15 ದಿನದಲ್ಲಿ ಡಾರ್ಲಿಂಗ್ ಪ್ರಭಾಸ್ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ?
ಸಲಾರ್ ಸಿನಿಮಾ ರಿಲೀಸ್ ಆಗಿ, 3ನೇ ವಾರಕ್ಕೆ ಎಂಟ್ರಿ ಕೊಟ್ಟರೂ ಅಬ್ಬರ ಮಾತ್ರ ಸ್ವಲ್ಪವೂ ಕಮ್ಮಿ ಆಗಿಲ್ಲ. ಈಗಲೂ ಸಲಾರ್ ಸಿನಿಮಾ ಅಬ್ಬರಿಸುತ್ತಲೇ ಇದ್ದು ಅಭಿಮಾನಿಗಳು ಕೂಡ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ ಕೋಟಿ ಕೋಟಿ ಗಳಿಸುತ್ತಿರುವ ಸಲಾರ್‌ಗೆ ಯಾವುದೇ ಅಡ್ಡಿ ಎದುರಾಗಿಲ್ಲ. ಹಾಗಾದರೆ ಕಳೆದ 15 ದಿನಗಳಲ್ಲಿ, ಡಾರ್ಲಿಂಗ್ ಪ್ರಭಾಸ್ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ?
ದಕ್ಷಿಣ ಭಾರತದ ಸಿನಿಮಾ ಅಂದ್ರೆ ಜಗತ್ತಿನಾದ್ಯಂತ ಕ್ರೇಜ್ ಇರುತ್ತೆ ನಟ ಡಾರ್ಲಿಂಗ್ ಪ್ರಭಾಸ್‌ಗೆ ಅಮೆರಿಕದಿಂದ ಹಿಡಿದು, ಅಫ್ಘಾನಿಸ್ತಾನ ತನಕ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಇದ್ದಾರೆ. ಹೀಗಾಗಿ ಸೌತ್ ಸಿನಿಮಾಗಳು ರಿಲೀಸ್ ಆಗುವ ಸಮಯದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿ, ದೊಡ್ಡ ಮಟ್ಟದಲ್ಲಿ ಹಣ ಗಳಿಸುತ್ತಿವೆ. 'ಸಲಾರ್' ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಅರ್ಧ ಸಾವಿರ ಕೋಟಿ ಕಲೆಕ್ಷನ್ ಕ್ಲಬ್ ಸೇರಿದೆ. ಅಸಲಿಗೆ ಈವರೆಗೂ ಸಲಾರ್ ಗಳಿಸಿರುವುದು ಎಷ್ಟು ನೂರು ಕೋಟಿ ಗೊತ್ತಾ?

ಇಷ್ಟು ಕೋಟಿ ಗಳಿಸಿದೆ ನೋಡಿ ಸಲಾರ್!
ಭಾರತೀಯ ಸಿನಿಮಾ ರಂಗವು ಜಗತ್ತಿನಾದ್ಯಂತ ದೊಡ್ಡ ಹೆಸರು ಗಳಿಸಿದ್ದು, ಪ್ರಪಂಚದ ಮೂಲೆ ಮೂಲೆಯಲ್ಲೂ ಭಾರತೀಯ ಸಿನಿಮಾಗಳಿಗೆ ಅಭಿಮಾನಿಗಳು ಇದ್ದಾರೆ. 'ಸಲಾರ್' ಸಿನಿಮಾದ ಮೂಲಕ ಪ್ರಭಾಸ್ ಅವರಿಗೆ ಬಿಗ್ ಬ್ರೇಕ್ ಸಿಕ್ಕಿದೆ. ಬಾಹುಬಲಿ-1 & ಬಾಹುಬಲಿ-2 ಹಿಟ್ ಆದ ನಂತರ 'ರಾಧೆ ಶ್ಯಾಮ್' & 'ಆದಿಪುರುಷ್' ಸೋಲು ಪ್ರಭಾಸ್‌ರನ್ನು ಕಂಗೆಡಿಸಿತ್ತು. ಹೀಗಾಗಿ ಅವರಿಗೆ ದೊಡ್ಡ ಬ್ರೇಕ್ ಬೇಕಿತ್ತು. ಆದರೆ ಈ ಆಸೆ ಇದೀಗ ಈಡೇರಿದೆ. ಪ್ರಭಾಸ್‌ಗೆ ದೊಡ್ಡ ಬ್ರೇಕ್ ನೀಡಿದೆ 'ಸಲಾರ್'. ಈಗಿನ ಮಾಹಿತಿಗಳ ಪ್ರಕಾರ ಜಗತ್ತಿನಾದ್ಯಂತ ಪ್ರಭಾಸ್ ಸಿನಿಮಾ ಸಲಾರ್ ಬರೋಬ್ಬರಿ 675 ಕೋಟಿ ರೂಪಾಯಿ ಗಳಿಸಿದೆಯಂತೆ.
ಭಾರತದಲ್ಲಿ 400 ಕೋಟಿಗೆ ಹತ್ತಿರ?
ಸಲಾರ್ ಕ್ರೇಜ್ ಇನ್ನೂ ಕಮ್ಮಿ ಆಗಿಲ್ಲ ಅನ್ನೋದಕ್ಕೆ ಸಾಕ್ಷಿ ಎನ್ನುವಂತೆ 15ನೇ ದಿನದ ಈ ಸಿನಿಮಾದ ಕಲೆಕ್ಷನ್ ಸಂಚಲನ ಸೃಷ್ಟಿ ಮಾಡಿದೆ. ಯಾಕಂದ್ರೆ ಸಲಾರ್ ಸಿನಿಮಾ ತನ್ನ 15ನೇ ದಿನ ಕೂಡ 7.90 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಹೀಗೆಯೇ ಹೊಸ ಹೊಸ ದಾಖಲೆ ಸೃಷ್ಟಿ ಮಾಡುತ್ತಿದೆ ಸಲಾರ್ ಚಿತ್ರ. ಮತ್ತೊಂದು ಕಡೆ ಭಾರತದಲ್ಲಿ ಮಾತ್ರ ಸುಮಾರು 400 ಕೋಟಿಗೆ ಹತ್ತಿರ ಇದೆ ಎಂಬ ಮಾಹಿತಿ ಹೊರಬೀಳುತ್ತಿದೆ. ಹೀಗೆ, ಇನ್ನಷ್ಟು ದಿನ ಇದೇ ರೀತಿ ಸಲಾರ್ ಅಬ್ಬರಿಸುವ ಸೂಚನೆ ಸಿಕ್ಕಿದೆ.
'ಸಲಾರ್-2' ಯಾವಾಗ ಬರುತ್ತೆ?
ಈಗಿರುವ ಮಾಹಿತಿಗಳ ಪ್ರಕಾರ 'ಸಲಾರ್-2'ಗೆ ಬೇಕಾದ ಕಥೆ ಜೊತೆಗೆ ಸ್ಕ್ರಿಪ್ಟ್ ಕೂಡ ಸಿದ್ಧ ಆಗಿದೆ ಅಂತಾ ಹೇಳಲಾಗಿದೆ. ಹೀಗಾಗಿ ಕೆಜಿಎಫ್ ಖ್ಯಾತಿಯ ಡೈರೆಕ್ಟರ್ ಪ್ರಶಾಂತ್ ನೀಲ್, ಸಲಾರ್-2 ಸಿನಿಮಾ ಶೂಟಿಂಗ್ ಆರಂಭಿಸಲು ಬೇಕಿರುವ ತಯಾರಿ ನಡೆಸಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಪ್ರಭಾಸ್ ಕೂಡ ಸಿನಿಮಾ ತಂಡಕ್ಕೆ ಆದಷ್ಟು ಬೇಗ ಸಾಥ್ ನೀಡಲಿದ್ದಾರೆ. ಈ ಮೂಲಕ 2025ಕ್ಕೆ 'ಸಲಾರ್-2' ಬೆಳ್ಳಿತೆರೆ ಮೇಲೆ ಕಮಾಲ್ ಮಾಡಲು ಶುರು ಮಾಡುತ್ತೆ ಎಂಬ ಸುದ್ದಿ ಫ್ಯಾನ್ಸ್‌ಗೆ ಕೂಡ ಖುಷಿ ಕೊಟ್ಟಿದೆ.

ಕನ್ನಡಿಗರಿಂದ ತುಂಬಿದ ಸಿನಿಮಾ
ಸಲಾರ್ ತೆಲುಗು ಭಾಷೆಯಲ್ಲಿ ನಿರ್ಮಾಣ ಆಗಿದ್ದರೂ, ನಿರ್ಮಿಸಿರುವುದು ಮಾತ್ರ ಕನ್ನಡಿಗರು. ನಟ ಪ್ರಭಾಸ್ & ಪೃತ್ವಿರಾಜ್ ಸುಕುಮಾರನ್ ಅವರನ್ನ ಬಿಟ್ಟರೆ ಬಹುತೇಕ ನಟರು & ನಟಿಯರು ಕನ್ನಡಿದವರು. ಸಲಾರ್ ಸಿನಿಮಾಗೆ ಕೆಲಸ ಮಾಡಿದ್ದ ತಾಂತ್ರಿಕ ವರ್ಗ ಕೂಡ ಕನ್ನಡಿಗರಿಂದಲೇ ತುಂಬಿತ್ತು. 'ಕೆಜಿಎಫ್' ಸಿನಿಮಾಗೆ ಕೆಲಸ ಮಾಡಿ ಪಳಗಿದ್ದ ತಂಡ ಕಟ್ಟಿಕೊಂಡು, ಪ್ರಶಾಂತ್ ನೀಲ್ ಅವರು ಈಗ 'ಸಲಾರ್' ಸಿನಿಮಾ ಮಾಡಿ ಗೆದ್ದು ಬೀಗಿದ್ದಾರೆ. ಹೀಗಾಗಿಯೇ ಸಲಾರ್-2 ಬಗ್ಗೆ ಕೂಡ ಕುತೂಹಲ ಹೆಚ್ಚಾಗುತ್ತಿದೆ.












Click it and Unblock the Notifications