ಹಸಿ ದೃಶ್ಯಗಳ ಟೀಸರ್ ಯುಟ್ಯೂಬ್‌ಗೆ ಬಂದ್ರೆ ಮಕ್ಕಳು ನೋಡಲ್ವಾ? ಟಾಕ್ಸಿಕ್ ಬಗ್ಗೆ ಮನಃಶಾಸ್ತಜ್ಞೆಯ ಪ್ರಶ್ನೆ
ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಹಾಗೂ ಬಹು ನಿರೀಕ್ಷೆಯ ಟಾಕ್ಸಿಕ್ ಸಿನಿಮಾದ ಟೀಸರ್ ಜನವರಿ 8ರಂದು ರಿಲೀಸ್ ಆಗಿದೆ. ಟೀಸರ್ ರಿಲೀಸ್ ಆದ ಬೆನ್ನಲ್ಲೇ ಈ ಟೀಸರ್‌ನಲ್ಲಿನ ಕೆಲವೊಂದು ದೃಶ್ಯಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಹಸಿ ದೃಶ್ಯಗಳ ಟೀಸರ್ ಯುಟ್ಯೂಬ್‌ಗೆ ಬಂದ್ರೆ ಮಕ್ಕಳು ನೋಡಲ್ವಾ ಎಂದು ಟಾಕ್ಸಿಕ್ ಬಗ್ಗೆ ಮನಃಶಾಸ್ತಜ್ಞೆ ಡಾ. ರೂಪಾ ರಾವ್ ಅವರು ಪ್ರಶ್ನೆ ಮಾಡಿದ್ದಾರೆ. ಟಾಕ್ಸಿಕ್ ಟೀಸರ್ ಬಗ್ಗೆ ರೂಪಾ ರಾವ್ ಅವರ ಬರಹ ಇಲ್ಲಿದೆ.
ನಾನು ಸಾಮಾನ್ಯವಾಗಿ ಯಾವ ಟೀಸರೂ , ಟ್ರೈಲರೂ ಅಷ್ಟಾಗಿ ನೋಡೋಳಲ್ಲ. ಆದರೆ ಬೆಳಗಿನಿಂದ ಇದೇನಿದು ಎಲ್ರೂ ಟಾಕ್ಸಿಕ್ ಬಗ್ಗೆ ಇಷ್ಟೊಂದು ಮಾತನಾಡುತ್ತಿದ್ದಾರಲ್ಲ ಅಂತ ಸಂಜೆ ಹೋಗಿ ನೋಡಿದೆ. ನಂತರವೇ ಅದ್ಯಾಕೆ ಇಷ್ಟೊಂದು ಚರ್ಚೆ ಆಗ್ತಿದೆ ಅಂತ ಗೊತ್ತಾಯ್ತು. ಮನೇಲಿ ಕೂತುಕೊಂಡು ವೆಬ್ ಸೀರೀಸ್ ಹಾಲಿವುಡ್ ಸಿನಿಮಾ ಎಲ್ಲಾ ನೋಡಿದ ನನ್ನಂತಹವರಿಗೆ ಈ ಸೀನೆಲ್ಲಾ ಇಷ್ಟೇ ತಾನೇ ಅಂತ ಅನಿಸುತ್ತದೆ. ಅಲ್ಲದೆ ಕನ್ನಡದ್ದೇ ಇನ್ಯಾವುದೋ ಹಳೆಯ ಸಿನಿಮಾದಲ್ಲಿ ಶಶಿಕುಮಾರ್ ಮತ್ತು ಮಹಾಲಕ್ಷ್ಮಿಯ ಒಂದು ಸಿನಿಮಾದಲ್ಲಿ ಮಿಲನ ಮಹೋತ್ಸವದ ದೃಶ್ಯ ಆಗಲೇ ಆಕಾಲದಲ್ಲಿಯೇ ಬಂದಿತ್ತು.

ಹಿಂದಿಯ ಅದೆಷ್ಟೋ ಸಿನಿಮಾಗಳಲ್ಲಿ ಇನ್ನೇನೋ ಭಂಗಿಯ ದೃಶ್ಯಗಳನ್ನು ತುರುಕಿದ್ದಾರೆ. ಇಲ್ಲಿ ಟೀಸರಿನಲ್ಲಿಯೇ ಬಳಸಿ ಒಂದು ಹೊಸ ಅಧ್ಯಾಯ ಬರೆದಿದ್ದಾರೆ. ಮಕ್ಕಳು ನೋಡಬಾರದು ಆದರೆ ಯುಟ್ಯೂಬಿಗೆ ಮಕ್ಕಳು ದೊಡ್ಡವರು ಅಂತೇನೂ ವಯಸ್ಸನ್ನು ಚೆಕ್ ಮಾಡುವ ಸಿಸ್ಟಮ್ ಇಲ್ಲವಾದ್ದರಿಂದ ಮಕ್ಕಳೂ ನೋಡಬಹುದು.
ಇನ್ನು ಆ ದೃಶ್ಯಗಳು ಸಿನಿಮಾದಲ್ಲಿ ಇರುತ್ತಾ ಇಲ್ಲವಾ, ಗೊತ್ತಿಲ್ಲ. ಇನ್ನು ದೃಶ್ಯ ವೈಭವ 600 ಕೋಟಿಗೆ ವೈಭೋಗವಾಗೇ ಇರುತ್ತದೆ, ಇರಬೇಕು. ಕಥೆಯೂ ರೋಚಕವಾಗಿದ್ದರೆ ಚೆಂದ ಎಂದು ಹೇಳಿದ್ದಾರೆ.
ಈ ಬರಹಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದಾನಂದ ಎನ್ನುವವರು ನೀವು ಹೇಳುತ್ತಿರುವುದು ಹೇಗಿದೆ ಅಂದರೆ, ಹಿಂದೆ ಹೀಗಿತ್ತು, ಆದ್ದರಿಂದ ಈಗಲೂ ಹೀಗಿರಬೇಕು ಅನ್ನೋ ಲಾಜಿಕ್ ತರಹ ಇದೆ. ನೀವು ಹೇಳಿದಂತೆ 90ರ ದಶಕದ ಸಿನಿಮಾಗಳಲ್ಲಿ ಅತ್ಯಾಚಾರ ದೃಶ್ಯಗಳು, ಅತಿರೇಕ ಕಾಮದ ಸೀನುಗಳು ಇದ್ದವು. ಇದನ್ನೇ ಇಂದಿನ ಸಿನಿಮಾಗಳಿಗೆ ರಕ್ಷಣಾ ಕವಚವಾಗಿಸುವುದು ತರ್ಕಸಮ್ಮತವಲ್ಲ. ಅದು ಆಗ ತಪ್ಪಾಗಿದ್ದರೆ, ಈಗಲೂ ತಪ್ಪೇ.
ಇನ್ನೊಂದು ದೊಡ್ಡ ಸಮಸ್ಯೆ: ಎಲ್ಲರೂ ನೋಡ್ತಾರೆ ನ್ನೋ ಕಾರಣ ಕೊಟ್ಟು ವಿಷಯವನ್ನು ಸಾಮಾನ್ಯಗೊಳಿಸುವುದು. ವಿವಾಹಿತರು ಮಕ್ಕಳನ್ನು ಮಾಡ್ತಾರೆ, ಕೆಲವರು ಗುಪ್ತವಾಗಿ ನೀಲಿ ಚಿತ್ರ ನೋಡ್ತಾರೆ - ಇದು ಸತ್ಯವಾಗಿರಬಹುದು. ಆದರೆ ಅದನ್ನೇ ಆಧಾರ ಮಾಡಿಕೊಂಡು ಸಾರ್ವಜನಿಕವಾಗಿ ಪ್ರದರ್ಶಿಸುವ ವಿಷಯವನ್ನು ಸಮರ್ಥಿಸುವುದು ಸಮಾಜದ ಮಟ್ಟ ಇಳಿಸುವ ಕೆಲಸ. ಸಿನಿಮಾ ಖಾಸಗಿ ಅನುಭವ ಅಲ್ಲ, ಅದು ಸಾರ್ವಜನಿಕ ಮಾಧ್ಯಮ. ಅದರ ಪ್ರಭಾವ ಮಕ್ಕಳ ಮೇಲೆ, ಕಿಶೋರರ ಮೇಲೆ, ಸಮಾಜದ ಭಾಷೆಯ ಮೇಲೆ ಬೀಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳು ನೋಡಬಾರದು ಅನ್ನೋ ಜವಾಬ್ದಾರಿಯನ್ನು ಕೇವಲ ಪೋಷಕರ ಮೇಲೆ ತಳ್ಳಿಬಿಡೋದು ಸುಲಭದ ತಪ್ಪಿಸಿಕೊಳ್ಳುವಿಕೆ. ಯಶ್ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ ಅನ್ನೋದು ಶ್ಲಾಘನೀಯ. ಆದರೆ ಶ್ರಮ - ವಿಮರ್ಶೆಗೆ ಮೀರಿದ ಪವಿತ್ರತೆ ಅಲ್ಲ. ಕನ್ನಡದ ಅಸ್ಮಿತೆ ಅಂದರೆ ಕೇವಲ ದೊಡ್ಡ ಬಜೆಟ್, ಸ್ಟಾರ್ ಪವರ್ ಅಲ್ಲ ಎಂದಿದ್ದಾರೆ.
ದೇಶದ ಈ ವಿಚಾರಗಳ ಮೇಲೂ ಕಾಳಜಿ ಇರಲಿ
ಸಮುದ್ಯತಾ ಕಂಜರ್ಪಣೆ ಎನ್ನುವವರು, ಅಲ್ಲ ಈ ಜನಗಳು ಟಾಕ್ಸಿಕ್ ಸಿನಿಮಾನ, ಮಕ್ಳು ಜೊತೆ ನೋಡೋದಾ ಬೇಡ್ವಾ ಅಂತ ಎಷ್ಟೊಂದೆಲ್ಲ ತಲೆಕೆಡಿಸ್ಕೊಂಡು ಸೋಷಿಯಲ್ ಧ್ವಂಸ ಮಾಡ್ತಿದಾರಲ್ಲ. ಒಂಚೂರು ಅದೇ ಕಾಳಜಿನ ಹಿಂಸೆ ಇರೋ, ರಕ್ತಪಾತ ಇರೋ ಸಿನೆಮಾಗಳ ವಿಷ್ಯದಲ್ಲೂ ಇಟ್ಕೊಳಿ ಪ್ಲೀಸ್..
Sorry to say.. ಈ ದೇಶದಲ್ಲಿ ಮರ್ಯಾದೆಗೇಡು ಹ*ತ್ಯೆ ಆಗೋದನ್ನ, ಜಾತಿ ವಿಷಯಕ್ಕೆ ಹೊಡೆದು ಕೊ*ಲ್ಲೋದನ್ನ, ದೌರ್ಜನ್ಯ*ಗಳನ್ನ ರೀಲ್ಸ್‌ಗಳಲ್ಲಿ ನೋಡಿ, ಇಲ್ನೋಡು ಹೆಂಗ್ ಸು*ಡ್ತಿದಾರೆ, ಇಲ್ನೋಡು ಹೆಂಗ್ ಸಾ*ಯ್ಸಿದ್ರು ಅಂತ ಕರೆಕರೆದು ಕುಟುಂಬದವರಿಗೆ ತೋರಿಸೋ ನಮಗೆಲ್ಲ, ಒಂದಿಷ್ಟು intimate scene ಗಳನ್ನ ಕಂಡ ಕೂಡಲೇ ಅದೆಂಥಾ ಸಾಮಾಜಿಕ ಕಾಳಜಿ, ಮಡಿವಂತಿಕೆ ಹುಟ್ಕೊಳತ್ತೆ ಅನ್ನೋದೇ ಆಶ್ಚರ್ಯ ಎಂದು ಹೇಳಿದ್ದಾರೆ.












Click it and Unblock the Notifications