Krishi Thapanda: ನಿರ್ಮಾಪಕನಿಗೆ ಬ್ಲಾಕ್‌ಮೇಲ್ ಪ್ರಕರಣ: ನಟಿ ಕೃಷಿ ತಾಪಂಡಗೆ ಪೊಲೀಸರಿಂದ ನೋಟಿಸ್
ಬೆಂಗಳೂರು: ಸಿನಿಮಾ ನಿರ್ಮಾಪಕ ಹಾಗೂ ಉದ್ಯಮಿ, ಎಆರ್‌ವಿ ಗ್ರೂಪ್ ಮಾಲೀಕ ಅರವಿಂದ್ ರೆಡ್ಡಿಗೆ 7 ಕೋಟಿ ರೂಪಾಯಿ ಹಣದ ಬೇಡಿಕೆ ಇಟ್ಟು ಬೆದರಿಕೆ ಪತ್ರ ಕಳುಹಿಸಿದ್ದ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟಿ ಹಾಗೂ ಬಿಗ್‌ಬಾಸ್ ಖ್ಯಾತಿಯ ಕೃಷಿ ತಾಪಂಡಗೆ (Krishi Thapanda) ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಹೆಚ್‌ಎಎಲ್ ಪೊಲೀಸರು ವೈಶಾಖ್ ಎಂಬಾತನನ್ನು ಈಗಾಗಲೇ ಬಂಧಿಸಿದ್ದು, ಆತ ನಟಿ ಕೃಷಿ ತಾಪಂಡ ಅವರ ಆಪ್ತ ಎಂದು ಪೊಲೀಸರು ತಿಳಿಸಿದ್ದಾರೆ.
ಕೊರಿಯರ್ ಮೂಲಕ ಬೆದರಿಕೆ ಪತ್ರ
ಜನವರಿಯಲ್ಲಿ ಬನಶಂಕರಿ ಪ್ರದೇಶದಿಂದ ಕೊರಿಯರ್ ಮೂಲಕ ಅರವಿಂದ್ ರೆಡ್ಡಿ ಅವರಿಗೆ ಬೆದರಿಕೆ ಪತ್ರ ಕಳುಹಿಸಲಾಗಿತ್ತು. ಈ ಪತ್ರದಲ್ಲಿ ಮಹಿಳೆಯೊಬ್ಬರಿಗೆ ಸಂಬಂಧಿಸಿದ ವಿಚಾರವನ್ನು "ಬಗೆಹರಿಸಬೇಕು" ಎಂದು ಎಚ್ಚರಿಕೆ ನೀಡಲಾಗಿದ್ದು, ಅಲ್ಲದೆ 7 ಕೋಟಿ ರೂಪಾಯಿ ಹಣ ನೀಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿತ್ತು. ಇದೇ ಬೆದರಿಕೆ ಪತ್ರದಲ್ಲಿ ನಟಿ ಕೃಷಿ ತಾಪಂಡ ಅವರು ಹಿಂದೆ ಅರವಿಂದ್ ರೆಡ್ಡಿ ವಿರುದ್ಧ ನೀಡಿದ್ದ ದೂರಿನ ಉಲ್ಲೇಖವೂ ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಬೆದರಿಕೆ ಪತ್ರ ಪಡೆದ ಬಳಿಕ ಅರವಿಂದ್ ರೆಡ್ಡಿ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಮೊದಲು ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಪೊಲೀಸರು ವಿಚಾರಣೆ ನಡೆಸಿದರು. ಆತ ತನ್ನ ಮಾಲೀಕರ ಸೂಚನೆಯಂತೆ ಕೊರಿಯರ್ ಕಳುಹಿಸಿದ್ದಾಗಿ ಹೇಳಿಕೆ ನೀಡಿದ್ದ. ಈ ಸುಳಿವಿನ ಆಧಾರದ ಮೇಲೆ ಪೊಲೀಸರು ನಟಿಯ ಆಪ್ತ ವೈಶಾಖ್‌ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ವೈಶಾಖ್ ಈ ಬೆದರಿಕೆ ಪತ್ರ ಕಳುಹಿಸುವ ಸಮಯದಲ್ಲಿ ನಟಿ ಕೃಷಿ ತಾಪಂಡ ಅವರ ನಿವಾಸದಲ್ಲೇ ಇದ್ದ ಎನ್ನಲಾಗಿದೆ. ಬಂಧನದ ಬಳಿಕ ವೈಶಾಖ್‌ನ ಮೊಬೈಲ್ ಫೋನ್ ವಶಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸಿದಾಗ, ಆ ಮೊಬೈಲ್ ಮನೆಯಲ್ಲಿ ಪತ್ತೆಯಾಗಲಿಲ್ಲ. ಬಂಧನದ ನಂತರ ಅದನ್ನು ಬೇರೆಡೆಗೆ ಸ್ಥಳಾಂತರಿಸಿರುವ ಅನುಮಾನವೂ ಇದೀಗ ವ್ಯಕ್ತವಾಗಿದೆ.
ಕೃಷಿ ತಾಪಂಡಗೆ ನೋಟಿಸ್
ಈ ಹಿನ್ನೆಲೆ ಪ್ರಕರಣದ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಲು ನಟಿ ಕೃಷಿ ತಾಪಂಡಗೆ ಹೆಚ್‌ಎಎಲ್ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಈ ಪ್ರಕರಣದಲ್ಲಿ ಬೆದರಿಕೆ ಅಥವಾ ಬ್ಲ್ಯಾಕ್‌ಮೇಲ್ ಯತ್ನ ನಡೆದಿದೆಯೇ? ಇದರಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ? ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸ್ಯಾಂಡಲ್‌ವುಡ್ ಮತ್ತು ಬಿಗ್‌ಬಾಸ್ ಮೂಲಕ ಜನಪ್ರಿಯತೆ ಪಡೆದಿರುವ ನಟಿಗೆ ನೋಟಿಸ್ ನೀಡಿರುವುದು ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮುಂದಿನ ತನಿಖೆಯಿಂದ ಸತ್ಯಾಂಶ ಏನೆಂಬುದು ಬಹಿರಂಗವಾಗಲಿದೆ.
ಅರವಿಂದ್ ರೆಡ್ಡಿ ಹಾಗೂ ಕೃಷಿ ತಾಪಂಡ ಅವರ ನಡುವಿನ ಕಿತ್ತಾಟವು ಇತ್ತೀಚೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇದೇ ಪ್ರಕರಣದಲ್ಲಿ ಉದ್ಯಮಿಯ ಬಂಧನವಾಗಿ ಜಾಮೀನಿನ ಮೇಲೆ ಹೊರಬಂದಿದ್ದರು. ಬಳಿಕ ಇಬ್ಬರೂ ಲಿವಿಂಗ್ ಟುಗೆದರ್‌ನಲ್ಲಿದ್ದ ವಿಷಯವನ್ನು ಅರವಿಂದ್ ರೆಡ್ಡಿ ಬಹಿರಂಗಪಡಿಸಿದ್ದರು. ಈಗ ಮತ್ತೆ ಇದೇ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.












Click it and Unblock the Notifications