Kiccha Sudeep: ಅರ್ಜುನ್ ಜನ್ಯಗೂ ನನಗೂ ತಂದಿಡುವ ಕೆಲಸ ಮಾಡ್ತಾರೆ: ಕಿಚ್ಚ ಸುದೀಪ್
ಕನ್ನಡ ಚಿತ್ರರಂಗದಲ್ಲಿ ಈಗ ರಣರಂಗದ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ನಟ ಸುದೀಪ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಬಹಿರಂಗವಾಗಿ ನೀಡಿದ ಹೇಳಿಕೆಗಳಿಂದ ಫ್ಯಾನ್ ವಾರ್ ಸ್ವರೂಪ ಪಡೆದುಕೊಂಡಿತ್ತು. ಮತ್ತೊಂದೆಡೆ ಸುದೀಪ್ ಅವರ ಮಾರ್ಕ್ ಸಿನಿಮಾ ಹಾಗೂ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ 45 ಒಂದೇ ದಿನದಂದು ರಿಲೀಸ್ ಆಗಿದ್ದು ಬೇರೆ ಚರ್ಚೆಯನ್ನೇ ಹುಟ್ಟುಹಾಕಿತ್ತು. ಇದಕ್ಕೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ vs ಅರ್ಜುನ್ ಜನ್ಯ ಎನ್ನುವ ಅರ್ಥ ಕಲ್ಪಿಸಿದ್ದರು. ಈ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಸುದೀಪ್ ಮೌನ ಮುರಿದಿದ್ದಾರೆ. 'ನಮ್ಮಿಬ್ಬರ ನಡುವೆ ಆ ರೀತಿ ದ್ವೇಷ ಕ್ರಿಯೇಟ್ ಮಾಡ್ತಾರೆ' ಎಂದಿದ್ದಾರೆ.
'ಅರ್ಜುನ್ ಜನ್ಯ ಕೂಡ ಆ ಸಿನಿಮಾಗಾಗಿ ಎರಡೂವರೆ ವರ್ಷದಿಂದ ಒದ್ದಾಡಿದ್ದಾರೆ. ಆದರೆ ಕೊನೆ ಘಳಿಗೆಯಲ್ಲಿ ರಿಲೀಸ್ ಮಾಡುವ ದಿನಾಂಕ ಘೋಷಣೆ ಮಾಡಿದ್ರು. ಆದರೆ 45 ಸಿನಿಮಾ ಕೂಡ ನಮ್ಮ ಸಿನಿಮಾ ದಿನದಂದೇ ರಿಲೀಸ್ ಆಗುವುದು ಗೊತ್ತಾಗಿ ನಾನೇ ಅರ್ಜುನ್ ಜನ್ಯಗೆ ಫೋನ್ ಮಾಡಿದೆ. ನಾನು ಅದೇ ದಿನಕ್ಕೆ ಅನೌನ್ಸ್ ಮಾಡಿದ್ದೀನಿ, ನೀವೂ ಅದೇ ದಿನ ಅನೌನ್ಸ್ ಮಾಡಿದ್ದೀರ, ಇದರ ಬಗ್ಗೆ ಗೊತ್ತಿದೆ ತಾನೇ ಎಂದು ಕೇಳಿದೆ. ನಾನು ಆ ದಿನ ಕ್ಯಾನ್ಸಲ್ ಮಾಡಿ ಅಂತ ಹೇಳ್ತಿಲ್ಲ, ನಾಳೆ ನನ್ನ ತಪ್ಪಾಗಿ ತಿಳಿಯಬೇಡಿ ಎಂದು ಹೇಳಿದ್ದೆ' ಎಂದು ಪ್ರಜಾವಾಣಿ ಸಂದರ್ಶನದಲ್ಲಿ ಸುದೀಪ್ ಮಾತನಾಡಿದ್ದಾರೆ.

'ಒಂದೇ ದಿನ ಎರಡು ಸಿನಿಮಾ ಬೇಜಾರಿಲ್ಲ'
'ನನ್ನ ಸಿನಿಮಾ ಅದೇ ದಿನ ರಿಲೀಸ್ ಆಗುತ್ತೆ. ನಿಮ್ಮ ಸಿನಿಮಾ ಕೂಡ ಅವತ್ತೇ ರಿಲೀಸ್ ಮಾಡಿ, ನನಗೆ ಇದರಲ್ಲಿ ಯಾವುದೇ ಬೇಜಾರಿಲ್ಲ ಎಂದು ಜನ್ಯಗೆ ಹೇಳಿದ್ದೆ. ಇದು ಹಠ ಅಂತ ಹೇಳಲು ಆಗಲ್ಲ. ಒಂದು ದೊಡ್ಡ ಬಜೆಟ್ ಸಿನಿಮಾ, ಇಬ್ಬರ ಸಿನಿಮಾಗಳು ಬರಲಿ. ಇದರಲ್ಲಿ ಯಾವುದೇ ಬೇಸರ ನನಗಿಲ್ಲ' ಎಂದಿದ್ದಾರೆ.
'ನನ್ನ ಹಾಗೂ ಅರ್ಜುನ್ ನಡುವೆ ಏನಿಲ್ಲ, ಶಿವಣ್ಣ, ಉಪ್ಪಿ ಸರ್ ವಿಚಾರದಲ್ಲೂ ನಮ್ಮ ಮಧ್ಯೆ ಅಂತದ್ದು ಏನೂ ಇಲ್ಲ. ಅವರ ಸಿನಿಮಾನೂ ಬರಲಿ, ನಮ್ಮ ಸಿನಿಮಾ ಕೂಡ ಬರುತ್ತೆ. ರಾಜ್ಯದಲ್ಲಿ 600ಕ್ಕೂ ಹೆಚ್ಚು ಥಿಯೇಟರ್ ಇವೆ. ಎರಡೂ ಸಿನಿಮಾ ರಿಲೀಸ್ ಆಗುವುದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ಈಗಿರುವ ಸಾಲು ಸಾಲು ರಜೆಗಳ ಅವಕಾಶ ಕೈತಪ್ಪಿದರೆ ನಮ್ಮ ಸಿನಿಮಾ ಹಾಗೂ ಅವರ ಸಿನಿಮಾ ಇನ್ಯಾವಾಗ ಬರೋದು? ನಾನು ಮಾರ್ಕ್ ಸಿನಿಮಾ ಬಿಡುಗಡೆ ದಿನಾಂಕವನ್ನು ಮೊದಲೇ ಘೋಷಿಸಿದ್ದೆ. ಅದು ಅರ್ಜುನ್ ಜನ್ಯಾಗೆ ಗೊತ್ತಿರಲಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

'ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು'
'ನನ್ನ ಪ್ರಕಾರ ಕ್ರಿಸ್‌ಮಸ್‌ನಿಂದ ಹೊಸ ವರ್ಷದವರೆಗೆ ಸಾಲು ಸಾಲು ರಜೆ ಇರುವುದು ಎರಡೂ ಸಿನಿಮಾಗಳಿಗೂ ಒಳ್ಳೆಯದು. ಹೀಗಿರುವಾಗ ನನ್ನ ಹಾಗೂ ಅರ್ಜುನ್ ಜನ್ಯ ನಡುವೆ ತಂದಿಡುವ ಕೆಲಸವನ್ನು ಮಾಡುತ್ತಾರೆ. ನಾವು ಏನೇ ಮಾಡಿದ್ರೂ ಆ ರೀತಿ ಕ್ರಿಯೇಟ್ ಮಾಡ್ತಾರೆ. ನಾವು ಸಿನಿಮಾಗಳನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವಾಗ ಕೆಳಮಟ್ಟದಲ್ಲಿ ನಡೆಯುತ್ತಿರುವ ಇಂತಹ ವಿಚಾರಗಳಿಗೆ ತಲೆಕೆಡಿಸಿಕೊಳ್ಳಲು ಆಗಲ್ಲ. ಆ ವಿಚಾರಗಳನ್ನು ಬಿಟ್ಟು ನಮ್ಮ ವೃತ್ತಿ ಕಡೆ ಗಮನ ಕೊಡೋಣ' ಎಂದಿದ್ದಾರೆ ಸುದೀಪ್.












Click it and Unblock the Notifications