ಬಂದ್ರು.. ಬಂದ್ರು.. ಬಂದ್ರು.. ‘ಬಾಹುಬಲಿ’ ಪ್ರಭಾಸ್ ‘ಸಲಾರ್’ ಸಿನಿಮಾ ಮೂಲಕ ಭರ್ಜರಿಯಾಗಿ ವಾಪಸ್ ಬಂದ್ರು!
ನಟ ಪ್ರಭಾಸ್ ಸಾಲು ಸಾಲು ಸೋಲಿನ ಸುಳಿಯಿಂದ ಹೊರ ಬಂದಿದ್ದಾರೆ. ಬಾಹುಬಲಿ ನಂತರ ಪ್ರಭಾಸ್ ನಟಿಸಿದ್ದ ಯಾವುದೇ ಸಿನಿಮಾಗಳು ದೊಡ್ಡ ಸಕ್ಸಸ್ ಕಂಡಿರಲಿಲ್ಲ. ಹತ್ತಿರ ಹತ್ತಿರ 6 ವರ್ಷದಿಂದ ಪ್ರಭಾಸ್ ನಟಿಸಿದ್ದ ಸಿನಿಮಾಗಳು ಸೋತು ಸುಣ್ಣವಾಗಿದ್ದವು. ಆದರೆ ಇದೀಗ ರಿಲೀಸ್ ಆದ 'ಸಲಾರ್' ಸಿನಿಮಾ ಮೂಲಕ, ಸೋಲಿನ ಸುಳಿಯನ್ನೂ ಗೆದ್ದು ಬಂದಿದ್ದಾರೆ ಡಾರ್ಲಿಂಗ್ ಪ್ರಭಾಸ್. ಹಾಗಾದರೆ ಪ್ರೇಕ್ಷಕರು ಸಲಾರ್ ನೋಡಿ ಏನ್ ಹೇಳಿದ್ರು?
ಪ್ರಶಾಂತ್ ನೀಲ್ & ಡಾರ್ಲಿಂಗ್ ಪ್ರಭಾಸ್ ಅವರ ಕ್ರೇಜಿ ಕಾಂಬಿನೇಷನ್ ಸಿನಿಮಾ ಸಲಾರ್, ಈ ಸಿನಿಮಾ ಸೆಟ್ಟೇರಿದ ದಿನದಿಂದಲೇ ಇಡೀ ಜಗತ್ತಿಗೆ ಒಂದು ಸರ್ಪ್ರೈಸ್ ಬಾಕಿ ಉಳಿದಿತ್ತು. ಯಾಕಂದ್ರೆ ಸಲಾರ್ ಫಸ್ಟ್ ಲುಕ್ ನೋಡಿದ ತಕ್ಷಣವೇ ಈ ಸಿನಿಮಾ ದೊಡ್ಡ ಸಕ್ಸಸ್ ಕಂಡೇ ಕಾಣುತ್ತೆ ಅನ್ನೋದನ್ನ ಅಭಿಮಾನಿಗಳು ನಿರ್ಧರಿಸಿದ್ದರು. ಇದೀಗ ಅವರ ಆ ಆಸೆಗಳು ಹಾಗೂ ಕನಸು ನನಸು ಮಾಡಿದ್ದಾರೆ ನಟ ಡಾರ್ಲಿಂಗ್ ಪ್ರಭಾಸ್ & ನಿರ್ದೇಶಕ ಪ್ರಶಾಂತ್ ನೀಲ್.

ಬ್ಲಾಕ್ ಬಸ್ಟರ್ ಹಿಟ್ 'ಸಲಾರ್'?
ಪ್ರಭಾಸ್ ಅಂದ್ರೆ ಮಾಸ್, ಪ್ರಭಾಸ್ ಅಂದ್ರೆ ಕ್ಲಾಸ್ ಹೀಗೆ ಎಲ್ಲಾ ರೀತಿ ಪಾತ್ರಕ್ಕೂ ನಟ ಪ್ರಭಾಸ್ ಹೊಂದಿಕೊಳ್ಳುತ್ತಾರೆ. ಆದರೆ ಏಕೋ ಬಾಹುಬಲಿ ಬಳಿಕ ಸಾಲು ಸಾಲು ಸೋಲು ನಟ ಪ್ರಭಾಸ್ ಅವರ ಬೆನ್ನುಹತ್ತಿದ್ದವು. ಅದರಲ್ಲೂ 'ರಾಧೆ ಶ್ಯಾಮ್' & 'ಆದಿಪುರುಷ್' ಸಿನಿಮಾ ಸೋಲು ಪ್ರಭಾಸ್‌ರನ್ನ ಕಂಗೆಡಿಸಿ, ಅವರ ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದ್ದವು. ಇದೇ ಕಾರಣಕ್ಕೆ 'ಸಲಾರ್' ಸಿನಿಮಾ ಮೇಲೆ ಕೋಟ್ಯಂತರ ಅಭಿಮಾನಿಗಳು ನಂಬಿಕೆ ಇಟ್ಟು ಕಾಯುತ್ತಿದ್ರು. ಈ ನಿರೀಕ್ಷೆ ಸುಳ್ಳಾಗಲಿಲ್ಲ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿ ಬಂದಿದೆ.
'ಬಾಹುಬಲಿ' ಬಳಿಕ ಭೀಕರ ಸೋಲು
ಟಾಲಿವುಡ್‌ನಲ್ಲಿ ಮಿಂಚುತ್ತಿದ್ದ, ನಟ ಪ್ರಭಾಸ್ ಅವರಿಗೆ 'ಬಾಹುಬಲಿ-1' & 'ಬಾಹುಬಲಿ-2' ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅದ್ಭುತ ಯಶಸ್ಸು ನೀಡಿದ್ದವು. 'ಬಾಹುಬಲಿ-2' ಭಾರತೀಯ ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿತ್ತು. 1,800 ಕೋಟಿ ರೂಪಾಯಿಗೂ ಹೆಚ್ಚಾಗಿ ಕಲೆಕ್ಷನ್ ಮಾಡಿ ಗಲ್ಲಾಪೆಟ್ಟಿಗೆ ಉಡಾಯಿಸಿತ್ತು. ಇದೀಗ 'ಸಲಾರ್' ಮೂಲಕವೂ ಅಂತಹದ್ದೇ ಕಮಾಲ್ ಮಾಡಲು ಪ್ರಭಾಸ್ ಸಜ್ಜಾಗಿದ್ದಾರೆ. ಸಲಾರ್ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಪಡೆದಿದೆ. ಹಾಗೇ ಗಲ್ಲಾಪೆಟ್ಟಿಗೆ ಲೂಟಿ ಮಾಡುವ ಮುನ್ಸೂಚನೆ ನೀಡಿದೆ.
ಕನ್ನಡದ ಹಲವು ನಟರು ಇದ್ದಾರೆ
'ಸಲಾರ್' ತೆಲುಗು ಸಿನಿಮಾ ಆಗಿದ್ದರೂ ಕನ್ನಡ ನಟರ ದೊಡ್ಡ ದಂಡೇ ಈ ಸಿನಿಮಾದಲ್ಲಿ ಅಬ್ಬರಿಸಿದೆ. ಕೆಜಿಎಫ್-1 ಮೂಲಕ ಭಯ ಹುಟ್ಟಿಸಿದ್ದ ಗರುಡ ಖ್ಯಾತಿ, ರಾಮಚಂದ್ರ ರಾಜು ಸಲಾರ್ ಸಿನಿಮಾದಲ್ಲಿ ವಿಲನ್ ಆಗಿದ್ದಾರೆ. ಪೋಷಕ ನಟರಾದ ರವಿ ಭಟ್ ನಟ ಪ್ರಮೋದ್, ಭಜರಂಗಿ ಸೇರಿ ಹಲವು ಕನ್ನಡ ಸಿನಿಮಾದಲ್ಲಿ ಮಿಂಚಿದ್ದ ಮಧು ಗುರುಸ್ವಾಮಿ ಸಿನಿಮಾದಲ್ಲಿ ಇದ್ದಾರೆ. ಕನ್ನಡ ಸಿನಿಮಾ ಪ್ರಿಯರಿಗೆ ಈ ಮೂಲಕ ಸಲಾರ್ ಮತ್ತಷ್ಟು ಹತ್ತಿರವಾಗಿದೆ.

ಕ್ಲೈಮ್ಯಾಕ್ಸ್ ಮಾತ್ರ ಅತ್ಯದ್ಭುತ!
ಹೌದು, ಸಲಾರ್ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಅತ್ಯದ್ಭುತ ಎನ್ನುವ ಮಾತುಗಳು ಕೇಳಿಬಂದಿವೆ. ಪ್ರಶಾಂತ್ ನೀಲ್ ಇಲ್ಲಿ ತಮ್ಮ ಕೈಚಳಕ ತೋರಿಸಿದ್ದು, ಕೆಜಿಎಫ್ ಚಾಪ್ಟರ್ 1 ರೀತಿ ಇಲ್ಲು ಒಂದು ಸರ್ಪ್ರೈಸ್ ಕ್ಲೈಮ್ಯಾಕ್ಸ್ ಇಟ್ಟಿದ್ದಾರೆ. ಈ ಮೂಲಕ ಸಲಾರ್-1 ಕೊನೆಯಲ್ಲಿ ಸಲಾರ್ ಚಾಪ್ಟರ್ 2 ಬಗ್ಗೆ ದೊಡ್ಡ ಹಿಂಟ್ ಕೊಟ್ಟಿದ್ದಾರೆ. ಅಭಿಮಾನಿಗಳಿಗು ಈ ಸಿನಿಮಾ ದೊಡ್ಡ, ಅತಿದೊಡ್ಡ ಸರ್ಪ್ರೈಸ್ ನೀಡಿದೆ. ಪ್ರಭಾಸ್ ಅವರು ಇದೀಗ, ಸೋಲಿನ ಸುಳಿಯಿಂದ ಹೊರಗೆ ಬಂದು ತಮ್ಮ ಖದರ್ ತೋರಿಸಿದ್ದಾರೆ. ಹಾಗೇ ಸಲಾರ್-2 ಬಗ್ಗೆಯೂ ಈ ಮೂಲಕ ಹೊಸ ಕುತೂಹಲ ಮೊಳಕೆಯೊಡೆದಿದೆ.











Click it and Unblock the Notifications