ನಟ ದರ್ಶನ್ ಬಗ್ಗೆ ಕೇಳಿದ್ದಕ್ಕೆ ಜ್ಯೂ. ಎನ್‌ಟಿಆರ್ ಜೊತೆ ಇದ್ದ ರಿಷಬ್ ಶೆಟ್ಟಿ ಮಾಡಿದ್ದೇನು?
ನಟ, ನಿರ್ದೇಶಕ ರಿಷಬ್ ಶೆಟ್ಟಿ ಸದ್ಯ ಜ್ಯೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಅವರ ಜೊತೆ ಟೆಂಪಲ್ ರನ್ ಮಾಡುತ್ತಿದ್ದಾರೆ. ಜ್ಯೂ. ಎನ್‌ಟಿಆರ್ ಕುಟುಂಬಸ್ಥರಿಗೆ ಕರಾವಳಿ ಭಾಗದ ವಿವಿಧ ಪುಣ್ಯಕ್ಷೇತ್ರಗಳ ದರ್ಶನ ಮಾಡಿಸುತ್ತಿದ್ದಾರೆ. ಕಾಂತಾರ- ಅಧ್ಯಾಯ 1 ಸಿನಿಮಾ ತಯಾರಿಯಲ್ಲಿರುವ ರಿಷಬ್ ಶೆಟ್ಟಿ, ಉಡುಪಿಯಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲೇ ಜ್ಯೂ. ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕುಟುಂಬದ ಜೊತೆ ವಿವಿಧ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದಾರೆ.
ರಿಷಬ್ ಶೆಟ್ಟಿ, ಜ್ಯೂ. ಎನ್‌ಟಿಆರ್ ಮಾಧ್ಯಮಗಳ ಜೊತೆ ಕೂಡ ಮಾತನಾಡಿದ್ದು, ಇಬ್ಬರು ಕೂಡ ಉತ್ತಮ ಗೆಳೆಯರೆಂದು ಹೇಳಿಕೊಂಡಿದ್ದಾರೆ. ಜ್ಯೂ. ಎನ್‌ಟಿಆರ್ ತಾಯಿ ಕುಂದಾಪುರದವರಾಗಿದ್ದು, ಅವರ ಆಸೆಯಂತೆ ಉಡುಪಿ ಶ್ರೀಕೃಷ್ಣ ದೇವಸ್ಥಾನಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಇನ್ನು ಕನ್ನಡದಲ್ಲೇ ಮಾತನಾಡಿದ್ದು, ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.

ರಿಷಬ್ ಶೆಟ್ಟಿ ಅವರಿಗೂ ಮಾಧ್ಯಮಗಳು ಹಲವು ಪ್ರಶ್ನೆ ಮಾಡಿವೆ, ಈ ನಡುವೆಯೇ ಯಾರೋ ಒಬ್ಬರು ನಟ ದರ್ಶನ್ ಪ್ರಕರಣದ ಬಗ್ಗೆ ಕೂಡ ಜ್ಯೂ. ಎನ್‌ಟಿಆರ್ ಮುಂದೆಯೇ ರಿಷಬ್ ಶೆಟ್ಟಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ನಗುತ್ತಲೇ ಸಾಗಿದ ರಿಷಬ್ ಶೆಟ್ಟಿ
ಇನ್ನು ದರ್ಶನ್ ಬಗ್ಗೆ ಕೇಳುತ್ತಿದ್ದಂತೆ ರಿಷಬ್ ಶೆಟ್ಟಿ ಯಾವ ಪ್ರತಿಕ್ರಿಯೆ ಕೂಡ ಕೊಡದೆ ಮುಂದೆ ಸಾಗಿದ್ದಾರೆ. ಇದೇ ಸಂದರ್ಭದಲ್ಲಿ ಜ್ಯೂ. ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕೂಡ ಜೊತೆಯಲ್ಲೇ ಇದ್ದರು.
ರಿಷಬ್ ಶೆಟ್ಟಿ ಈವರೆಗೂ ದರ್ಶನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ. ವಿವಾದಗಳಿಂದ ದೂರವೇ ಉಳಿಯುವ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಸದ್ಯ ಸಂಪೂರ್ಣ ಗಮನವನ್ನು ಕಾಂತಾರ- ಅಧ್ಯಾಯ 1 ಸಿನಿಮಾ ಕಡೆಗೆ ನೀಡಿದ್ದಾರೆ. ಕಾಂತಾರ ಸಿನಿಮಾ ದೇಶಾದ್ಯಂತ ಭಾರಿ ಯಶಸ್ಸು ಕಂಡ ಬಳಿಕ, ಕಾಂತಾರದ ಪ್ರೀಕ್ವೆಲ್ ಬಗ್ಗೆ ಭಾರಿ ಕುತೂಹಲ ಮೂಡಿದೆ.
ಕಾಂತಾರದಲ್ಲಿ ಜ್ಯೂ. ಎನ್‌ಟಿಆರ್?
ಇನ್ನು ಕಾಂತಾರದಲ್ಲಿ ಜ್ಯೂ. ಎನ್‌ಟಿಆರ್ ಕೂಡ ನಟಿಸುತ್ತಾರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಜ್ಯೂ. ಎನ್‌ಟಿಆರ್ ಕೂಡ ರಿಷಬ್ ಶೆಟ್ಟಿ ಕರೆದರೆ ನಟಿಸಲು ಸಿದ್ಧ ಎನ್ನುವ ಮೂಲಕ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪ್ರಶಾಂತ್ ನೀಲ್ ಈಗಾಗಲೇ ಜ್ಯೂ. ಎನ್‌ಟಿಆರ್ ಜೊತೆ ಸಿನಿಮಾ ಘೊಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಿಷಬ್ ಶೆಟ್ಟಿ ಸಿನಿಮಾದಲ್ಲಿ ನಟಿಸಿದರೂ ಅಚ್ಚರಿ ಪಡುವ ಅಗತ್ಯವಿಲ್ಲ ಎನ್ನುವುದು ಅಭಿಮಾನಿಗಳ ಅನಿಸಿಕೆ.












Click it and Unblock the Notifications