ಆ ತಪ್ಪು ಮಾಡದಿದ್ದರೆ ದರ್ಶನ್‌ಗೆ ಶಿಕ್ಷೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇತ್ತು; ರಾಮ್‌ಗೋಪಾಲ್ ವರ್ಮಾ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದ್ದು ಪೊಲೀಸರು ತೀವ್ರವಾಗಿ ತನಿಖೆ ಮಾಡುತ್ತಿದ್ದಾರೆ. ದರ್ಶನ್ ಮೇಲಿರುವ ಆರೋಪಗಳು ಸಾಬೀತಾದರೆ ಕಠಿಣ ಶಿಕ್ಷೆಯಾಗುವ ಬಗ್ಗೆ ಚರ್ಚೆಯಾಗುತ್ತಿದೆ.
ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ್‌ಗೆ ಜಾಮೀನು ಸಿಗುವುದು ಅನುಮಾನವಾಗಿದೆ. ಕನಿಷ್ಠ 6 ತಿಂಗಳು ಅವರು ಜೈಲಿನಲ್ಲಿರಬೇಕು ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ.

ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಅಂತಹ ದೊಡ್ಡ ನಟರು ಈ ರೀತಿ ಟ್ರೋಲ್‌ಗಳಿಗೆ ತಲೆ ಕೆಡಿಸಿಕೊಳ್ಳಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಮ್‌ಗೋಪಾಲ್ ವರ್ಮಾ ಹೇಳಿದ್ದೇನು?
ದರ್ಶನ್ ಮತ್ತು ಗ್ಯಾಂಗ್‌ಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ, ಕೋಪದಲ್ಲಿ ಏನೋ ಮಾಡಲು ಹೋಗಿ ಕೊಲೆ ಮಾಡಿದ್ದಾರೆ. ಆಕಸ್ಮಿಕವಾಗಿ ಅವರು ಕೊಲೆ ಮಾಡಿದ್ದರೂ ಆ ಬಳಿಕ ಶವವನ್ನು ಮರೆಮಾಚಲು ಯತ್ನಿಸಿದ್ದಾರೆ ಇದು ದೊಡ್ಡ ತಪ್ಪು, ಪ್ರಕರಣದಲ್ಲಿ ದರ್ಶನ್ ಆರೋಪ ಸಾಬೀತಾದರೆ ಹೆಚ್ಚಿನ ಶಿಕ್ಷೆಯಾಗಲು ಇದು ಕಾರಣವಾಗಬಹುದು ಎಂದಿದ್ದಾರೆ.
ಆಕಸ್ಮಿಕವಾಗಿ ಕೊಲೆ ಮಾಡುವುದು ಬೇರೆ ಆದರೆ ಕೊಲೆಯಾದ ಬಳಿಕ ಅದನ್ನು ಮರೆ ಮಾಚಲು ಯತ್ನಿಸಿರುವುದು ಗಂಭೀರವಾದ ಅಪರಾಧ, ಇದು ಅವರ ವಿರುದ್ಧ ಶಿಕ್ಷೆ ಹೆಚ್ಚುವ ಸಾಧ್ಯತೆ ಇದೆ.
ಮಾಧ್ಯಮಗಳ ವರದಿಗಳನ್ನು ನೋಡಿದ ಬಳಿಕ ನನಗೆ ಅನ್ನಿಸುವುದು ಏನೆಂದರೆ, ದರ್ಶನ್‌ಗೆ ಈ ಪ್ರಕರಣದಲ್ಲಿ ಕನಿಷ್ಠ 7 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ. ಪೊಲೀಸರ ಬಳಿ ಪ್ರಮುಖ ಸಾಕ್ಷಿಗಳಿವೆ ಎಂದು ವರದಿಯಾಗಿದೆ ಎಂದರು.
ಪವಿತ್ರಾ ಗೌಡ ಕಾರಣ
ಇಷ್ಟೆಲ್ಲಾ ಆಗಲು ಪವಿತ್ರಾ ಗೌಡ ಕಾರಣ, ಆಕೆ ದರ್ಶನ್‌ಗೆ ಈ ವಿಚಾರ ತಿಳಿಯುವಂತೆ ಮಾಡಿದ್ದು ದೊಡ್ಡ ತಪ್ಪು. ಟ್ರೋಲ್‌ಗಳಿಗೆ ಅಷ್ಟೊಂದು ತಲೆ ಕಡಿಸಿಕೊಳ್ಳಬಾರದು. ಸಾವಿರಾರು, ಲಕ್ಷಾಂತರ ಟ್ರೋಲರ್ ಗಳಿದ್ದಾರೆ ಅವರಿಗೆಲ್ಲಾ ನಾವು ಪ್ರತಿಕ್ರಿಯೆ ಕೊಡುತ್ತಾ ಕೂರಬಾರದು. ಒಂದು ವೇಳೆ ಪವಿತ್ರಾ ಗೌಡ ಇದಕ್ಕೆ ಪ್ರತಿಕ್ರಿಯೆ ನೀಡದೇ ಇದ್ದರೆ, ನಕ್ಕು ಸುಮ್ಮನಾಗಿದ್ದರೆ ಇಂದು ಅವರು ಜೈಲಿನಲ್ಲಿ ಇರಬೇಕಾಗುತ್ತಿರಲಿಲ್ಲ ಎಂದರು.
ನಾನು ಟ್ವಿಟ್ ಮಾಡಿದಾಗ ಕೂಡ 100ರಲ್ಲಿ 90 ಕಮೆಂಟ್‌ಗಳು ನನ್ನನ್ನು ಟ್ರೋಲ್ ಮಾಡಿರುತ್ತವೆ. ನಾನು ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ನನಗೆ ಹೋಲಿಕೆ ಮಾಡಿದರೆ ಅವರು ಸೊನ್ನೆ, ನಾನು ಪ್ರತಿಕ್ರಿಯೆ ನೀಡುವುದೇ ಅವರಿಗೂ ಬೇಕಾಗಿರುತ್ತದೆ ನನ್ನನ್ನ ಟ್ರೋಲ್ ಮಾಡಿದರೆ ನಾನು ಅದನ್ನು ಎಂಜಾಯ್ ಮಾಡುತ್ತೇನೆ ಎಂದರು.












Click it and Unblock the Notifications