ದರ್ಶನ್ ಹೇಳಿದ್ದನ್ನು ನಾನು ತಪ್ಪದೇ ಪಾಲಿಸುತ್ತೇನೆ , ಮದುವೆ ಆಸೆ ಸದ್ಯಕ್ಕಿಲ್ಲ: ರಚಿತಾ ರಾಮ್
ದರ್ಶನ್ ಅಂದರೆ ರಚಿತಾ ರಾಮ್‌ಗೆ ಅಭಿಮಾನ. ಇದೀಗ ಹಿರಿಯ ಪತ್ರಕರ್ತ ಜೋಗಿ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಚಿತಾ, ದರ್ಶನ್ ಮಾತನ್ನು ಚಾಚೂ ತಪ್ಪದೆ ಪಾಲಿಸ್ತೀನಿ ಅನ್ನುವ ಮೂಲಕ ಮತ್ತೊಮ್ಮೆ ತನ್ನ ಅಭಿಮಾನವನ್ನು ಪ್ರದರ್ಶಿಸಿದ್ದಾರೆ.
ರಚಿತಾ ರಾಮ್ ಸಿನಿಮಾರಂಗಕ್ಕೆ ಬಂದು 14 ವರ್ಷಗಳಾಗಿವೆ. ಆ ನಿಟ್ಟಿನಲ್ಲಿ ʼಕನ್ನಡಪ್ರಭʼ ಪತ್ರಿಕೆಯ ಪುರವಣಿಯ ಸಂಪಾದಕ ಜೋಗಿ ಅವರಿಗೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಅವರು ತನ್ನ ಸಿನಿಮಾ ಜರ್ನಿಯ ಏರಿಳಿತಗಳನ್ನು ದಾಖಲಿಸಿದ್ದಾರೆ.

ಪ್ರತಿ ಭಾನುವಾರ ಅವರ ಮನೆ ಮುಂದೆ 100-150 ಮಂದಿ ಕಾಯುತ್ತಿರುತ್ತಾರಂತೆ. ನಾನು ಅವರನ್ನು ಭೇಟಿ ಮಾಡುತ್ತೀನಿ. ದರ್ಶನ್ ಹೇಳಿಕೊಟ್ಟ ಪಾಠ ಇದು. ಅಭಿಮಾನಿಗಳು ಪ್ರೀತಿಯಿಂದ ಬಂದಾಗ ಭೇಟಿ ಮಾಡಿ, ಒಂದು ಫೋಟೋ ತಗೊಂಡು ಹೋಗ್ತಾರೆ ಅಷ್ಟೇ. ಅವರಿಗೆ ನಿರಾಸೆ ಮಾಡಬಾರದು ಅಂತ ದರ್ಶನ್ ಹೇಳಿದ್ದರು. ನಾನು ಅದನ್ನು ಈಗಲೂ ಪಾಲಿಸುತ್ತಾ ಬಂದಿದ್ದೀನಿ ಅಂತಾರೆ ರಚಿತಾ.
ರಚಿತಾ ರಾಮ್‌ಗೆ ಬೇರೆ ಭಾಷೆಗಳಲ್ಲೂ ಅಕಾಶಗಳು ಬಂದಿದ್ದವು. ಆದ್ರೆ ನಾನು ಕನ್ನಡದ ಹುಡುಗಿ, ಬೆಂಗಳೂರು ಹುಡುಗಿ, ಹತ್ತು ವರ್ಷ ಇಲ್ಲಿಯೇ ಕಂಪ್ಲೀಟ್ ಮಾಡಬೇಕು ಅನ್ನಿಸಿತ್ತು. ನಮ್ಮ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸಬೇಕು ಅಂತ ಪಣ ತೊಟ್ಟಿದ್ದೆ. ಬೇರೆ ಭಾಷೆಗಳಲ್ಲಿಯೂ ಅವಕಾಶ ಬಂದಿತ್ತು. ಆದರೆ ಹತ್ತು ವರ್ಷ ಪಟ್ಟು ಹಿಡಿದು ಇಲ್ಲೇ ಇರಲು ನಿರ್ಧರಿಸಿದ್ದೆ ಎನ್ನುತ್ತಾರೆ ರಚಿತಾ. ಮಧ್ಯೆ ಒಂದು ಬ್ರೇಕ್ ಸಿಕ್ಕಾಗ, ಮನೆಯಲ್ಲೇ ಕೂತಿದ್ದಾಗ ಒಂದು ತೆಲುಗು ಸಿನಿಮಾದಲ್ಲಿ ನಟಿಸಿದರಂತೆ.
ರಚಿತಾ ಪ್ರಕಾರ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ವೃತ್ತಿಪರತೆಯೇ ಇಲ್ಲ ಅಂತ ಕೆಲವೊಮ್ಮೆ ಅನಿಸ್ತಾ ಇರುತ್ತಂತೆ. ಇಲ್ಲಿ ಒಂಥರ ಈಗೋ ಇದೆ. ಅವರನ್ನೇನು ಕರೆಯೋದು, ಅವರನ್ನು ಯಾಕೆ ಕರೀಬೇಕು ಅಂತೆಲ್ಲ ಅಂದುಕೊಳ್ಳುತ್ತಾರೆ. ಒಂದು ವರ್ಕ್‌ಶಾಪ್ ಮಾಡಿದರೆ ತಾನೇ ನಾವೇನು ಅಂತ ನಿರ್ದೇಶಕರಿಗೆ ಗೊತ್ತಾಗೋದು, ವೆಟ್ರಿಮಾರನ್ ಸಿನಿಮಾ ಮಾಡೋ ಮೊದಲು ವರ್ಕ್‌ಶಾಪ್ ಮಾಡ್ತಾರೆ. ಇಲ್ಲಿ ಅಂಥ ಅಭ್ಯಾಸವೇ ಇಲ್ಲ. ಸುಮ್ಮನೆ ಅವರು ಒಪ್ಪೋದಿಲ್ಲ, ಸೂಟ್ ಆಗೋದಿಲ್ಲ ಅಂದು ಬಿಡುತ್ತಾರೆ ಎಂಬ ಬೇಜಾರನ್ನು ರಚಿತಾ ಹೊರಹಾಕಿದ್ದಾರೆ.
ಪ್ರತಿ ಹೊಸ ಸಿನಿಮಾದಲ್ಲಿ ನಟಿಸುವಾಗಲೂ ಇದೇ ಮೊದಲ ಸಿನಿಮಾ ಅನಿಸ್ತಾ ಇರುತ್ತಂತೆ ಅವರಿಗೆ. ಈಗಲೂ ಹೊಸ ಸಿನಿಮಾ ಒಪ್ಪಿಕೊಂಡಾಗ ಸಣ್ಣ ಅಧೀರತೆ ಕಾಡುತ್ತದೆ. ಇದೇ ಮೊದಲ ಸಿನಿಮಾ ಎಂಬಂತೆ ಅಂಜುತ್ತಾ ಸೆಟ್ಟಿಗೆ ಹೋಗುತ್ತೇನೆ. ಫಸ್ಟ್ ಶಾಟ್ ಒಪ್ಪಿಗೆಯಾಗುತ್ತಿದ್ದಂತೆ ಆತ್ಮವಿಶ್ವಾಸ ಮರಳುತ್ತದೆ. ಮೊದಲ ಚಿತ್ರ ಮಾಡುವಾಗ ಇದ್ದ ಮುಗ್ಧತೆ ಈಗಲೂ ನನ್ನಲ್ಲಿ ಉಳಿದಿದೆ ಅಂತ ನನಗೆ ಅನ್ನಿಸುತ್ತೆ. ಅಭಿನಯದಲ್ಲಿ ಬೆಳೆದಿದ್ದೀನಿ, ಬೆಳೆಯಲೇ ಬೇಕಲ್ಲ, ಮಿಕ್ಕಂತೆ ಆಗ ಹೇಗಿದ್ದೆನೋ ಹಾಗೆಯೇ ಇದ್ದೇನೆ ಅನ್ನೋದು ರಚಿತಾ ಅಭಿಪ್ರಾಯ.
ಡಿಂಪಲ್ ಕ್ವೀನ್ ಅಂತ ಅಭಿಮಾನಿಗಳಿಂದ ಕರೆಸಿಕೊಂಡ ರಚಿತಾಗೆ ಅತ್ಯುತ್ತಮ ನಟಿ ಅನ್ನಿಸಿಕೊಳ್ಳುವ ಆಸೆ ಇದೆಯಂತೆ. ಪ್ರೇಕ್ಷಕರು ಹೇಗೆ ಕರೆದರೂ ಮೆಚ್ಚಿಕೊಂಡರೂ ನನಗೆ ಇಷ್ಟ. ನಾನಿಲ್ಲಿಗೆ ಬಂದಿದ್ದು ಕೆಲಸ ಮಾಡೋದಕ್ಕೆ ಅಷ್ಟೇ. ಅದನ್ನು ಮೆಚ್ಚಿಕೊಂಡು ಅವರು ಕ್ವೀನ್ ಅಂತ ಕರೆದರೆ ಸಂತೋಷ ಆಗುತ್ತೆ ಅಂತಾರೆ.
ಕನ್ನಡದಲ್ಲಿ ಒಂದರ ಹಿಂದೊಂದರಂತೆ ದೊಡ್ಡ ಸಿನಿಮಾ ಮಾಡಿದ್ದೀನಿ. ರಕ್ಷಿತಾ ಮತ್ತು ರಮ್ಯಾರ ನಂತರ ಎಲ್ಲರ ಜತೆಗೂ ವರ್ಕ್ ಮಾಡಿದವಳು ನಾನು ಅನ್ನುವ ಅಭಿಮಾನ ಅವರ ಬಗ್ಗೆಯೇ ಅವರಿಗೆ ಇದೆ.
ರಚಿತಾ ಮೇಕಪ್ ಇಲ್ಲದೆಯೂ ನಟಿಸಿದ್ದಾರೆ. ಅದು ತುಂಬಾ ಚಾಲೆಂಜಿಂಗ್ ಆಗಿತ್ತಂತೆ. ಕೂಲಿ ಚಿತ್ರದಲ್ಲಿ ಸನ್‌ಸ್ಕ್ರೀನ್, ಮಾಯಿಶ್ಚರೈಸರ್ ಅಷ್ಟೇ. ಕಾಡಿಗೆ ಹಾಕೋದಕ್ಕೂ ಬಿಡುತ್ತಿರಲಿಲ್ಲ. ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ಟ್ಯಾನ್ ಮೇಕಪ್ ಅಂದರೆ ಬಿಸಿಲಿಗೆ ಸುಟ್ಟಂತೆ ಕಾಣುವ ಹಾಗೆ ಮೇಕಪ್ ಮಾಡಿದ್ದಾರೆ. ಗ್ರೇಡಿಂಗ್‌ನಲ್ಲೂ ಬಹಳ ಡಲ್ ಮಾಡಿದ್ದಾರೆ. ಮೇಕಪ್ ಇಲ್ಲದೇ ನಟಿಸೋದು ನಿಜಕ್ಕೂ ಸವಾಲಂತೆ.
ಪಾನ್ ಇಂಡಿಯಾ ಸಿನಿಮಾ ಅಂತ ಬೇರೆ ಭಾಷೆಯವರನ್ನೇ ಹಾಕಿಕೊಳ್ಳುವ ಬಗ್ಗೆ ರಚಿತಾಗೆ ಅಸಮಾಧಾನ. ಕನ್ನಡದವರನ್ನೇ ಹಾಕಿಕೊಂಡು ಪ್ಯಾನ್ ಇಂಡಿಯಾ ಚಿತ್ರ ಮಾಡೋದಕ್ಕಾಗಲ್ವಾ ಅಂತ ಕೇಳ್ತಾರೆ ರಚಿತಾ. ಕಾಂತಾರದ ಥರ ಕನ್ನಡದ ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಆಗಬಹುದಲ್ಲ. ಕೂಲಿಯಲ್ಲಿ ನಾನು, ಉಪೇಂದ್ರ ಹಾಗೂ ಎಲ್ಲಾ ಭಾಷೆಯವರೂ ಇದ್ದಾರೆ. ಟಾಕ್ಸಿಕ್ ಸಿನಿಮಾದಲ್ಲೂ ಎಲ್ಲಾ ದಕ್ಷಿಣ ಭಾರತೀಯ ಭಾಷೆಯವರಿಗೂ ಅವಕಾಶ ಕೊಟ್ಟಿದ್ದಾರೆ. ಲೋಕಲ್ ಆಗಿದ್ದೇ ಗ್ಲೋಬಲ್ ಆಗಬೇಕು ಅನ್ನೋದು ಅವರ ಅಭಿಪ್ರಾಯ.
ರಚಿತಾಗೆ ಬಹಳ ಬೇಗ ಸಿಟ್ಟು ಬರುತ್ತಂತೆ. ಸುಳ್ಳು ಹೇಳಿದರೆ, ನಾಟಕ ಮಾಡಿದರೆ ಬಹಳ ಕೋಪ ಬರುತ್ತೆ. ಆದರೆ ಸಿಟ್ಟು ಬಂದಾಗ ಕಿರುಚೋದಿಲ್ಲ, ಸುಮ್ಮನೆ ಎದ್ದು ಬರ್ತಾರಂತೆ.
ಹಾಗೆಯೇ ರಚಿತಾಗೆ ಪ್ರಶಸ್ತಿಗಳ ಮೇಲೆ ಆಸೆ ಇಲ್ಲದಿಲ್ಲ. ರಾಷ್ಟ್ರಪ್ರಶಸ್ತಿಯ ಮೇಲೂ ಆಸೆ ಇದೆ. ಹಾಗಂತ ಕಾಯಲು ಅವರು ತಯಾರಿದ್ದಾರೆ. ಇಲ್ಲಿಯ ತನಕ ಅಂಥ ಅವಕಾಶ, ಸನ್ನಿವೇಶ ಬಂದಿಲ್ಲ. ಮುಂದೆ ಬರಬಹುದು, ಭಗವಂತ ನನಗೆ ಮೋಸ ಮಾಡೋದಿಲ್ಲ, ಅಂಥ ಒಂದು ಪಾತ್ರ ಬರಬಹುದು. ನಟಿಸೋದಕ್ಕೆ ಅವಕಾಶ ಕೊಟ್ಟ ದೇವರು ಪ್ರಶಸ್ತಿ ಕೊಡದೇ ಇರುತ್ತಾನಾ? ಟೈಮ್ ಬರಲಿ ಅಂತ ಕಾಯುತ್ತೇನೆ ಅಂತಾರೆ ಅವರು.
ರಚಿತಾ ಮದುವೆ ಆಗ್ತಾರಾ? ಯಾವಾಗ? ಇದು ಮಿಲಿಯನ್ ಡಾಲರ್ ಪ್ರಶ್ನೆ. ಕಳೆದ ವರ್ಷದ ತನಕ ಬಹಳ ಆಸೆಯಿತ್ತಂತೆ. ಅಮ್ಮ ಅಪ್ಪಂಗೆ ಮುಂದಿನ ವರ್ಷ ಮದುವೆ ಮಾಡಬೇಕು ಅಂತ ಹೇಳಿ ಕುಣೀತಿದ್ದೆ. ಆದರೆ ಬರ್ತಾ ಬರ್ತಾ ಇಮೋಷನ್‌ಗೆ ಮತ್ತು ರಿಲೇಷನ್‌ಶಿಪ್‌ಗೆ ಯಾರೂ ಮರ್ಯಾದೆ ಕೊಡ್ತಾ ಇಲ್ಲ ಅಂತ ಅನ್ನಿಸೋದಕ್ಕೆ ಶುರುವಾಯ್ತು. ಇವತ್ತಿನ ಖುಷಿ, ಇವತ್ತಿಗೆ ಮಾತ್ರ. ಕ್ಷಣ ಕ್ಷಣದ ಬದುಕು ಮುಖ್ಯ ಅಂತ ಎಲ್ಲರಿಗೂ ಅನ್ನಿಸ್ತಿದೆ. ನಮ್ಮ ಅಪ್ಪ ಅಮ್ಮನ ಸಂಬಂಧದಂತೆ ಏನೇ ಆದರೂ ಜತೆಗಿರಬೇಕು ಅನ್ನೋ ಭಾವನೆ ಕಾಣಿಸ್ತಿಲ್ಲ. ಮಾತು ಮಾತಿಗೆ ಡೈವೋರ್ಸ್ ಅಂತಾಗಿದೆ. ಅಂಥದ್ದಕ್ಕೆ ಯಾಕೆ ಟೈಮ್ ವೇಸ್ಟ್ ಮಾಡಬೇಕು ಅಂತ ಫಿಲಾಸಫಿ ಮಾತಾಡ್ತಾರೆ ರಚಿತಾ. ತಾಳ್ಮೆ ಇಲ್ಲದೇ ಹೋದಾಗ ಸಂಬಂಧವನ್ನು ನಿಭಾಯಿಸೋದು ಕಷ್ಟ. ಇದರ ಮಧ್ಯೆ ಈಗೋ, ಸಂಪಾದನೆ, ಅಹಂಕಾರ ಎಲ್ಲ ಬರುತ್ತೆ. ಸದ್ಯಕ್ಕೆ ನಾನು ದೇವರು ಕೊಟ್ಟ ಕೆಲಸವನ್ನು ಮಾಡ್ತಾ ಹೋಗ್ತೀನಿ. ಎಲ್ಲವನ್ನೂ ಅವನಿಗೇ ಬಿಟ್ಟಿದ್ದೀನಿ. ಮುಂದೆ ನೋಡೋಣ ಅನ್ನೋದು ಅವರ ಮಾತು.
(ಬರಹ: ಭವಾನಿ ಭಟ್)















Click it and Unblock the Notifications