Raktha Kashmira: ಒಂದೇ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟರು, ವೈರಲ್ ಆಯ್ತು ರಕ್ತ ಕಾಶ್ಮೀರ ಪ್ರೋಮೋ
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ ಕನ್ನಡ ಸಿನಿಮಾ 'ರಕ್ತ ಕಾಶ್ಮೀರ' (Raktha Kashmira) ಹಲವು ವರ್ಷಗಳ ಬಳಿಕ ಬಿಡುಗಡೆಯಾಗಲು ಸಿದ್ಧವಾಗಿದ್ದು, ಚಿತ್ರದ ಹೊಸ ಪ್ರೋಮೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಅನೇಕ ದಿಗ್ಗಜ ಸ್ಟಾರ್ ನಟರು ಒಂದೇ ಹಾಡಿನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ಹೆಜ್ಜೆ ಹಾಕಿದ ಅಪ್ಪು, ವಿಷ್ಣು, ಅಂಬಿ
'ರಕ್ತ ಕಾಶ್ಮೀರ' ಚಿತ್ರದ "ಸ್ಟಾರ್ ಸ್ಟಾರ್" ಹಾಡಿನ ಅಧಿಕೃತ ಪ್ರೋಮೋ ಬಿಡುಗಡೆಯಾಗಿದ್ದು, ಗಾನಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಮಧುರ ಧ್ವನಿಯಲ್ಲಿ ಸ್ಯಾಂಡಲ್‌ವುಡ್‌ನ ಲೆಜೆಂಡರಿ ನಟರು ಪರದೆಯ ಮೇಲೆ ಮಿಂಚಿದ್ದಾರೆ. ಈ ಹಾಡಿನಲ್ಲಿ ಸ್ಯಾಂಡಲ್‌ವುಡ್ ನಟರಾದ ಡಾ.ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಷ್, ಪ್ರಣಯ ರಾಜ ಶ್ರೀನಾಥ್, ಜಗ್ಗೇಶ್, ರಮೇಶ್ ಅರವಿಂದ್, ಆದಿತ್ಯ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಜೈ ಜಗದೀಶ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸೇರಿದಂತೆ ಅನೇಕ ಸ್ಟಾರ್ ನಟರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶೇಷವೆಂದರೆ ಕನ್ನಡದ ಸ್ಟಾರ್ ನಟರೆಲ್ಲ ಒಂದೇ ಹಾಡಿನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಪುನೀತ್ ರಾಜ್‌ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದರಿಂದ ಅವರ ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ. ಸ್ಟಾರ್ ವಾರ್‌ಗೆ ಸೆಡ್ಡು ಹೊಡೆಯುವಂತಿದೆ ಈ ಸ್ಟಾರ್ ಸ್ಟಾರ್ ಎನ್ನುತ್ತಿದ್ದಾರೆ ನಟರ ಅಭಿಮಾನಿಗಳು. ಈ ಸಿನಿಮಾ ಅವರೆಲ್ಲ ಇದ್ದಾಗಲೇ ರಿಲೀಸ್ ಆಗಿದ್ದರೆ ಚೆನ್ನಾಗಿರುತ್ತಿತ್ತು ಎಂದೂ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
19 ವರ್ಷಗಳ ಹಿಂದಿನ ಸಿನಿಮಾ
ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ರಕ್ತ ಕಾಶ್ಮೀರ' ಸುಮಾರು 19 ವರ್ಷಗಳ ಬಳಿಕ ತೆರೆಗೆ ಬರಲು ಸಜ್ಜಾಗಿರುವ ಬಹುಚರ್ಚಿತ ಆ್ಯಕ್ಷನ್ ಸಿನಿಮಾ. ಈ ಚಿತ್ರದಲ್ಲಿ ಉಪೇಂದ್ರ ಮತ್ತು ರಮ್ಯಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಕಾಶ್ಮೀರ ವಿವಾದ ಹಾಗೂ ಉಗ್ರಗಾಮಿ ನಿಗ್ರಹದ ಹಿನ್ನೆಲೆಯ ಕಥಾವಸ್ತುವನ್ನು ಒಳಗೊಂಡಿದೆ. ಒಂದೇ ಹಾಡಿನಲ್ಲಿ 14ಕ್ಕೂ ಹೆಚ್ಚು ಸ್ಟಾರ್ ನಟರು ಅಭಿನಯಿಸಿರುವುದು ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅಪರೂಪದ ಮಲ್ಟಿಸ್ಟಾರರ್ ಸಂಯೋಜನೆ ಹೊಂದಿರುವ ಈ ಸಿನಿಮಾ ಜನವರಿ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾದ ಪ್ರೋಮೋಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, 'ರಕ್ತ ಕಾಶ್ಮೀರ' ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ರಾಜೇಂದ್ರ ಸಿಂಗ್ ಬಾಬು ಅವರು 2007ರಲ್ಲಿ ಈ ಸಿನಿಮಾ ಘೋಷಿಸಿದ್ರು. ಆಗಿನ ಕಾಲಕ್ಕೇ ಇದು ಬಿಗ್ ಬಜೆಟ್ ಸಿನಿಮಾ ಎಂದು ಹೇಳಲಾಗಿತ್ತು. ಮೊದಲಿಗೆ ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಎಂದು ಟೈಟಲ್ ಇಡಲಾಗಿತ್ತು. ಆಗಿನ ಕಾಲಕ್ಕೆ ಬಿಗ್ ಬಜೆಟ್ ಸಿನಿಮಾ ಆಗಿತ್ತು. ಗ್ರಾಫಿಕ್ಸ್ ಕೂಡ ಬಳಸುವುದಾಗಿ ಹೇಳಿಕೊಂಡಿತ್ತು. ಈ ಸಿನಿಮಾ ಅದ್ದೂರಿಯಾಗಿ ಸೆಟ್ಟೇರಿ ಶೂಟಿಂಗ್ ಕೂಡ ಪೂರ್ಣಗೊಂಡಿತ್ತು. ಆದರೆ ರಿಲೀಸ್ ಆಗಲು ವಿಘ್ನಗಳು ಎದುರಾಗಿದ್ದವು. ಪ್ರೊಡಕ್ಷನ್ ಕೆಲಸಗಳು ಸಹ ನಡೆದರೂ ಹಲವು ಕಾರಣಗಳಿಂದ ಈ ಸಿನಿಮಾ ಥಿಯೇಟರ್‌ಗಳಿಗೆ ಬರಲು ಸಾಧ್ಯವೇ ಆಗಲಿಲ್ಲ. ಈಗ ಕೊನೆಗೂ ರಕ್ತ ಕಾಶ್ಮೀರ ಎನ್ನುವ ಟೈಟಲ್ ಮೂಲಕ ಈ ಸಿನಿಮಾ ರಿಲೀಸ್ ಆಗಲು ರೆಡಿಯಾಗಿದೆ.












Click it and Unblock the Notifications