Dhananjaya: ನಾನು ಹೈದರಾಬಾದ್‌ಗೆ ಹೋಗಿ ಬರೋದ್ರೊಳಗೆ ಟಿಕೆಟ್ ಕೊಡಿಸಿ, ಎಲೆಕ್ಷನ್‌ಗೂ ನಿಲ್ಲಿಸಿದ್ದಿರಿ!
ಬೆಂಗಳೂರು, ಫೆಬ್ರವರಿ.22: ಚುನಾವಣೆಗಳು ಹತ್ತಿರ ಬರುತ್ತಿದ್ದಂತೆಯೇ ಯಾವಾಗಲು ರಾಜಕೀಯ ಲೆಕ್ಕಾಚಾರಗಳು ಆರಂಭವಾಗುತ್ತದೆ. ಸದ್ಯ ಲೋಕಸಭಾ ಚುನಾವಣೆ ಹತ್ತಿರ ಇದ್ದು, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ- ಜೆಡಿಎಸ್ ಮೈತ್ರಿ ಗೆಲ್ಲುವ ಕುದುರೆಗಳ ಹಿಂದೆ ಹೋಗಲು ಸಿದ್ಧವಾಗಿವೆ. ಇದರ ಜೊತೆಗೆ ಹಲವು ಹೊಸಬರ ಹೆಸರುಗಳು ಕೇಳಿ ಬರುತ್ತಿದ್ದು, ಅದರಲ್ಲಿ ನಟ ಡಾಲಿ ಧನಂಜಯ್ ಹೆಸರು ತಳುಕುಹಾಕಿಕೊಂಡಿತ್ತು.
ಚಿತ್ರರಂಗದಲ್ಲಿ ನಟ, ಖಳನಟ, ನಿರ್ಮಾಪಕ ಆಗಿ ಹೆಸರು ಮಾಡಿರುವ ಡಾಲಿ ಧನಂಜಯ್ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋ ಸುದ್ದಿ ಕೆಲವು ದಿನಗಳಿಂದ ಸಕತ್ ಹೈಪ್ ಕ್ರಿಯೆಟ್ ಮಾಡಿತ್ತು. ಹಾಲಿ ಸಂಸದ ಪ್ರತಾಪ್ ಸಿಂಹ ಎದುರು ಕಾಂಗ್ರೆಸ್ ಪಕ್ಷದಿಂದ ನಟ ಧನಂಜಯ್ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿಯಿತ್ತು. ಇದಕ್ಕೆ ನಟ ಪ್ರತಿಕ್ರಿಯೆ ನೀಡಿದ್ದಾರೆ.

ಚುನಾವಣೆಗೆ ನಿಲ್ತಾರಾ ಡಾಲಿ ಧನಂಜಯ್?
ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುವ ಬಗ್ಗೆ ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ 'ಫೋಟೋ' ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ತಮ್ಮ ಬಗ್ಗೆ ಹರಡುತ್ತಿರುವ ವದಂತಿಗಳಿಗೆ ನಟ ಬ್ರೇಕ್ ಹಾಕಿದ್ದಾರೆ. ಮಾಧ್ಯಮದವರೆ ನನಗೆ ಟಿಕೆಟ್ ಕೊಡಿಸಿ, ಚುನಾವಣೆಗೆ ನಿಲ್ಲಿಸಿದ್ದಾರೆ ಎಂದು ಕಾಲೆಳೆದಿದ್ದಾರೆ.
"ನಾನು ಹೈದರಾಬಾದ್‌ನಲ್ಲಿದ್ದೆ. ಅಲ್ಲಿಗೆ ಹೋಗಿ ಬರುವಷ್ಟರಲ್ಲಿ ಮಾಧ್ಯಮದವರೇ ನನ್ನನ್ನು ನನಗೆ ಟಿಕೆಟ್ ಕೊಡಿಸಿ, ಎಲೆಕ್ಷನ್‌ಗೆ ನಿಲ್ಲಿಸಿಬಿಟ್ಟಿದ್ದಿರಿ. ಇದೆಲ್ಲಾ ನೀವೆ ಮಾಡಿರೋದು. ನೀವೆ ಹೇಳಬೇಕು ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾನು ಸಿನಿಮಾ ಮಾಡ್ತಿನಿ. ತುಂಬಾ ಕನಸು ಕಟ್ಟಿಕೊಂಡು ಈ ಕ್ಷೇತ್ರಕ್ಕೆ ಬಂದಿದ್ದೀನಿ. ಇಲ್ಲಿದ್ದುಕೊಂಡೆ ಕೆಲಸ ಮಾಡಬಹುದು. ಚುನಾವಣೆ ಸ್ಪರ್ಧೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ" ಎಂದು ಎಲ್ಲಾ ಊಹಾಪೋಹಗಳನ್ನು ತಳ್ಳಿ ಹಾಕಿದ್ದಾರೆ.
ರಾಜಕಾರಣ ಬೇರೆ, ನಾಯಕ ಆಗಿರೋದು ಬೇರೆ: ಧನಂಜಯ್
"ಸಿನಿಮಾ ರಂಗದಲ್ಲಿ ಇದ್ದುಕೊಂಡೇ ಕೆಲಸ ಮಾಡಬಹುದಲ್ವಾ..? ಲಿಡ್ಕರ್ ಸಂಸ್ಥೆಗೆ ರಾಯಭಾರಿಯಾಗಿದ್ದು ನನಗೆ ಖುಷಿ ಇದೆ. ಸಂಸ್ಥೆಯಲ್ಲಿ ಸಾವಿರಾರು ಬಡ ಕುಟುಂಬಗಳಿವೆ. ಅದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಅಂತ ಕೇಳಿದಾಗ, ತುಂಬಾ ಖುಷಿಯಾಗಿ ಒಪ್ಪಿಕೊಂಡೆ. ಇದರ ಹಿಂದೆ ರಾಜಕೀಯ ಚರ್ಚೆಯಾಗಲಿ ಹಾಗೂ ಉದ್ದೇಶವಾಗಲಿ ಇಲ್ಲ" ಎಂದು ಹೇಳಿದ್ದಾರೆ.

ಮುಂದುವರಿದು, "ರಾಜಕಾರಣ ಬೇರೆ, ನಾಯಕ ಆಗಿರೋದು ಬೇರೆ. ಕಳೆದ ಚುನಾವಣೆ ಸಮಯದಲ್ಲೇ ನಾನು ಪ್ರಚಾರಕ್ಕೆ ಹೋಗಿಲ್ಲ. ಎಲ್ಲಾ ಪಕ್ಷಗಳಲ್ಲೂ ನನಗೆ ಸ್ನೇಹಿತರಿದ್ದಾರೆ. ಪ್ರಚಾರಕ್ಕೆ ಕರೆದಿದ್ದರೂ ಆದರೂ ನಾನು ಹೋಗಿಲ್ಲ. ಈ ಚುನಾವಣೆಯಲ್ಲೂ ಪ್ರಚಾರಕ್ಕೆ ಹೋಗುವುದರ ಬಗ್ಗೆ ಯೋಚನೆ ಮಾಡಿಲ್ಲ. ನಾನು ಕಾಮನ್ ಮ್ಯಾನ್. ಹಾಗೆ ಇರುವುದಕ್ಕೆ ಇಷ್ಟ" ಎಂದು ಧನಂಜಯ್ ಹೇಳಿದ್ದಾರೆ.
ಧನಂಜಯ್ ಮುಂದಿನ ಸಿನಿಮಾಗಳು
ಧನಂಜಯ್ ಸದ್ಯ ಮಾಜಿ ಕಲರ್ಸ್ ಟಿವಿ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರ ನಿರ್ದೇಶನದ ಚೊಚ್ಚಲ ಚಿತ್ರ, 'ಕೋಟಿ' ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಪದಕಿ ಅವರ 'ಉತ್ತರಕಾಂಡ', ಡವ ರಾಸ್ಕಲ್ ನಿರ್ದೇಶಕ ಶಂಕರ್ ಗುರು ಅವರ ಅಣ್ಣಾ ಫ್ರಮ್ ಮೆಕ್ಸಿಕೋ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿಯೂ ಅನೇಕ ಸಿನಿಮಾಗಳಲ್ಲಿ ಧನಂಜಯ್ ಕಾಣಿಸಿಕೊಳ್ಳಲಿದ್ದಾರೆ.
ತೆಲುಗು ನಟ ಸತ್ಯದೇವ್ ಅವರ ಜೀಬ್ರಾ ಚಿತ್ರದಲ್ಲಿ, ಅಲ್ಲು ಅರ್ಜುನ್ ಅವರ ಪುಷ್ಪ -2 ನಲ್ಲಿ ಕೂಡ ಅವರ ಪಾತ್ರಗಳಿವೆ. ಇದರ ಜೊತೆಗೆ ಮತ್ತೆ ನಿರ್ಮಾಪಕರಾಗಿ ನಾಲ್ಕನೇ ಹೊಸ ಚಿತ್ರ 'ವಿದ್ಯಾಪತಿ'ಯನ್ನು ಘೋಷಿಸಿದ್ದಾರೆ. ಇದರಲ್ಲಿ ಟಗರು ಪಲ್ಯ ನಟ ನಾಗಭೂಷಣ ನಾಯಕನಾಗಿ ನಟಿಸಲಿದ್ದಾರೆ.












Click it and Unblock the Notifications