Sanjay Dutt : ಮೋದಿ ಹೀಯಾಳಿಸಿ ‘ಭಾರತದಲ್ಲಿ ಈಗ ಶಾಂತಿ ಇಲ್ಲ' ಅಂದ್ರಾ ಸಂಜಯ್ ದತ್, ಶೇಖರ್ ಸುಮನ್ ಬ್ಯಾಟಿಂಗ್
ಬಾಲಿವುಡ್ ನಟ ಸಂಜಯ್ ದತ್ (Sanjay Dutt ) ಅವರ ಇತ್ತೀಚಿನ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. 'ಭಾರತದಲ್ಲಿ ಈಗ ನನಗೆ ಶಾಂತಿ ಇದೆ ಅನ್ನಿಸುತ್ತಿಲ್ಲ' ಎಂಬ ಅರ್ಥದಲ್ಲಿ ಸಂಜಯ್ ದತ್ ಮಾತನಾಡಿದ್ದೇ ವಿವಾದಕ್ಕೆ ಕಾರಣವಾಗಿದೆ. ಕೆಲವರು ಸಂಜು ಬಾಬಾ ಹೇಳಿದ್ದನ್ನೂ, ದಾವೂದ್ ಇಬ್ರಾಹಿಂ ಜೊತೆಗೆ ಆತ ಹೊಂದಿದ್ದ ನಂಟನ್ನೂ ಸಮೀಕರಿಸಿ ಹೋಲಿಸಿ ಮಾತಾಡ್ತಿದ್ದಾರೆ. ಸಂಜು ಬಾಬಾ ಯಾಕೆ ಹೀಗಂದ್ರು, ಅವರು ದೇಶವಿರೋಧಿಯಾ ಅಂತೆಲ್ಲ ಚರ್ಚೆಗಳಾಗ್ತಿದೆ.
ಆದ್ರೆ ಈ ವಿವಾದದ ನಡುವೆ ಇದೀಗ ನಟ ಹಾಗೂ ನಿರೂಪಕ ಶೇಖರ್ ಸುಮನ್ ಅವರು ಸಂಜಯ್ ದತ್ ಅವರ ಪರವಾಗಿ ನಿಂತಿದ್ದಾರೆ. ಸಂಜಯ್ ದತ್ ಅವರನ್ನು ಹಲವು ವರ್ಷಗಳಿಂದ ಬಲ್ಲೆ. ಅವರು ದೇಶವನ್ನು ಪ್ರೀತಿಸುವ ವ್ಯಕ್ತಿ ಎಂಬುದು ಚೆನ್ನಾಗಿ ಗೊತ್ತಿದೆ. ಅವರ ಹೇಳಿಕೆಯನ್ನು ಸಂದರ್ಭದಿಂದ ಬೇರ್ಪಡಿಸಿ ನೋಡಲಾಗುತ್ತಿದೆ ಎಂದು ಶೇಖರ್ ಸುಮನ್ ಹೇಳಿದ್ದಾರೆ.

Sanjay Dutt ದೇಶವನ್ನು ತುಂಬಾ ಗೌರವಿಸ್ತಾರೆ
ಸಂಜು ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. ಸಂಜಯ್ ದತ್ ಅವರಿಗೆ ಭಾರತ ಮತ್ತು ಭಾರತೀಯರ ಬಗ್ಗೆ ಅಪಾರ ಗೌರವವಿದೆ. ಅವರು ಹೇಳಿದ್ದರಲ್ಲಿ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ. ಹಾಗಾಗಿ ಅವರು ಹೇಳದ ಅಥವಾ ಉದ್ದೇಶಿಸದ ಮಾತುಗಳಿಗಾಗಿ ಅವರನ್ನು ಟೀಕಿಸುವುದು ಸರಿಯಲ್ಲ ಎಂಬುದು ಶೇಖರ್ ಸುಮನ್ ಅವರ ಅಭಿಪ್ರಾಯ.
ಸಂಜಯ್ ದತ್ ಅವರನ್ನು ಹಲವು ವರ್ಷಗಳಿಂದ ಬಲ್ಲ ಅವರು, ಸಂಜಯ್ ಒಬ್ಬ ಒಳ್ಳೆಯ ವ್ಯಕ್ತಿ ಮತ್ತು ತನ್ನ ದೇಶವನ್ನು ಪ್ರೀತಿಸುವ ವ್ಯಕ್ತಿ ಎಂದು ಹೇಳಿದ್ದಾರೆ. ದೇಶದ ಬಗ್ಗೆ ಅವರಿಗೆ ಅಪಾರ ಗೌರವವಿದೆ. ಹೀಗಾಗಿ ಅವರ ಮಾತುಗಳನ್ನು ತಪ್ಪಾಗಿ ಅರ್ಥೈಸಿ ಅವರನ್ನು ಟೀಕಿಸುವ ಅಗತ್ಯವಿಲ್ಲ ಎಂದು ಶೇಖರ್ ಸುಮನ್ ಸಮರ್ಥಿಸಿಕೊಂಡಿದ್ದಾರೆ.
ಯಾವ ಕಾರ್ಯಕ್ರಮದಲ್ಲಿ ಸಂಜಯ್ ದತ್ ಈ ಮಾತು ಹೇಳಿದರು?
ಸಂಜಯ್ ದತ್ ಅವರು ಶೇಖರ್ ಸುಮನ್ ನಡೆಸಿಕೊಡುವ 'Shekhar Tonite' ಯೂಟ್ಯೂಬ್ ಕಾರ್ಯಕ್ರಮದ ವಿಶೇಷ ಸಂಚಿಕೆಯಲ್ಲಿ ಭಾಗವಹಿಸಿದ್ದರು. ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಪ್ರಸಾರವಾದ ಈ ಸಂಚಿಕೆಯಲ್ಲಿ ಹಾಸ್ಯ, ಸಿನಿಮಾ ಮತ್ತು ದೇಶಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಮಾತುಕತೆ ನಡೆದಿತ್ತು.
ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ವಿಚಾರಗಳ ಪ್ರಸ್ತಾಪವೂ ಆಗಿತ್ತು. ಈ ಸಂದರ್ಭದಲ್ಲಿ ಸಂಜಯ್ ದತ್ ಭಾರತದ ಜನರ ಬಗ್ಗೆ ಮಾತನಾಡುತ್ತಾ, ಭಾರತೀಯರು ದೊಡ್ಡ ಹೃದಯದವರು ಮತ್ತು ಅತಿಥಿ ಸತ್ಕಾರಕ್ಕೆ ಹೆಸರಾದವರು ಎಂದು ಹೇಳಿದರು. ಭಾರತ ಸಾಕಷ್ಟು ಕೊಟ್ಟಿದೆ ಮತ್ತು ಮುಂದೆಯೂ ಹಾಗೆಯೇ ಇರಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದರು.
ಆದರೆ ಇದೇ ಮಾತಿನ ನಡುವೆ, ಅವರು, ಭಾರತದಲ್ಲಿ ಹಿಂದಿನ ರೀತಿಯ ಶಾಂತಿ ಈಗ ಅನುಭವವಾಗುತ್ತಿಲ್ಲ ಎಂಬ ಅರ್ಥದ ಹೇಳಿಕೆ ನೀಡಿದರು. 'ಈ ದೇಶದ ಜನರು ತುಂಬಾ ಒಳ್ಳೆಯವರು. ಇಲ್ಲಿ ಶಾಂತಿ ಇರಬೇಕು. ಆದರೆ ಈಗ ನಮ್ಮ ದೇಶದಲ್ಲಿ ಆ ಶಾಂತಿಯನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ' ಎಂಬ ರೀತಿಯಲ್ಲಿ ಸಂಜಯ್ ದತ್ ಮಾತನಾಡಿದರು.
ಭಾರತೀಯರು ಉದಾರ ಮನಸ್ಸಿನವರು, ಆತಿಥ್ಯ ನೀಡುವವರು. ದೇಶವು ಸಾಕಷ್ಟು ಕೊಟ್ಟಿದೆ. ಆ ಗುಣವನ್ನು ನಾವು ಯಾವಾಗಲೂ ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಮತ್ತೆ ಹಿಂದಿನ ದಿನಗಳು ಮರಳಿ ಬರಲಿ ಎಂದು ಶಿವನನ್ನು ಪ್ರಾರ್ಥಿಸುವುದಾಗಿಯೂ ಸಂಜಯ್ ದತ್ ಹೇಳಿಕೊಂಡರು.
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಸಂಜಯ್ ದತ್ ಅವರ ಈ ಮಾತುಗಳು ಕಾರ್ಯಕ್ರಮ ಪ್ರಸಾರವಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಅದರಲ್ಲೂ 'ನಮ್ಮ ದೇಶದಲ್ಲಿ ಈಗ ನನಗೆ ಶಾಂತಿ ಅನ್ನಿಸುತ್ತಿಲ್ಲ' ಎಂಬ ಅರ್ಥದ ಮಾತುಗಳನ್ನು ಕೆಲವರು ಪ್ರತ್ಯೇಕವಾಗಿ ಹಂಚಿಕೊಂಡರು. ಇದರ ಬೆನ್ನಲ್ಲೇ ನಟನ ವಿರುದ್ಧ ಟೀಕೆಗಳು ಆರಂಭವಾದವು.
ಕೆಲವರು ದೇಶದಲ್ಲಿ ಶಾಂತಿ ಇಲ್ಲ ಎಂದು ಹೇಳುವುದು ಭಾರತದ ಬಗ್ಗೆ ನಕಾರಾತ್ಮಕ ಚಿತ್ರಣ ನೀಡುವಂತಾಗಿದೆ ಎಂದು ಆಕ್ಷೇಪಿಸಿದರು. ಇನ್ನೂ ಕೆಲವರು ನಟನ ಮಾತುಗಳಿಗೆ ರಾಜಕೀಯ ಅರ್ಥ ಕಲ್ಪಿಸುವ ಪ್ರಯತ್ನ ಮಾಡಿದರು. ಆದರೆ ಮತ್ತೊಂದು ಕಡೆ, ಇದು ಹಾಸ್ಯಮಯ ಮತ್ತು ಸ್ಕ್ರಿಪ್ಟ್ ಮಾಡಲಾದ ಕಾರ್ಯಕ್ರಮದ ಭಾಗವಾಗಿತ್ತು. ಸಂಪೂರ್ಣ ಸಂಭಾಷಣೆಯನ್ನು ನೋಡದೆ ಕೇವಲ ಒಂದು ಹೇಳಿಕೆಯನ್ನು ಪ್ರತ್ಯೇಕವಾಗಿ ನೋಡಬಾರದು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಮುನ್ನಾಭಾಯಿ ನೆನಪಿಸಿದ ಸಂಜಯ್
ಕಾರ್ಯಕ್ರಮದ ಕೊನೆಯಲ್ಲಿ ಸಂಜಯ್ ದತ್ ಅವರಿಗೆ ಒಂದು ಆಸಕ್ತಿದಾಯಕ ಪ್ರಶ್ನೆ ಕೇಳಲಾಯಿತು. 'ನೀವು ಐದು ನಿಮಿಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರೆ, ದೇಶದ ಜನರನ್ನು ಉದ್ದೇಶಿಸಿ ಏನು ಮಾತನಾಡುತ್ತೀರಿ?' ಎಂಬ ಪ್ರಶ್ನೆಗೆ ಉತ್ತರಿಸುವಾಗ ಸಂಜಯ್ ದತ್ ತಮ್ಮ ಜನಪ್ರಿಯ 'ಮುನ್ನಾಭಾಯಿ' ಪಾತ್ರದ ಶೈಲಿಗೆ ಜಾರಿದರು.
ಅವರು ಪ್ರಧಾನಿಯ ಭಾಷಣದ ರೀತಿಯಲ್ಲಿ ಮಾತನಾಡಲು ಆರಂಭಿಸಿದರು. 'ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ನಿಮ್ಮ ಪ್ರಧಾನಿಯಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ' ಎಂಬ ರೀತಿಯಲ್ಲಿ ಅವರು ಹಾಸ್ಯಮಯವಾಗಿ ಮಾತು ಆರಂಭಿಸಿದರು.
ಇಷ್ಟು ದೊಡ್ಡ ದೇಶದ ಜನರ ಜವಾಬ್ದಾರಿ ಈಗ ತನ್ನ ಮೇಲಿದೆ. ಜನರು ಚಿಂತಿಸಬೇಕಾಗಿಲ್ಲ. ತಾನು ಪ್ರಧಾನಿಯಾದ ಸಂತೋಷವನ್ನು ಆಚರಿಸಲು ವಿದೇಶಕ್ಕೆ ಹೋಗುವುದಿಲ್ಲ. ದೇಶದಲ್ಲೇ, ಜನರ ನಡುವೆ ಇರುತ್ತೇನೆ ಎಂದರು. ಈ ಮಾತಿನಲ್ಲಿ ಮೋದಿ ಕುರಿತ ತುಸು ವ್ಯಂಗ್ಯವೂ ಇದ್ದಂತಿತ್ತು.
'ಗಾಂಧಿಗಿರಿ' ನೆನಪಿಸಿದ ಸಂಜಯ್ ದತ್
ಸಂಜಯ್ ದತ್ (sanjay dutt) ಅವರು ನಂತರ ನೀಡಿದ ಸ್ಪಷ್ಟನೆಯಲ್ಲಿ ತಮ್ಮ ಮಾತಿನ ಹಿನ್ನೆಲೆಯನ್ನು ವಿವರಿಸಿದ್ದಾರೆ. ತಮ್ಮ ಹೇಳಿಕೆ ಯಾವುದೇ ವ್ಯಕ್ತಿ, ಸಮುದಾಯ ಅಥವಾ ಸಂಸ್ಥೆಯ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಮಾಡಿದ್ದಲ್ಲ. ಕಾರ್ಯಕ್ರಮದ ಸಂಭಾಷಣೆ ಸ್ಕ್ರಿಪ್ಟ್‌ನ ಭಾಗವಾಗಿತ್ತು. ಹಗುರವಾದ, ಹಾಸ್ಯಮಯ ಮಾತುಕತೆಯ ಮೂಲಕ ಪ್ರೇಕ್ಷಕರನ್ನು ರಂಜಿಸುವುದು ಅದರ ಉದ್ದೇಶವಾಗಿತ್ತು ಎಂದು ಅವರು ಹೇಳಿದ್ದಾರೆ.
ತಮ್ಮ ಮಾತಿನ ಹಿಂದಿನ ಭಾವನೆ 'ಮುನ್ನಾಭಾಯಿ' ಸಿನಿಮಾಗಳಲ್ಲಿ ಕಂಡುಬರುವ ಹಾಸ್ಯ ಮತ್ತು ವ್ಯಂಗ್ಯದ ಶೈಲಿಗೆ ಹೋಲುತ್ತದೆ. ವಿಶೇಷವಾಗಿ 'ಗಾಂಧಿಗಿರಿ' ಎಂಬ ಪರಿಕಲ್ಪನೆಯ ಮೂಲಕ ಪ್ರೀತಿ, ಏಕತೆ, ಒಳ್ಳೆಯತನ ಮತ್ತು ಮಾನವೀಯತೆಯ ಸಂದೇಶ ನೀಡುವ ಪ್ರಯತ್ನವೇ ತಮ್ಮ ಮಾತಿನ ಹಿಂದಿತ್ತು ಎಂದು ಸಂಜಯ್ ದತ್ ಹೇಳಿದ್ದಾರೆ. ಆದರೆ ತಮ್ಮ ಮಾತುಗಳನ್ನು ಮೂಲ ಸಂದರ್ಭದಿಂದ ಬೇರ್ಪಡಿಸಿ ನೋಡಲಾಗಿದ್ದು, ಅದರಿಂದ ಬೇರೆ ರೀತಿಯ ಅರ್ಥ ಬಂದಿದೆ ಎಂದು ಅವರು ವಿಷಾದಿಸಿದ್ದಾರೆ.
ವಿವಾದದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ (social media) ನೀಡಿದ ಸ್ಪಷ್ಟನೆಯಲ್ಲಿ ಸಂಜಯ್ ದತ್, ಯಾವುದೇ ವ್ಯಕ್ತಿ, ಸಮುದಾಯ ಅಥವಾ ಸಂಸ್ಥೆಯನ್ನು ಅವಮಾನಿಸುವುದು ಅಥವಾ ಅವರ ಭಾವನೆಗಳಿಗೆ ಧಕ್ಕೆ ತರುವುದು ತಮ್ಮ ಉದ್ದೇಶವಾಗಿರಲಿಲ್ಲ. ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಸಂಜಯ್ ದತ್ ಅವರ ಸಿನಿಮಾ ವೃತ್ತಿಜೀವನದಲ್ಲಿ 'ಮುನ್ನಾಭಾಯಿ' ಪಾತ್ರಕ್ಕೆ ವಿಶೇಷ ಸ್ಥಾನವಿದೆ. ಈ ಪಾತ್ರದ ಮೂಲಕ ಹಾಸ್ಯ, ಮಾನವೀಯತೆ ಮತ್ತು 'ಗಾಂಧಿಗಿರಿ'ಯಂತಹ ಪರಿಕಲ್ಪನೆಗಳು ಜನಪ್ರಿಯವಾಗಿದ್ದವು. ಅದೇ ರೀತಿಯ ಹಾಸ್ಯಮಯ ಶೈಲಿಯನ್ನು ಅವರು ಈ ಕಾರ್ಯಕ್ರಮದಲ್ಲೂ ಬಳಸಿದ್ದಾರೆ ಎನ್ನಲಾಗಿದೆ. ಆದ್ರೆ ದೇಶದ ಕುರಿತ ಅವರ ಹೇಳಿಕೆ ಸಿನಿಮಾ ಮತ್ತು ರಾಜಕೀಯದ ಗಡಿಯನ್ನು ಮೀರಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.


Click it and Unblock the Notifications
