ಪ್ರೇಮದ ಊರಲಿ ರಂಗಾಯಣ ರಘುಗೆ ಸಾಷ್ಟಾಂಗ ನಮಸ್ಕರಿಸಿದ ಆ್ಯಂಕರ್ ಅನುಶ್ರೀ, ರಮಿಕಾ ಹುಡುಗ ರೈತನಾದ್ರೂ ಓಕೆಯಂತೆ!
ಒಂದು ಕಾಲದಲ್ಲಿ ಸಿನಿಮಾಗಳು ಶತದಿನೋತ್ಸವ, 200, 300 ದಿನಗಳ ಕಾಲದ ಥಿಯೇಟರ್‌ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದವು. ಆದರೆ ಈಗ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಾಗಿದೆ, ಶೋಗಳೂ ಹೆಚ್ಚಿವೆ. ಹೀಗಾಗಿ ಒಂದು ವಾರ ಸಿನಿಮಾ ಯಶಸ್ವಿಯಾಗಿ ಓಡಿದರೆ ಅದೇ ಹೆಚ್ಚು ಅನ್ನುವ ಮನಸ್ಥಿತಿ ಇದೆ. ಅಂಥಾದ್ದರಲ್ಲಿ ʻಪ್ರೇಮದ ಊರಲಿʼ ಎಂಬ ಹಳ್ಳಿಯ ಕಥೆಯೊಂದು ಯಶಸ್ವಿ ಐವತ್ತು ದಿನಗಳನ್ನು ಪೂರೈಸಿ ಸುದ್ದಿಯಲ್ಲಿದೆ. ವಿಶೇಷ ಅಂದರೆ ಈ ಸಿನಿಮಾದ ಮಹತ್ವದ ಪಾತ್ರದಲ್ಲಿ ಇಡೀ ಸಿನಿಮಾಕ್ಕೆ ಜೀವ ತುಂಬಿದ ಹಿರಿಯ ನಟ ರಂಗಾಯಣ ರಘು ಈ ಸಿನಿಮಾದ ಶಕ್ತಿ ಅಂತಲೇ ಹೇಳಬಹುದು. ಈ ಕಲಾವಿದನ ದೈತ್ಯ ಪ್ರತಿಭೆಯನ್ನು ಕಂಡು ನಿರೂಪಕಿ ಅನುಶ್ರೀ ಅವರ ಪಾದಕ್ಕೆ ಶಿರಬಾಗಿ ನಮಸ್ಕರಿಸಿದರು.

ಕಾಲಿಗೆ ಬೀಳುವಂಥಾ ಪ್ರತಿಭೆ ರಂಗಾಯಣ ರಘು
ಅನುಶ್ರೀ ಅವರ ಈ ನಡೆ ಅವರನ್ನು ಕನ್ನಡಿಗರು ಮತ್ತಷ್ಟು ಮೆಚ್ಚಿಕೊಳ್ಳುವ ಹಾಗೆ ಮಾಡಿದೆ. ನಿರೂಪಕರು ಅಂದರೆ ಡಿಸ್ಟೆನ್ಸ್ ಮೆಂಟೇನ್ ಮಾಡುವ ಕಾಲದಲ್ಲಿ ತನ್ನ ನಿರೂಪಣೆಯಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿ ಆತ್ಮೀಯ ಸರಳ ಶೈಲಿಯಿಂದಲೇ ಎಲ್ಲರಿಗೂ ಹತ್ತಿರವಾಗುವ ಅನುಶ್ರೀ ಇದೀಗ ಈ ಗೆಶ್ಚರ್‌ನಿಂದ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಇನ್ನೊಂದೆಡೆ ಕನ್ನಡ ಚಿತ್ರರಂಗದಲ್ಲಿ ತನ್ನ ವಿಭಿನ್ನ ಮ್ಯಾನರಿಸಂ, ವಿಶಿಷ್ಟ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವವರು ರಂಗಾಯಣ ರಘು. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ಅವರು 'ಪ್ರೇಮದ ಊರಲಿ' ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿ ಭಾಗಿಯಾಗಿದ್ದ ಅನುಶ್ರೀ, ರಂಗಾಯಣ ರಘು ಅವರ ಕಾಲಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ಹಿರಿಯ ಕಲಾವಿದನ ಮೇಲಿನ ಗೌರವವನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ. ಈ ದೃಶ್ಯ ಇದೀಗ ಗಮನ ಸೆಳೆಯುತ್ತಿದೆ.
50 ದಿನಗಳ ಸಂಭ್ರಮದಲ್ಲಿ Premada Oorali
ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾಗಳ ನಡುವೆ ಯಾವುದೇ ಅಬ್ಬರವಿಲ್ಲದೆ ತೆರೆಕಂಡು ಪ್ರೇಕ್ಷಕರ ಮನಸ್ಸು ಗೆದ್ದ ಸಿನಿಮಾ 'ಪ್ರೇಮದ ಊರಲಿ'. ಕಡಿಮೆ ಬಜೆಟ್‌ನಲ್ಲಿ (budget) ನಿರ್ಮಾಣವಾದ ಈ ಚಿತ್ರ ಇದೀಗ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಈ ಖುಷಿಯನ್ನು ಚಿತ್ರತಂಡ ವಿಶೇಷವಾಗಿ ಸಂಭ್ರಮಿಸಿದೆ. ಈ ಕಾರ್ಯಕ್ರಮಕ್ಕೆ ಜನಪ್ರಿಯ ನಿರೂಪಕಿ ಅನುಶ್ರೀ ಆಗಮಿಸಿದ್ದು, ಇಡೀ ತಂಡದೊಂದಿಗೆ ಸಂಭ್ರಮ ಹಂಚಿಕೊಂಡಿದ್ದಾರೆ. ಈ ವೇಳೆ ಹಿರಿಯ ನಟ ರಂಗಾಯಣ ರಘು ಅವರ ಕಾಲಿಗೆ ಅನುಶ್ರೀ ಶಿರಸಾಷ್ಟಾಂಗ ನಮಸ್ಕಾರ ಮಾಡಿರುವುದು ವಿಶೇಷ ಗಮನ ಸೆಳೆದಿದೆ.
ಅನುಶ್ರೀ ಪ್ರಶ್ನೆಗೆ ರಮಿಕಾ ಕೊಟ್ಟ ಉತ್ತರವೇನು?
50 ದಿನಗಳ ಸಂಭ್ರಮದ ಕಾರ್ಯಕ್ರಮದಲ್ಲಿ ಅನುಶ್ರೀ ಕೇವಲ ನಿರೂಪಣೆ ಮಾಡಲಿಲ್ಲ. ಕಲಾವಿದರೊಂದಿಗೆ (artist) ಒಂದಷ್ಟು ತಮಾಷೆಯ ಮಾತುಕತೆಯನ್ನೂ ನಡೆಸಿದರು. ಪ್ರೇಕ್ಷಕರಿಗೂ ತಮ್ಮ ನೆಚ್ಚಿನ ಕಲಾವಿದರಿಗೆ ಪ್ರಶ್ನೆ ಕೇಳುವ ಅವಕಾಶ ನೀಡಲಾಗಿತ್ತು. ಈ ವೇಳೆ ಕೇಳಿಬಂದ ಪ್ರಶ್ನೆ ಮತ್ತು ಕಲಾವಿದರ ಉತ್ತರ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದಿವೆ. ನಾಯಕಿ ರಮಿಕಾ ಶಿವು ಅವರಿಗೆ ಅನುಶ್ರೀ ಕೇಳಿದ ಒಂದು ಪ್ರಶ್ನೆ ವಿಶೇಷವಾಗಿ ಗಮನ ಸೆಳೆದಿದೆ. 'ನಿಮ್ಮ ಹುಡುಗ ರೈತನಾಗಿದ್ದರೆ ಓಕೆನಾ?' ಎಂದು ಅನುಶ್ರೀ ಪ್ರಶ್ನಿಸಿದ್ದಾರೆ. ಇದಕ್ಕೆ ರಾಮಿಕಾ ಕೊಂಚವೂ ಯೋಚಿಸದೇ 'ಓಕೆ' ಎಂದು ಉತ್ತರಿಸಿದ್ದಾರೆ. ಈ ಉತ್ತರ ಕೇಳಿದ ಅನುಶ್ರೀ, 'ಮಾತಂದ್ರೆ ಇದಪ್ಪಾ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಸಂತಾಗೆ ಮೆಚ್ಚುಗೆ
ಚಿತ್ರದಲ್ಲಿ ವಸಂತಾ ಪಾತ್ರದ ಮೂಲಕ ಗಮನ ಸೆಳೆದಿರುವ ರಮಿಕಾ ಶಿವು ಅವರ ಈ ಉತ್ತರ ಕಾರ್ಯಕ್ರಮದಲ್ಲಿದ್ದವರ ಮುಖದಲ್ಲಿ ನಗು ಮೂಡಿಸಿದೆ. ರೈತರ ಬದುಕು, ಕೃಷಿ ಮತ್ತು ರೈತರಿಗೆ ಹೆಣ್ಣು ಸಿಗುವ ವಿಚಾರವನ್ನು ಕಥೆಯ ಪ್ರಮುಖ ಅಂಶವಾಗಿಸಿಕೊಂಡಿರುವ 'ಪ್ರೇಮದ ಊರಲಿ' ಸಿನಿಮಾದ ಹಿನ್ನೆಲೆಯಲ್ಲಿ ಈ ಪ್ರಶ್ನೆ ಮತ್ತಷ್ಟು ವಿಶೇಷವೆನಿಸಿದೆ.
ಶ್ರೀರಾಮ್‌ಗೆ ಯುವತಿಯ ಪ್ರಶ್ನೆ, ಉತ್ತರ ಕೇಳಿ ನಾಚಿದ ಹುಡುಗಿ!
ಇನ್ನೊಂದು ಕಡೆ ನಾಯಕ ಶ್ರೀರಾಮ್ ಅವರಿಗೂ ಪ್ರೇಕ್ಷಕರೊಬ್ಬರು ಕುತೂಹಲಕಾರಿ ಪ್ರಶ್ನೆ ಕೇಳಿದ್ದಾರೆ. 'ಪ್ರೇಮದ ಊರಲಿ' ಸಿನಿಮಾವನ್ನು ಕೇವಲ ಮೂರು ಪದಗಳಲ್ಲಿ ಹೇಳಿ ಎಂದು ಯುವತಿಯೊಬ್ಬರು ಕೇಳಿದ್ದಾರೆ. ಇದಕ್ಕೆ ಶ್ರೀರಾಮ್ 'ಐ ಲವ್ ಯೂ' ಎಂದು ಉತ್ತರಿಸಿದ್ದಾರೆ. ನಾಯಕನ ಈ ಉತ್ತರ ಕೇಳಿ ಪ್ರಶ್ನೆ ಕೇಳಿದ್ದ ಯುವತಿ ನಾಚಿ ನೀರಾಗಿದ್ದಾರೆ. ಅನುಶ್ರೀ ಅವರ ಮಾತುಕತೆಯ ನಡುವೆ ಇಂತಹ ತಮಾಷೆಯ ಸನ್ನಿವೇಶಗಳು ಕಾರ್ಯಕ್ರಮವನ್ನು ಇನ್ನಷ್ಟು ಎಂಟರ್‌ಟೇನಿಂಗ್ ಆಗಿಸಿದೆ.
50 ದಿನಗಳ ಯಶಸ್ಸಿನ ಹಿಂದೆ ಪ್ರೇಕ್ಷಕರ ಪ್ರೀತಿ!
ನಿರ್ದೇಶಕ ಮನೋಜ್ ಕುಮಾರ್ ಸಾರಥ್ಯದಲ್ಲಿ ಮೂಡಿಬಂದಿರುವ 'ಪ್ರೇಮದ ಊರಲಿ' ಚಿತ್ರದಲ್ಲಿ ರಂಗಾಯಣ ರಘು, ಶ್ರೀರಾಮ್, ರಾಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 25ರಂದು ಬಿಡುಗಡೆಯಾದ ಈ ಸಿನಿಮಾ ಆರಂಭದಲ್ಲಿ ದೊಡ್ಡ ಮಟ್ಟದ ಪ್ರಚಾರವಿಲ್ಲದೆ ಚಿತ್ರಮಂದಿರಕ್ಕೆ (theatre) ಬಂದಿತ್ತು. ಆದರೆ, ಕಥೆ ಮತ್ತು ಪ್ರೇಕ್ಷಕರಿಂದ ಸಿಕ್ಕ ಉತ್ತಮ ಪ್ರತಿಕ್ರಿಯೆ ಚಿತ್ರದ ಹಣೆಬರಹವನ್ನೇ ಬದಲಿಸಿತು.
ಈಗ 50 ದಿನಗಳ ಸಂಭ್ರಮ ಆಚರಿಸುತ್ತಿರುವ ಚಿತ್ರತಂಡಕ್ಕೆ ಪ್ರೇಕ್ಷಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ದೊಡ್ಡ ಬಜೆಟ್, ಅದ್ದೂರಿ ಪ್ರಚಾರಕ್ಕಿಂತ ಒಳ್ಳೆಯ ಕಥೆ ಮತ್ತು ಪ್ರಾಮಾಣಿಕ ಪ್ರಯತ್ನಕ್ಕೆ ಪ್ರೇಕ್ಷಕರು ಬೆಲೆ ಕೊಡುತ್ತಾರೆ ಎನ್ನುವುದಕ್ಕೆ 'ಪ್ರೇಮದ ಊರಲಿ' ಯಶಸ್ಸು ಮತ್ತೊಂದು ಉದಾಹರಣೆಯಾಗಿದೆ.




Click it and Unblock the Notifications
