Prem: ಹುಟ್ಟುಹಬ್ಬದಂದೇ ನಟ ಪ್ರೇಮ್‌ಗೆ ಶ್ರುತಿ ನಾಯ್ಡು ಲೀಗಲ್ ನೋಟಿಸ್, ಕಾರಣವೇನು?
ನೆನಪಿರಲಿ ಸಿನಿಮಾ ಖ್ಯಾತಿಯ ಸ್ಯಾಂಡಲ್‌ವುಡ್ ನಟ ಪ್ರೇಮ್ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಿತ್ರರಂಗದ ಅನೇಕರು ಪ್ರೇಮ್ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಈ ವಿಶೇಷ ದಿನದ ಅಂಗವಾಗಿ ಅವರ ಮುಂದಿನ ಸಿನಿಮಾಗಳು ಕೂಡ ಘೋಷಣೆಯಾಗಿ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ. ಇದೇ ಸಂಭ್ರಮದಲ್ಲಿದ್ದ ಪ್ರೇಮ್ ಅವರಿಗೆ ದೊಡ್ಡ ಸಂಕಷ್ಟವೊಂದು ಎದುರಾಗಿದೆ. ಆ ಒಂದು ಎಡವಟ್ಟಿನಿಂದಾಗಿ ನಟ ಪ್ರೇಮ್ ಅವರಿಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆಯೂ ಇದೆ. ಇಷ್ಟಕ್ಕೂ ಪ್ರೇಮ್ ಅವರ ಬರ್ತ್‌ಡೇ ದಿನವೇ ನಡೆದಿರುವ ಕಹಿ ಘಟನೆ ಏನು ಎಂಬ ಎಕ್ಸ್‌ಕ್ಲೂಸಿವ್ ಮಾಹಿತಿ ಇಲ್ಲಿದೆ ನೋಡಿ..
ನಟ ಪ್ರೇಮ್ ಅವರು "ಸ್ಪಾರ್ಕ್" ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಂದು ಅವರ ಹುಟ್ಟುಹಬ್ಬದ ಅಂಗವಾಗಿ ಈ ಸಿನಿಮಾದಲ್ಲಿ ಪ್ರೇಮ್ ಅವರ ಪೋಸ್ಟರ್‌ವೊಂದನ್ನು ಚಿತ್ರತಂಡ ರಿಲೀಸ್ ಮಾಡಿದೆ. ಆದರೆ ಇದೇ ಪೋಸ್ಟರ್‌ನಿಂದಾಗಿ ಪ್ರೇಮ್‌ಗೆ ದೊಡ್ಡ ಸಂಕಷ್ಟವೇ ಎದುರಾಗಿದೆ. ಪೋಸ್ಟರ್‌ನಲ್ಲಿ ಪ್ರೇಮ್ ಅವರು ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೂಟ್ ಹಾಕಿಕೊಂಡಲ್ಲಿ ಕೈಯಲ್ಲಿ ಸಿಗರೇಟ್ ಸೇದುತ್ತಿರುವ ಪೋಸ್ ಅವರ ಅಭಿಮಾನಿಗಳಂತೂ ಖುಷಿಯಾಗಿದ್ದಾರೆ. ಆದ್ರೆ ಇದೇ ಪೋಸ್ಟರ್ ನೋಡಿ ಖ್ಯಾತ ನಿರ್ಮಾಪಕಿ ಶ್ರುತಿ ನಾಯ್ಡು ಅವರು ಗರಂ ಆಗಿದ್ದಾರೆ.

ಇಷ್ಟಕ್ಕೂ ಶ್ರುತಿ ನಾಯ್ಡು ಅವರು ಕೋಪಗೊಳ್ಳುವ ವಿಚಾರ ಕೂಡ ಈ ಪೋಸ್ಟರ್‌ನಲ್ಲಿದೆ. ಶ್ರುತಿ ನಾಯ್ಡು ಅವರ ಪತಿ ರಮೇಶ್ ಇಂದಿರಾ ಅವರು ಕೂಡ ಸಿನಿಮಾಗಳಲ್ಲಿ ಮಿಂಚುತ್ತಿರುವುದು ಗೊತ್ತೇ ಇದೆ. ಪ್ರೇಮ್ ಅವರ ಈ ಸಿನಿಮಾ ಪೋಸ್ಟರ್‌ನಲ್ಲೂ ರಮೇಶ್ ಇಂದಿರಾ ಅವರ ಫೋಟೋ ಬಳಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟರ್‌ನಲ್ಲಿ ರಮೇಶ್ ಇಂದಿರಾ ಇರುವ ಪೇಪರ್‌ಗೆ ಬೆಂಕಿ ಹಚ್ಚಲಾಗಿದ್ದು, ಅದರಿಂದ ಪ್ರೇಮ್ ಅವರು ಸಿಗರೇಟ್ ಹೊತ್ತಿಸಿಕೊಂಡಿರುವಂತೆ ಪೋಸ್ ಕೊಟ್ಟಿದ್ದಾರೆ. ಇದನ್ನು ಕಂಡು ಇಂದಿರಾ ರಮೇಶ್ ಪತ್ನಿ ಶ್ರುತಿ ಅವರು ಕೆಂಡಾಮಂಡಲರಾಗಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ಎಲ್ಲರಿಗೂ ನಮಸ್ಕಾರ, ಈ ಚಿತ್ರ ತಂಡದವರು ತುಂಬಾ ಅನೈತಿಕವಾಗಿ ನಡೆದುಕೊಂಡಿದ್ದಾರೆ. ಈ ಚಿತ್ರದ ಪೋಸ್ಟರ್‌ನಲ್ಲಿ ಪತ್ರಿಕೆಯ ಕಟಿಂಗ್‌ನಲ್ಲಿರುವ ನಟನ ಅನುಮತಿ ಪಡೆಯದೇ ಇರುವುದು, ಸುದ್ದಿ ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಪ್ರಕಟವಾಗುತ್ತಿರುವ ಈ ಪೋಸ್ಟರ್ ಬಗ್ಗೆ ಯಾರೇ ಆದರೂ ಕಾಳಜಿ ವಹಿಸಿಲ್ಲ ಎಂದು ಶ್ರುತಿ ನಾಯ್ಡು ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ಪೋಸ್ಟರ್‌ನಲ್ಲಿ ಬಳಸಲಾದ ಈ ಚಿತ್ರವು ಪತಿ ರಮೇಶ್ ಇಂದಿರಾ ಅವರು ರಾಜಕಾರಣಿಯ ಪಾತ್ರವನ್ನು ನಿರ್ವಹಿಸಿದ ಭೀಮಾ ಚಿತ್ರದಿಂದ ಬಂದಿದೆ. ಈ ನಿರ್ದಿಷ್ಟ ಫೋಟೋವನ್ನು ಭೀಮಾ ಚಿತ್ರಕ್ಕಾಗಿ ತೆಗೆದುಕೊಳ್ಳಲಾಗಿದೆ. ರಮೇಶ್ ಇಂದಿರಾ ಪರವಾಗಿ ಈ ಚಿತ್ರ ತಂಡ ಮತ್ತು ನಟ ಪ್ರೇಮ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಲಾಗುತ್ತಿದೆ ಎಂದು ಶ್ರುತಿ ಅವರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಇದೀಗ ಈ ವಿವಾದ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.












Click it and Unblock the Notifications