Saanvi Sudeep: ನನ್ನ ದೇಹ ಚರ್ಚೆಯ ವಿಷಯ ಅಲ್ಲ: ಟ್ರೋಲ್‌ಗಳಿಗೆ ಸಾನ್ವಿ ಸುದೀಪ್ ಖಡಕ್ ಉತ್ತರ
ಸೋಷಿಯಲ್ ಮೀಡಿಯಾಗಳಲ್ಲಿ ನಟ, ನಟಿಯರ ಬಗ್ಗೆ ಅಪಹಾಸ್ಯ, ಟ್ರೋಲ್ ಮಾಡುವುದು ಇತ್ತೀಚೆಗೆ ಹೆಚ್ಚಾಗಿದೆ. ಇದು ಸೆಲೆಬ್ರಿಟಿಗಳು ಮಾತ್ರವಲ್ಲದೆ ಅವರ ಕುಟುಂಬದವರನ್ನೂ ಟ್ರೋಲ್ ಮಾಡುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಪೈರಸಿ ಬಗ್ಗೆ ಇತ್ತೀಚೆಗೆ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಆಡಿದ್ದ ಮಾತುಗಳು ಬೇರೆ ತಿರುವು ಪಡೆದುಕೊಂಡಿತ್ತು. ಅಭಿಮಾನಿಗಳ ನಡುವೆ ಕಿತ್ತಾಟಕ್ಕೂ ಕಾರಣವಾಗಿತ್ತು. ಅಲ್ಲದೆ ಸುದೀಪ್ ಪುತ್ರಿ ಸಾನ್ವಿ ಅವರ ಬಗ್ಗೆಯೂ ಕೆಲ ವಿಕೃತರು ಬಾಡಿ ಶೇಮಿಂಗ್, ಟ್ರೋಲ್ ಮಾಡಿದ್ದರು. ಈ ಬಗ್ಗೆ ಸಾನ್ವಿ ಕೊನೆಗೂ ಮೌನ ಮುರಿದಿದ್ದಾರೆ.
'ಮಾರ್ಕ್' ಸಿನಿಮಾ ಸಕ್ಸಸ್ ಮೀಟ್‌ನಲ್ಲೂ ಸುದೀಪ್ ಈ ತಮ್ಮ ಪುತ್ರಿ ಮೇಲಿನ ಟ್ರೋಲ್‌ಗಳಿಗೆ ಖಡಕ್ ಉತ್ತರ ನೀಡಿದ್ದರು. ಸಾನ್ವಿ ಸುದೀಪ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಟ್ರೋಲರ್‌ಗಳಿಗೆ ಉತ್ತರ ನೀಡಿದ್ದಾರೆ. ತಮ್ಮ ದೇಹದ ಬಗ್ಗೆ ಅಪಹಾಸ್ಯ ಹಾಗೂ ಕೆಟ್ಟದಾಗಿ ಟ್ರೋಲ್ ಮಾಡಿದವರಿಗೆ ಮುಟ್ಟಿನೋಡಿಕೊಳ್ಳುವಂತೆ ಖಡಕ್ ಆಗಿ ಮಾತನಾಡಿದ್ದಾರೆ.

'ಮಾರ್ಕ್' ಸಿನಿಮಾದ 'ಮಸ್ತ್ ಮಲೈಕಾ' ಹಾಡಿಗೆ ಸಾನ್ವಿ ಸುದೀಪ್ ಧ್ವನಿಯಾಗಿದ್ದಾರೆ. ಈ ಹಾಡು ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲೂ ಇದೆ. ಇತ್ತೀಚೆಗೆ ಸಾನ್ವಿ ಅವರು ತನ್ನ ತಂದೆ ಅಭಿನಯಿಸಿರುವ ಮಾರ್ಕ್ ಸಿನಿಮಾ ವೀಕ್ಷಣೆಗೆ ಬಂದಿದ್ದರು. ಈ ವಿಡಿಯೋ ವೈರಲ್ ಕೂಡ ಆಗಿತ್ತು. ಕೆಲ ವಿಕೃತರು ಸಾನ್ವಿ ಅವರ ದೇಹದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಲ್ಲದೆ, ಟ್ರೋಲ್ ಪೇಜ್‌ಗಳಲ್ಲಿ ವಿಡಿಯೋ ಶೇರ್ ಮಾಡಿ ಬಾಡಿ ಶೇಮಿಂಗ್ ಮಾಡಿದ್ದರು.
'ಬೇಕಾದ್ರೆ ನಾನೇ ಕೇಳ್ತೀನಿ'
ಈ ಬಗ್ಗೆ ಸಾನ್ವಿ ಸುದೀಪ್ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ. ಎರಡನೇ ಸಾಲುಗಳ ಮೂಲಕ ತಮ್ಮ ಮೇಲಿನ ಟೀಕೆಗಳಿಗೆ ಬ್ರೇಕ್ ಹಾಕಿದ್ದಾರೆ. "ನನ್ನ ದೇಹ ಚರ್ಚೆಯ ವಿಷಯವಲ್ಲ, ನಿಮ್ಮ ಅಭಿಪ್ರಾಯ ಬೇಕಾದರೆ ನಾನೇ ಕೇಳುತ್ತೇನೆ" ಎಂದು ಸಾನ್ವಿ ಬರೆದುಕೊಂಡಿದ್ದಾರೆ.
ಸುದೀಪ್ ಏನಂದ್ರು?
ಸಾನ್ವಿ ಅವರ ಮೇಲಿನ ಟ್ರೋಲ್‌ಗಳ ಬಗ್ಗೆ ಸುದೀಪ್ ಮಾರ್ಕ್ ಸಂಭ್ರಮಾಚರಣೆ ವೇದಿಕೆಯಲ್ಲಿ ಮಾತನಾಡಿದ್ದರು. ಟೀಕೆ ಮಾಡುವವರ ಬಗ್ಗೆ ಮಾತನಾಡುತ್ತಾ 'ಸಮಯ ವ್ಯರ್ಥ ಮಾಡಿಕೊಳ್ಳಲು ನಾನು ಇಷ್ಟಪಡೋದಿಲ್ಲ. ನನ್ನ ಮಗಳು ನನಗಿಂತಲೂ ಹೆಚ್ಚು ಸ್ಟ್ರಾಂಗ್ ಇದ್ದಾಳೆ. ಅವಳು ಮುಂದೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾಳೆ. ನಾನು ಜೀವನದಲ್ಲಿ ಎದುರಿಸಿದ ಸಮಸ್ಯೆಗಿಂತ ಹೆಚ್ಚಿನದಲ್ಲೇ ಎದುರಿಸುತ್ತಾಳೆ ಎನ್ನುವ ವಿಶ್ವಾಸ ನನಗಿದೆ. ಅವಳಿಗೆ ನನಗಿಂತ ಹತ್ತು ಪಟ್ಟು ಒಳ್ಳೆಯ ಮನಸ್ಸಿದೆ' ಎಂದಿದ್ದರು.
ಇಂಗ್ಲೀಷ್ ವಿಚಾರವಾಗಿಯೂ ಟ್ರೋಲ್
ಕೆಲ ತಿಂಗಳ ಹಿಂದೆಯೂ ಸಾನ್ವಿ ಅವರನ್ನು ಟ್ರೋಲ್ ಮಾಡಲಾಗಿತ್ತು. ಸರಿಗಮಪ ವೇದಿಕೆಗೆ ಕಿಚ್ಚ ಸುದೀಪ್ & ಪ್ರಿಯಾ ದಂಪತಿ ಹಾಗೂ ಮಗಳು ಸಾನ್ವಿ ಕೂಡ ಆಗಮಿಸಿದ್ದರು. ಈ ವೇಳೆ ಸಾನ್ವಿ ತನ್ನ ತಂದೆಗಾಗಿ "ಜಸ್ಟ್ ಮಾತ್ ಮಾತಲ್ಲಿ" ಹಾಡನ್ನು ಹಾಡಿದ್ದರು. ಆದರೆ ನಂತರ ವೇದಿಕೆಯಲ್ಲಿ ಇಂಗ್ಲೀಷ್‌ನಲ್ಲೇ ಮಾತನಾಡಿದ್ದರು. ಸುದೀಪ್ ನೋಡಿದರೆ ಕನ್ನಡಕ್ಕೆ ಧಕ್ಕೆಯಾದಾಗ ಧ್ವನಿ ಎತ್ತುತ್ತಾರೆ. ಮಗಳು ನೋಡಿದ್ರೆ ಕನ್ನಡ ಕಾರ್ಯಕ್ರಮದಲ್ಲಿ ಇಂಗ್ಲಿಷ್ ಅನ್ನೇ ಹೆಚ್ಚಾಗಿ ಮಾತನಾಡ್ತಾರೆ ಎಂದು ಟ್ರೋಲ್ ಮಾಡಲಾಗಿತ್ತು.












Click it and Unblock the Notifications