್ಲ, ಇದು ನನ್ನ ಮೇಲೆ ಮಾಡಿರುವ ಷಡ್ಯಂತ್ರ ಎಂದಿದ್ದರು. ಈ ವಿಚಾರವಾಗಿ ನಾನು ಶಿವಣ್ಣನ ಬಳಿ ಕ್ಷಮೆ ಕೇಳುವುದಾಗಿ ಹೇಳಿದ್ರು. ಅದರಂತೆ ನಾಗವಾರದಲ್ಲಿರುವ ಶಿವಣ್ಣನ ನಿವಾಸದ ಎದುರು ಮನು ತನ್ನ ಕುಟುಂಬದೊಂದಿಗೆ ದಿನವಿಡೀ ಕಾದರೂ ಗೇಟ್ ಓಪನ್ ಮಾಡಿರಲಿಲ್ಲ. ಹೀಗಾಗಿ ಶಿವಣ್ಣನ ಕೋಪ ತಣ್ಣಗಾದಂತಿಲ್ಲ ಎಂದು ಹೇಳಲಾಗಿತ್ತು. ಆದರೆ ಶಿವಣ್ಣನ ಮನೆಯ ಹತ್ತಿರ ನಡೆದ ಅಸಲಿ ವಿಚಾರವನ್ನು ಮಡೆನೂರು ಮನು ಹೇಳಿಕೊಂಡಿದ್ದಾರೆ.
ಜೈಲಿನಿಂದ ಹೊರಬಂದ ಕೂಡಲೇ ಈ ವೈರಲ್ ಆಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದ ಮಡೆನೂರು ಮನು, 'ಆ ಆಡಿಯೋ ನಿಜಕ್ಕೂ ನನ್ನದಲ್ಲ, ನಾನು ಉದ್ದೇಶಪೂರ್ವಕವಾಗಿ ಆ ರೀತಿ ಹೇಳಿಲ್ಲ. ನಾನೇ ಖುದ್ದಾಗಿ ಹೋಗಿ ಶಿವಣ್ಣನ ಬಳಿ ಕ್ಷಮೆ ಕೇಳ್ತೀನಿ' ಎಂದಿದ್ದರು. ಅದರಂತೆ ತನ್ನ ಪತ್ನಿ ಹಾಗೂ ಮಗುವಿನ ಜೊತೆಗೆ ಮನು ಶಿವಣ್ಣನ ಬಳಿ ಕ್ಷಮೆ ಕೇಳಲು ಅವರ ಮನೆ ಮುಂದೆ ಹೋಗಿ ಕಾದಿದ್ದರು. ದಿನವಿಡೀ ನಿಂತರೂ ಶಿವಣ್ಣನ ಮನೆಯ ಗೇಟ್ ಮನುಗೆ ತೆರೆಯಲಿಲ್ಲ. ಬಳಿಕ ಮನು ಅಲ್ಲಿಂದ ಬೇಸರದಲ್ಲೇ ವಾಪಸ್ ಆಗಿದ್ದರು. ಈ ವಿಡಿಯೋ ವೈರಲ್ ಕೂಡ ಆಗಿತ್ತು. ಆದರೆ ಶಿವಣ್ಣನ ಮನೆ ಬಳಿ ನಿಜಕ್ಕೂ ಏನಾಯ್ತು ಎಂದು ಮನು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಶಿವಣ್ಣನ ಮನೆ ಊಟ ಮಾಡಿದ್ದೀನಿ
'ಶಿವಣ್ಣನ ಮನೆ ಬಳಿ ಮಡೆನೂರು ಮನು ಹೋಗಿ ನಿಂತಿದ್ದಾನೆ, ಶಿವಣ್ಣ ಬಾಗಿಲು ತೆಗೀತಿಲ್ಲ ಅಂತೆಲ್ಲ ವಿಡಿಯೋ ಹರಿದಾಡುತ್ತಿದ್ದು, ಅಪಪ್ರಚಾರ ಮಾಡುತ್ತಿದ್ದಾರೆ. ಶಿವಣ್ಣ ಅವರು ಈಗ ಮನೆಯಲ್ಲಿ ಇಲ್ಲ. ವೈರಲ್ ಆಗಿರುವುದು ಹಳೆಯ ವಿಡಿಯೋ. ನಾನು ಜೈಲಿನಿಂದ ರಿಲೀಸ್ ಆದಾಗ ಶಿವಣ್ಣ ಅವರು ಅಮೇರಿಕಾಗೆ ಹೋಗಿದ್ದರಂತೆ. ಆ ಸಮಯದಲ್ಲಿ ನನಗೆ ಮನೆಯಲ್ಲಿ ತುಂಬಾ ಟೆನ್ಷನ್ ಇತ್ತು. ಶಿವಣ್ಣನ ಬಳಿ ಕ್ಷಮೆ ಕೇಳಲೇಬೇಕು ಅಂತ ಅವರ ಮನೆ ಬಳಿ ಎರಡು ದಿನ ಹೋಗಿದ್ದೆʼ ಎಂದು ಮಡೆನೂರು ಮನು ವಿಡಿಯೋದಲ್ಲಿ ಹೇಳಿದ್ದಾರೆ.
'ಆಗ ಶಿವಣ್ಣ ಅಮೇರಿಕಾಗೆ ಹೋಗಿದ್ದಾರೆ ಎಂಬ ವಿಚಾರ ತಿಳಿಯಿತು. ಇದು ಹದಿನೈದು ದಿನಗಳ ಹಿಂದಿನ ವಿಡಿಯೋ. ಅದನ್ನ ಈಗ ವೈರಲ್ ಮಾಡಿದ್ದಾರೆ. ಶಿವಣ್ಣ ಮನುಗೆ ಮನೆ ಗೇಟ್ ತೆಗೆಯುತ್ತಿಲ್ಲ. ಮಡೆನೂರು ಮನುನ ಕ್ಷಮಿಸುತ್ತಿಲ್ಲ ಎಂದೆಲ್ಲ ಸುಮಾರು ಅಪಪ್ರಚಾರ ಮಾಡುತ್ತಿದ್ದಾರೆ. ದಯವಿಟ್ಟು ಇದನ್ನ ನಂಬಬೇಡಿ. ಇದು ತುಂಬಾ ಹಳೆಯ ವಿಡಿಯೋ, ಹೊಸ ವಿಡಿಯೋ ಅಲ್ಲ. ಅಪಪ್ರಚಾರಗಳನ್ನ ನಂಬಬೇಡಿ. ನಾನು ಶಿವಣ್ಣನ ಮನೆಯಲ್ಲಿ ಊಟ ಕೂಡ ಮಾಡಿದ್ದೀನಿ, ಮನೆಗೆ ಹೋದಾಗ ಅವರು ತುಂಬಾ ಚೆನ್ನಾಗಿ ನೋಡಿಕೊಳ್ತಾರೆ. ಶಿವಣ್ಣನ ಮೇಲೆ ನನಗೆ ಯಾವತ್ತಿಗೂ ಗೌರವ ಇರುತ್ತೆ' ಎಂದಿದ್ದಾರೆ.
ʼಕುಲದಲ್ಲಿ ಕೀಳ್ಯಾವುದೋʼ ಟೈಟಲ್ ಕೊಟ್ಟಿದ್ದೇ ಶಿವಣ್ಣ
'ಯಾವುದೋ ಕೆಟ್ಟ ಘಳಿಗೆ, ಯಾವುದೋ ಷಡ್ಯಂತ್ರಕ್ಕೆ ಬಲಿಯಾಗಿ ಈ ರೀತಿ ಆಗಿದೆ. ನಾನು ಈಗಾಗಲೇ ಎನ್.ಆರ್.ರಮೇಶಣ್ಣ ಅವರ ಬಳಿ ಮಾತನಾಡಿದ್ದೇನೆ. ಅತಿ ಶೀಘ್ರದಲ್ಲೇ ಶಿವಣ್ಣನ ಭೇಟಿಯಾಗಿ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳೇ ಕೇಳ್ತೀನಿ. ಹಾಗಾಗಿ ಅಪಪ್ರಚಾರ ಮಾಡಬೇಡಿ ಎಂದು ಮನು ಮನವಿ ಮಾಡಿಕೊಂಡಿದ್ದಾರೆ. ನಮ್ಮ ಸಿನಿಮಾದ ಕುಲದಲ್ಲಿ ಕೀಳ್ಯಾವುದೋ ಟೈಟಲ್ ಕೊಟ್ಟಿದ್ದೇ ಶಿವಣ್ಣ. ನಮ್ಮ ಸಿನಿಮಾಗೆ ಅಣ್ಣಾವ್ರ ಕುಟುಂಬದ ಸಪೋರ್ಟ್ ಇದೆ ಎಂದು ಸಾಕಷ್ಟು ಬಾರಿ ಹೇಳಿದ್ದೀನಿ. ಹಾಗಾಗಿ ಈ ರೀತಿ ಅಪಪ್ರಚಾರ ಮಾಡಬೇಡಿ' ಎಂದು ಮಡೆನೂರು ಮನು ಬೇಡಿಕೊಂಡಿದ್ದಾರೆ.












Click it and Unblock the Notifications