ಸ್ವಲ್ಪ ಚಿಗುರಿದ ತಕ್ಷಣ ಕನ್ನಡ ನಾಡನ್ನೇ ಮರೀತೀರಾ: ನಟಿ ರಶ್ಮಿಕಾಗೆ ಕರವೇ ಕ್ಲಾಸ್
ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ನಾನು ಹೈದರಾಬಾದ್‌ನವಳು ಎಂದು ಹೇಳಿದ್ದರು. ಈ ಹೇಳಿಕೆ ವಿವಾದ ಸೃಷ್ಟಿಸಿದ್ದಲ್ಲದೆ ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗಿತ್ತು. ಕನ್ನಡದಿಂದಲೇ ಸಿನಿ ಪಯಣ ಆರಂಭಿಸಿ, ಇಂದು ಸ್ವಂತ ಊರು ನೆನಪಾಗದಷ್ಟು ದರ್ಪ ಬಂದಿದೆ ಎಂದು ಕನ್ನಡಿಗರು ಸಿಡಿದಿದ್ದರು. ಇದೇ ವಿಚಾರವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿಎ ನಾರಾಯಣಗೌಡ ಕೂಡ ಮಾತನಾಡಿದ್ದು, ರಶ್ಮಿಕಾ ಮಂದಣ್ಣಗೆ ಎಚ್ಚರಿಕೆ ನೀಡಿದ್ದಾರೆ.
ನಾನು ಇತ್ತೀಚೆಗೆ ಒಂದು ಕಾರ್ಯಕ್ರಮವನ್ನು ನೋಡಿದೆ. ಅದು ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮ. ಅಲ್ಲಿ ಕೊಡಗಿನ ಹೆಣ್ಣುಮಗಳು ರಶ್ಮಿಕಾ ಮಂದಣ್ಣ ನಾನು ಆಂಧ್ರದವಳು ಎಂದು ಪರಿಚಯ ಮಾಡಿಕೊಂಡು ಹೇಳಿಕೆ ನೀಡಿದರು. ಆಕೆ ಕನ್ನಡ ಸಿನಿಮಾಗಳಿಂದ ಪರಿಚಯಗೊಂಡು ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುತ್ತಿರುವುದು. ಆದರೂ ತಾನು ಆಂಧ್ರಪ್ರದೇಶದವರು ಎಂದು ಹೇಳಿಕೆ ನೀಡಿದ್ದಾರೆ ಎಂದು ಗುಡುಗಿದ್ದಾರೆ.

ಒಂದಷ್ಟು ಚಿಗುರಿದ ಕೂಡಲೇ, ಬೇರೆ ಭಾಷೆಗಳಲ್ಲಿ ಒಂದಷ್ಟು ಅವಕಾಶಗಳು ಸಿಕ್ಕಿದ ಕೂಡಲೇ ಕನ್ನಡ ನಾಡನ್ನೇ ಮರೆಯುತ್ತೀರಿ ಅಂದ್ರೆ ನೀವೆಂತಾ ಮೀರು ಸಾಧಕರಿರಬೇಕು? ಎಂದು ಪ್ರಶ್ನಿಸಿದ್ದಾರೆ. ನಿಮಗೆ ಈ ನೆಲದ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಗೌರವ ಇರಬೇಕು. ನೀವೆಷ್ಟೇ ದೊಡ್ಡ ವ್ಯಕ್ತಿಗಳಾಗಿ ಬೆಳೆದರೂ ಈ ನೆಲದ ಮೇಲೆ ಗೌರವ ಇರಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಕುವೆಂಪು ಅವರು ಹೇಳಿದಂತೆ ಎಲ್ಲೇ ಇರು, ಹೇಗೇ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ ಎಂದು ನಾರಾಯಣಗೌಡರು ಹೇಳಿದ್ದಾರೆ.
ರಶ್ಮಿಕಾ ಏನು ಹೇಳಿದ್ರು?: ಬಾಲಿವುಡ್‌ನ ನಟ ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ಅವರು ಛಾವಾ ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚೆಗೆ ನಡೆದ ಈ ಸಿನಿಮಾದ ಕಾರ್ಯಕ್ರಮದಲ್ಲಿ ರಶ್ಮಿಕಾ ಅವರು ತಮ್ಮನ್ನು ಪರಿಚಯಿಸಿಕೊಳ್ಳುವಾಗ "ನಾನು ಹೈದರಾಬಾದ್‌ನವಳು" ಎಂದು ಹೇಳಿಕೊಂಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ, ರಶ್ಮಿಕಾಗೆ ಕನ್ನಡಿಗರು ಕ್ಲಾಸ್ ತೆಗೆದುಕೊಂಡಿದ್ರು.
"ನಾನು ಹೈದರಾಬಾದ್‌ನವಳು, ಅಲ್ಲಿಂದ ನಾನು ಒಂಟಿಯಾಗಿ ಬಂದಿದ್ದೇನೆ. ಈಗ ನಾನು ನಿಮ್ಮ ಕುಟುಂಬದ ಭಾಗ ಆಗುತ್ತಿದ್ದೇನೆ ಎಂದು ಬಾಲಿವುಡ್ ಪ್ರೇಕ್ಷಕರನ್ನು ರಶ್ಮಿಕಾ ಮೆಚ್ಚಿಸಿದ್ರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ರಶ್ಮಿಕಾ ಅವರಿಗೆ ಕನ್ನಡವರು ಅವಕಾಶ ಕೊಡದಿದ್ದರೆ ಇಷ್ಟು ಎತ್ತರಕ್ಕೆ ಬೆಳೆಯುತ್ತಿದ್ರಾ? ಎಂದು ಪ್ರಶ್ನೆಗಳನ್ನು ಕೇಳಿದ್ರು.

ರಶ್ಮಿಕಾ ಮಂದಣ್ಣ ಅವರು ಮೊದಲಿಗೆ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದರು. ಇತ್ತೀಚೆಗೆ ತೆರೆಕಂಡ ಪುಷ್ಪ-2 ಸಿನಿಮಾದಿಂದಲೂ ರಶ್ಮಿಕಾ ಖ್ಯಾತಿ ಹೆಚ್ಚಾಗಿತ್ತು. ಇದರ ಜೊತೆಗೆ ಬಾಲಿವುಡ್‌ನಲ್ಲೂ ಮಿಂಚುತ್ತಿರುವ ಅವರು ತಮ್ಮ ಸ್ವಂತ ಊರನ್ನೇ ಪರಿಚಯ ಮಾಡಿಕೊಳ್ಳದೆ ಅವಮಾನ ಮಾಡಿದ್ದಾರೆ ಎಂದು ಕನ್ನಡಿಗರು ಕೆರಳಿದ್ದರು.












Click it and Unblock the Notifications