ಆ ಕಹಿ ಸತ್ಯ ನನ್ನ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ: ಪವಿತ್ರಾ ಗೌಡ ಹೇಳಿದ್ದೇನು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ತೂಗುದೀಪ ಆಪ್ತೆ ಹಾಗೂ ನಟಿ ಪವಿತ್ರಾ ಗೌಡ ಅವರು ಇದೀಗ ತಮ್ಮ ಬ್ಯುಸಿನೆಸ್ ಕಡೆಗೆ ಗಮನ ಹರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಫುಲ್ ಆಕ್ಟೀವ್ ಆಗಿರುವ ಪವಿತ್ರಾ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕೆಲ ಅಚ್ಚರಿ ವಿಚಾರಗಳ ಬಗ್ಗೆ ಭಾವುಕವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ʼನನ್ನ ಜೀವನದ ಆ ಕಹಿ ಸತ್ಯ ನನಗೆ ಮಾತ್ರ ಗೊತ್ತಿದೆ, ಬೇರೆ ಯಾರಿಗೂ ಗೊತ್ತಿಲ್ಲʼ ಎಂದು ಬರೆದುಕೊಂಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆದ ಸಂದರ್ಭದಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಸಂಬಂಧದ ಬಗ್ಗೆ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಹಲವು ಸುದ್ದಿಗಳು ಹರಿದಾಡಿದ್ದವು. ಕೆಲವರು ಈ ಬಗ್ಗೆ ಕೆಟ್ಟ ಕೆಟ್ಟ ಕಾಮೆಂಟ್ ಕೂಡ ಮಾಡಿದ್ದರು. ಈ ಬಗ್ಗೆಯೂ ಪವಿತ್ರಾ ಗೌಡ ಅವರು ಬೇಸರ ವ್ಯಕ್ತಪಡಿಸಿ ಸುದೀರ್ಘವಾಗಿ ಪೋಸ್ಟ್‌ನಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಖ್ಯಾತ ವಿಮರ್ಶಕಿ ಹಾಗೂ ಲೇಖಕಿ ಎಂ.ಎಸ್.ಆಶಾದೇವಿ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ವಿಡಿಯೋದೊಂದಿಗೆ ಪವಿತ್ರಾಗೌಡ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ʼಎಂಎಸ್ ಆಶಾದೇವಿ ಮೇಡಂ ಅವರಿಗೆ ಧನ್ಯವಾದಗಳು. ನನ್ನ ಜೀವನದ ಸತ್ಯಕಥೆ ಗೊತ್ತಿಲ್ಲದ ಬಹಳ ಜನ ನನ್ನನ್ನು ವಿನಾಕಾರಣ ದೂಷಿಸಿದರು. ಇಂತಹ ಸಮಾಜದಲ್ಲಿ ನಿಮ್ಮ ಈ ಮಾತುಗಳು ನನ್ನಲ್ಲಿ ಒಂದು ಸಣ್ಣ ಭರವಸೆ ಚಿಗುರಿಸಿದೆ. ಇದಕ್ಕಾಗಿ ನನ್ನ ಕಡೆಯಿಂದ ಅನಂತ ಧನ್ಯವಾದಗಳುʼ ಎಂದು ಪವಿತ್ರಾ ಬರೆದುಕೊಂಡಿದ್ದಾರೆ.

ʼನನ್ನ ಜೀವನದ ಸತ್ಯಾಸತ್ಯತೆಗಳನ್ನು ಅರಿತುಕೊಳ್ಳದೆ ನನ್ನ ಬಗ್ಗೆ ಇಷ್ಟು ಕೆಟ್ಟದಾಗಿ ಮಾತನಾಡುವ ಇಂತಹ ಸಮಾಜದಲ್ಲಿ ನಿಮ್ಮಂತವರು ಇರುವುದು ಬಹಳ ವಿಶೇಷ. ಥ್ಯಾಂಕ್ಯು ಮೇಡಂ ಎಂದಿದ್ದಾರೆ. ಒಬ್ಬ ಮಹಿಳೆಯ ಕಷ್ಟಕಾಲದಲ್ಲಿ ಇರುವಾಗಲಾದರೂ ಅವಳನ್ನು ಈ ಸಮಾಜ ಹಾಗೂ ಮಾಧ್ಯಮಗಳು ಗೌರವಿಸಬೇಕು. ನನ್ನ ಜೀವನದ ಕಹಿಸತ್ಯ ನನಗೆ ಹಾಗೂ ನನ್ನ ಹತ್ತಿರದವರಿಗೆ ಮಾತ್ರವೇ ಗೊತ್ತುʼ ಎಂದು ಪವಿತ್ರಾ ಗೌಡ ಹೇಳಿದ್ದಾರೆ.
ನಟಿಯನ್ನ ಅಪವಿತ್ರ ಎನ್ನಲು ಮಾಧ್ಯಮಕ್ಕೆ ಯಾವ ಹಕ್ಕಿದೆ?
ವಿಮರ್ಶಕಿ ಎಂಎಸ್ ಆಶಾದೇವಿ ಅವರು ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ಪವಿತ್ರಾ ಗೌಡ ಬಗ್ಗೆ ಉಲ್ಲೇಖಿಸಿ ಭಾಷಣ ಮಾಡಿದ್ದರು. ʼಒಬ್ಬ ನಟಿ ಇನ್ಯಾರನ್ನಾದರೂ ಮದುವೆ ಆಗ್ತಾರೆ. ಇದಕ್ಕೆ ನಿಮ್ಮ ಪ್ರಾಬ್ಲಂ ಏನು? ಪವಿತ್ರ ಎನ್ನುವ ಹೆಣ್ಣುಮಗಳ ವಿಷಯದಲ್ಲಿ ಅಪವಿತ್ರ ಎಂದು ಮಾಧ್ಯಮಗಳಲ್ಲಿ ಬಳಸಿದರು, ಇದು ಒಬ್ಬ ಮಹಿಳೆಗೆ ಬಳಸುವ ಭಾಷೆಯೇ ಎಂದು ಭಾಷಣದಲ್ಲಿ ಕೇಳಿದ್ದರು. ಆಕೆ ಅಪವಿತ್ರ ಎನ್ನಲು ಮಾಧ್ಯಮಕ್ಕೆ ಯಾವ ಹಕ್ಕಿದೆ? ಅವರ ಸೌಜನ್ಯದ ವಿಚಾರದಲ್ಲಿ ಇಡೀ ಸಮಾಜ ಇಷ್ಟು ಸೂಕ್ಷ್ಮತೆ ಮರೆತಿದೆ. ನಮ್ಮ ಬಗ್ಗೆ ನಮಗೆ ನಾಚಿಕೆ ಆಗಬೇಕುʼ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಇದೇ ವಿಡಿಯೋ ಹಂಚಿಕೊಂಡು ಪವಿತ್ರಾ ಗೌಡ ಪೋಸ್ಟ್ ಮಾಡಿದ್ದಾರೆ.












Click it and Unblock the Notifications