Rishab Shetty-Jr. NTR: ಉಡುಪಿ ಶ್ರೀಕೃಷ್ಣ ಮಠಕ್ಕೆ ರಿಷಬ್ ಶೆಟ್ಟಿ, ಜ್ಯೂ. ಎನ್‌ಟಿಆರ್, ಪ್ರಶಾಂತ್ ನೀಲ್ ಭೇಟಿ
ನಟ, ನಿರ್ದೇಶಕ ರಿಷಬ್ ಶೆಟ್ಟಿ, ತೆಲುಗು ನಟ ಜ್ಯೂ. ಎನ್‌ಟಿಆರ್ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಸದ್ಯ ಈ ಮೂವರು ಒಟ್ಟಿಗೆ ಇರುವ ಫೋಟೊಗಳು ಇದೀಗ ಭಾರಿ ವೈರಲ್ ಆಗಿದೆ. ಜ್ಯೂ. ಎನ್‌ಟಿಆರ್ ತಮ್ಮ ತಾಯಿಯ ಆಸೆಯಂತೆ ಅವರನ್ನು ಉಡುಪಿ ಶ್ರೀಕೃಷ್ಣ ಮಠಕ್ಕೆ ಕರೆದುಕೊಂಡು ಬಂದಿದ್ದಾರೆ. ಎನ್‌ಟಿಆರ್ ಜೊತೆ ಪ್ರಶಾಂತ್ ನೀಲ್ ಕೂಡ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ.
ತಮ್ಮ ಕುಟುಂಬದ ಜೊತೆ ಉಡುಪಿಗೆ ಬಂದ ಜ್ಯೂ. ಎನ್‌ಟಿಆರ್ ಅವರಿಗೆ ರಿಷಬ್ ಶೆಟ್ಟಿ ಮತ್ತು ಕುಟುಂಬ ಅತಿಥಿ ಸತ್ಕಾರ ಮಾಡಿದೆ. ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ರಿಷಬ್ ಶೆಟ್ಟಿ ಅಲ್ಲಿಂದ ಅವರನ್ನು ಉಡುಪಿಯ ಶ್ರೀಕೃಷ್ಣ ದೇವಸ್ಥಾನಕ್ಕೆ ಕರೆದುಕೊಂಡು ಬಂದು ದೇವರ ದರ್ಶನ ಮಾಡಿಸಿದ್ದಾರೆ.

ದೇವಸ್ಥಾನಕ್ಕೆ ಭೇಟಿ ಮಾಡಿದ ಬಳಿಕ ಮಾತನಾಡಿದ ಜ್ಯೂ. ಎನ್‌ಟಿಆರ್, ನನ್ನ ತಾಯಿ ತುಂಬಾ ವರ್ಷಗಳಿಂದ ಉಡುಪಿಯ ಶ್ರೀಕೃಷ್ಣನ ದರ್ಶನ ಮಾಡಬೇಕು ಎಂದು ಆಸೆ ಪಟ್ಟಿದ್ದರು. ರಿಷಬ್ ಶೆಟ್ಟಿ ನನಗೆ ದೇವರು ಕೊಟ್ಟ ಗೆಳೆಯ, ಇದನ್ನೆಲ್ಲಾ ಅವರು ವ್ಯವಸ್ಥೆ ಮಾಡಿದ್ದಾರೆ, ಅವರಿಗೆ ಧನ್ಯವಾದ, ವಿಶೇಷ ದಿನದಂದು ಶ್ರೀಕೃಷ್ಣನ ದರ್ಶನವಾಗಿದೆ. ಇದೆಲ್ಲಾ ದೇವರ ಇಚ್ಛೆ ಎಂದು ಹೇಳಿದ್ದಾರೆ.
ರಿಷಬ್ ಶೆಟ್ಟಿ ಮಾತನಾಡಿ, ಜ್ಯೂ. ಎನ್‌ಟಿಆರ್ ಅವರು ನಮ್ಮವರೇ ಎನಿಸುತ್ತದೆ. ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಅವರ ಜೊತೆ ಶ್ರೀಕೃಷ್ಣನ ದರ್ಶನ ಮಾಡುತ್ತೇನೆ ಅಂದುಕೊಂಡಿರಲಿಲ್ಲ, ಇಂದು ಅದು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications