ಚಿತ್ರರಂಗದಿಂದ ಬ್ಯಾನ್ ಆಗುವ ಭೀತಿ ಬೆನ್ನಲ್ಲೇ ಕರ್ನಾಟಕದ ಪ್ರಸಿದ್ಧ ದೇವಸ್ಥಾನದ ಮೊರೆ ಹೋದ ನಟ ರಣವೀರ್ ಸಿಂಗ್
ಬಾಲಿವುಡ್‌ನಿಂದ ಬ್ಯಾನ್ ಆಗುವ ಭೀತಿಯ ಬೆನ್ನಲ್ಲೇ ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ಕರ್ನಾಟಕದ ಪ್ರಸಿದ್ಧ ದೇವಸ್ಥಾನಕ್ಕೆ ಓಡೋಡಿ ಬಂದಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದಿರುವ ನಟ, ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ಎದುರು ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ. ರಿಷಬ್ ಶೆಟ್ಟಿ ನಟನೆಯ "ಕಾಂತಾರ" ಸಿನಿಮಾದ ದೈವದ ಶಕ್ತಿಯನ್ನು ಅಣಕಿಸಿ ಕರಾವಳಿ ಹಾಗೂ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ರಣವೀರ್ ಸಿಂಗ್, ಕೊನೆಗೂ ತನ್ನ ಮಾತಿನಂತೆ ನಡೆದುಕೊಂಡಿದ್ದಾರೆ. ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯಂತೆ ಅತ್ಯಂತ ಸಾಮಾನ್ಯರಂತೆ ಮೈಸೂರು ಬೆಟ್ಟಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ತನ್ನ ತಪ್ಪಿಗೆ ಕ್ಷಮೆ ಕೇಳಿದ್ದಾರೆ.
ಏನಿದು ದೈವ ನಿಂದನೆ ವಿವಾದ?
ಕೆಲ ತಿಂಗಳ ಹಿಂದೆ ಗೋವಾದಲ್ಲಿ ಆಯೋಜನೆಗೊಂಡಿದ್ದ ಚಲನಚಿತ್ರ ಸಮಾರಂಭವೊಂದರಲ್ಲಿ ನಟ ರಣವೀರ್ ಸಿಂಗ್ ಹಾಗೂ 'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ಒಂದೇ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ರಿಷಬ್ ಶೆಟ್ಟಿ ಎದುರೇ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯವನ್ನು ರಣವೀರ್ ಸಿಂಗ್ ಅಣಕಿಸಿದ್ದರು. "ಥಿಯೇಟರ್‌ನಲ್ಲಿ ನಿಮ್ಮ ಸಿನಿಮಾ ನೋಡಿದೆ, ನಟನೆ ಅದ್ಭುತವಾಗಿತ್ತು. ಅದರಲ್ಲೂ ಆ ಹೆಣ್ಣು ದೆವ್ವ ನಿಮ್ಮ ಮೈಮೇಲೆ ಬರುವ ದೃಶ್ಯವಂತೂ ಸೂಪರ್ ಆಗಿತ್ತು. ಆ ಸಮಯದಲ್ಲಿ ನಿಮ್ಮ ನೋಟ ಮತ್ತು ನಟನೆ ತುಂಬಾ ಮಜವಾಗಿತ್ತು" ಎಂದು ಹೇಳುತ್ತಾ ರಣವೀರ್ ಸಿಂಗ್ ದೈವದ ಕೂಗನ್ನು ಮಿಮಿಕ್ರಿ ಮಾಡಲು ಯತ್ನಿಸಿದ್ದರು.

ಕೋರ್ಟ್ ಆದೇಶದಂತೆ ಮೈಸೂರಿಗೆ ಭೇಟಿ
ತುಳುನಾಡಿನ ದೈವವನ್ನು 'ಹೆಣ್ಣು ದೆವ್ವ' ಎಂದು ಕರೆದದ್ದು ಮತ್ತು ಪವಿತ್ರ ದೈವದ ಶಕ್ತಿಯನ್ನು ಹಾಸ್ಯ ಮಾಡಿದ್ದನ್ನು ಕಂಡು ಕರಾವಳಿಯ ದೈವಾರಾಧಕರು ಹಾಗೂ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ರಣವೀರ್ ವಿರುದ್ಧ ಕಾನೂನು ಹೋರಾಟವೂ ಆರಂಭವಾಗಿ, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ಗಂಭೀರತೆಯನ್ನು ಅರಿತ ರಣವೀರ್ ಸಿಂಗ್ ಈ ಹಿಂದೆ ತಮ್ಮ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಅಲ್ಲದೆ, ಪ್ರಕರಣದ ವಿಚಾರಣೆ ವೇಳೆ ರಣವೀರ್ ಸಿಂಗ್ ಅವರ ಪರ ವಕೀಲರು, "ತಮ್ಮ ಕಡೆಯಿಂದ ತಪ್ಪಾಗಿದ್ದು, ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದಾಗಿ, ಕ್ಷಮೆ ಕೇಳುವುದಾಗಿ" ನ್ಯಾಯಾಲಯಕ್ಕೆ ಲಿಖಿತ ಭರವಸೆ ನೀಡಿದ್ದರು.
ರಹಸ್ಯವಾಗಿ ಬಂದು ಪ್ರಾರ್ಥಿಸಿದ ನಟ
ಕೋರ್ಟ್‌ಗೆ ನೀಡಿದ ಮಾತಿನಂತೆ ರಣವೀರ್ ಸಿಂಗ್ ಯಾರಿಗೂ ಮುನ್ಸೂಚನೆ ನೀಡದೆ ರಹಸ್ಯವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು. ಯಾವುದೇ ಸೆಲೆಬ್ರಿಟಿ ಹಮ್ಮಿಲ್ಲದೆ ಸಾಮಾನ್ಯ ಭಕ್ತರಂತೆ ತಾಯಿಯ ದರ್ಶನ ಪಡೆದರು. ದೇವಸ್ಥಾನದ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ನಟ, ಗರ್ಭಗುಡಿಯ ಆವರಣದಲ್ಲಿ ನೆಲದ ಮೇಲೆ ಕುಳಿತು, ಕೈಮುಗಿದು, ತಾಯಿಯ ಸನ್ನಿಧಿಯಲ್ಲಿ ಕ್ಷಮೆ ಯಾಚಿಸಿದ್ದಾರೆ. ಸದ್ಯ ರಣವೀರ್ ಸಿಂಗ್ ದೇವಸ್ಥಾನದಲ್ಲಿ ಪ್ರಾರ್ಥಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ಈ ಭೇಟಿಯೊಂದಿಗೆ ಕರಾವಳಿಯ ದೈವ ಮತ್ತು ಚಾಮುಂಡಿ ತಾಯಿಗೆ ಅಪಚಾರ ಎಸಗಿದ್ದಾರೆ ಎಂಬ ಆರೋಪ ಹೊತ್ತಿದ್ದ ರಣವೀರ್ ಸಿಂಗ್ ವಿವಾದಕ್ಕೆ ಕೊನೆಗೂ ತೆರೆ ಬಿದ್ದಂತಾಗಿದೆ. ಕಾಂತಾರ ಸಿನಿಮಾದಲ್ಲಿನ ದೈವದ ಬಗ್ಗೆ ರಿಷಬ್ ಶೆಟ್ಟಿ ಎದುರೇ ರಣವೀರ್ ಸಿಂಗ್ ತಮಾಷೆಯಾಗಿ ಅಣಕಿಸಿದ್ದರು. ಇದನ್ನು ರಿಷಬ್ ಅಲ್ಲಿಯೇ ತಡೆದಿದ್ದರು. ಈ ವಿಡಿಯೋ ವೈರಲ್ ಆಗಿತ್ತು.













Click it and Unblock the Notifications