Raghu Dixit Marriage: ಖ್ಯಾತ ಗಾಯಕಿ ಜೊತೆ ರಘು ದೀಕ್ಷಿತ್ ಎರಡನೇ ಮದುವೆ
ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ (Raghu Dixit) ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ರಘು ದೀಕ್ಷಿತ್ ಈ ಹಿಂದೆ ಕೊರಿಯೋಗ್ರಾಫರ್ ಹಾಗೂ ಡ್ಯಾನ್ಸರ್ ಮಯೂರಿ ಉಪಾಧ್ಯ ಅವರನ್ನು ವಿವಾಹವಾಗಿದ್ದರು. ವೈಯಕ್ತಿಕ ಕಾರಣಗಳಿಂದ 2019ರಲ್ಲಿ ಪರಸ್ಪರ ಡಿವೋರ್ಸ್ ಪಡೆದು ದೂರಾಗಿದ್ದರು. ಆರು ವರ್ಷಗಳ ಬಳಿಕ ರಘು ದೀಕ್ಷಿತ್ ಎರಡನೇ ಮದುವೆಗೆ ನಿರ್ಧರಿಸಿದ್ದು, ಖ್ಯಾತ ಗಾಯಕಿ ಜೊತೆ ಹಸೆಮಣೆ ಏರುವುದು ಖಚಿತವಾಗಿದೆ.
ಕನ್ನಡದ ಖ್ಯಾತ ಗಾಯಕಿ ಹಾಗೂ ಗ್ರ್ಯಾಮಿ-ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ (Varijashree Venugopal) ಅವರೊಂದಿಗೆ ರಘು ದೀಕ್ಷಿತ್ ಎರಡನೇ ಮದುವೆ ಆಗಲಿದ್ದಾರೆ. ಇದೇ ಅಕ್ಟೋಬರ್ ತಿಂಗಳಲ್ಲಿ ಇಬ್ಬರ ಮದುವೆ ಸಮಾರಂಭ ನಿಶ್ಚಯವಾಗಿದೆ. ರಘು ಹಾಗೂ ವಾರಿಜಶ್ರೀ ಇಬ್ಬರೂ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಹಲವು ವೇದಿಕೆಗಳಲ್ಲಿ ಒಟ್ಟಿಗೆ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

ವಾರಿಜಶ್ರೀ ವೇಣುಗೋಪಾಲ್ ಅವರು ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿಯಾಗಿದ್ದು, ಕೊಳಲು ವಾದಕಿ ಕೂಡ ಹೌದು. ಮೂಲತಃ ಸಂಗೀತ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ರಘು ದೀಕ್ಷಿತ್ ಅವರೊಂದಿಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ರಘು ದೀಕ್ಷಿತ್ ಹಾಗೂ ವಾರಿಜಶ್ರೀ ವೇಣುಗೋಪಾಲ್ ಅವರು ಸಾಕಷ್ಟು ಆಲ್ಬಂಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಏಕಾಂಗಿಯಾಗಲು ನಿರ್ಧರಿಸಿದ್ದೆ
"ನನ್ನ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಇದೆಲ್ಲವೂ ಆಕಸ್ಮಿಕವಾಗಿ ಹುಟ್ಟಿಕೊಂಡಿತು. ನನ್ನ ಜೀವನದ ಉಳಿದ ಭಾಗವನ್ನ ಒಂಟಿಯಾಗಿ ಮತ್ತು ಏಕಾಂಗಿಯಾಗಿ ಕಳೆಯಲು ಸಿದ್ಧನಾಗಿದ್ದೆ. ಆದರೆ, ಜೀವನಕ್ಕೆ ಬೇರೆ ಪ್ಲ್ಯಾನ್‌ಗಳಿದ್ದವು. ಬಲವಾದ ಸ್ನೇಹದಿಂದ ಆರಂಭವಾಗಿ ಸಹಜವಾಗಿ ಪ್ರೀತಿ ಮತ್ತು ಒಡನಾಟವಾಗಿ ಬೆಳೆದಿದೆ. ವಾರಿಜಶ್ರೀ ಅವರ ಪೋಷಕರ ಆಶೀರ್ವಾದದೊಂದಿಗೆ ನಮ್ಮ ಜೀವನದ ಈ ಹೊಸ ಅಧ್ಯಾಯವನ್ನ ಒಟ್ಟಿಗೆ ಶುರು ಮಾಡಲು ನಾವು ಉತ್ಸುಕರಾಗಿದ್ದೇವೆ" ಎಂದು ರಘು ದೀಕ್ಷಿತ್ ಹೇಳಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ರಘು ದೀಕ್ಷಿತ್ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿತ್ತು. ಆಗ ಪತ್ನಿ ಮಯೂರಿ ಅವರೊಂದಿಗೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಡಿವೋರ್ಸ್ ಪಡೆದಿದ್ದರು. ಈಗ ಎರಡನೇ ಮದುವೆ ವಿಚಾರವನ್ನು ರಘು ದೀಕ್ಷಿತ್ ಕನ್ಫರ್ಮ್ ಮಾಡಿದ್ದಾರೆ.
ವಾರಿಜಶ್ರೀ ಹಿನ್ನೆಲೆ
ಮೂಲತಃ ಬೆಂಗಳೂರಿನವರಾದ ವಾರಿಜಶ್ರೀ ವೇಣುಗೋಪಾಲ್, ಗ್ರ್ಯಾಮಿ ನಾಮನಿರ್ದೇಶಿತ ಭಾರತೀಯ ಗಾಯಕಿ ಮತ್ತು ಕೊಳಲುವಾದಕಿಯಾಗಿ ಪ್ರಸಿದ್ಧಿ ಪಡೆದಿದ್ದಾರೆ. "ಎ ರಾಕ್ ಸಮ್‌ವೇರ್" ಕೃತಿಗಾಗಿ ತಮ್ಮ ಮೊದಲ ಗ್ರ್ಯಾಮಿ ನಾಮನಿರ್ದೇಶನವನ್ನು ಪಡೆದರು. ಕರ್ನಾಟಕ ಸಂಗೀತ ಮತ್ತು ಜಾಝ್ ಮಿಶ್ರಣವಾದ "ಕರ್ನಾಟಿಕ್ ಸ್ಕ್ಯಾಟ್ ಸಿಂಗಿಂಗ್" ಎಂಬ ಕಲಾ ಪ್ರಕಾರದ ಸೃಷ್ಟಿಕರ್ತರೂ ಆಗಿದ್ದಾರೆ. ಕನ್ನಡದ ಪ್ರಿಯೆ, ಕಡಲ ತೀರದ ಭಾರ್ಗವ, ಟಗರು, ಆಚಾರ್ ಮತ್ತು ಕಂಪನಿ ಸಿನಿಮಾಗಳಲ್ಲಿಯೂ ವಾರಿಜಶ್ರೀ ಹಾಡಿದ್ದಾರೆ. ಕನ್ನಡ, ತಮಿಳು, ತೆಲುಗು ಸಿನಿಮಾರಂಗದಲ್ಲಿ ಅವರು ಕೆಲಸ ಮಾಡಿದ್ದಾರೆ.












Click it and Unblock the Notifications