ಪೃಥ್ವಿ ಭಟ್ ಸರಿಗಮಪಗೆ ಆಯ್ಕೆ ಆಗಿದ್ದೇಗೆ: ಸಾಧನೆಗೆ ಸಹಾಯ ಮಾಡಿದ್ದು ಯಾರು?
ಕನ್ನಡದ ಜನಪ್ರಿಯ ಗಾಯಕಿ ಪೃಥ್ವಿ ಭಟ್ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಮದುವೆ ವಿಚಾರದಲ್ಲಿ ಆದ ವಿವಾದದಿಂದ ತೆರೆಮರೆಯಲ್ಲಿದ್ದ ಗಾಯಕಿ ಒಮ್ಮೆಲೆ ಮುನ್ನೆಲೆಗೆ ಬರುವಂತಾಯಿತು. ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದಿದ್ದ ಗಾಯಕಿ ಪೃಥ್ವಿ ಭಟ್, ಅದೇ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಎನ್ನುವವರನ್ನು ಪ್ರೀತಿಸಿ ಮದುವೆಯಾದರು.
ಅಭಿಷೇಕ್ ಅವರನ್ನು ಮದುವೆಯಾಗಬೇಕು ಎಂದು ನಿರ್ಧರಿಸಿದ್ದ ಪೃಥ್ವಿ ಭಟ್ ತಂದೆ-ತಾಯಿ ವಿರೋಧದ ನಡುವೆಯೇ ಮನೆಬಿಟ್ಟು ಹೋಗಿ ವಿವಾಹವಾದರು. ಮಗಳು ಮನೆಬಿಟ್ಟು ಹೋಗಿರುವ ನೋವಿನಲ್ಲಿ ಪೃಥ್ವಿ ಭಟ್ ತಂದೆ ಆಡಿಯೋವೊಂದನ್ನು ಹರಿಬಿಟ್ಟಿದ್ದರು. ಇದು ವಿವಾದಕ್ಕೆ ಕಾರಣವಾಯ್ತು. ಪೃಥ್ವಿ ಭಟ್ ತಂದೆಯ ಆಡಿಯೋದಲ್ಲಿ ಒಂದಷ್ಟು ಜನರ ವಿರುದ್ಧ ಆರೋಪ ಮಾಡಲಾಗಿದ್ದು, ಈ ಆರೋಪಕ್ಕೆ ಪೃಥ್ವಿ ಭಟ್ ಸೇರಿದಂತೆ ಆಡಿಯೋದಲ್ಲಿ ಹೆಸರು ಕೇಳಿಬಂದವರು ಸ್ಪಷ್ಟನೆ ನೀಡಿದ್ದರು. ಒಟ್ಟಾರೆ ಪೃಥ್ವಿ ಭಟ್ ಹಾಗೂ ಅಭಿಷೇಕ್ ಮದುವೆ ಒಂದಷ್ಟು ಗೊಂದಲವನ್ನು ಹುಟ್ಟುಹಾಕಿತ್ತು.

ಈ ಹಿನ್ನೆಲೆಯಲ್ಲಿ ಪೃಥ್ವಿ ಭಟ್ ಸುದ್ದಿಯಲ್ಲಿದ್ದು, ಅವರ ಹಳೆಯ ಸಂದರ್ಶನದ ವಿಡಿಯೋಗಳು ಈಗ ಮತ್ತೆ ವೈರಲ್ ಆಗುತ್ತಿದೆ. ಈ ಪೈಕಿ SymphoNy Amps - A Shashi's Music Hub ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪೃಥ್ವಿ ಭಟ್ ತಾವು ಸರಿಗಮಪ ಕಾರ್ಯಕ್ರಮಕ್ಕೆ ಆಯ್ಕೆ ಆಗಿದ್ದೇಗೆ ಎನ್ನುವುದರ ಕುರಿತು ಮಾತನಾಡಿದ್ದಾರೆ.
'ನಾನು ಬಿಕಾಂ ಮೊದಲ ವರ್ಷದಲ್ಲಿ ಇರುವಾಗ ಸರಿಗಮಪಗೆ ಆಯ್ಕೆಯಾದೆ. ಆದರೆ ಎಲ್ಲರಿಗೂ ಗೊತ್ತಿರುವ ಹಾಗೆ ನಾನು ನನ್ನ ಎರಡನೇ ತರಗತಿಯಲ್ಲಿರುವಾಗಿನಿಂದಲೇ ಸರಿಗಮಪ ವೇದಿಕೆಗೆ ಆಯ್ಕೆಯಾಗಲು ಪ್ರಯತ್ನಿಸುತ್ತಿದ್ದೆ. ಅಂದಿನ ಫೋಟೋ ಕೂಡ ಈಗಲೂ ಇದೆ ನನ್ನ ಹತ್ತಿರ. ನನಗಿಂತ ನನ್ನ ಅಪ್ಪ ಅಮ್ಮನಿಗೆ ನಾನು ಈ ಶೋನಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಹೆಚ್ಚಾಗಿತ್ತು' ಎಂದರು.
'ನಾನು ಎರಡನೇ ತರಗತಿಯಲ್ಲಿ ಇರುವಾಗ ನನಗೆ ಸರಿಗಮಪ ಕಾರ್ಯಕ್ರಮದ ವೇದಿಕೆಯ ಬೆಲೆ ಗೊತ್ತಿರಲಿಲ್ಲ. ನನ್ನ ಅಪ್ಪ-ಅಮ್ಮನೇ ನನ್ನನ್ನು ಎಲ್ಲಾ ಆಡಿಷನ್‌ಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಜೊತೆಗೆ ನಾನು ಹಾಡಿನ ಸ್ಪರ್ಧೆಗಳಿಗೆ ಹೋಗುತ್ತಿದ್ದೆ. ನಾನು ಶಾಲೆಗೆ ಹೋಗುತ್ತಿರುವ ದಿನಗಳಿಂದಲೂ ತುಂಬಾ ಸ್ಪರ್ಧೆಗಳಲ್ಲಿ ನಾನು ಭಾಗವಹಿಸಿದ್ದೆ. ನನ್ನ ಶಿಕ್ಷಕಿ ಗಿರಿಜಾ ಹೆಗ್ಡೆ ಅವರು ನನಗೆ ಹಾಡಿನಲ್ಲಿ ಮುಂದುವರಿಯಲು ತುಂಬಾ ಸಹಾಯ ಮಾಡಿದ್ದಾರೆ'.
'ನಾವು ರಾಷ್ಟ್ರ ಮಟ್ಟದ ಹಾಡಿನ ಸ್ಪರ್ಧೆಗಳಿಗೆ ಹೋಗುತ್ತಿದ್ದೇವು. ಗುಜರಾತ್, ದೆಹಲಿಗೆಲ್ಲಾ ಸ್ಪರ್ಧೆಗಳಿಗೆ ಹೋಗುತ್ತಿದ್ದೇವು. ಅದು ನನ್ನಲ್ಲಿರುವ ಭರವಸೆಯನ್ನು ಹೆಚ್ಚಿಸಿತು. ಸ್ಪರ್ಧೆಗಳಿಗೆ ಹೋಗುವುದರಿಂದ ನನ್ನ ಮನಸ್ಸಿನಲ್ಲಿರುವ ಭರವಸೆಯನ್ನು ಹೆಚ್ಚಾಯಿತು. ಸ್ಪರ್ಧೆಗಳಿಗೆ ಹೋದರೆ ಗೆಲ್ಲಬೇಕು ಎಂದು ಅನೇಕರು ಭಾವಿಸುತ್ತಾರೆ. ಆದರೆ ಅದಲ್ಲಾ, ಸ್ಪರ್ಧೆಗಳಿಗೆ ಹೋಗುವುದರಿಂದ ನಮ್ಮಲ್ಲಿನ ಭರವಸೆ ಹೆಚ್ಚಾಗುತ್ತದೆ' ಎಂದು ಹೇಳಿದರು.
'ಸಂಗೀತ ತರಗತಿಗೆ ಹೋಗುವುದು ಒಳ್ಳೆಯದು. ನಮ್ಮ ಜೀವನದಲ್ಲಿ ಒಬ್ಬರು ಗುರು ಅಂತಾ ಬೇಕು. ಆದರೆ ಅದರ ಜೊತೆಗೆ ಹೊರಗಡೆ ಸ್ಪರ್ಧೆಗಳಿಗೆ ಹೋಗಿ ನೋಡಿದಾಗ ಅವರಲ್ಲಿಯೂ ನಮಗೆ ಕಲಿಯಲು ಅವಕಾಶ ಸಿಗುತ್ತದೆ. ಸಂಗೀತ ತರಗತಿಯಲ್ಲಿ ಏನು ಕಲಿಯುತ್ತೇವೋ, ಅದೇ ರೀತಿ ಹೊರಗಡೆ ಸ್ಪರ್ಧೆಗಳಲ್ಲಿಯೂ ನಮಗೆ ಕಲಿಯಲು ಸಿಗುತ್ತದೆ. ನಾನು ಎರಡನೇ ತರಗತಿಯಿಂದ ಸರಿಗಮಪ ವೇದಿಕೆಗಾಗಿ ಪ್ರಯತ್ನ ಪಟ್ಟು ಕೊನೆಗೆ ಸೀಸನ್ 15ಕ್ಕೆ ಆಯ್ಕೆಯಾದೆ. ನಾನು ಆಯ್ಕೆಯಾದ ಕ್ಷಣವನ್ನು ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ' ಎಂದು ಪೃಥ್ವಿ ಭಟ್ ಹೇಳಿದ್ದಾರೆ.












Click it and Unblock the Notifications