Miss World 2025: ಭಾರತಕ್ಕೆ ಕೈತಪ್ಪಿದ ವಿಶ್ವಸುಂದರಿ ಪಟ್ಟ, ಕ್ಯಾನ್ಸರ್ ಗೆದ್ದ ಬೆಡಗಿಗೆ ಕಿರೀಟ
ಈ ಬಾರಿಯ ವಿಶ್ವ ಸುಂದರಿ (Miss World 2025) ಸ್ಪರ್ಧೆಯು ತೆಲಂಗಾಣದ ಹೈದರಾಬಾದ್‌ನಲ್ಲಿ ನೆರವೇರಿದ್ದು, ಭಾರತಕ್ಕೆ ನಿರಾಸೆಯಾಗಿದೆ. ವಿಶ್ವಸುಂದರಿ ರೇಸ್‌ನಲ್ಲಿ ಭಾರತದ ನಂದಿನಿ ಗುಪ್ತಾ ಅವರಿಗೆ ಪಟ್ಟ ಮಿಸ್ ಆಗಿದೆ. ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಅಂತಿಮ ಟ್ಯಾಲೆಂಟ್ ಕಾಂಪಿಟಿಷನ್ ಸುತ್ತಿಗೆ 24 ಮಂದಿ ಆಯ್ಕೆಯಾಗಿದ್ದರು, ಇದರಲ್ಲಿ ಭಾರತದ ರಾಜಸ್ಥಾನ ಮೂಲದ ನಂದಿನಿ ಗುಪ್ತಾ ಕೂಡ ಇದ್ದರು. ಈ ವರ್ಷ ದೇಶವನ್ನು ಪ್ರತಿನಿಧಿಸಿದ್ದ ಭಾರತದ ನಂದಿನಿ ಗುಪ್ತಾ ಟಾಪ್ 8 ಫೈನಲಿಸ್ಟ್‌ಗಳಲ್ಲೂ ಸ್ಥಾನ ಪಡೆಯಲಿಲ್ಲ. ಕೊನೆಗೆ ವಿಶ್ವಸುಂದರಿ ಕಿರೀಟವು ಥೈಲ್ಯಾಂಡ್ ಬೆಡಗಿಯ ಪಾಲಾಗಿದೆ.
ಹೈದರಾಬಾದ್‌ನ ಹೈಟೆಕ್ಸ್ ಪ್ರದರ್ಶನ ಕೇಂದ್ರದಲ್ಲಿ ಈ ಬಾರಿಯ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಒಟ್ಟು 108 ಸ್ಪರ್ಧಿಗಳು ಭಾಗಿಯಾಗಿದ್ದರು. ಶನಿವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಥೈಲ್ಯಾಂಡ್‌ನ ಓಪಲ್ ಸುಚಾಟಾ ಚುವಾಂಗ್‌ಸ್ರಿ (Opal Suchata Chuangsri) ಅವರು 72ನೇ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡರು. ಕಳೆದ ವರ್ಷದ ವಿಜೇತೆ ಕ್ರಿಸ್ಟಿನಾ ಪಿಸ್ಜ್ಕೋವಾ ಅವರು ಚುವಾಂಗ್‌ಸ್ರಿಗೆ ತಮ್ಮ ವಿಶ್ವಸುಂದರಿ ಕಿರೀಟ ಹಸ್ತಾಂತರಿಸಿದರು.

ಓಪಲ್ ಸುಚತಾ ಚುವಾಂಗ್ಸ್ರಿ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಮೊದಲ ಥಾಯ್ ಸ್ಪರ್ಧಿ ಎಂಬ ಹೆಗ್ಗಳಿಕೆಗೂ ಪಾತ್ರರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವ ಸುಂದರಿ ಪ್ರಶಸ್ತಿ ಗೆದ್ದ ಮೊದಲ ಥಾಯ್ ಹುಡುಗಿ ನಾನು ಎಂದು ಓಪಲ್ ಸಂತಸ ವ್ಯಕ್ತಪಡಿಸಿದ್ದಾರೆ. ನನಗೆ 16 ವರ್ಷದವಳಿದ್ದಾಗಲೇ ಸ್ತನ ಕ್ಯಾನ್ಸರ್ ಇರುವುದು ಗೊತ್ತಾಯಿತು. ಗೆಡ್ಡೆ ಇರುವುದು ಪತ್ತೆಯಾದ ನಂತರ ನನಗೆ ಸ್ತನ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ಓಪಲ್ ರಿವೀಲ್ ಮಾಡಿದ್ದಾರೆ. ನಾನು ಸ್ತನ ಕ್ಯಾನ್ಸರ್ ಜಾಗೃತಿಯನ್ನು ಉತ್ತೇಜಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.
ಓಪಲ್ ಸುಚಾಟಾ ಚುವಾಂಗ್ಸ್ರಿ ಹಿನ್ನೆಲೆ ಏನು?
ಫುಕೆಟ್‌ನಲ್ಲಿ ಬೆಳೆದ ಓಪಲ್ ಸುಚಾಟಾ ಚುವಾಂಗ್ಸ್ರಿ ಅಂತರರಾಷ್ಟ್ರೀಯ ಸಂಬಂಧಗಳ (ಇಂಟರ್‌ನ್ಯಾಷನಲ್ ರಿಲೇಷನ್‌ಶಿಪ್ಸ್) ವಿದ್ಯಾರ್ಥಿನಿ ಮತ್ತು ಮಾಡಲ್ ಆಗಿದ್ದಾರೆ. ಅವರಿಗೆ ಮನೋವಿಜ್ಞಾನ ಮತ್ತು ಮಾನವಶಾಸ್ತ್ರದಲ್ಲಿ ಆಸಕ್ತಿ ಇದೆ ಮತ್ತು ಮುಂದೊಂದು ದಿನ ರಾಯಭಾರಿಯಾಗುವ ಬಯಕೆ ಇದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಸ್ತನ ಕ್ಯಾನ್ಸರ್ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದಾರೆ. ಮೆಕ್ಸಿಕೋ ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಓಪಲ್ ಥೈಲ್ಯಾಂಡ್ ಅನ್ನು ಪ್ರತಿನಿಧಿಸಿ ಮೂರನೇ ರನ್ನರ್ ಅಪ್ ಆಗಿದ್ದರು. ಮಿಸ್ ವರ್ಲ್ಡ್ ಥೈಲ್ಯಾಂಡ್ 2025 ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ಭಾರತದ ವಿಶ್ವಸುಂದರಿಯರು ಯಾರೆಲ್ಲ?
ಭಾರತದ ನಂದಿನಿ ಗುಪ್ತಾ ಅವರು ವಿಶ್ವ ಸುಂದರಿ ರೇಸ್‌ನ ಅಗ್ರ 8 ಸ್ಥಾನ ತಲುಪುವ ಮೊದಲೇ ಈ ಸ್ಪರ್ಧೆಯಿಂದ ಹೊರಬಿದ್ದರು. ಇಲ್ಲಿಯವರೆಗೆ, ಆರು ಭಾರತೀಯ ವಿಶ್ವಸುಂದರಿ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ರೀಟಾ ಫರಿಯಾ (1966), ಐಶ್ವರ್ಯಾ ರೈ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ (2000) ಮತ್ತು ಮಾನುಷಿ ಚಿಲ್ಲರ್ (2017) ವಿಶ್ವಸುಂದರಿ ಪಟ್ಟ ಅಲಂಕರಿಸಿದ್ದಾರೆ. ಈ ಬಾರಿ ಭಾರತಕ್ಕೆ ನಿರಾಸೆಯಾಗಿದೆ.












Click it and Unblock the Notifications