ಜಾಮೀನು ಭವಿಷ್ಯದ ಒಂದು ದಿನದ ಮುಂಚೆಯೇ ಬಳ್ಳಾರಿ ಜೈಲಿಗೆ ಕರೆ ಮಾಡಿ ಮಗ ದರ್ಶನ್ ಜೊತೆ ಮೀನಾ ತೂಗುದೀಪ ಮಾತುಕತೆ
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಇತ್ತೀಚೆಗಷ್ಟೇ ಬಳ್ಳಾರಿ ಜೈಲಿಗೆ ಮೀನಾ ತೂಗೂದೀಪ ಭೇಟಿ ನೀಡಿದ್ದು, ಈ ವೇಳೆ ತಾಯಿ ಕಂಡು ದರ್ಶನ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇಂದು (ಸೆಪ್ಟೆಂಬರ್ 22) ಬಳ್ಳಾರಿ ಜೈಲಿನ ಫೋನ್‌ಗೆ ಕರೆ ಮಾಡಿ ಮಗ ದರ್ಶನ್ ಜೊತೆ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ 100 ದಿನಗಳು ಕಳೆದಿವೆ. ಇದೀಗ ಬಳ್ಳಾರಿ ಜೈಲ್‌ನಲ್ಲಿರುವ ನಟ ದರ್ಶನ್ ಜಾಮೀನಿಗೆ 57ನೇ ಸಿಸಿಹೆಚ್ ಕೋರ್ಟ್ ಅರ್ಜಿ ಸಲ್ಲಿಸಿದ್ದು, ಸೋಮವಾರ (ಸೆಪ್ಟೆಂಬರ್ 23) ವಿಚಾರಣೆ ನಡೆಯಲಿದೆ. ಇದರ ನಡುವೆಯೇ ಇಂದು (ಸೆಪ್ಟೆಂಬರ್ 22) ಮೀನಾ ತೂಗುದೀಪ ಅವರು ಬಳ್ಳಾರಿ ಜೈಲಿಗೆ ಕರೆ ಮಾಡಿ ಮಗ ದರ್ಶನ್‌ನೊಂದಿಗೆ ಮಾತಾಡಿದ್ದಾರೆ.

ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ದೂರವಾಣಿ ಕರೆ ಮಾಡಿ ಮೀನಾ ತೂಗುದೀಪ ಅವರು ಧೈರ್ಯ ತುಂಬಿದ್ದಾರೆ. ಯಾವುದೇ ಆತಂಕ ಬೇಡ, ರಾಜರಾಜೇಶ್ವರಿ, ಚಾಮುಂಡೇಶ್ವರಿ ಆಶೀರ್ವಾದ ಇದೆ. ಅಲ್ಲದೆ ನಮ್ಮ ಬಳಿ ಅನುಭವವುಳ್ಳ ವಕೀಲರಿದ್ದಾರೆ ಅಂತಾ ದರ್ಶನ್‌ಗೆ ದೈರ್ಯ ತುಂಬಿದ್ದಾರೆ. ಅಲ್ಲದೆ, ಈ ವೇಳೆ ಆರೋಗ್ಯವನ್ನು ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ನಟ ದರ್ಶನ್ ಪ್ರಿಸನ್ ಕಾಲ್ ಸಿಸ್ಟಮ್ ಅಡಿಯಲ್ಲಿ 5 ನಿಮಿಗಳ ಕಾಲ ತಾಯಿಯೊಂದಿಗೆ ಮಾತನಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ನನ್ನು ಹೊರತರಲು ಪತ್ನಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಮೊದಲ ಬಾರಿ ತಾಯಿ ಜೈಲಿಗೆ ಭೇಟಿ ನೀಡಿದ್ದು, ಈ ವೇಳೆ ತುಂಬಾ ವರ್ಷಗಳ ಬಳಿಕ ತಾಯಿ ಕಂಡು ದರ್ಶನ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇನ್ನಾದರೂ ಅವರಿಗೆ ಕುಟುಂಬ ಹಾಗೂ ತಾಯಿ ಬೆಲೆ ಏನೆಂದು ತಿಳಿದುಕೊಂಡು ಸರಿ ದಾರಿಯಲ್ಲಿ ನಡೆಯುತ್ತಾರೆಯಾ ಎಂದು ಕಾದುನೋಡಬೇಕಿದೆ.
ಈಗಾಗಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ವಿಲ್ಸನ್ ಗಾರ್ಡನ್ ನಾಗನ ಜೊತೆ ಕುಳಿತು ರೆಸಾರ್ಟ್ ರೀತಿಯಲ್ಲೇ ಪಾರ್ಟಿ ಮಾಡುವ ಮೂಲಕ ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದು ಹರಟೆ ಹೊಡೆಯುತ್ತಿರುವ ಫೋಟೋ ಹಾಗೂ ವಿಐಪಿ ಸೆಲ್‌ನಿಂದಲೇ ದರ್ಶನ್ ರೌಡಿಶೀಟರ್‌ಗಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿರುವ ವಿಡಿಯೋ ಭಾರೀ ವೈರಲ್ ಆಗಿದ್ದವು.
ಇದಕ್ಕೆ ವ್ಯಾಪಕ ಆಕ್ರೋಶಗಳು ಕೂಡ ಭುಗಿಲೆದ್ದಿದ್ದವು. ಬಳಿಕ ಎಚ್ಚೆತ್ತ ಸರ್ಕಾರ ಅಲ್ಲಿನ 9 ಜೈಲಾಧಿಕಾರಿಗಳನ್ನು ಮಾನತು ಮಾಡಿತ್ತು. ಅಲ್ಲದೆ ಕೋರ್ಟ್ ಆದೇಶದ ಮೇರೆಗೆ ಪೊಲೀಸರು ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದರು.
ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ಭೀಕರವಾಗಿ ನಡೆಸಿ ಮಾಡಿ ಕೊಲೆ ಮಾಡಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಬಳಿಕ ಪೊಲೀಸರು ಆರೋಪಿಗಳನ್ನು ಎಡೆಮುರಿಕಟ್ಟುವ ಮೂಲಕ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಅಲ್ಲದೆ ಪ್ರಕರಣದ ಎ2 ಆರೋಪಿಯಾಗಿರುವ ನಟ ದರ್ಶನ್ ಬಳಿಯೂ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
3,991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರರಣದಲ್ಲಿ ಪೊಲೀಸರು ಸುಮಾರು 3,991 ಪುಟಗಳ ಚಾರ್ಜ್‌ಶೀಟ್ ಅನ್ನು ಸೆಪ್ಟೆಂಬರ್ 4ರಂದು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ನಟ ದರ್ಶನ್ ಎ2 ಆರೋಪಿ ಆಗಿದ್ದರೆ, ಪವಿತ್ರಾ ಗೌಡ ಎ1 ಆರೋಪಿ ಆಗಿದ್ದರು. ಇದನ್ನು ಚಾರ್ಜ್ ಶೀಟ್‌ನಲ್ಲಿ ದರ್ಶನ್ ಎ1 ಹಗೂ ಪವಿತ್ರಾ ಎ2 ಬದಲಾವಣೆ ಆಗಬಹುದು ಎಂದು ಅಂದಾಜಿತ್ತು. ಆದರೆ, ಯಾವುದೇ ಬದಲಾವಣೆ ಆಗಿಲ್ಲ. ಎಸಿಪಿ ಚಂದನ್ ಕುಮಾರ್ ಹಾಗೂ ತನಿಖಾ ತಂಡ ದರ್ಶನ್‌ನನ್ನು ಎರಡನೇ ಆರೋಪಿಯಾಗಿ ಉಲ್ಲೇಖ ಮಾಡಿದ್ದು, ಪವಿತ್ರಾ ಅವರು ಎ1 ಆರೋಪಿಯಾಗಿಯೇ ಮುಂದುವರೆದಿದ್ದಾರೆ.












Click it and Unblock the Notifications