ಕೆಟ್ಟವರಿಗೆ ಖ್ಯಾತಿ, ಅಧಿಕಾರ ಸಿಕ್ಕರೆ ನಮ್ಮೆಲ್ಲರಿಗೂ ತೊಂದರೆ: ಡಿಬಾಸ್ ಎಂದು ಕೂಗಿದ್ದಕ್ಕೆ ಸಿಟ್ಟಾದ ನಟಿ ಮಾನ್ವಿತಾ ಕಾಮತ್
ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ (Manvita Kamath) ಇತ್ತೀಚೆಗೆ ನಡೆದ ಲೈಫ್ ಟುಡೇ ಸಿನಿಮಾದ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಮಾತನಾಡುವ ವೇಳೆ ಅನಿರೀಕ್ಷಿತ ಘಟನೆ ನಡೆದಿದೆ. ಭಾಷಣದ ಮಧ್ಯೆ ಕೆಲವರು "ಡಿಬಾಸ್, ಡಿಬಾಸ್" ಎಂದು ಕೂಗಾಡಿದ್ದು, ಇದಕ್ಕೆ ಮಾನ್ವಿತಾ ಕೋಪಗೊಂಡು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
"ತುಂಬಾ ಚೆನ್ನಾಗಿ ಕಿರುಚಾಡ್ತಿದ್ದೀರ..."
ಮಾನ್ವಿತಾ ಕಾಮತ್ ಅವರು ವೇದಿಕೆಯ ಮೇಲೆ ಮಾತನಾಡಲು ನಿಂತಾಗ, ಅಲ್ಲಿದ್ದ ಕೆಲವರು ಪದೇ ಪದೇ 'ಡಿ-ಬಾಸ್, ಡಿ-ಬಾಸ್' ಎಂದು ಘೋಷಣೆ ಕೂಗುತ್ತಾ ಅಡ್ಡಿಪಡಿಸಿದ್ದಾರೆ. ಅಭಿಮಾನಿಗಳ ಈ ವರ್ತನೆಯಿಂದ ಸಮಾಧಾನ ಕಳೆದುಕೊಂಡ ನಟಿ, ನೇರವಾಗಿಯೇ ವೇದಿಕೆಯ ಮೇಲೆ ತಿರುಗೇಟು ನೀಡಿದ್ದಾರೆ. ನಟಿ ಮಾನ್ವಿತಾ ಕಾಮತ್ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಹಾಗೂ ಪರ-ವಿರೋಧದ ಅಲೆಗೆ ಕಾರಣವಾಗಿದೆ. ಕೂಗಾಟದ ನಡುವೆ ಮಾತು ನಿಲ್ಲಿಸಿದ ಮಾನ್ವಿತಾ, "ತುಂಬಾ ಚೆನ್ನಾಗಿ ಕಿರುಚಾಡ್ತಿದ್ದೀರ. ಖ್ಯಾತಿ, ಅಧಿಕಾರ, ಹೆಸರು ಒಳ್ಳೆಯ ಗುಣ ಇರುವ ವ್ಯಕ್ತಿಗೆ ಸಿಗಬೇಕು" ಎಂದು ತಿರುಗೇಟು ನೀಡಿದ್ದಾರೆ.

ಅವರು ಮುಂದುವರಿಸಿ, "ಫೇಮ್, ಹಣ, ಪವರ್ ತುಂಬಾ ಸೆನ್ಸಿಟಿವ್. ಅದು ಅಪ್ಪಿತಪ್ಪಿಯೂ ಕೆಟ್ಟ ವ್ಯಕ್ತಿಗೆ ಸಿಕ್ಕರೆ ನಮ್ಮೆಲ್ಲರಿಗೂ ಎಫೆಕ್ಟ್ ಆಗುತ್ತದೆ," ಎಂದು ಹೇಳುವ ಮೂಲಕ ವೇದಿಕೆಯಲ್ಲಿ ಗಂಭೀರ ಸಂದೇಶ ನೀಡಿದ್ದಾರೆ. ಮಾನ್ವಿತಾ ಅವರ ಈ ಪ್ರತಿಕ್ರಿಯೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ನಟಿಯ ಧೈರ್ಯವನ್ನು ಮೆಚ್ಚಿದ್ದರೆ, ಇನ್ನೂ ಕೆಲವರು ಈ ಹೇಳಿಕೆ ಕುರಿತು ಚರ್ಚೆ ನಡೆಸುತ್ತಿದ್ದಾರೆ.
ಅಭಿಮಾನಿಗಳ ಆಕ್ರೋಶ
ಮಾನ್ವಿತಾ ಅವರ ಈ ಮಾತುಗಳು ನೇರವಾಗಿ ನಟ ದರ್ಶನ್ ಅವರನ್ನು ಉದ್ದೇಶಿಸಿ ಆಡಿದ ಮಾತುಗಳೆಂದು ಭಾವಿಸಿರುವ ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ನಟಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ, ಸಭ್ಯತೆ ಮೀರಿ ವರ್ತಿಸುವ ಅಭಿಮಾನಿಗಳಿಗೆ ಮಾನ್ವಿತಾ ಸರಿಯಾದ ಪಾಠ ಕಲಿಸಿದ್ದಾರೆ ಮತ್ತು ಅವರು ಹೇಳಿದ ಮಾತುಗಳಲ್ಲಿ ಸತ್ಯವಿದೆ ಎಂದು ಹಲವರು ನಟಿಯ ಪರವಾಗಿ ನಿಂತಿದ್ದಾರೆ.
ಬಕೆಟ್ ಇಟ್ಕೊಂಡು ಜೀವನ ಮಾಡುವ ಹಲ್ಕಾಟ್ ಗಳಿಗೆ ಮಾನ್ವಿತಾ ಅವರು ಎಂಥ ಅರ್ಥಪೂರ್ಣ ಮಾತುಗಳನ್ನು ಹೇಳಿದ್ದಾರೆ ನೋಡಿ.
— Suhas Duga (@SuhasDuga) February 27, 2026
Fame, Name, Power ಇದು ಒಳ್ಳೆ ವ್ಯಕ್ತಿಗೆ ಸಿಗಬೇಕು, ಕೆಟ್ಟವರಿಗೆ ಸಿಕ್ಕರೆ ನಮ್ಮೆಲ್ಲರಿಗೂ ತೊಂದರೆ ಆಗುತ್ತದೆ -ಮನ್ವಿತಾ ಕಾಮತ್(ನಟಿ) pic.twitter.com/AHPQtdYWCe
ಮಾನ್ವಿತಾ ಅವರು ಯಾವುದೇ ನಟನ ಹೆಸರು ಎತ್ತಿಲ್ಲ. ಅವರು ಹೇಳಿದ್ದು ಸತ್ಯ. ಕ್ರಿಮಿನಲ್ ಪ್ರಕರಣದಲ್ಲಿರುವವರನ್ನು ವೈಭವೀಕರಿಸುವುದು ತಪ್ಪು ಎಂಬ ಅವರ ಧೈರ್ಯ ಮೆಚ್ಚಲೇಬೇಕು ಎಂದು ಹಲವರು ಬೆಂಬಲಿಸುತ್ತಿದ್ದಾರೆ. ಪ್ರಸ್ತುತ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದು, ಈ ಸಂದರ್ಭದಲ್ಲಿ ಸಿನಿಮಾ ಕಾರ್ಯಕ್ರಮಗಳಲ್ಲಿ ಅವರ ಹೆಸರು ಕೂಗುವುದು ಮತ್ತು ಅದಕ್ಕೆ ನಟಿಯರು ನೀಡುವ ಇಂತಹ ಪ್ರತಿಕ್ರಿಯೆಗಳು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗುತ್ತಿವೆ. ದರ್ಶನ್ ಅವರು ಜೈಲಿನಲ್ಲಿದ್ದರೂ ಅವರ ಹೆಸರಿನಲ್ಲಿ ನಡೆಯುತ್ತಿರುವ ಈ ಗದ್ದಲಗಳು ಚಿತ್ರರಂಗದ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರುತ್ತಿವೆ. ಮಾನ್ವಿತಾ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ, ಆದರೆ ಅವರು ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications