ನಾನು ಬದುಕಬೇಕು..ಮನೆ ಬಾಡಿಗೆ ಕೂಡ ಕಟ್ಟಿಲ್ಲ: ಅಂಗಲಾಚಿ ಬೇಡಿದ ಪಾರು ನಟ
ಕನ್ನಡ ಕಿರುತೆರೆಯಲ್ಲಿ ಜನಪ್ರಿಯವಾದ ಪಾರು, ವಧು ಧಾರಾವಾಹಿಯಲ್ಲಿ ಹಾಗೂ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾದಲ್ಲಿ ನಟಿಸಿದ್ದ ನಟ ಶ್ರೀಧರ್ ಹಾಸಿಗೆ ಹಿಡಿದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಶ್ರೀಧರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿಚಾರ ಹೊರಬಿದ್ದಿದ್ದು, ಅವರ ಫೋಟೋಗಳು ಕೂಡ ವೈರಲ್ ಆಗಿತ್ತು.
ನಟ ಶ್ರೀಧರ್ ಗುರುತೇ ಸಿಕದಷ್ಟು ಬದಲಾಗಿದ್ದು, ಅವರಿಗೆ ಏನಾಗಿತ್ತು? ಎಷ್ಟು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಇದೀಗ ಸ್ವತಃ ನಟ ಶ್ರೀಧರ್ ಅವರೇ ಮಾತನಾಡಿರುವ ಆಡಿಯೋವೊಂದು ವೈರಲ್ ಆಗುತ್ತಿದ್ದು, ನಾನು ಬದುಕಬೇಕು ಎನ್ನುವ ಅವರ ಮಾತು ಮನಕಲುಕುವಂತಿದೆ.

'ಅಕ್ಟೋಬರ್‌ನಲ್ಲಿ ನನಗೆ ಆರೋಗ್ಯ ಸಮಸ್ಯೆ ಶುರುವಾಯ್ತು. ಮೊದಲು ಜ್ವರ ಬಂತು, ಆ ನಂತರ ಕಫ ಆಯ್ತು. ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದ ನಡುವೆ ನನ್ನ ಕಾಲೆಲ್ಲ ಊದಿಕೊಳ್ಳಲು ಶುರುವಾಯ್ತು. ನಾನು ಒಬ್ಬನೇ ಆದ ಕಾರಣ ನೋವಿನಲ್ಲೇ ಚಿತ್ರೀಕರಣಕ್ಕೆ ಹೋಗುತ್ತಿದ್ದೆ. ನಾನು ವಧು ಮತ್ತು ಸಿಂಧೂ ಭೈರವಿ ಚಿತ್ರೀಕರಣಕ್ಕೆ ಹೋಗುತ್ತಿದ್ದೆ .ಆದರೆ ಆಗ ನನಗೆ ತುಂಬಾ ಸುಸ್ತಾಗಲು ಶುರುವಾಯಿತು' ಎಂದರು.
'ನನ್ನ ಸ್ನೇಹಿತರೊಬ್ಬರು ಆರ್ಯುವೇದಿಕ್ ಡಾಕ್ಟರ್ ಬಳಿ ಕರೆದುಕೊಂಡು ಹೋದರು. ನನಗೆ 20 ದಿನ ಪಥ್ಯ ಮಾಡೋಕೆ ಹೇಳಿದರು. ಆ ನಂತರ ನನ್ನ ಇಡೀ ದೇಹವೇ ಊದಿಕೊಂಡಿತು. ನಡೆಯೋಕು ಆಗುತ್ತಿರಲಿಲ್ಲ. ಕೊನೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದೆ. ಅಲ್ಲಿ 15 ದಿನ ಇದ್ದೆ ಆದರೆ ಅಲ್ಲಿ ಯಾವುದೇ ಚಿಕಿತ್ಸೆ ಕೊಡಲಿಲ್ಲ. ಆ ನಂತರ ನನ್ನನ್ನು ಬ್ಯಾಪಿಸ್ಟ್ ಆಸ್ಪತ್ರೆಗೆ ಸೇರಿಸಿದರು'.

'ನನಗೆ ಚಿಕಿತ್ಸೆ ನಡೆಯುತ್ತಿದೆ, ಸಂಪೂರ್ಣ ದೇಹಕ್ಕೆ ಇನ್ಪೆಕ್ಷನ್ ಆಗಿದೆ, ಅಲ್ಸರ್ ಆಗಿದೆ, ನಡೆಯೋದಕ್ಕೂ ಕೂಡ ಆಗುತ್ತಿಲ್ಲ. ಬದುಕು ತುಂಬಾ ಕಷ್ಟ ಅನ್ನಿಸುತ್ತಿದೆ. ಆದರೆ ನಾನು ಬದುಕಬೇಕು. ಮೊದಲಿನಿಂತೆ ಆಗಬೇಕು. ದುಡಿಯಬೇಕು. ಬದುಕಿ ಮೊದಲಿನಂತೆ ಆಗಬೇಕು. ನನಗೆ ಯಾವ ದುರಭ್ಯಾಸ ಇಲ್ಲ. ಆದರೂ ನನಗೆ ಯಾಕೆ ಈ ರೀತಿ ಆಗಿದೆ' ಎಂದು ಶ್ರೀಧರ್ ನೋವು ತೋಡಿಕೊಂಡಿದ್ದಾರೆ.
'ನಟನೆಯ ಜೊತೆ ನಾನು ಇಡ್ಲಿ, ದೋಸೆ, ವಡೆ ಮಾರುತ್ತಿದ್ದೆ. ಆದರೆ ಈಗ ಹೀಗಾಗಿದೆ. ಹಲವು ತಿಂಗಳಿಂದ ಮನೆಯ ಬಾಡಿಗೆಯನ್ನು ಕೂಡ ಕಟ್ಟಿಲ್ಲ. ದಿನಕ್ಕೆ ಹತ್ತು ಹನ್ನೆರಡು ಸಾವಿರ ಖರ್ಚಾಗುತ್ತಿದೆ, ಏನಾದರೂ ಟೆಸ್ಟ್‌ಗಳನ್ನು ಮಾಡಿಸಿದರೆ ಬಿಲ್ ಇನ್ನು ಹೆಚ್ಚಾಗುತ್ತದೆ. ದಿನದ ಖರ್ಚಿಗೆ ಹಣ ಸಿಕ್ಕರೆ ಸಾಕು ಎನ್ನುವಂತಾಗಿದೆ ನನ್ನ ಪರಿಸ್ಥಿತಿ. ನಾನು ಹೊರ ಬಂದ ನಂತರ ಕೂಡ ಒಂದೆರಡು ವರ್ಷ ಯಾವ ಕೆಲಸ ಕೂಡ ಮಾಡುವಂತೆ ಇಲ್ಲ. ಈಗಾಗಲೇ ನನ್ನ ಸ್ನೇಹಿತರು ಬಂದು ಮಾತನಾಡಿಸಿಕೊಂಡು ಹೋಗಿದ್ದಾರೆ. ಆರ್ಥಿಕ ಸಹಾಯ ಕೂಡ ಮಾಡಿದ್ದಾರೆ. ಇನ್ನು ಆಸ್ಪತ್ರೆಯ ಬಿಲ್ ಎಷ್ಟಾಗುತ್ತದೆಯೋ ಗೊತ್ತಿಲ್ಲ. ನನ್ನ ಮುಂದಿನ ಜೀವನ ಹೇಗೆ' ಎಂದು ನಟ ಶ್ರೀಧರ್ ನೋವು ತೋಡಿಕೊಂಡ ವಿಡಿಯೋ ವೈರಲ್ ಆಗುತ್ತಿದೆ.












Click it and Unblock the Notifications