ಯಶ್ & ರಿಷಬ್ ಶೆಟ್ಟಿ ಸಿನಿಮಾ ಸೆಟ್‌ಗಳಲ್ಲಿ ಹೇಗೆ ವರ್ತಿಸುತ್ತಾರೆ? ನಟಿ ರುಕ್ಮಿಣಿ ವಸಂತ್ ಹೇಳಿದ್ದೇನು?
"ಸಪ್ತಸಾಗರದಾಚೆ ಎಲ್ಲೋ" ಖ್ಯಾತಿಯ ನಟಿ ರುಕ್ಮಿಣಿ ವಸಂತ್ ಫುಲ್ ಬ್ಯುಸಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. "ಕಾಂತಾರ ಚಾಪ್ಟರ್-1" ಹಾಗೂ "ಟಾಕ್ಸಿಕ್" ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿಯೂ ರುಕ್ಕು ನಟಿಸಿದ್ದಾರೆ. ಇತ್ತೀಚೆಗಷ್ಟೇ ಕಾಂತಾರ ಪ್ರೀಕ್ವೆಲ್‌ನಲ್ಲಿ ರುಕ್ಮಿಣಿ ಅವರು ಕನಕವತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ರಿವೀಲ್ ಆಗಿತ್ತು. ಮತ್ತೊಂದೆಡೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್‌ನಲ್ಲೂ ರುಕ್ಮಿಣಿ ಶೂಟಿಂಗ್ ಮುಗಿಸಿದ್ದು, ಇತ್ತೀಚಿನ ಸಂದರ್ಶನದಲ್ಲಿ ಕೆಲ ಸೀಕ್ರೆಟ್‌ಗಳನ್ನು ರಿವೀಲ್ ಮಾಡಿದ್ದಾರೆ.
ರುಕ್ಮಿಣಿ ವಸಂತ್ ಅವರು ನಟ ರಿಷಬ್ ಶೆಟ್ಟಿ ಮತ್ತು ನಟ ಯಶ್ ಅವರೊಂದಿಗೆ ಕೆಲಸ ಮಾಡಲು ಪಡೆದ ಅವಕಾಶಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಕಲಾವಿದರ ಶ್ರದ್ಧೆ, ದೃಷ್ಟಿಕೋನ ಮತ್ತು ಸೃಜನಶೀಲತೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕಾಂತಾರ: ಚಾಪ್ಟರ್ 1 ಹಾಗೂ ಟಾಕ್ಸಿಕ್ ಸಿನಿಮಾಗಳಲ್ಲಿ ಹೊಸ ಸೃಜನಾತ್ಮಕ ಶಕ್ತಿ ಬಂದಿದೆ ಎಂದಿದ್ದಾರೆ.

ರಿಷಬ್ ಶೆಟ್ಟಿ ಹಾಗೂ ಯಶ್ ಅವರು ತುಂಬಾ ಉತ್ಸಾಹಭರಿತ ಕಲಾವಿದರು. ಅವರು ತುಂಬಾ ಸೃಜನಶೀಲರು ಮತ್ತು ಅದ್ಭುತ ಮನುಷ್ಯರು. ನನ್ನ ವೃತ್ತಿಜೀವನದ ಇಂತಹ ಹೊಸ ಹಂತದಲ್ಲಿ, ಅವರೊಂದಿಗೆ ಕೆಲಸ ಮಾಡುವುದು ಒಂದು ಸೌಭಾಗ್ಯ. ನಾನು ಈ ಜನರೊಂದಿಗೆ ಕೆಲಸ ಮಾಡುವಾಗ, ಅವರ ಕೆಲಸದ ವಿಧಾನವನ್ನು ನೋಡುವಾಗ ನನಗೆ ಸಾಧ್ಯವಾದಷ್ಟು ಕಲಿಯುತ್ತಿದ್ದೇನೆ ಅನಿಸುತ್ತೆ. ಇಬ್ಬರೂ ಕಲಾವಿದರು ಸಾಮಾನ್ಯವಾಗಿ ಪರಸ್ಪರ ಭಿನ್ನವಾಗಿದ್ದರೂ ಅವರ ಕೆಲಸದ ಬಗೆಗಿನ ಸಂಪೂರ್ಣ ಉತ್ಸಾಹ ಮತ್ತು ಬದ್ಧತೆ ನಿಜಕ್ಕೂ ವಿಸ್ಮಯಕಾರಿ ಎಂದು ಹೊಗಳಿದ್ದಾರೆ.
ರಿಷಬ್ ಶೆಟ್ಟಿ ಅವರೊಂದಿಗೆ ಕಾಂತಾರ ಚಾಪ್ಟರ್-1ರಲ್ಲಿ ನಟಿಸಿದ ಅನುಭವ ಹಂಚಿಕೊಂಡಿರುವ ರುಕ್ಮಿಣಿ, ರಿಷಬ್ ಅವರಿಗೆ ನಂಬಲಾಗದಷ್ಟು ಭವ್ಯವಾದ ದೃಷ್ಟಿಕೋನ ಇದೆ. ಅವರು ಇತ್ತೀಚೆಗೆ ಈ ಸಿನಿಮಾದ 15 ನಿಮಿಷಗಳ ಮೇಕಿಂಗ್ ವೀಡಿಯೊ ಬಿಡುಗಡೆ ಮಾಡಿದರು. ಅವರು ಕಾಂತಾರ ಸಿನಿಮಾದಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ ಎಂಬುದನ್ನು ನೀವು ನೋಡಬಹುದು. ಕಾಂತಾರ ಮೊದಲ ಸಿನಿಮಾವನ್ನು ಯಶಸ್ವಿಗೊಳಿಸಿದ ನಂತರ ಇದು ಮತ್ತಷ್ಟು ಬೇರೂರಿದೆ, ಪ್ರಸ್ತುತವಾಗಿದೆ ಹಾಗೂ ಅದ್ಭುತವಾಗಿದೆ.
'ಟಾಕ್ಸಿಕ್' ಸೆಟ್‌ನಲ್ಲಿ ಯಶ್ ಅವರಿಂದ ಏನು ಕಲಿತಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ರುಕ್ಮಿಣಿ, ಒಂದು ಸಾಂಸ್ಕೃತಿಕ ಯುಗಧರ್ಮದ ಚಳುವಳಿ ಹೇಗಿರಬಹುದು ಎಂಬುದರ ಸಮಗ್ರ ದೃಷ್ಟಿಕೋನ ಅವರಿಗಿದೆ. ಅಂತಹ ದೃಷ್ಟಿಕೋನ ಹೊಂದಿರುವುದು ಉತ್ತಮ ಎಂದು ರುಕ್ಕು ಯಶ್ ಬಗ್ಗೆ ಕೊಂಡಾಡಿದ್ದಾರೆ.
ಕನ್ನಡ ಕೇಳಿ ಶಾಕ್ ಆದ ರುಕ್ಕು
ತಮಿಳು ನಟ ಶಿವಕಾರ್ತಿಕೇಯನ್ ಅವರೊಂದಿಗೆ ಮದರಾಸಿ ಸಿನಿಮಾದಲ್ಲೂ ರುಕ್ಮಿಣಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಪ್ರಮೋಷನ್‌ಗಾಗಿ ಕೇರಳದ ಕೊಚ್ಚಿ ಲುಲು ಮಾಲ್‌ಗೆ ತೆರಳಿದ ರುಕ್ಮಿಣಿ ವಸಂತ್ ಅಲ್ಲಿಯೂ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನಸಂದಣಿಯಲ್ಲಿ ಬಂದ ರುಕ್ಮಿಣಿ ಅವರನ್ನು ಅಲ್ಲಿದ್ದ ವ್ಯಕ್ತಿಯೊಬ್ಬರು "ಹಲೋ ರುಕ್ಮಿಣಿ ಅವರೇ ಹೇಗಿದ್ದೀರಿ?" ಎಂದು ಕೇಳಿದ್ದಾರೆ. ಇದಕ್ಕೆ ಸರ್‌ಪ್ರೈಸ್ ಆಗಿ ರುಕ್ಮಿಣಿ ಅವರು ಹೋ ಕನ್ನಡ ಎಂದಿದ್ದಾರೆ. ಸಡನ್ ಆಗಿ ಅಲ್ಲಿ ಕನ್ನಡ ಕೇಳಿ ಸಿಕ್ಕಾಪಟ್ಟೆ ಖುಷಿಯಾಯ್ತು. ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಥ್ಯಾಂಕ್ಸ್ ಎಂದು ರುಕ್ಮಿಣಿ ತಿಳಿಸಿದ್ದಾರೆ.












Click it and Unblock the Notifications