Darshan murder case probe: ಕೊಲೆ ಆರೋಪಿಗಳಿಗೆ ರಾಜಾತಿಥ್ಯ; ಸ್ಥಳೀಯರಿಗೆ, ವಾಹನ ಸವಾರರಿಗೆ ಶಿಕ್ಷೆ
ಬೆಂಗಳೂರು, ಜೂನ್. 14: ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು ಇತರ ಆರೋಪಿಗಳು ಇರುವ ಪೊಲೀಸ್ ಠಾಣೆ ಸುತ್ತಮುತ್ತ 144 ಸೆಕ್ಷನ್ ಕೂಡ ಹಾಕಲಾಗಿದೆ. ಇದಲ್ಲದೆ ಪೊಲೀಸ್ ಠಾಣೆ ಸುತ್ತ ಶಾಮಿಯಾನ ಹಾಕಿ ಜನರು ಮತ್ತು ಮಾಧ್ಯಮದವರಿಂದ ಅಂತರ ಕಾಪಾಡಲಾಗುತ್ತಿದೆ.
ಇದೇ ವೇಳೆ ಕೊಲೆ ಆರೋಪಿ ದರ್ಶನ್ ಇರುವ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಸುತ್ತಮುತ್ತ 144 ಸೆಕ್ಷನ್ ಹಾಕಿರುವುದರಿಂದ ಸ್ಥಳೀಯರಿಗೆ ಭಾರಿ ತೊಂದರೆ ಉಂಟಾಗಿದೆ. ತಮ್ಮ ತಮ್ಮ ಮನೆಗಳಿಗೆ ಹೋಗಲು ಸಾಧ್ಯವಾಗದೆ ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ. ಕೊಲೆ ಮಾಡಿ ಆರೋಪದಲ್ಲಿ ಠಾಣೆ ಒಳಗೆ ಅವರಿದ್ದರೂ, ಶಿಕ್ಷೆ ಮಾತ್ರ ನಮಗೆ ನೀಡಲಾಗುತ್ತಿದೆ ಎಂದು ಪೊಲೀಸರ ವಿರುದ್ಧ ಕಿಡಿ ಕಾರಿದ್ದಾರೆ.

ಆರೋಪಿಗಳಿಗೆ ರಾಜಾತಿಥ್ಯ, ಜನ ಸಾಮಾನ್ಯರಿಗೆ ಶಿಕ್ಷೆ
ಕೊಲೆ ಪ್ರಕರಣದಲ್ಲಿ ಬಂಧಿತ ನಟ ದರ್ಶನ್ ಹಾಗೂ ಇತರರನ್ನು ವಿಚಾರಣೆ ನಡೆಸುತ್ತಿರುವ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಠಾಣೆ ಸುತ್ತ ಶಾಮಿಯಾನ ಹಾಕಿರುವುದು ಭಾರೀ ಕುತೂಹಲ ಕೆರಳಿಸಿದೆ. ಈ ರೀತಿಯ ಘಟನೆ ಹಿಂದೆಂದೂ ಕೇಳಿರದ ಮತ್ತು ನೋಡದ ಕಾರಣ ಭಾರೀ ಚರ್ಚೆಗೆ 'ಶಾಮಿಯಾನ' ಕಾರಣವಾಗಿದೆ.
24 ಗಂಟೆಗಳ ಕಾಲ ಪೊಲೀಸ್ ಠಾಣೆಗಳನ್ನು ತೆರೆದಿರಬೇಕಿದ್ದರೂ, ಗುರುವಾರ ಬೆಳಗ್ಗೆ ಈ ಅನ್ನಪೂರ್ಣೇಶ್ವರಿನಗರ ಠಾಣೆಯ ಗೇಟ್‌ಗಳಿಗೆ ಬೀಗ ಹಾಕಲಾಗಿದೆ. ಪೊಲೀಸರು ಠಾಣೆಯ ರಸ್ತೆಗೆ ಬ್ಯಾರಿಕೇಡ್ ಹಾಕಿದ್ದಾರೆ. ಸುತ್ತ 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ಅನ್ನಪೂರ್ಣೇಶ್ವರಿ ನಗರ ವಾಸಿಗಳಿಗೆ ತಾವೇ ಶಿಕ್ಷೆ ಅನುಭವಿಸುತ್ತಿದ್ದೇವೆ ಎನಿಸುತ್ತಿದೆ.

ಆರಾಮಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಕಡೆ ಮಾಧ್ಯಮ ಮತ್ತು ದರ್ಶನ್ ಫ್ಯಾನ್ಸ್‌ಗಳು ತುಂಬಿದ್ದಾರೆ. ವಾಹನಗಳನ್ನು ಮನೆ ಬಳಿ ತೆಗೆದುಕೊಂಡು ಹೋಗಲು ಆಗುತ್ತಿಲ್ಲ. ಪೊಲೀಸರು ಹಲವು ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಹೀಗಾಗಿ ತಪ್ಪು ಮಾಡಿ ರಾಜಾತಿಥ್ಯ ಅನುಭವಿಸುತ್ತಿರುವವರು ಅವು ಶಿಕ್ಷೆ ಅನುಭವಿಸುತ್ತಿರೋದು ನಾವು ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಪೊಲೀಸ್ ಠಾಣೆ ಬಳಿಯ ರಸ್ತೆ ನಿರ್ಬಂಧ ಮಾಡಿರೋದಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿರುವುದರಿಂದ ನಾಗರಿಕರು ಮತ್ತು ವಾಹನ ಸವಾರರು ಪರದಾಡಬೇಕಾಗಿದೆ. ಪೊಲೀಸರ ಈ ಕ್ರಮಕ್ಕೆ ವಾಹನ ಸವಾರರು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿಯೂ ಪೊಲೀಸರ ಕೆಲಸಕ್ಕೆ ಟೀಕೆಗಳು ಕೇಳಿಬಂದಿವೆ. ಇದು ಪೊಲೀಸ್ ಸ್ಟೇಷನಾ..? ಇಲ್ಲ ಮದುವೆ ಮನೆನಾ..? ಶಾಮಿಯಾನ ಹಾಕೋದು ಅಲ್ಲಿ ತಾನೇ.. ಇಲ್ಯಾಕೆ ಇದೆಲ್ಲಾ ಮಾಡ್ತಾ ಇದ್ದಾರೆ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ.
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಒಂದು ದಿನದ ನಂತರ ಠಾಣೆಯನ್ನು ಶಾಮಿಯಾನ ಬಟ್ಟೆಯಿಂದ ಮುಚ್ಚಲಾಗಿದೆ. ಪೊಲೀಸ್ ಠಾಣೆ ಒಳಗಿನ ಕೆಲವು ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳು ಮತ್ತು ಸಾರ್ವಜನಿಕರನ್ನು ದೂರವಿಡಲು ಈ ಕ್ರಮ ಕೈಗೊಳ್ಳಲಾಗಿದೆ.
ತಮ್ಮ ನೆಚ್ಚಿನ ನಟ ದರ್ಶನ್ ಅವರನ್ನು ನೋಡಲು ಠಾಣೆಯ ಮುಂದೆ ಜಮಾಯಿಸಿದ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿರುವ ಘಟನೆ ನಡೆದಿದೆ. ಇಂತಹ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಪೊಲೀಸ್ ಠಾಣೆ ಮುಂಭಾಗವನ್ನು ಶಾಮಿಯಾನ ಬಟ್ಟೆಯಿಂದ ಮುಚ್ಚಲು ನಿರ್ಧರಿಸಿದ್ದಾರೆ. ಕೊಲೆ ಆರೋಪದಲ್ಲಿ ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಸೇರಿದಂತೆ 14 ಮಂದಿ ಆರೋಪಿಗಳು ಅನ್ನಪೂಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿದ್ದಾರೆ.












Click it and Unblock the Notifications