ನಿಮ್ಮ ತೀಟೆಗೆ ಹಿಂಗ್ ಮಾಡೋದಾ, ಯಾಕೆ ಸುಮ್ನಿದ್ದೀನಿ ಅಂದ್ರೆ...: ಸಮಂತಾ ಮಾಜಿ ಪತಿ ನಾಗ ಚೈತನ್ಯ ಹೇಳಿದ್ದೇನು
Samantha - Naga Chaitanya Divorce controversy: ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು ಅವರ ಡಿವೋರ್ಸ್ ಬಗ್ಗೆ ತೆಲಂಗಾಣದ ಸಚಿವೆಯ ಹೇಳಿಕೆಯಿಂದ ಬೇಸರಗೊಂಡಿರುವ ಅಕ್ಕಿನೇನಿ ನಾಗ ಚೈತನ್ಯ ಕುಟುಂಬವು ಸಚಿವೆ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದೆ. ಅಲ್ಲದೇ ಈ ವಿಷಯ ರಾಜಕೀಯ ಹಾಗೂ ವಿವಾದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ತೆಲುಗು ನಟ ಹಾಗೂ ಸಮಂತಾ ಅವರ ಮಾಜಿ ಪತಿ ನಾಗ ಚೈತನ್ಯ ಅವರು ಭಾವನಾತ್ಮಕ ಪತ್ರವನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಕಿಡಿಯೂ ಕಾರಿದ್ದಾರೆ.
ತೆಲುಗು ಚಿತ್ರರಂಗದ ಖ್ಯಾತ ನಟ ನಾಗ ಚೈತನ್ಯ ಹಾಗೂ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ನಟಿ ಸಮಂತಾ ರುತ್ ಪ್ರಭು ಇಬ್ಬರೂ ಪ್ರೀತಿಸಿ, ಅದ್ಧೂರಿಯಾಗಿಯೇ ಮದುವೆಯಾಗಿದ್ದರು. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಸಾಧ್ಯವಾಗದೆ ಇದ್ದ ಸಂದರ್ಭದಲ್ಲಿ ಈ ಜೋಡಿ ಪರಸ್ಪರ ಒಪ್ಪಿಗೆ ಮತ್ತು ಗೌರವದಿಂದ ದೂರವಾಗಿತ್ತು. ವಿಚ್ಛೇದನವಾದ ಮೇಲೂ ಈ ಜೋಡಿ ಪರಸ್ಪರರ ಬಗ್ಗೆ ಒಂದು ದಿನವೂ ಮಾಧ್ಯಮಗಳ ಮುಂದೆ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ವೈಯಕ್ತಿಕ ವಿಚಾರವನ್ನು ಹಂಚಿಕೊಂಡಿರಲಿಲ್ಲ.

ಡಿವೋರ್ಸ್ ಬಗ್ಗೆಯೂ ಡಿವೋರ್ಸ್ ಪ್ರಕ್ರಿಯೆಗಳು ಮುಗಿಯುವ ವರೆಗೆ ಏನೂ ಮಾತನಾಡಿರಲಿಲ್ಲ. ವಿಚ್ಛೇದನದ ನಂತರವೂ ಪರಸ್ಪರ ಗೌರವ ಕಾಪಾಡಿಕೊಂಡಿದ್ದಾರೆ. ಆದರೆ, ತೆಲಂಗಾಣದ ಸಚಿವೆ ಕೊಂಡ ಸುರೇಖಾ ಅವರ ಹೇಳಿಕೆ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅವರಿಗೆ ಹಾಗೂ ಅವರ ಕುಟುಂಬದವರಿಗೆ ಮುಜುಗರವನ್ನು ಉಂಟು ಮಾಡಿದ್ದಾರೆ. ಇದರ ಬೆನ್ನಲ್ಲೇ ನಾಗ ಚೈತನ್ಯ ಅವರ ಟ್ವೀಟ್ ವೈರಲ್ ಆಗಿದೆ. ಡಿವೋರ್ಸ್ ಬಗ್ಗೆ ನಾಗ ಚೈತನ್ಯ ಅವರು ಟ್ವೀಟ್ ಮೂಲಕ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ನಾಗ ಚೈತನ್ಯ ಟ್ವೀಟ್‌ನಲ್ಲಿ ಏನಿದೆ
ವಿಚ್ಛೇದನ ಎನ್ನುವುದು ಅಷ್ಟು ಸುಲಭದ ನಿರ್ಧಾರವಲ್ಲ. ಈ ನಿರ್ಧಾರವು ಅತ್ಯಂತ ನೋವಿನ ಹಾಗೂ ಜೀವನದ ಅತ್ಯಂತ ಕಷ್ಟ ನಿರ್ಧಾರಗಳಲ್ಲಿ ಒಂದು. ತುಂಬಾ ಯೋಚಿಸಿದ ಮೇಲೆ ನಾನು ಮತ್ತು ನನ್ನ ಮಾಜಿ ಸಂಗಾತಿಯು (ಸಮಂತಾ) ಬೇರೆಯಾಗಲು ಪರಸ್ಪರ ಚರ್ಚೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿದ್ದೆವು ಎಂದು ನಾಗ ಚೈತನ್ಯ ಹೇಳಿದ್ದಾರೆ.

ಡಿವೋರ್ಸ್ ನಿರ್ಧಾರವು ನೆಮ್ಮದಿಯ (ಶಾಂತಿಯುತ ) ಜೀವನವನ್ನು ನಡೆಸುವುದು, ನಮ್ಮಿಬ್ಬರ ಭಿನ್ನ ಗುರಿಗಳನ್ನು ಮುಟ್ಟುವುದು, ಇಬ್ಬರ ಭಿನ್ನ ಅಭಿರುಚಿಯನ್ನು ಗೌರವಿಸಿ ಮುನ್ನಡೆಯುವುದೇ ಆಗಿತ್ತು. ನಾವಿಬ್ಬರು ಗೌರವದಿಂದ ದೂರವಾಗಿದ್ದೇವೆ. ಆದಾಗ್ಯೂ, ನಮ್ಮ ಡಿವೋರ್ಸ್‌ನ ಬಗ್ಗೆ ಇದುವರೆಗೆ ಹಲವು ಆಧಾರರಹಿತ ಮತ್ತು ಸಂಪೂರ್ಣವಾಗಿ ಹಾಸ್ಯಾಸ್ಪದ ಗಾಸಿಪ್‌ಗಳು ಬಂದಿವೆ. ನನ್ನ ಮಾಜಿ ಪತ್ನಿ (ಸಂಗಾತಿ) ಮತ್ತು ನನ್ನ ಕುಟುಂಬದ ಮೇಲಿನ ಅಪಾರ ಗೌರವದಿಂದ ನಾನು ಇಲ್ಲಿಯವರೆಗೆ ಮೌನವಾಗಿದ್ದೆ.
ಆದರೆ, ಈಗ ಸಚಿವೆ ಕೊಂಡಾ ಸುರೇಖಾ ಅವರ ಹೇಳಿಕೆ ಕೇವಲ ಸುಳ್ಳು ಮಾತ್ರವಲ್ಲ. ಇದು ಸಂಪೂರ್ಣ ಹಾಸ್ಯಾಸ್ಪದ ಮತ್ತು ಸ್ವೀಕಾರಾರ್ಹವಲ್ಲ. ಮಹಿಳೆಯರಿಗೆ ಗೌರವ ಹಾಗೂ ಬೆಂಬಲ ನೀಡಬೇಕು. ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು, ಹೆಡ್‌ಲೈನ್‌ನಲ್ಲಿ ನಿಮ್ಮ ಹೆಸರು ಬರಬೇಕು ಎಂದು ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ನಿರ್ಧಾರಗಳನ್ನು ಲಾಭ ಮತ್ತು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ - ಇಂತಿ ಅಕ್ಕಿನೇನಿ ನಾಗ ಚೈತನ್ಯ ಎಂದು ಟ್ವೀಟ್ ಹಂಚಿಕೊಂಡಿದ್ದಾರೆ.












Click it and Unblock the Notifications